ಮುಂದಿನ ಬಾರಿ ರಾಜ್ಯದಲ್ಲಿ ಜೆಡಿಎಸ್ ಸರ್ಕಾರ: ನಾಯ್ಡು
ಬಾಗೇಪಲ್ಲಿ: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ ಅಧಿಕಾರಕ್ಕೇರುವುದು ಖಚಿತ ಎಂದು ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಬಿ.ಆರ್.ನರಸಿಂಹ ನಾಯ್ಡು ಹೇಳಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಆಗ್ನೇಯ ಪದವೀಧರ ಹಾಗೂ ಬೆಂಗಳೂರು ಶಿಕ್ಷಕರ ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಆಯ್ಕೆ ಮಾಡಿರುವ ಮತದಾರರಿಗೆ ಅಭಿನಂದನೆಗಳನ್ನು ತಿಳಿಸಿದರು.
ಕುಮಾರಸ್ವಾಮಿ ಅವರು ಮುಖ್ಯಮಂತ್ರಿಗಳಾಗಿದ್ದ ಸಮಯದಲ್ಲಿ ಮಾಡಿರುವ ಜನಪರ ಯೋಜನೆಗಳನ್ನು ಮೆಚ್ಚಿ ಪ್ರಜ್ಞಾವಂತ ಮತದಾರರು ಜೆಡಿಎಸ್ಗೆ ಆಶೀರ್ವದಿಸಿದ್ದಾರೆ ಎಂದು ತಿಳಸಿದರು. ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ರಾಮಕೃಷ್ಣಪ್ಪ, ನಾರಾಯಣಸ್ವಾಮಿ ಶೆಟ್ಟಿ, ಸೂರ್ಯನಾರಾಯಣರೆಡ್ಡಿ, ನರಸಿಂಹಮೂರ್ತಿ, ಮಹಮ್ಮದ್ ನೂರುಲ್ಲಾ ಮುಂತಾದವರು ಇದ್ದರು.
ಕೃಷಿ ವಿಮೆ ಮಾಡಿಸಲು ಸಲಹೆ
ಮಾಲೂರು: ತಾಲೂಕಿನಲ್ಲಿ 2014-15 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಕೃಷಿ ವಿಮಾ ಯೋಜನೆಯನ್ನು ಜಾರಿಗೊಳಿಸಲಾಗುತ್ತದೆ. ಈ ಯೋಜನೆಯನ್ನು ತಾಲೂಕಿನ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಸಹಾಯಕ ಕೃಷಿ ನಿರ್ದೇಶಕಿ ಭವ್ಯಾ ರಾಣಿ ತಿಳಿಸಿದ್ದಾರೆ. ಪ್ರಕೃತಿ ವಿಕೋಪಗಳಿಂದ ಬೆಳೆ ನಷ್ಟ ಸಂಭವಿಸಿದ ಸಂಧರ್ಭದಲ್ಲಿ ವಿಮಾ ರಕ್ಷಣೆ ಒದಗಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದ್ದು, ವಿಮೆ ಮಾಡಿಸಿದ ರೈತರು ವಿಮೆ ಮಾಡಿಸಿದ ಬೆಳೆಯ ವಿವರಗಳನ್ನು ಹಾನಿಯ ವ್ಯಾಪ್ತಿ ಹಾಗೂ ಹಾನಿಗೆ ಕಾರಣಗಳನ್ನು 48 ಗಂಟೆಗಳೂಳಗಾಗಿ ಸಂಬಂಧ ಪಟ್ಟ ಹಣಕಾಸು ಸಂಸ್ಥೆ ಅಥವಾ ಅಗ್ರಿ ಕಲ್ಚರಲ್ ಇನ್ಸೂರೆನ್ಸ್ ಕಂಪನಿ ಅಫ್ ಇಂಡಿಯಾ ಲಿ. ತಿಳಿಸಬೇಕು ಎಂದು ಅವರು ತಿಳಿಸಿದ್ದಾರೆ.
