ಡಿಸಿ ಹೇಳಿದ್ದೊಂದು, ನಗರಸಭೆ ಮಾಡಿದ್ದೊಂದು
ಕೋಲಾರ: ಬೆಂಗಳೂರಿನ ಕೆ.ಆರ್. ಪುರಂ ಬಳಿ ಇರುವ ಎಲೆಮಲ್ಲಪ್ಪಶೆಟ್ಟಿ ಕೆರೆಯ ತ್ಯಾಜ್ಯ ನೀರನ್ನು ಸಂಸ್ಕರಿಸಿ ಕೋಲಾರ ಜಿಲ್ಲೆಯ ಕೆರೆಗಳಿಗೆ ಹರಿಸಲು ರೂಪಿಸಲಾಗಿತ್ತು. ಯೋಜನೆ ಪ್ರಕಾರ ತ್ಯಾಜ್ಯ ನೀರನ್ನು ಪರಿಷ್ಕರಿಸಿ ಬೆಂಗಳೂರಿನ ಬೆಳ್ಳಂದೂರು ಕೆರೆಯ ಸಮೀಪದ ಕೋರಮಂಗಲ-ಚಲಘಟ್ಟ ತ್ಯಾಜ್ಯ ನೀರು ಸಂಸ್ಕರಣ ಘಟದ ಮೂಲಕ ಹರಿಸಲು ಜಿಲ್ಲಾಡಳಿತ ಸರ್ಕಾರಕ್ಕೆ ಪರಿಷ್ಕೃತ ಯೋಜನೆ ಸಲ್ಲಿಸಿದೆ. ಈ ಕುರಿತು ನಿರ್ಣಯ ಕೈಗೊಳ್ಳಬೇಕಾದ ನಗರಸಭೆ ಹಳೆಯ ಯೋಜನೆಗೆ ಶನಿವಾರ ನಡೆದ ಸಭೆಯಲ್ಲಿ ನಿರ್ಣಯ ಕೈಗೊಳ್ಳುವ ಮೂಲಕ ಅಜ್ಞಾನವನ್ನು ಪ್ರದರ್ಶಿಸಿದೆ.
ಎಲೆಮಲ್ಲಪ್ಪಶೆಟ್ಟಿ ಕೆರೆಯ ತ್ಯಾಜ್ಯ ನೀರನ್ನು ಕೋಲಾರ ನಗರದ ನಾಲ್ಕೈದು ಕೆರೆಗಳಿಗೆ ಹರಿಸುವ ಮೂಲಕ ಅಂತರ್ಜಲ ಅಭಿವೃದ್ಧಿಗೊಳಿಸಲು ರೂಪಿಸಿದ್ದ ಯೋಜನೆಗೆ ಬದಲಾಗಿ ಕೋರಮಂಗಲ-ಚಲಘಟ್ಟ ತ್ಯಾಜ್ಯ ನೀರು ಸಂಸ್ಕರಣಾ ಘಟಕದ ನೀರನ್ನು ಕೆರೆಗಳಿಗೆ ಹರಿಸಲು ಪರಿಷ್ಕೃತ ಯೋಜನೆ ತಯಾರಿಸಲಾಗಿದೆ. ಈ ಸಂಬಂಧ ಜೂ.17ರಂದು ಬೆಂಗಳೂರಿನಲ್ಲಿ ರಾಜ್ಯ ಮುಖ್ಯ ಕಾರ್ಯದರ್ಶಿ ಕರೆದಿದ್ದ ಸಭೆಯಲ್ಲಿ ಚರ್ಚಿಸಲಾಗಿತ್ತು. ಜನತೆಯ ಅಭಿಪ್ರಾಯ ಸಂಗ್ರಹಣೆಗೆ ಸೂಚಿಸಲಾಗಿತ್ತು.
