ಅನಿಯಮಿತ ಲೋಡ್‌ಶೆಡ್ಡಿಂಗ್: ಬೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ರೈತರ ಪ್ರತಿಭಟನೆ
ಕೆಜಿಎಫ್: ಲೋಡ್‌ಶೆಡ್ಡಿಂಗ್ ಹೆಸರಿನಲ್ಲಿ ದಿನಕ್ಕೆ 2 ಗಂಟೆ ಕಾಲವೂ ಸಮರ್ಪಕ ವಿದ್ಯುತ್ ಪೂರೈಸದೆ ರೈತರ ಬೆಳೆಗಳು ನಾಶವಾಗಲು ಬೆಸ್ಕಾಂ ಕಾರಣ ಎಂದರು. ಬೆಸ್ಕಾಂನ ಕಾರ್ಯವೈಖರಿ ಖಂಡಿಸಿ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಹುಲ್ಕೂರು ಹರಿಕುಮಾರ್ ನೇತೃತ್ವದಲ್ಲಿ ನೂರಾರು ರೈತರು ಕೆಜಿಎಫ್‌ನ ಬೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಈ ವೇಳೆ ಮಾತನಾಡಿದ ಹರಿಕುಮಾರ್, ಜಿಲ್ಲೆಯಲ್ಲಿ ಕಳೆದ ಹತ್ತಾರು ವರ್ಷಗಳಿಂದ ಮಳೆಯಿಲ್ಲದೆ ಬರಗಾಲ ಎದುರಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಅಲ್ಪಸ್ವಲ್ಪ ಸಿಗುವ ನೀರಿನಿಂದ ರೈತರು ಬೆಳೆಗಳನ್ನು ಬೆಳೆಯುತ್ತಿರುವ ಪರಿಸ್ಥಿತಿಯಲ್ಲಿ ಬೆಸ್ಕಾಂ ಇಲಾಖೆಯ ಅಧಿಕಾರಿಗಳು ಮಾತ್ರ ಸಮರ್ಪಕ ವಿದ್ಯುತ್ ಪೂರೈಸುತ್ತಿಲ್ಲ. ಇದರ ಪರಿಣಾಮ ರೈತರು ಬೆಳೆದ ಬೆಳೆಗಳು ನಾಶವಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಂತರ್ಜಲಮಟ್ಟ ಕುಸಿದಿದ್ದು ಲಕ್ಷಾಂತರ ಜನ ಜಾನುವಾರುಗಳಿಗೆ ಹಳ್ಳಿಗಳಲ್ಲಿ ನೀರಿಲ್ಲದೆ ಪರದಾಡುವಂತಾಗಿದೆ. ಸರ್ಕಾರ ನಿಗದಿಪಡಿಸಿರುವ 3ಪೇಸ್ 8 ಗಂಟೆ ಸಿಂಗಲ್ ಪೇಸ್ 6 ಗಂಟೆ ವಿದ್ಯುತ್ ಸರಬರಾಜು ಮಾಡದೆ ತೊಂದರೆ ಉಂಟಾಗಿದೆ ಎಂದರು. ಬೆಸ್ಕಾಂ ಇಲಾಖೆ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಭಟಿಸಿದರು. ಕೂಡಲೇ ಕ್ರಮ ಕೈಗೊಳ್ಳುವಂತೆ ತಿಳಿಸಿ ಬೆಸ್ಕಾಂ ಇಲಾಖೆ ಅಧಿಕಾರಿ ಬಚ್ಚೇಗೌಡರಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ವಡ್ಡಹಳ್ಳಿ ಮಂಜುನಾಥ್, ದೊಡ್ಡಕಾರಿ ವಿಶ್ವನಾಥ್, ಸುಬ್ರಮಣಿ, ಹೇಮಾರೆಡ್ಡಿ, ಕಣ್ಣೂರು ಗಣೇಶ್, ಕ್ಯಾಸಂಬಳ್ಳ ಪ್ರತಾಪ್, ಕೆ.ಎಂ. ವೆಂಕಟರಾಮ ರೆಡ್ಡಿ, ಕೇಶವಮೂರ್ತಿ, ಮಂಜು, ಮುನಿರಾಜು ಇದ್ದರು.