ವಿಮೆ ಕಡ್ಡಾಯ: ಬೆಳೆ ಸಾಲ ಪಡೆಯದ ರೈತರು ಅರ್ಜಿಯನ್ನು ಜೂ. 30ರೊಳಗೆ ಸಲ್ಲಿಸಬೇಕು. ಹೆಚ್ಚಿನ ವಿವರಕ್ಕಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಕೃಷಿ ಇಲಾಖೆ(08151-260762) ಅಥವಾ ಬೆಂಗಳೂರಿನ ಅಗ್ರಿಕಲ್ಚರಲ್ ಇನ್ಸೂರೆಸ್ಸ್ ಕಂಪನಿ ಅಫ್ ಇಂಡಿಯಾ ಲಿ.(080-22115390)ನ್ನು ಸಂಪರ್ಕಿಸಿ.
'ಕರ್ತವ್ಯ ಪಾಲಿಸದೆ ಹಕ್ಕು ಕೇಳಲು ಸಾಧ್ಯವಿಲ್ಲ'
ಗೌರಿಬಿದನೂರು: ಕರ್ತವ್ಯವನ್ನು ಸರಿಯಾಗಿ ಪಾಲನೆ ಮಾಡದಿದ್ದಲ್ಲಿ ಹಕ್ಕುಗಳನ್ನು ಕೇಳಲು ಸಾಧ್ಯವಿಲ್ಲ ಎಂದು ನ್ಯಾ. ರವಿಕಾಂತ್ ಹೇಳಿದರುರು. ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ತಾಲೂಕು ಕಾನೂನು ಸೇವೆ ಮತ್ತು ವಕೀಲರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ, ಮೂಲಭೂತಹಕ್ಕುಗಳು ಮತ್ತು ಕರ್ತವ್ಯಗಳ ಚರ್ಚಾಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿನಿಯರಿಗೆ ಬಹುಮಾನ ವಿತರಿಸಿ ಮಾತನಾಡುತ್ತಾ, ವಿದ್ಯಾರ್ಥಿಗಳು ಶಿಕ್ಷಣದ ಹಕ್ಕು ಪಡೆದು ತಮ್ಮ ಗುರಿ ಸಾಧಿಸಿ ಸಮಾಜಕ್ಕೆ ದಾರಿ ದೀಪ ಹಾಗೂ ಪೋಷಕರ ಸಹಾಯಕ್ಕೆ ನಿಲ್ಲಬೇಕೆಂದು ಕರೆಯಿತ್ತರು. ವಕೀಲರಾದ ರಾಮಚಂದ್ರ ಅವರು, ಶಿಕ್ಷಣದ ಹಕ್ಕು ಮತ್ತು ಮೂಲಭೂತ ಸೌಲಭ್ಯಗಳ ಬಗ್ಗೆ ವಿಚಾರ ಮಂಡನೆ ಮಾಡಿದರು. ಕಾರ್ಯಕ್ರಮದಲ್ಲಿ ಸರ್ಕಾರಿ ಅಭಿಯೋಜಕ ಅರ್ಜುನ್ ಹಾಗು ದೈಹಿಕ ಶಿಕ್ಷಕ ಹನುಮಂತರೆಡ್ಡಿ, ಕಾಲೇಜು ಪ್ರಾಂಶುಪಾಲ, ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.
