ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಗೋಡೆ ಮೇಲೆ ಶುಲ್ಕ ವಿವರಕ್ಕೆ ಒಪ್ಪದ ಖಾಸಗಿ ಶಾಲೆ

Mainashree
Updated On : 27 Jun 2014, 12:26 pm

ಕೋಲಾರ: ಖಾಸಗಿ ವಿದ್ಯಾ ಸಂಸ್ಥೆಗಳು ವಿದ್ಯಾರ್ಥಿಗಳ ಪ್ರವೇಶಕ್ಕೆ ವಸೂಲಿ ಮಾಡುವ ಶುಲ್ಕದ ವಿವರಗಳನ್ನು ಗೋಡೆ ಮೇಲೆ ಬಣ್ಣದಲ್ಲಿ ಬರೆಸಬೇಕೆಂಬ ಡಿಡಿಪಿಐ ಸೂಚನೆಗೆ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳು ನಿರಾಕರಿಸಿವೆ.
ಖಾಸಗಿ ಶಾಲೆಗಳಲ್ಲಿ ಸರ್ಕಾರದ ನಿಯಮಗಳಿಗೆ ವಿರುದ್ಧವಾಗಿ ಡೊನೇಷನ್ ವಸೂಲಿ ಮಾಡಲಾಗುತ್ತಿದೆ. ಅನೇಕ ಶಾಲೆಗಳಲ್ಲಿ ಮೂಲ ಸೌಕರ್ಯಗಳು ಇಲ್ಲ, ಪ್ರವೇಶ ಶುಲ್ಕದ ಬಗ್ಗೆ ನೋಟೀಸ್ ಬೋರ್ಡ್‌ನಲ್ಲಿ ಪ್ರಕಟಿಸುತ್ತಿಲ್ಲವೆಂದು ಕೆಲ ಸಂಘ ಸಂಸ್ಥೆಗಳು, ಪೋಷಕರು ದೂರಿದ್ದ ಮೇರೆಗೆ ಶುಲ್ಕ ವಿವರವನ್ನು ಗೋಡೆ ಮೇಲೆ ಬಣ್ಣದಲ್ಲಿ ಬರೆಸುವಂತೆ ಡಿಡಿಪಿಐ ಪದ್ಮನಾಭ್ ಅವರು ಖಾಸಗಿ ವಿದ್ಯಾ ಸಂಸ್ಥೆಗಳ ಆಡಳಿತ ಮಂಡಳಿಗೆ ನೋಟೀಸ್ ಜಾರಿ ಮಾಡಿದ್ದರು.
ಈ ಹಿನ್ನಲೆಯಲ್ಲಿ ಆಡಳಿತ ಮಂಡಳಿಯವರು ಡಿಡಿಪಿಐ ಕಚೇರಿಗೆ ನಿಯೋಗದೊಂದಿಗೆ ಬಂದು ಸರ್ಕಾರ ಶುಲ್ಕ ವಿವರ ಗೋಡೆ ಮೇಲೆ ಬಣ್ಣದಲ್ಲಿ ಬರೆಸುವಂತೆ ಸುತ್ತೋಲೆ ಹೊರಡಿಸಿಲ್ಲ, ತಾವೇ ಸ್ವಯಂ ಪ್ರೇರಿತರಾಗಿ ಆದೇಶ ಹೊರಡಿಸುವುದು ಸೂಕ್ತವಲ್ಲವೆಂದು ಡಿಡಿಪಿಐ ಜೊತೆ ವಾಗ್ವಾದ ನಡೆಸಿದರು.