ವರದಿಗೆ ಸೂಚನೆ: ಜೂ. 19ರಂದು ಜಿಪಂನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಸಭೆಯಲ್ಲೂ ಕೋರಮಂಗಲ-ಚಲಘಟ್ಟ ತ್ಯಾಜ್ಯ ನೀರಿನ ಸಂಸ್ಕರಣಾ ಘಟಕದಿಂದ 150 ಎಂಎಲ್ಡಿ ನೀರನ್ನು ಕೋಲಾರ ಜಿಲ್ಲೆಯ ಕೆರೆಗಳಿಗೆ ಹರಿಸುವ ಪರಿಷ್ಕೃತ ಯೋಜನೆಯ ಬಗ್ಗೆ ಜಿಲ್ಲಾಧಿಕಾರಿಗಳು ವಿವರಿಸಿದ್ದರಲ್ಲದೆ, ಜಿಲ್ಲೆಯ ಎಲ್ಲಾ ಸ್ಥಳೀಯ ಸಂಸ್ಥೆಗಳು ಹತ್ತು ದಿನಗಳಲ್ಲಿ ನಿರ್ಣಯ ಕೈಗೊಂಡು ವರದಿ ನೀಡುವಂತೆ ಸೂಚಿಸಿದ್ದರು. ಇದಕ್ಕೆ ಸಚಿವ ಖಾದರ್ ಅವರು ಸಹ ಸಹಮತ ವ್ಯಕ್ತಪಡಿಸಿದ್ದರು. ಈ ಸಂಬಂಧ ಶನಿವಾರ ಕೋಲಾರ ನಗರಸಭೆಯಲ್ಲಿ ವಿಶೇಷ ಸಭೆಯನ್ನು ಕರೆಯಲಾಗಿತ್ತು. ಸದರಿ ಸಭೆಯಲ್ಲಿ ಪರಿಷ್ಕೃತ ಯೋಜನೆಯ ಬಗ್ಗೆ ನಿರ್ಣಯ ಕೈಗೊಳ್ಳಬೇಕಾಗಿದ್ದವರು ಹಳೆಯ ಎಲೆಮಲ್ಲಪ್ಪ ಶೆಟ್ಟಿ ಕೆರೆಯ ತ್ಯಾಜ್ಯ ನೀರಿನ ಬಳಕೆಗೆ ನಿರ್ಣಯ ಕೈಗೊಂಡರು.
ತ್ಯಾಜ್ಯ ನೀರು: ನಗರಸಭೆ ಅಧ್ಯಕ್ಷ ಬಿ.ಎಂ.ಮುಬಾರಕ್, ಆಯುಕ್ತರು ಬರೆದುಕೊಟ್ಟ ಆಜೆಂಡಾವನ್ನು ಮಂಡಿಸಿ ಎಲ್ಲೆಮಲ್ಲಪ್ಪಶೆಟ್ಟಿ ಕೆರೆಯಿಂದ ಈಗಾಗಲೇ ತ್ಯಾಜ್ಯ ನೀರನ್ನು ಹೊಸಕೋಟೆಯವರು ಪೈಪ್ಲೈನ್ ಮುಖಾಂತರ ಪಡೆಯಲು ಸಿದ್ಧರಾಗಿದ್ದು, ಇದನ್ನು ಕೋಲಾರಕ್ಕೆ ಹಾಯಿಸಲು ಜಿಲ್ಲಾಧಿಕಾರಿಗಳು ವಿಶೇಷ ಕಾಳಜಿಯನ್ನು ವಹಿಸಿದ್ದಾರೆಂದು ಹೇಳಿದರು. ಪರಿಷ್ಕೃತ ಯೋಜನೆಯ ಬಗ್ಗೆ ಜೂ.17ರಂದು ಬೆಂಗಳೂರಿನಲ್ಲಿ ಹಾಗೂ ಜೂ.19ರಂದು ಕೋಲಾರದಲ್ಲಿ ನಡೆದ ಸಭೆಯ ವಿವರಗಳು ಮಾಧ್ಯಮಗಳಲ್ಲಿ ಪ್ರಕಟಗೊಂಡಿದ್ದರೂ, ಗಮನಿಸದೆ ಸದಸ್ಯರು ಸಹ ಅಧ್ಯಕ್ಷರ ಮಾತಿಗೆ ದನಿಗೂಡಿಸಿದರು. ಆಯುಕ್ತರು ಕೆಡಿಪಿ ಸಭೆಯಲ್ಲಿ ಭಾಗವಹಿಸಿಯು ಸಭೆಯಲ್ಲಿ ತಪ್ಪು ನಿರ್ಧಾರಗಳು ಆಗುತ್ತಿದ್ದರೂ ತಮಗೇನು ಗೊತ್ತಿಲ್ಲವೆಂಬಂತೆ ಮೌನಕ್ಕೆ ಶರಣಾಗಿ ಅಧ್ಯಕ್ಷರು ಮತ್ತು ಸದಸ್ಯರು ನಗೆಪಾಟಲಿಗೆ ಗುರಿ ಆಗುವಂತೆ ಮಾಡಿದ್ದಾರೆ.