ಜನವಾದಿ ಸಂಘಟನೆಯಿಂದ ಪ್ರತಿಭಟನೆ
ಕೋಲಾರ/ಶ್ರೀನಿವಾಸಪುರ: ವಿವಿಧ ಬೇಡಿಕೆಗಳು ಈಡೇರಿಕೆಗಾಗಿ ಒತ್ತಾಯಿಸಿ ಜನವಾದಿ ಮಹಿಳೆ ಸಂಘಟನೆ ನೇತೃತ್ವದಲ್ಲಿ ಹಲವಾರು ಸ್ತ್ರೀಶಕ್ತಿ ಸಂಘಗಳ ಮುಖಂಡರು ಶುಕ್ರವಾರ ತಾಲೂಕು ಪಂಚಾಯಿತಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು. ಸಂಘಟನೆಯ ರಾಜ್ಯ ಅಧ್ಯಕ್ಷೆ ವಿ.ಗೀತಾ ಮಾತನಾಡಿ, ಸ್ವಸಹಾಯ ಗುಂಪುಗಳನ್ನು ರಚಿಸಿಕೊಂಡು ಬ್ಯಾಂಕ್ಗಳಲ್ಲಿ ಸಾಲ ಕೇಳಲು ಹೋದರೆ ಬ್ಯಾಂಕ್ನ ವ್ಯವಸ್ಥಾಪಕರು ಆರ್.ಬಿ.ಐ ನಿರ್ದೇಶನಗಳನ್ನು ಗಾಳಿಗೆ ತೂರಿ ಉಳ್ಳವರ ಪರವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಆರೋಪಿಸಿದರು. ಜೆಎಂಎಸ್ ಜಿಲ್ಲಾ ಕಾರ್ಯದರ್ಶಿ ಜಿ.ಈಶ್ವರಮ್ಮ ಮಾತನಾಡಿದರು. ಪ್ರತಿಭಟಿನೆಯಲ್ಲಿ ಜೆಎಂಎಸ್ ತಾಲೂಕು ಘಟಕದ ಅಧ್ಯಕ್ಷ ಲಕ್ಷ್ಮೀದೇವಿ, ಕಾರ್ಯದರ್ಶಿ ಎಚ್.ಎಂ.ಜಯ.ಲಕ್ಷ್ಮೀ, ಉಪಾಧ್ಯಕ್ಷ ಲಕ್ಷ್ಮೀದೇವಮ್ಮ, ನಿರ್ಮಲ, ಸವಿತಾ, ಶೈಲಜಾ, ಸುಜಾತಮ್ಮ ಇದ್ದರು.
ಯಶಸ್ವಿನಿ ವಯೋವುತಿ ವಿಸ್ತರಣೆಗೆ ಮೆಚ್ಚುಗೆ
ಚಿಕ್ಕಬಳ್ಳಾಪುರ: ಯಶಸ್ವಿನಿ ಯೋಜನೆಯ ವಯೋವುತಿಯನ್ನು ತೆಗೆದು ಎಲ್ಲಾ ವಯೋವಾನದವರೆಗೂ ಸೌಲಭ್ಯವನ್ನು ಒದಗಿಸುತ್ತಿರುವ ಸರ್ಕಾರದ ನಿರ್ಧಾರ ಶ್ಲಾಘನೀಯ ಎಂದು ಹಿರಿಯ ನಾಗರೀಕರ ವೇದಿಕೆಯ ಅಧ್ಯಕ್ಷ ಎಂ.ರಾಮಕೃಷ್ಣಪ್ಪ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿರಿಯ ನಾಗರೀಕರ ವೇದಿಕೆ ಮುಖ್ಯಮಂತ್ರಿ ಬಳಿಗೆ ತೆರಳಿ ಈ ಯೋಜನೆಯಲ್ಲಿ ಗುರುತಿಸಿರುವ ವಯೋವುತಿಯನ್ನು ತೆಗೆದು ಹಾಕಬೇಕೆಂದು ಒತ್ತಾಯಿಸಲಾಗಿತ್ತು. ಇದಕ್ಕೆ ಸ್ಪಂದಿಸಿರುವ ಮುಖ್ಯಮಂತ್ರಿಗಳು ನವಜಾತ ಶಿಶುವಿನಿಂದ ಹಿಡಿದು ಜೀವಿತಾಂತ್ಯದ ವಯೋವಾನದವರೆಗೂ ಯೋಜನೆಯನ್ನು ವಿಸ್ತರಿಸಿದ್ದಾರೆ. ಇದು ನಗರವಾಸಿಗಳಿಗೂ ಸಿಗುತ್ತಿರುವುದು ಅನುಕೂಲವಾಗಿದೆ. ಯಶಸ್ವಿನಿ ಯೋಜನೆಗೆ ಹೆಸರು ನೋಂದಾಯಿಸಲು ಜು.15 ಕಡೆ ದಿನವಾಗಿದ್ದು ಇದರ ಸದುಪಯೋಗಪಡೆದುಕೊಳ್ಳಬೇಕು ಎಂದು ತಿಳಿಸಿದರು. ಜು.15 ರಂದು ಬೆಳಿಗ್ಗೆ 10 ಗಂಟೆಗೆ ನಗರದಲ್ಲಿರುವ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ನಾರಾಯಣ ಹೃದಾಯಾಲಯ ಆಸ್ಪತ್ರೆಯ ಸಹಕಾರದೊಂದಿಗೆ ಹೃದಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಚಿಕ್ಕರಾಮಯ್ಯ, ಕಾರ್ಯದರ್ಶಿ ರಾಜ್ ಗೋಪಾಲ್, ಶ್ರೀರಾಮರೆಡ್ಡಿ, ವಿ.ವೆಂಕಟಸ್ವಾಮಿ, ಸುಬ್ಬರಾಯಪ್ಪ ಮುಂತಾದವರು ಹಾಜರಿದ್ದರು.