ಸರ್ಕಾರ ನಿಗದಿ ಮಾಡಿರುವ ಶುಲ್ಕದ ವಿವರ ಗೋಡೆ ಮೇಲೆ ಬರೆಸುವುದರಲ್ಲಿ ತಪ್ಪೇನು. ಕೆಲ ಶಾಲೆಗಳಲ್ಲಿ ರು. 40ರಿಂದ 50 ಸಾವಿರ ಡೊನೇಷನ್ ವಸೂಲಿ ಮಾಡುತ್ತಿರುವುದು ತಮ್ಮ ಗಮನಕ್ಕೆ ಬಂದಿದೆ. ಶುಲ್ಕದ ಬಗ್ಗೆ ಮಾಹಿತಿ ಇದ್ದರೆ ಗೊಂದಲ ಇರುವುದಿಲ್ಲವೆಂಬ ಕಾರಣಕ್ಕೆ ನೋಟೀಸ್ ಜಾರಿ ಮಾಡಿದ್ದೇನೆ. ಆಡಳಿತ ಮಂಡಳಿಗಳಿಗೆ ಅಪಮಾನ ಮಾಡುವ ಉದ್ದೇಶವಿಲ್ಲ, ಒಂದು ವೇಳೆ ಶುಲ್ಕ ವಿವರ ಪ್ರಕಟಿಸದಿದ್ದರೆ ಸಂಘ ಸಂಸ್ಥೆಗಳು ನಮ್ಮ ಬಗ್ಗೆ ಇಲ್ಲಸಲ್ಲದ ಟೀಕೆಗಳನ್ನು ಮಾಡುತ್ತವೆ. ಆಡಳಿತ ಮಂಡಳಿಯೊಂದಿಗೆ ಶಾಮೀಲು ಆಗಿರುವುದಾಗಿ ಅಪಪ್ರಚಾರ ಮಾಡುತ್ತವೆ ಎಂದು ಡಿಡಿಪಿಐ ತಮ್ಮ ಅಳಲು ತೋಡಿಕೊಂಡರು.
ಸಂಘಟನೆಗಳು ಪ್ರತಿದಿನ ನಮ್ಮ ಕಚೇರಿ ಮುಂದೆ ಪ್ರತಿಭಟನೆ ನಡೆಸುವಂತಾಗಬಾರದು, ಇದರಿಂದ ಖಾಸಗಿ ಶಾಲೆಗಳ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ ಎಂದಾಗ, ಆಡಳಿತ ಮಂಡಳಿಯವರು ಲಕ್ಷಾಂತರ ರು. ಖರ್ಚು ಮಾಡಿ ಶಾಲೆಗಳನ್ನು ನಡೆಸುತ್ತಿದ್ದೇವೆ. ಸರ್ಕಾರಿ ಶಾಲೆಗಳಿಗಿಂತ ಉತ್ತಮವಾದ ಮೂಲ ಸೌಕರ್ಯಗಳು ನಮ್ಮಲ್ಲಿವೆ. ಸಂವಿಧಾನ ಬದ್ಧವಾಗಿ ಸಂಸ್ಥೆ ನಡೆಸುತ್ತಿರುವವರ ಮೇಲೆ ಏಕೆ ಗದಾಪ್ರಹಾರ ಎಂದು ಶುಲ್ಕ ವಸೂಲಾತಿಯನ್ನು ಸಮರ್ಥಿಸಿಕೊಂಡರಲ್ಲದೆ, ಸರ್ಕಾರದ ಸುತ್ತೋಲೆ ಇಲ್ಲದೆ ಗೋಡೆಗಳ ಮೇಲೆ ಶುಲ್ಕ ವಿವರ ಬರೆಸಲು ಸಾಧ್ಯವಿಲ್ಲವೆಂದು ಪಟ್ಟು ಹಿಡಿದರು.
ನಿಯೋಗದಲ್ಲಿದ್ದ ಆಡಳಿತ ಮಂಡಳಿಯ ಮುಖ್ಯಸ್ಥರೊಬ್ಬರು ಶಿಕ್ಷಣ ಇಲಾಖೆಯಲ್ಲಿನ ಹೂಳುಕು ಎತ್ತಿ ತೋರಿಸಿ ತರಾಟೆಗೆ ತೆಗೆದುಕೊಂಡರಾದರೂ ಡಿಡಿಪಿಐ ಉತ್ತರಿಸಲಾಗದೆ ತಬ್ಬಿಬ್ಬುಗೊಂಡರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement