ತವರೂರಲ್ಲಿ ಚೌಡರೆಡ್ಡಿಗೆ ಭವ್ಯ ಸ್ವಾಗತ
ಕೋಲಾರ/ಶ್ರೀನಿವಾಸಪುರ: ವಿಧಾನ ಪರಿಷತ್ತಿಗೆ ಆಗ್ನೇಯ ಪದವೀಧರರ ಕ್ಷೇತ್ರದಿಂದ ಆಯ್ಕೆಯಾಗಿರುವ ಜೆಡಿಎಸ್ನ ತೂಪಲ್ಲಿ ಆರ್. ಚೌಡರೆಡ್ಡಿಯವರಿಗೆ ಶ್ರೀನಿವಾಸಪುರದಲ್ಲಿ ಅಭಿಮಾನಿಗಳು ಭವ್ಯ ಸ್ವಾಗತ ನೀಡಿ ಅಭಿನಂದಿಸಿದರು.
ಚುನಾವಣೆಯಲ್ಲಿ ಗೆದ್ದ ಬಳಿಕ ಇದೇ ಪ್ರಥಮ ಬಾರಿಗೆ ತವರೂರಿಗೆ ಆಗಮಿಸಿದ ಚೌಡರೆಡ್ಡಿಯವರನ್ನು ಅಭಿಮಾನಿಗಳು ಪಟ್ಟಣದಲ್ಲಿ ತೆರೆದ ಜೀಪಿನಲ್ಲಿ ಮೆರವಣಿಗೆ ಮಾಡಿಸಿದರು.
ಜೆಡಿಎಸ್ ಕಾರ್ಯಕರ್ತರು, ಅಭಿಮಾನಿಗಳ ಜೊತೆ ರೋಡ್ ಶೋನಲ್ಲಿ ಭಾಗವಹಿಸಿದ ಚೌಡರೆಡ್ಡಿ ಗೆಲುವಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ತದನಂತರ ಮಾತನಾಡಿದ ಚೌಡರೆಡ್ಡಿ ಈ ಚುಣಾವನೆಯಲ್ಲಿ ನನ್ನನ್ನು ಸೋಲಿಸಲೇಬೇಕೆಂದು ಪಣತೊಟ್ಟ ಬಿಜೆಪಿ ಮುಖಂಡರಿಗೆ ಮುಖಭಂಗವಾಗಿದೆ. ಇದೇ ತಾಲೂಕಿನ ವಿಧಾನಪರಿಷತ್ ಸದಸ್ಯ ವೈ.ಎ ನಾರಾಯಣಸ್ವಾಮಿ ಅವರು ಕೇಂದ್ರ ಸಚಿವ ಸದಾನಂದಗೌಡರನ್ನು ಕರೆತಂದು ಪ್ರಚಾರ ಮಾಡಿದರೂ ಪ್ರಯೋಜನವಾಗಲಿಲ್ಲವೆಂದು ಟೀಕಿಸಿದರು. ಕ್ಷೇತ್ರದಲ್ಲಿ ಪದವೀಧರರ ಹಾಗೂ ಜಿಲ್ಲೆಯ ಜ್ವಲಂತ ಸಮಸ್ಯೆಯಾದ ಶಾಶ್ವತ ನೀರಾವರಿಗಾಗಿ ಹೋರಾಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಜಿ.ಪಂ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ತೂಪಲ್ಲಿ ನಾರಾಯಣಸ್ವಾಮಿ, ಮಾಜಿ ಅಧ್ಯಕ್ಷ ಎಂ.ಶ್ರೀನಿವಾಸನ್, ಪುರಸಭಾ ಸದಸ್ಯ ಎಸ್. ಶ್ರೀನಿವಾಸಪ್ಪ, ಪ್ರಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹೆಚ್.ಸಿ ನಾಗರಾಜ್, ತಾ.ಪಂ. ಮಾಜಿ ಸದಸ್ಯ ರಾಜಶೇಖರ್ ರೆಡ್ಡಿ, ಗಣೇಶ್, ವರ್ತನಪಲ್ಲಿ ರವಿ, ವಕೀಲರ ಸಂಘದ ಮಾಜಿ ಅಧ್ಯಕ್ಷ ವೆಂಕಟೇಶ್ ಇದ್ದರು.