ಅಧಿಕಾರಿಗಳಿಗೆ ತಾಕೀತು
ಕ.ಪ್ರ ವಾರ್ತೆ ್ಣ ಕೋಲಾರ ್ಣ ಜೂ.29
ಅಂಗನವಾಡಿ ಕೇಂದ್ರಗಳಿಗೆ ಅನಿರೀಕ್ಷಿತ ಭೇಟಿ ನೀಡುವ ಮೂಲಕ ಕೇಂದ್ರಗಳಿಗೆ ಸರಬರಾಜು ಆಗುತ್ತಿರುವ ಆಹಾರ ಪದಾರ್ಥಗಳ ಪರಿಶೀಲನೆ ಮಾಡಿ ಅಕ್ರಮಗಳು ಕಂಡು ಬಂದಲ್ಲಿ ಸಂಬಂಧಪಟ್ಟವರ ಮೇಲೆ ಶಿಸ್ತಿನ ಕ್ರಮ ಕೈಗೊಳ್ಳಿ ಎಂದು ಜಿಪಂ ಪ್ರಭಾರ ಅಧ್ಯಕ್ಷ ಹಾಗೂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಜಿ.ಕೆ. ನಾಗರಾಜ್ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಜಿಪಂ ಸಭಾಂಗಣದಲ್ಲಿ ಅವರು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ,ಆಹಾರ ಸಾಮಗ್ರಿಗಳನ್ನು ಅಂಗನವಾಡಿ ಕೇಂದ್ರಗಳಲ್ಲಿ ಇಳಿಸುವ ಸಂದರ್ಭದಲ್ಲಿ ಸಿಡಿಪಿಒಗಳು ಕನಿಷ್ಠ ಐದು ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕೆಂದು ತಿಳಿಸಿದರು.
ಕೆಲವು ಕಡೆ ಅಂಗನವಾಡಿಗಳಿಗೆ ಸರಬರಾಜು ಮಾಡಿದ ಆಹಾರ ಪದಾರ್ಥಗಳು ದುರ್ಬಕೆಯಾಗುತ್ತಿರುವ ಬಗ್ಗೆ ದೂರು ಕೇಳಿ ಬಂದಿದೆ. ಹಾಗಾಗಿ ಅಧಿಕಾರಿಗಳು ಕೇಂದ್ರಗಳಿಗೆ ಅನಿರೀಕ್ಷಿತ ಭೇಟಿ ನೀಡಿದಲ್ಲಿ ಅಕ್ರಮಗಳನ್ನು ತಡೆಯಬಹುದೆಂದರು.
ಇದಕ್ಕೆ ಪ್ರತಿಕ್ರಿಯಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಶಕುಂತಲಾ, ಅಂಗನವಾಡಿ ಕೇಂದ್ರಗಳಲ್ಲಿ ಗ್ರಾ.ಪಂ. ಸದಸ್ಯ, ಮುಖ್ಯ ಶಿಕ್ಷಕರು, ಹಿರಿಯ ನಾಗರಿಕರು, ಸ್ತ್ರೀಶಕ್ತಿ ಸಂಘಗಳ ಪ್ರತಿನಿಧಿಗಳನ್ನು ಒಳಗೊಂಡ ಬಾಲ ವಿಕಾಸ ಸಮಿತಿ ಇದೆ. ಆಹಾರ ಸಾಮಗ್ರಿಗಳು ಸರಬರಾಜು ಆಗುವಾಗ ಈ ಸಮಿತಿಯ ಸದಸ್ಯರು ಸ್ಥಳದಲ್ಲಿದ್ದು ಸ್ವೀಕರಿಸಬೇಕು. ಆದರೆ ಯಾರೊಬ್ಬರೂ ಆಹಾರ ಸರಬರಾಜು ಆಗುವಾಗ ಸ್ಥಳದಲ್ಲಿ ಇರುವುದಿಲ್ಲವೆಂದರು.
ಸರಬರಾಜು ಆಗುವ ಆಹಾರದ ಗುಣಮಟ್ಟ ಪರಿಶೀಲಿಸಲು ಪ್ರತಿ ತಿಂಗಳೂ ಸಂಗ್ರಹಿಸಿದ ಆಹಾರದ ಮಾದರಿಯನ್ನು ಬೆಂಗಳೂರಿನ ಶೇಷಾದ್ರಿಪುರದಲ್ಲಿ ಪ್ರಯೋಗಾಲಯಕ್ಕೆ ರಾಸಾಯನಿಕ ವಿಶ್ಲೇಷಣೆಗೆ ಕಳುಹಿಸಿಕೊಡಲಾಗುತ್ತದೆ. ಪ್ರಕರಣವೊಂದರಲ್ಲಿ ಆಹಾರ ಸರಬರಾಜು ಮಾಡಿದ ಸಂಸ್ಥೆಗೆ ನೋಟಿಸ್ ನೀಡಲಾಗಿದೆ ಎಂದು ಸಭೆಗೆ ತಿಳಿಸಿದರು. ಇನ್ನು ಮುಂದೆ ಪ್ರತಿ ತಿಂಗಳು ಕನಿಷ್ಠ 5 ಅಂಗನವಾಡಿ ಕೇಂದ್ರಗಳಿಗೆ ಸಿಡಿಪಿಒಗಳು ಭೇಟಿ ನೀಡಿ ಆಹಾರದ ಗುಣಮಟ್ಟ ಹಾಗೂ ಪ್ರಮಾಣ ಪರಿಶೀಲಿಸಿ ವರದಿ ನೀಡಬೇಕೆಂದು ಅಧ್ಯಕ್ಷ ನಾಗರಾಜ್ ತಿಳಿಸಿದರು.
ಸಮಾಜ ಕಲ್ಯಾಣ ಇಲಾಖೆಯಿಂದ ಮಂಜೂರಾಗಿರುವ ವಿದ್ಯಾರ್ಥಿ ವೇತನವನ್ನು ವಿಲೇವಾರಿ ಮಾಡಲಾಗುತ್ತಿದೆ. ಆನ್‌ಲೈನ್‌ನಲ್ಲಿ ಅಗತ್ಯ ಮಾಹಿತಿ ದಾಖಲಿಸಿ ವಿದ್ಯಾರ್ಥಿ ವೇತನ ಪಡೆಯಲು ಜು. 15ಕ್ಕೆ ಕಡೇ ದಿನ ನಿಗದಿಪಡಿಸಲಾಗಿದೆ ಎಂದು ಅಧಿಕಾರಿಗಳು ಸಭೆಗೆ ವಿವರಿಸಿದರು. ಜಿಪಂ ಉಪಾಧ್ಯಕ್ಷೆ ಅಲುವೇಲಮ್ಮ, ಸದಸ್ಯ ಶ್ರೀನಿವಾಸ್, ಉಪ ಕಾರ್ಯದರ್ಶಿ ಆರೋಕ್ಯಸ್ವಾಮಿ ಇದ್ದರು.