ತಾಪಂ ಇಒ, ಗ್ರಾಪಂ ಕಾರ್ಯದರ್ಶಿ ಅಮಾನತು
ಚಿಂತಾಮಣಿ: ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಬಿ.ಸಿ. ವಸಂತಕುಮಾರ್ ಹಾಗೂ ಭೂಮಿಶೆಟ್ಟಹಳ್ಳಿ ಗ್ರಾಪಂ ಕಾರ್ಯದರ್ಶಿ ಎಸ್. ಲಕ್ಷ್ಮಿನಾರಾಯಣರನ್ನು ಸೇವೆಯಿಂದ ಅಮಾನತ್ ಮಾಡಿ ಚಿಕ್ಕಬಳ್ಳಾಪುರ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನೀಲಾ ಮಂಜುನಾಥ್ ಆದೇಶಿಸಿದ್ದಾರೆ.
ಮುಂದಿನ ಆದೇಶದವರೆಗೆ ಶಿಡ್ಲಘಟ್ಟ ಪಂಚಾಯತ್ ರಾಜ್ ಇಲಾಖೆಯ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಗಣಪತಿ.ಎಸ್ ಸಾಕರೆರನ್ನು ಪೂರ್ಣ ಪ್ರಭಾರಿಯನ್ನಾಗಿ ನಿಯೋಜಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.
ತಾಲೂಕಿನ ಭೂಮಿಶೆಟ್ಟಹಳ್ಳಿ ಗ್ರಾಪಂ ಕಾರ್ಯದರ್ಶಿ ಎಸ್. ಲಕ್ಷ್ಮಿನಾರಾಯಣ್ ಕರ್ತವ್ಯ ನಿರ್ವಹಿಸುವ ಉಲ್ಲೇಖ(1)ರ ಸರ್ಕಾರದ ಪತ್ರದಲ್ಲಿ ತಿಳಿಸಿರುವಂತೆ ನರೇಗಾ ಯೋಜನೆಯ 2013 ಮತ್ತು 14 ನೇ ಸಾಲಿನಲ್ಲಿ ಅನುಷ್ಠಾನಗೊಳಿಸದ ಕಾಮಗಾರಿಗಳ ಸಂಬಂಧ ಹಾಜರಾತಿ ಪಟ್ಟಿಗಳು ಮತ್ತು ಸಾಮಾಗ್ರಿ ಬಿಲ್ಗಳ ವೋಚರ್ಗಳನ್ನು ಆಂದೋಲನಾ ಮಾದರಿಯಲ್ಲಿ ತಪಾಸಣೆ ಮಾಡಲು ಆದೇಶಿಸಲಾಗಿದೆ.
ಕಾರ್ಯನಿರ್ವಾಹ ಅಧಿಕಾರಿ 2013-14 ಮತ್ತು 2014-15 ನೇ ಸಾಲಿನಲ್ಲಿ ವೆಚ್ಚ ಬರಿಸಿರುವ ಬಾಬತ್ತು ಕಡತಗಳನ್ನು ಹಾಗೂ ದಾಖಲೆಗಳನ್ನು ಪರಿಶೀಲನೆಗೆ ಹಾಜರಿಪಡಿಸಿದೆ ಇರುವುದು ಮತ್ತು ಗ್ರಾಪಂಗೆ ಸಕಾಲ ಯೋಜನೆಯಡಿ 30-03-2014 ರಂದು ಸಕಾಲ ಸ್ವೀಕೃತಿಯಾಗಿರುವ, ಕರ ನಿರ್ವಹಣಾ ಪಟ್ಟಿ ಬದಲಾವಣೆ ಮತ್ತು ಬೆಸ್ಕಾಂ ಎನ್ಒಸಿ ಕೋರಿ ಬಂದಿರುವ ಅರ್ಜಿಗಳನ್ನು ಕೊನೆ ದಿನಾಂಕದವರೆಗೂ ತೀರುವಳಿ ಮಾಡದೆ ಇರುವುದು, ಭೂಮಿಶೆಟ್ಟಹಳ್ಳಿ ಗ್ರಾಮ ಮತ್ತು ಗುಡಿಸಲುಗಳಲ್ಲಿ ಎಸ್.ಎಸ್. ಶ್ರೀನಿವಾಸ್ ಬಿನ್ ನರಸಿಂಹಪ್ಪ, ಬಿ.ಎಸ್. ಮಂಜುನಾಥ್ ಬಿನ್ ಸುಬ್ಬಣ್ಣ, ಆಂಜಪ್ಪ ಬಿನ್ ಸುಬ್ಬಣ್ಣರಿಗೆ ನರೇಗಾ ಯೋಜನೆಯ ಹಣ ಪಾವತಿಸದೆ ವಿಳಂಬವಾಗಿರುವ ಬಗ್ಗೆ ದೂರು ನೀಡಿದ್ದಾರೆ. ಸದರಿ ದೂರುಗಳನ್ನು ನಿಗದಿತ ಅವಧಿಯಲ್ಲಿ ವಿಲೇವಾರಿ ಮಾಡಲು ನಿರ್ದೇಶನ ನೀಡಿದ್ದರೂ, ವಿಲೇವಾರಿ ಮಾಡದೆ ಕರ್ತವ್ಯ ನಿರ್ಲಕ್ಷ್ಯ ತೋರಿರುವ ಕಾರ್ಯದರ್ಶಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದರೂ ಮೇಲಾಧಿಕಾರಿಗಳ ಆದೇಶ ಉಲ್ಲಂಘಿಸಿ ಬೇಜವಾಬ್ದಾರಿ ತನದಿಂದ ವರ್ತಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿರುವುದರಿಂದ ಕಾರ್ಯದರ್ಶಿ ವಿರುದ್ಧ ಶಿಸ್ತಿನ ಕ್ರಮ ಜರುಗಿಸಿರುವುದಾಗಿ ಚಿಕ್ಕಬಳ್ಳಾಪುರ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನೀಲಾ ಮಂಜುನಾಥ್ ಆದೇಶ ಪ್ರತಿಯಲ್ಲಿ ತಿಳಿಸಿದ್ದಾರೆ.