ಕೆ.ವಿ.ಅಯ್ಯರ್ ಜೀವನ ಚರಿತ್ರೆ ಪಠ್ಯಕ್ಕೆ ಸೇರಿಸಲು ಒತ್ತಾಯ
ಬಂಗಾರಪೇಟೆ: ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಕೆ.ವಿ. ಅಯ್ಯರ್ ಕೊಡುವೆ ಅನನ್ಯವಾಗಿದ್ದು ಅವರ ಚರಿತ್ರೆ ಬಗ್ಗೆ ಮುಂದಿನ ಪೀಳಿಗೆಗೆ ಪರಿಚಯಿಸುವ ಸಲುವಾಗಿ ಪಠ್ಯ ಪುಸ್ತಕಗಳಲ್ಲಿ ಅಳವಡಿಸಬೇಕೆಂದು ರಂಗ ಭೂಮಿ ಕಲಾವಿದ ಹಾಗೂ ಉಪನ್ಯಾಸಕ ವಿ.ರಂಗನಾಥ ರಾವ್ ಹೇಳಿದರು.
ಪಟ್ಟಣದ ಬಸವ ಭವನದಲ್ಲಿ ಸರ್ವೋದಯ ಮಿತ್ರ ಬಳಗ ದಿ.ಬಿ.ಜಿ.ನಂಜುಂಡಪ್ಪ ದತ್ತಿ ಕಾರ್ಯಕ್ರಮದಿಂದ ಸಾಹಿತ್ಯ ಸಂಭ್ರಮ-7 ಕೆ.ವಿ.ಅಯ್ಯರ್ ಬದುಕು ಬರಹ ಹಾಗೂ ಅಯ್ಯರ್ ಕಿರು ಹೊತ್ತಿಗೆ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಪ್ರೇರಣೆ: ಒಮ್ಮೆ ಟಿ.ಪಿ.ಕೈಲಾಸಂರವರು ಕೆ.ವಿಅಯ್ಯರ್ ಅವರನ್ನು, ನಿನ್ನ ಮೈಕೈ ಬಲುಗಟ್ಟಿ ಆದರೆ ತಲೆ ಮಾತ್ರ ಖಾಲಿ ಬುಟ್ಟಿ. ನೀನಾಗಿ ಓದದಿದ್ದರೆ ಹೋಟೆಲೇ ಗತಿ ಎಂದು ಬುದ್ದಿವಾದ ಹೇಳಿದ್ದರಿಂದ ಪ್ರೇರೇಪಿತರಾಗಿ ರೂಪದರ್ಶಿ ಮತ್ತು ಶಾಂತಲಾ ಎಂಬ ಕಾದಂಬರಿಗಳನ್ನು ಬರೆದು ಇಡೀ ಸಾಹಿತ್ಯ ಲೋಕವೆ ಮೆಚ್ಚುವಂತಾದರು.
ಸಾಹಿತ್ಯ ಕ್ಷೇತ್ರಕ್ಕೆ ಕೆ.ವಿ.ಅಯ್ಯರ್ ಕೊಡುಗೆಯನ್ನು ಮರೆಯುವಂತಿಲ್ಲ ಅವರ ಎರಡು ಕಾದಂಬರಿಗಳು, ನಾಟಕಗಳು, ಕಥಾ ಸಂಕಲನ, ಅನುವಾದಿತ ನಾಟಕಗಳು ಹಾಗೂ ಇಂಗ್ಲೀಷ್‌ನಲ್ಲಿ ವ್ಯಾಯಾಮ ಶಿಕ್ಷಣಕ್ಕೆಂದು ಬರೆದಿರುವ ಕೃತಿಗಳು ಇಂದಿಗೂ ಜನರ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಅವರ ಬದುಕು ಮತ್ತು ಬರಹ ಬಗ್ಗೆ ಶ್ಲಾಘಿಸಿದರು.
ವೈದ್ಯಕೀಯದಲ್ಲೂ ಪಂಡಿತ: ಸಂಶೋಧಕ ಸಾಹಿತಿ ಆಗುಂಬೆ ಎಸ್.ನಟರಾಜ್ ಮಾತನಾಡಿ ಅಡುಗೆ ಸಹಾಯಕನಾಗಿ ಬದುಕು ಆರಂಭಿಸಿದ ಅಯ್ಯರ್ ವೈದ್ಯಕೀಯ ಶಾಸ್ತ್ರದಲ್ಲಿ ಪಾಂಡಿತ್ಯ ಪಡೆದರಲ್ಲದೆ ಭವಿಷ್ಯ ನುಡಿಯುವುದರಲ್ಲಿಯೂ ಪರಿಣತರಾಗಿದ್ದರು. ತಮ್ಮ ಸಾವಿನ ದಿನಾಂಕವನ್ನು ಮುಂಚೆಯೇ ಊಹೆ ಮಾಡಿ ಅದರಂತೆ 1980ರಲ್ಲಿ ನಿಧನರಾದರು. ಸಾಹಿತ್ಯ ಕ್ಷೇತ್ರಕ್ಕೆ ಅಯ್ಯರ್ ನೀಡಿರುವ ಕೊಡುಗೆ ಮರೆಯಲಾಗದ ಕಾಣಕೆ ಎಂದರು.
ಪುರಸಭೆ ಅಧ್ಯಕ್ಷೆ ಗಂಗಮ್ಮ,ಸಾಹಿತಿ ಜ.ಮು.ಚಂದ್ರ, ದತ್ತಿ ದಾನಿಗಳಾದ ಗಂಗಾಬಿಕೆ ನಂಜುಂಡಪ್ಪ, ಸರ್ವೋದಯ ಮಿತ್ರ ಬಳಗದ ಅಧ್ಯಕ್ಷ ಕಾ.ಹು.ಜಾನ್ ಪಾಷ, ಶ್ಯಾಮಲ, ಮೈಸತೀಶ್ ಕುಮಾರ್, ವೆಂಕೋಬರಾವ್ ಪಡುತಾರೆ, ಮತ್ತಿತರರು ಇದ್ದರು.