ಅಂತೂ ಕನ್ನಡ ಭವನ ಉದ್ಘಾಟನೆ
ಮುಳಬಾಗಲು: ಸುಗ್ಗಿ ಹಬ್ಬ ಜಾನಪದ ಉತ್ಸವ ಹಾಗೂ ಗಡಿನಾಡ ಕನ್ನಡ ಭವನ ಉದ್ಫಾಟನೆ ಕಾರ್ಯ ಪ್ರಾರಂಭದಲ್ಲೇ ಮುಗ್ಗರಿಸಿತು. ಕಾರ್ಯಕ್ರಮದ ವೇಳೆ 10.30ಕ್ಕೆ ಶಿಷ್ಟಾಚಾರ ಪಾಲಿಸದ ಹೆಸರುಗಳ ಫಲಕವನ್ನು ಒಡೆದು ಹಾಕಲಾಗಿದೆ ಎಂಬ ಸುದ್ದಿ ಹಿನ್ನೆಲೆಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಯಿತು. ಪುರಸಭೆಯ ಸದಸ್ಯರ ಹೆಸರು ನಿಯಮಾನುಸಾರವಾಗಿ ಅದರಲ್ಲಿ ನಮೂದಿಸದಿರುವುದು ಫಲಕವನ್ನು ಹಾಳು ಮಾಡಲು ಕಾರಣವೆಂಬ ಸುದ್ದಿ ಸಭೆಗೆ ಬಂದವರ ಕಿವಿಗೆ ಬಿತ್ತು.
ಫಲಕ ಒಡೆದು ಹಾಕಿರುವ ಘಟನೆಯ ಹಿನ್ನೆಲೆಯಲ್ಲಿ ಕಾರ್ಯಕ್ರಮಕ್ಕೆ ಹಾಜರಾಗಬೇಕಾಗಿದ್ದ ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಪಿ.ಎನ್. ಶ್ರೀನಿವಾಸಾಚಾರಿ ಹಾಗೂ ಇತರೆ ಗಣ್ಯರು ಕಾರ್ಯಕ್ರಮಕ್ಕೆ ಹಾಜರಾಗಲು ಆಸಕ್ತಿ ತೋರಿಸಲಿಲ್ಲ. ಇದರ ಸುಳಿವು ಅರಿತ ಶಾಸಕ ಕೊತ್ತೂರು ಮಂಜುನಾಥ್ ಮಿನಿ ವಿಧಾನಸಭೆಯಲ್ಲಿ ಪುರಸಭೆ ಸದಸ್ಯರ ಮತ್ತು ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿದರು. ಶಿಷ್ಟಾಚಾರ ಉಲ್ಲಂಘನೆ ಕುರಿತು ಸಭೆಯಲ್ಲಿ ಚರ್ಚೆ ನಡೆದು, ಅದನ್ನು ಸರಿಪಡಿಸಲು ಕೋಲಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ಎಸ್. ವೆಂಕಟಾಚಲಪತಿ ಅವರಿಗೆ ಸೂಚಿಸಲಾಯಿತು.
ಅಭಿವೃದ್ಧಿ ಅಗತ್ಯ: ನಂತರ ಕಾರ್ಯಕ್ರಮ ಮುಂದುವರಿಸುವ ಅಥವಾ ಮುಂದೂಡುವ ಕುರಿತು ಸಭೆ ಚರ್ಚೆ ನಡೆಸಿ ಕಾರ್ಯಕ್ರಮಕ್ಕೆ ಎಲ್ಲಾ ಸಿದ್ಧತೆ ಇರುವ ಕಾರಣ ಭವನವನ್ನು ಪ್ರಾರಂಭಿಸಲು ಶಾಸಕ ಕೊತ್ತೂರು ಮಂಜುನಾಥ್ ಎಲ್ಲರ ಮನವೂಲಿಸಿದರು.
ನಂತರ ಸುಮಾರು 12.30ರ ವೇಳೆಗೆ ಕಾರ್ಯಕ್ರಮ ಪ್ರಾರಂಭವಾಗಿ ಶಾಸಕ ಕೊತ್ತೂರು ಮಂಜುನಾಥ್ ಸುಗ್ಗಿ ಹುಗ್ಗಿ, ಕನ್ನಡ ಭವನ ಮತ್ತು ಡಿವಿಜಿ ಭಾವಚಿತ್ರ ಅನಾವರಣಗೊಳಿಸದರು. ಗಡಿ ನಾಡಿನಲ್ಲಿ ಕನ್ನಡ ಅಭಿವೃದ್ಧಿಯಾಗಬೇಕಿದೆ. ಕನ್ನಡಿಗರು ತಮ್ಮ ದಿನನಿತ್ಯದಲ್ಲಿ ಕನ್ನಡ ಭಾಷೆಯನ್ನು ಮಾತನಾಡಿ ಭಾಷೆಯನ್ನು ಬೆಳೆಸಬೇಕು ಎಂದರು. ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷೆ ಷಾಹೀನತಾಜ್, ದಿವ್ಯಾ, ಸತೀಶ್, ಶ್ರೀನಿವಾಸ್, ಮೆಕಾನಿಕ್ ಶ್ರೀನಿವಾಸ್, ಎಂ.ವಿ. ಜನಾರ್ಧನ್, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಇ.ಶ್ರೀನಿವಾಸಗೌಡ, ಡಿವಿಜಿ ಪ್ರತಿಷ್ಠಾನದ ಸದಸ್ಯ ಕೆ.ಪ್ರಹ್ಲಾದರಾವ್, ಪುರಸಭೆ ಮುಖ್ಯಾಧಿಕಾರಿ ಅಶೋಕ್ ಕುಮಾರ್, ಜಮ್ಮನಹಳ್ಳಿ ಕೃಷ್ಣ ಮುಂತಾದವರು ಭಾಗವಹಿಸಿದ್ದರು.