ಮಾಲೂರು ಪ್ರಗತಿಗೆ 3.5 ಕೋಟಿ ವಿನಿಯೋಗ
ಮಾಲೂರು: ಪಟ್ಟಣದ ರಸ್ತೆ, ಚರಂಡಿ, ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯ ನಿರ್ಮಾಣಕ್ಕಾಗಿ 3.5 ಕೋಟಿ ವಿನಿಯೋಗಿಸಲಾಗುತ್ತಿದೆ ಎಂದು ಪುರಸಭೆ ಅಧ್ಯಕ್ಷೆ ಭಾರತಮ್ಮ ನಂಜುಂಡಪ್ಪ ಹೇಳಿದರು.
ಪುರಸಭೆ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಹ ಸದಸ್ಯರ ಸಹಕಾರದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಉತ್ತಮ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. 13ನೇ ಹಣಕಾಸು ಯೋಜನೆಯಡಿ 167.02 ಲಕ್ಷ ಹಾಗೂ ಎಸ್‌ಎಫ್‌ಸಿ ಯೋಜನೆಯಡಿ 178.38 ಲಕ್ಷ ವೆಚ್ಚದಲ್ಲಿ ರಸ್ತೆ ಡಾಂಬರೀಕರಣ, ಚರಂಡಿ ನಿರ್ಮಾಣ, ಕಸ ವಿಲೇವಾರಿ, ಬೀದಿ ದೀಪ ಅಳವಡಿಕೆ ಸೇರಿದಂತೆ ಇತರೆ ಅಭಿವೃದ್ದಿ ಕಾರ್ಯಗಳಿಗೆ ಬಳಸಲಾಗುತ್ತದೆ ಎಂದರು.
ಪಟ್ಟಣದ ನೈರ್ಮಲ್ಯಕ್ಕೆ ತಡೆಯಾಗುತ್ತಿರುವ ಕಸಾಯಿಖಾನೆಯನ್ನು ಪಟ್ಟಣದ ಹೊರವಲಯದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ ಗುರುತಿಸಲಾಗಿರುವ ಭಿಂಗೀಪುರದ ಸರ್ವೆ ನಂ.32ರಲ್ಲಿ 20 ಗುಂಟೆ ಜಮೀನನ್ನು 4 ಲಕ್ಷ ನೀಡಿ ಪಡೆಯಲು ತೀರ್ಮಾನಿಸಲಾಗಿದೆ. ಪಟ್ಟಣದಲ್ಲಿ ನೀರಿನ ಅಭಾವ ಹೆಚ್ಚಾಗುತ್ತಿರುವುದರಿಂದ ಜಿಲ್ಲಾಧಿಕಾರಿಗಳ ಆದೇಶದಂತೆ ಖಾಸಗಿ ಕೊಳವೆ ಬಾವಿಗಳನ್ನು ಪುರಸಭೆಯ ಸುರ್ಪದಿಗೆ ಪಡೆದು ಕ್ರಮ ವಹಿಸಲು ನಿರ್ಧರಿಸಲಾಗಿದೆ. ಶುದ್ಧೀಕರಿಸಿದ ಎಲೆ ಮಲ್ಲಪ್ಪನ ಕೆರೆ ನೀರನ್ನು ಪಟ್ಟಣದ ಕುಡಿಯುವ ನೀರಿಗಾಗಿ ನೀಡುವ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಲು ಸಭೆ ನಿರ್ಧರಿಸಿದೆ ಎಂದರು.
ಪುರಸಭೆ ಮುಖ್ಯಾಧಿಕಾರಿ ರೇಣುಕಾ ಮಾತನಾಡಿ, ಹಾಳಾಗುತ್ತಿರುವ ಸಂತೆ ಮೈದಾನವನ್ನು ನವೀಕರಿಸಿ ಪಟ್ಟಣದಲ್ಲಿರುವ ರಸ್ತೆ ಬದಿ ಅಂಗಡಿಗಳನ್ನು ಅಲ್ಲಿಗೆ ಸ್ಥಳಾಂತರಿಸಲು ಸಭೆ ಒಪ್ಪಿಗೆ ಸೂಚಿಸಿದೆ. ಪಟ್ಟಣದ ವ್ಯಾಪ್ತಿಯಲ್ಲಿ ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿರುವ ಅಂಗನವಾಡಿ ಕೇಂದ್ರಗಳಿಗೆ ಪುರಸಭೆಯಲ್ಲಿ ಲಭ್ಯವಿರುವ ಸಿಎ ನಿವೇಶನಗಳನ್ನು ಜಿಲ್ಲಾಧಿಕಾರಿಗಳ ಅನುಮೋದನೆ ಮೇಲೆ ನೀಡಲು ಸಭೆ ತೀರ್ಮಾನಿಸಿತು ಎಂದರು. ಮಹಾರಾಜ ವೃತ್ತದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ತರಕಾರಿ ಮಳೆಗೆ ಸಂಕೀರ್ಣವನ್ನು ಹರಾಜನ್ನು ಆಗಸ್ಟ್ ತಿಂಗಳ ಮೊದಲ ವಾರದಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ರಾಜ್ಯಪತ್ರದಲ್ಲಿ ಪ್ರಕಟವಾಗಿ ಪುರಸಭೆ ದಾಖಲೆಗೆ ಒಳಪಡದಿರುವ ಸರ್ವೆ ನಂಬರ್ ಪ್ರದೇಶಗಳನ್ನು ಪುರಸಭೆ ದಾಖಲೆಗಳಿಗೆ ಒಳಪಡುವಂತೆ ಸೇರ್ಪಡೆ ಮಾಡಿಕೊಳ್ಳಲು ತೀರ್ಮಾನಿಸಲಾಗಿದೆ. ಬಸ್ ನಿಲ್ದಾಣ ಹಾಗೂ ಹೊಸೂರು ಸರ್ಕಲ್ ಬಳಿ ಶೌಚಾಲಯವನ್ನು ಖಾಸಗಿ ಏಜೆನ್ಸಿ ಮೂಲಕ ನಿರ್ಮಿಸಿ ಸಾರ್ವಜನಿಕರ ಉಪಯೋಗಕ್ಕಾಗಿ ಬಿಡಲು ನಿರ್ಧರಿಸಲಾಗಿದೆ. ಪಟ್ಟಣದ ವ್ಯಾಪ್ತಿಯಲ್ಲಿ ಸ್ವಚ್ಛತಾ ಕೆಲಸಗಳಲ್ಲಿ ತೊಡಗಿರುವ 41 ಕಾರ್ಮಿಕರಿಗೆ ಸ್ವಯಂ ಉದ್ಯೋಗವನ್ನು ಕೈಗೊಳ್ಳಲು ತಲಾ 25 ಸಾವಿರದಂತೆ 10,25,000 ನೀಡಲಾಗುವುದು ಎಂದರು.
ಉಪಾಧ್ಯಕ್ಷೆ ಶ್ರೀವಲ್ಲಿ ರಮೇಶ್, ಸದಸ್ಯ ಮುರಳೀಧರ್, ಮುಖಂಡ ನಂಜುಂಡಪ್ಪ, ಅಧಿಕಾರಿ ಸುಶೀಲಮ್ಮ, ಆರೋಗ್ಯ ನಿರೀಕ್ಷಕ ಉದಯ್, ರಾಜಣ್ಣ ಇದ್ದರು.