ರಸ್ತೆ ಬದಿ ಮಾವಿನ ತ್ಯಾಜ್ಯ ತೆರವಿಗೆ ಆಗ್ರಹ
ಕೋಲಾರಶ್ರೀನಿವಾಸಪುರ: ಜಿಲ್ಲೆಯ ಶ್ರೀನಿವಾಸಪುರದಲ್ಲಿ ಕೊಳೆತ ಮಾವು ಜನರ ಉಸಿರುಗಟ್ಟಿಸುತ್ತಿದೆ. ರೈತರಿಂದ ಖರೀದಿ ಮಾಡುವ ಮಾವನ್ನು ವರ್ತಕರು ವಿಂಗಡಣೆ ಮಾಡುವಾಗ ಸಿಗುವ ಅನುಪಯುಕ್ತ ಮಾವಿನ ಕಾಯಿಗಳನ್ನು ಸೂಕ್ತವಾದ ಜಾಗದಲ್ಲಿ ಹಾಕದೆ ಶ್ರೀನಿವಾಸಪುರ-ಚಿಂತಾಮಣಿ ರಸ್ತೆ ಬದಿಯಲ್ಲಿ ಎಸೆಯಲಾಗುತ್ತಿದೆ. ಇದರಿಂದ ನೊಣಗಳ ಕಾಟದ ಜೊತೆಗೆ ಕೊಳೆತ ಮಾವಿನ ದುರ್ವಾಸೆಯಿಂದ ಸಾರ್ವಜನಿಕರು ಅನಾರೋಗ್ಯಕ್ಕೆ ತುತ್ತಾಗುವಂತಾಗಿದೆ.
ಪಾದಚಾರಿಗಳು, ವಾನಹಗಳಲ್ಲಿ ಸಂಚರಿಸುವವರು ಕೊಳೆತ ಮಾವಿನ ವಿಲೇವಾರಿಗೆ ಸಾಕಷ್ಟು ಬಾರಿ ಎಪಿಎಂಸಿ ಆಡಳಿತ ಮಂಡಳಿಗೆ ಮನವಿ ಮಾಡಿದರು ಜನತೆ ಆರೋಗ್ಯದ ಬಗ್ಗೆ ಅಧಿಕಾರಿಗಳು ಮತ್ತು ಆಡಳಿತ ಮಂಡಳಿಯವರು ಗಮನ ನೀಡುತ್ತಿಲ್ಲವೆಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾಂಕ್ರಾಮಿಕ ರೋಗ ಭೀತಿ: ಕೊಳೆತ ಮಾವನ್ನು ಎಪಿಎಂಸಿಯಲ್ಲೇ ಸಂಗ್ರಹಣೆ ಮಾಡಿ ನಂತರ ಅದನ್ನು ಸೂಕ್ತವಾದ ಜಾಗದಲ್ಲಿ ವಿಲೇವಾರಿ ಮಾಡುವ ಬದಲು ರಸ್ತೆ ಬದಿಗೆ ಎಸೆಯುತ್ತಿರುವುದರಿಂದ ಸಾಂಕ್ರಾಮಿಕ ರೋಗಗಳಿಗೆ ಅಸ್ಪದ ನೀಡಿದಂತಾಗಿದೆ ಎಂಬುದು ಸಾರ್ವಜನಿಕರ ಅಳಲಾಗಿದೆ.
ಎಪಿಎಂಸಿಯಲ್ಲಿ ಸಂಗ್ರಹಣೆ ಆಗುವ ತ್ಯಾಜ್ಯವನ್ನು ವಿಲೇವಾರಿ ಮಾಡಲು ಗುತ್ತಿಗೆ ನೀಡಲಾಗಿದೆ. ಪ್ರತಿ ನಿತ್ಯ ತ್ಯಾಜ್ಯವನ್ನು ಸಂಗ್ರಹಿಸಿ ಅರಣ್ಯ ಪ್ರದೇಶಕ್ಕೆ ಕೊಂಡೊಯ್ಯಲಾಗುತ್ತಿದೆ. ರಸ್ತೆ ಬದಿಯಲ್ಲಿ ಹಾಕಿರುವ ತ್ಯಾಜ್ಯಕ್ಕೂ ನಮಗೂ ಸಂಬಂಧವಿಲ್ಲ, ಒಂದು ವೇಳೆ ಗುತ್ತಿಗೆದಾರರು ಸೂಕ್ತವಾದ ಜಾಗದಲ್ಲಿ ತ್ಯಾಜ್ಯ ಹಾಕದೆ ರಸ್ತೆ ಬದಿಯಲ್ಲಿ ವಿಲೇವಾರಿ ಮಾಡಿದಲ್ಲಿ ಕ್ರಮ ಕೈಗೊಳ್ಳುವುದಾಗಿ ಶ್ರೀನಿವಾಸಪುರ ಎಪಿಎಂಸಿ ಅಧ್ಯಕ್ಷ ಜಿ.ಎಂ. ಕೃಷ್ಣಾರೆಡ್ಡಿ ಪ್ರತಿಕ್ರಿಯಿಸಿದ್ದಾರೆ.