ಅವಕಾಶ ಸಿಕ್ಕಾಗ ರಕ್ತದಾನ ಮಾಡಿ: ನ್ಯಾ. ಎಸ್. ಮಹೇಶ್
ಶಿಡ್ಲಘಟ್ಟ: ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿಯೂ ರಕ್ತದಾನ ಮಾಡುವುದರಿಂದ ರಕ್ತದ ಕೊರತೆಯಿಂದ ಸಾವನ್ನಪ್ಪುತ್ತಿರುವ ಜನರನ್ನು ಪ್ರಾಣಾಪಾಯದಿಂದ ಕಾಪಾಡಬಹುದಾಗಿದೆ ಎಂದು ಸಿವಿಲ್ ನ್ಯಾಯಾಧೀಶ ಎಸ್.ಮಹೇಶ್ ಅಭಿಪ್ರಾಯ ಪಟ್ಟರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಭಾರತೀಯ ರೆಡ್ಕ್ರಾಸ್ ಸೊಸೈಟಿ ಶಿಡ್ಲಘಟ್ಟ ಶಾಖೆ, ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಪೋಲಿಸ್ ಇಲಾಖೆ, ಕಾರ್ಯನಿರತ ಪತ್ರಕರ್ತರ ಸಂಘದ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ರಕ್ತದಾನ ಶಿಬಿರವನ್ನು ಉದ್ಘಾಟನೆ ಮಾಡಿ ಮಾತನಾಡಿದ ಅವರು, ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿ ರಕ್ತದಾನ ಮಾಡುವುದರಿಂದ ಐದು ಮಂದಿಯ ಜೀವವನ್ನು ಉಳಿಸಬಹುದಾಗಿದೆ, ಆದ್ದರಿಂದ ನಿಮಗೆ ಅವಕಾಶಗಳು ಸಿಕ್ಕಾಗ ರಕ್ತದಾನ ಮಾಡುವಂತೆ ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ, ವಿಜಯದೇವರಾಜ್ ಅರಸ್, ತಾಲೂಕು ವಕೀಲರ ಸಂಘದ ಅಧ್ಯಕ್ಷ ಎಂ.ಪಾಪಿರೆಡ್ಡಿ, ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಅನಿಲ್ ಕುಮಾರ್, ಸರ್ಕಾರಿ ಅಭಿಯೋಜಕ ಈ.ಡಿ.ಶ್ರೀನಿವಾಸ್, ತಹಶೀಲ್ದಾರ್ ಎ.ನಾರಾಯಣಸ್ವಾಮಿ, ರೆಡ್ಕ್ರಾಸ್ ಸೊಸೈಟಿಯ ತಾಲೂಕು ಕಾರ್ಯದರ್ಶಿ ಎನ್.ಕೆ.ಗುರುರಾಜರಾವ್, ಮುಂತಾದವರು ಹಾಜರಿದ್ದರು.
ಗೋಮಾಳ ಕಬಳಿಕೆ ಯತ್ನ: 2 ಜೆಸಿಬಿ ವಶ
ಶಿಡ್ಲಘಟ್ಟ: ಸರ್ಕಾರಿ ಗೋಮಾಳದ ಜಮೀನನ್ನು ಕಬಳಿಸಲು ಪ್ರಯತ್ನಿಸಿದ ಆರೋಪ ಮೇಲೆ ಎರಡು ಜೆಸಿಬಿ ಯಂತ್ರಗಳನ್ನು ವಶಪಡಿಸಿಕೊಂಡಿರುವ ಘಟನೆ ನಡೆದಿದೆ.
ತಾಲೂಕಿನ ಪಲಿಚೇರ್ಲು ಗ್ರಾಮದಲ್ಲಿ 20.22 ಗುಂಟೆ ಸರ್ಕಾರಿ ಗೋಮಾಳದ ಜಮೀನಿನಲ್ಲಿ ಸುತ್ತಮುತ್ತಲ ಗ್ರಾಮಸ್ಥರುಗಳು ಜೆಸಿಬಿಗಳ ಮೂಲಕ ಸಾಗುವಳಿ ಮಾಡಲು ಮುಂದಾಗಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳ ಬಂದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ್ದ ತಹಸಾಲ್ದಾರ್ .ಎ.ನಾರಾಯಣಸ್ವಾಮಿ, ರಾಜಸ್ವ ನಿರೀಕ್ಷಕ ಸುಭ್ರಮಣಿ, ಗ್ರಾಮಲೆಕ್ಕಾಧಿಕಾರಿ ಲಾರೆನ್ಸ್, ದಿಬ್ಬೂರಹಳ್ಳಿ ಪೋಲಿಸ್ ಠಾಣೆಯ ಸಿಬ್ಬಂದಿ 2 ಜೆಸಿಬಿಗಳನ್ನು ವಶಪಡಿಸಿಕೊಂಡಿದ್ದಾರೆ.
ತಹಸೀಲ್ದಾರ್ ಎಚ್ಚರಿಕೆ: ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮಾಹಿತಿಯನ್ನು ರವಾನಿಸಿರುವುದಾಗಿ ತಿಳಿಸಿರುವ ತಹಶೀಲ್ದಾರ್, ಸರ್ಕಾರಿ ಭೂಮಿ ಕಬಳಿಸಲು ಯತ್ನಿಸಿದರೆ ದಂಡ ವಿಧಿಸಲಾಗುತ್ತದೆ ಎಂದು ಎಚ್ಚರಿಸಿದರು.
ಹಿಂದೆ ಸುದ್ದೆಮಣ್ಣಿನ ಕಾರ್ಖಾನೆಗೆ ಗುತ್ತಿಗೆಯನ್ನು ನೀಡಲಾಗಿತ್ತು. ಆದರೆ ಅನೇಕ ವರ್ಷಗಳ ಹಿಂದೆಯೆ ಗುತ್ತಿಗೆಯ ಅವಧಿ ಮುಕ್ತಾಯವಾಗಿದೆ. ಆದರೂ ಸದರಿ ಭೂಮಿಯನ್ನು ಕಬಳಿಕೆ ಮಾಡಲು ಪ್ರಯತ್ನ ಪಟ್ಟಿದ್ದರು ಎಂದು ತಹಸೀಲ್ದಾರ್ ತಿಳಿಸಿದ್ದಾರೆ.