ಹುಸಿಯಾಯ್ತು ಭರವಸೆ: ಸದಸ್ಯರಾದ ರಾಧಾಕೃಷ್ಣ, ಸೋಮಶೇಖರ್, ಗಾಂಧಿನಗರ ನಾರಾಯಣಸ್ವಾಮಿ ಚರ್ಚೆಯಲ್ಲಿ ಭಾಗವಹಿಸಿದ್ದರು. ಮುರಳೀಗೌಡ ಮಾತನಾಡಿ, ಈ ಹಿಂದೆ ಭದ್ರ ಮೇಲ್ದಂಡೆ ಯೋಜನೆಯಿಂದ ಜಿಲ್ಲೆಯ 19 ಕೆರೆಗಳಿಗೆ ನೀರು ತುಂಬಿಸುವುದಾಗಿ ಹೇಳಲಾಗಿತು. ಆದರೆ ಈ ಯೋಜನೆ ಇದುವರೆಗೂ ಕಾರ್ಯಗತವಾಗಿಲ್ಲವೆಂದು ದೂರಿದರು.
ಚಿನ್ನಪುರದ ಯುಜಿಡಿ ನೀರನ್ನು ಬಂಗಾರಪೇಟೆಯ ಗಾಲ್ಫ್ನವರು ಪೈಪ್ಲೈನ್ ಮುಖಾಂತರ ಪಡೆದು ಶುದ್ಧೀಕರಿಸಿ ಉಪಯೋಗಿಸುತ್ತಿದ್ದಾರೆ. ಈ ಹಿಂದಿನ ಸದಸ್ಯರು ಈ ನೀರಿನ್ನು ಕೊಡುವುದು ಬೇಡವೆಂದರೂ ಸಹ ಅಕ್ರಮವಾಗಿ ಪಡೆಯಲಾಗಿದೆ ಎಂದು ಆರೋಪಿಸಿದರು. ಸಭೆಯಲ್ಲಿ ನಗರಸಭೆ ಉಪಾಧ್ಯಕ್ಷ ಸಾಕಮ್ಮ ಇದ್ದರು.
ಡಿಸಿ ಸೂಚನೆ: ನಗರಸಭೆಯಲ್ಲಿ ಎಲೆಮಲ್ಲಪ್ಪಶೆಟ್ಟಿ ಕೆರೆ ನೀರಿನ ಬಗ್ಗೆ ನಿರ್ಣಯ ಕೈಗೊಂಡ ವಿಚಾರ ತಮ್ಮ ಗಮನಕ್ಕೆ ಬರುತ್ತಿದ್ದಂತೆ ಜಿಲ್ಲಾಧಿಕಾರಿ ಡಿ.ಕೆ. ರವಿ ಅವರು ನಗರಸಭೆ ಆಯುಕ್ತ ಜಗದೀಶ್ರೊಂದಿಗೆ ಮಾತನಾಡಿ, ಎಲೆಮಲ್ಲಪ್ಪಶೆಟ್ಟಿ ಕೆರೆ ನೀರಿನ ಯೋಜನೆ ಪರಿಷ್ಕರಿಸಿ ಕೋರಮಂಗಲ-ಚಲಘಟ್ಟ ತ್ಯಾಜ್ಯ ನೀರು ಸಂಸ್ಕರಣಾ ಘಟಕದಿಂದ ಕೆರೆಗಳಿಗೆ ನೀರು ಹರಿಸಲು ಸರ್ಕಾರದೊಂದಿಗೆ ಮಾತುಕತೆ ನಡೆಯುತ್ತಿದ್ದು, ನಗರಸಭೆಯಲ್ಲಿ ಕೈಗೊಂಡಿರುವ ನಿರ್ಣಯ ತಿದ್ದುಪಡಿ ಮಾಡಿ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ.