ದ್ವಿಪಥ ನಿರ್ಮಾಣಕ್ಕೆ ಒತ್ತಾಯ
ಬಂಗಾರಪೇಟೆ: ಪಟ್ಟಣದ ಎಸ್‌ಎನ್ ರೆಸಾರ್ಟ್‌ನಿಂದ ದೇಶಿಹಳ್ಳಿವರೆಗೂ ದ್ವಿಪಥ ರಸ್ತೆಯನ್ನಾಗಿ ಮಾರ್ಪಡಿಸಬೇಕೆಂದು ಆಗ್ರಹಿಸಿ ಕರವೇ ಕಾರ್ಯಕರ್ತರು ಪಟ್ಟಣದಲ್ಲಿ ಬೈಕ್ ರ್ಯಾಲಿ ಮಾಡಿ ಪ್ರತಿಭಟಿಸಿದರು.
ಪಟ್ಟಣದ ಜನಸಂಖ್ಯೆ ದಿನದಿಂದ ದಿನಕ್ಕೆ ದ್ವಿಗುಣವಾಗುತ್ತಿದೆ. ಆದರೆ ರಸ್ತೆಗಳು ಮಾತ್ರ ತುಂಬಾ ಕಿರಿದಾಗಿರುವುದರಿಂದ ನಿತ್ಯ ಅಪಘಾತಗಳು ಸಂಭವಿಸುತ್ತಿವೆ. ಆದ್ದರಿಂದ ಮೊದಲು ಎಸ್‌ಎನ್ ರೆಸಾರ್ಟ್‌ನಿಂದ ದೇಶಿಹಳ್ಳಿವರೆಗೂ ದ್ವಿ ಪಥದ ರಸ್ತೆ ನಿರ್ಮಾಣ ಮಾಡಿದರೆ ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ಹಾಗೂ ವಾಹನ ಸವಾರರಿಗೆ ಅನುಕೂಲವಾಗಿದೆ. ಶಾಸಕ ಎಸ್.ಎನ್.ನಾರಾಯಣಸ್ವಾಮಿ ಸಹ ಎರಡು ಪಥದ ರಸ್ತೆ ಮಾಡುವುದಾಗಿ ವರ್ಷದಿಂದ ಹೇಳುತ್ತಿದ್ದಾರೆ ವಿನಃ ಇದುವರೆಗೂ ಕಾರ್ಯಗತವಾಗಿಲ್ಲ ಎಂದು ಆರೋಪಿಸಿದರು.
ಆಧಾರ್ ಕಡ್ಡಾಯವಲ್ಲ: ಆಧಾರ ಕಾರ್ಡ್ ಕಡ್ಡಾಯವಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದ್ದರೂ ಎಲ್ಲಾ ಕೆಲಸ ಕಾರ್ಯಗಳಿಗೆ ಆಧಾರ್ ಕಾರ್ಡ್ ಕಡ್ಡಾಯವಾಗಿ ಬೇಕಾಗಿದೆ ಎಂದು ಅಧಿಕಾರಿಗಳು ಜನರಲ್ಲಿ ಗೊಂದಲ ಸೃಷ್ಟಿಸಿದ್ದಾರೆ. ಈ ಬಗ್ಗೆ ಸಹ ಸ್ಪಷ್ಟವಾದ ಮಾಹಿತಿಯನ್ನು ಸಾರ್ವಜನಿಕರಿಗೆ ತಾಲೂಕು ಆಡಳಿತ ನೀಡಬೇಕು ಹಾಗೂ ಪಟ್ಟಣದಲ್ಲಿ ನಡೆಯುತ್ತಿರುವ ಕೇಂದ್ರ ಸರ್ಕಾರದ ಆದರ್ಶ ವಿದ್ಯಾಲಯ ಶಾಲೆಗೆ ಸ್ವಂತ ಕಟ್ಟಡ ಭಾಗ್ಯವಿಲ್ಲದೆ ಕಳೆದ 6 ವರ್ಷಗಳಿಂದ ಕಿಷ್ಕಿಂದೆಯಂತಿರುವ ಕೊಠಡಿಯಲ್ಲಿ ತರಗತಿಗಳನ್ನು ನಡೆಸಲಾಗುತ್ತಿದೆ ಇಲ್ಲಿ ಯಾವುದೇ ಮೂಲಭೂತ ಸೌಲಭ್ಯಗಳು ಇಲ್ಲ ಎಂದರು.
ಈ ಕೂಡಲೆ ಈ ಮೂರು ಬೇಡಿಕೆಗಳನ್ನು ಈಡೇರಿಸಲು ತಾಲೂಕು ಆಡಳಿತ ಆಸಕ್ತಿ ವಹಿಸಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ತಾಹಸೀಲ್ದಾರ್‌ಗೆ ಸಲ್ಲಿಸಿರುವ ಮನವಿ ಪತ್ರದಲ್ಲಿ ತಿಳಿಸಿದ್ದಾರೆ. ಪ್ರತಿಭಟನೆ ನೇತೃತ್ವವನ್ನು ತಾಲೂಕು ಅಧ್ಯಕ್ಷ ತಿಮ್ಮಾಪುರ ನಾಗರಾಜ್,ನಗರ ಅಧ್ಯಕ್ಷ ದೇವೇಗೌಡ, ಪ್ರಧಾನ ಕಾರ್ಯದರ್ಶಿ ಕಣಿಂಬೆಲೆ ರಾಮಪ್ರಸಾದ್, ಸಿ.ಚಂದ್ರಶೇಖರ್, ಬೈರೇಗೌಡ, ನಾಗರಾಜ್, ಬಿ.ಎನ್.ಲೀಲಾವತಿ, ನಂದಕುಮಾರ್, ಕಾರ್ತಿಕ್, ಕೆ.ಎಂ.ವೆಂಕಟೇಶ್ ಮತ್ತಿತರರು ಇದ್ದರು.