ಆಟೋ ಮುಖಾಮುಖಿ ಡಿಕ್ಕಿ: 8 ವಿದ್ಯಾರ್ಥಿಗಳಿಗೆ ಗಾಯ
ಗೌರೀಬಿದನೂರು: ತಾಲೂಕಿನ ಮಂಚೇನಹಳ್ಳಿ ಹೋಬಳಿ ಸಾದೇನಹಳ್ಳಿ ಮತ್ತು ಅದ್ದೇಕೊಪ್ಪ ಮಾರ್ಗ ಮಧ್ಯದಲ್ಲಿ ಎರಡು ಆಟೋಗಳ ಮುಖಾಮುಖಿ ಡಿಕ್ಕಿಯಿಂದ 8 ಜನ ವಿದ್ಯಾರ್ಥಿಗಳಿಗೆ ಗಂಭೀರವಾದ ಗಾಯಗಳಾಗಿರುವ ಘಟನೆ ಶುಕ್ರವಾರ ಬೆಳಿಗ್ಗೆ ಸಂಭವಿಸಿದೆ. ಶಾಲಾ ಮಕ್ಕಳು ಆಟೋದಲ್ಲಿ ಮರಿಮಾಕಲಹಳ್ಳಿಯಲ್ಲಿರುವ ಶಾಲೆಗೆ ಹೋಗುತ್ತಿರುವಾಗ ಚಾಲಕನ ಅಜಾಗುರಕತೆಯಿಂದ ಮುಂಬರುವ ಆಟೋಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಶಿಲ್ಪ (14), ಕಾವೇರಿ (12), ಆನಂದ (12) ನಳಿನಿ (13) ನರಸಿಂಹಮೂರ್ತಿ (10) ನೇತ್ರಾವತಿ (18), ಸುಕನ್ಯಾ (18) ಗಾಯಗೊಂಡಿದ್ದಾರೆ. ಮಂಚೇನಹಳ್ಳಿ ಸಬ್ ಇನ್ಸ್ಪೆಕ್ಟರ್ ಸುಂದರ್ ಸುದ್ದಿದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿ, ಮಕ್ಕಳನ್ನು ಪೊಲೀಸ್ ವಾಹನದಲ್ಲೇ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಮಂಚೇನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಾರ್ವಜನಿಕರ ಆಗ್ರಹ: ಇತ್ತೀಚಿನ ದಿನಗಳಲ್ಲಿ ಪ್ಯಾಸಿಂಜರ್ ಆಟೋಗಳಲ್ಲಿ ಸುಮಾರು 20ರಿಂದ 30ಜನಗಳನ್ನು ತುಂಬಿಕೊಂಡು ಓಡಿಸಲಾಗುತ್ತಿದ್ದು ಇದರಿಂದ ಹೆಚ್ಚಿನ ಅಪಘಾತಗಳು ಸಂಭವಿಸುತ್ತಿದ್ದು 3ಕ್ಕಿಂತಲೂ ಹೆಚ್ಚು ಜನರನ್ನು ಹಾಕಿಕೊಂಡು ಓಡಿಸುತ್ತಿರುವ ಆಟೋಗಳನ್ನು ತಡೆದು ದಂಡ ವಿಧಿಸಬೇಕೆಂದು ಸಾರ್ವಜನಿಕರು ಪೋಲೀಸ್ ಇಲಾಖೆಯನ್ನು ಆಗ್ರಹಸಿದ್ದಾರೆ.
ವರದಕ್ಷಿಣೆ ಕಿರುಕುಳ: ಪತಿ ವಿರುದ್ಧ ದೂರು
ಕೆಜಿಎಫ್: ವರದಕ್ಷಿಣೆ ತರುವಂತೆ ಪತ್ನಿಗೆ ಕಿರುಕುಳ ನೀಡುತ್ತಿದ್ದ ಪತಿ ಹಾಗೂ ಆತನ ಮನೆಯವರ ವಿರುದ್ಧ ರಾಬರ್ಟ್ಸನ್ಪೇಟೆ ಠಾಣೆಗೆ ದೂರು ನೀಡಲಾಗಿದೆ.
15 ರ್ವಷಗಳ ಹಿಂದೆ ಬೆಂಗಳೂರಿನ ಹಲಸೂರು ಗೇಟ್ ವ್ಯಾಪ್ತಿಯ ನಿವಾಸಿ ಕವಿತಾ ಎಂಬುವರನ್ನು ಕೆಜಿಎಫ್ ನಿವಾಸಿ ರಾಜೇಶ್ ಮದುವೆಯಾಗಿದ್ದ. ಮದುವೆಗೆ ಮೊದಲೇ ರಾಜೇಶ್ ಹಾಗೂ ಆತನ ಮನೆಯವರು 10 ಲಕ್ಷ ನಗದು ಹಾಗೂ ಚಿನ್ನದ ಒಡವೆ ನೀಡಬೇಕು ಎಂದು ಒತ್ತಾಯಿಸಿದ್ದರಿಂ ದ ಕವಿತಾ ಮನೆಯವರು 1.50 ಲಕ್ಷ ನಗದು 360 ಗ್ರಾಂ ಚಿನ್ನದ ಒಡವೆ ವರದಕ್ಷಿಣೆಯಾಗಿ ನೀಡಿದ್ದರು. ಪತಿ ರಾಜೇಶ್ ಹಾಗೂ ಆತನ ಮನೆಯವರು ಕವಿತಾಳಿಗೆ ಇನ್ನೂ 3 ಲಕ್ಷ ಹಣ ತರುವಂತೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದ ಕಾರಣ ಕವಿತಾಳ ಮನೆಯವರು 3 ಲಕ್ಷ ಹಣವನ್ನು ನೀಡಿದ್ದರು. ಆದರೆ ಪತಿ ರಾಜೇಶ್ ಬೇರೆ ಸಂಬಂಧವಿಟ್ಟುಕೊಂಡಿರುವುದನ್ನು ಪ್ರಶ್ನಿಸಿದ್ದಕ್ಕೆ ಪತಿ ಹಾಗೂ ಆತನ ಮನೆಯವರು ಹೊಡೆದು ತವರು ಮನೆಗೆ ಕಳುಹಿಸಿದ್ದಾರೆ ಎಂದು ಕವಿತಾ ರಾಬರ್ಟ್ಸನ್ಪೇಟೆ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಹಿಳೆ ಮೇಲೆ ದೌರ್ಜನ್ಯ
ಕೋಲಾರ: ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮಹಿಳೆಯರ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿಂತೆ ಪ್ರಕರಣ ದಾಖಲಾಗಿದೆ.ತಾಲೂಕು ಮಟ್ನಹಳ್ಳಿ ಗ್ರಾಮದಲ್ಲಿ ಶುಕ್ರವಾರ ಮುನಿರತ್ನಮ್ಮ ಎಂಬುವರು ಅವರ ತೋಟಕ್ಕೆ ಹೋಗುತ್ತಿದ್ದಾಗ ಅದೇ ಗ್ರಾಮದ ವಾಸಿಯಾದ ಸೊಣ್ಣೇಗೌಡ ಎಂಬುವರು ದ್ವಿಚಕ್ರ ವಾಹನದಲ್ಲಿ ಎದುರಿನಿಂದ ಬಂದು ಅಡ್ಡಲಾಗಿ ವಾಹನವನ್ನು ನಿಲ್ಲಿಸಿ ಮಹಿಳೆಯ ಕೈಯನ್ನು ಹಿಡಿದು ಎಳೆದಾಡಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಚಾಕುನಿಂದ ಕೈಗೆ ತಿವಿದು ಪ್ರಾಣ ಬೆದರಿಕೆ ಹಾಕಿರುತ್ತಾನೆಂದು ದೂರು ನೀಡಲಾಗಿದೆ.
ಅಪರಿಚಿತ ವ್ಯಕ್ತಿ ಕೊಲೆ
ಬಾಗೇಪಲ್ಲಿ: ಅಪರಿಚಿತ ವ್ಯಕ್ತಿಯ ತಲೆಗೆ ಕಲ್ಲಿನಿಂದ ಹೊಡೆದು ಅನುಮಾನಾಸ್ಪಾದ ರೀತಿಯಲ್ಲಿ ಕೊಲೆ ಮಾಡಿರುವ ಘಟನೆ ಪಟ್ಟಣದ ಕೆನರಾ ಬ್ಯಾಂಕ್ ಮುಂಭಾಗದಲ್ಲಿರುವ ಪುರಸಭೆಯ ವಾಣಿಜ್ಯ ಮಳಿಗೆಯಲ್ಲಿ ನಡೆದಿದೆ. ಕೊಲೆಯಾಗಿರುವ ವ್ಯಕ್ತಿ ಭಿಕ್ಷುಕನಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಬಾಗೇಪಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.