2 ಗುಂಪುಗಳ ಘರ್ಷಣೆ: ಹಲವರು ಆಸ್ಪತ್ರೆಗೆ ದಾಖಲು
ಕೆಜಿಎಫ್: ಹಳೆ ದ್ವೇಷದ ಹಿನ್ನಲೆಯಲ್ಲಿ ಎರಡು ಗುಂಪುಗಳು ಪರಸ್ಪರ ಹೊಡೆದಾಡಿಕೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಮಾರಿಕುಪ್ಪಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಚಿನ್ನಾಗನಹಳ್ಳಿ ಗ್ರಾಮದ ನಿವಾಸಿ ಮಂಜುನಾಥ್ ಮತ್ತು ಅದೇ ಗ್ರಾಮದ ನಿವಾಸಿ ವಿರಾಜು ಎಂಬುವರ ಮಧ್ಯೆ ಈ ಹಿಂದೆ ಜಗಳವಾಗಿತ್ತು. ಇವರಿಬ್ಬರು ಮತ್ತು ಸಂಗಡಿಗರ ಮಧ್ಯೆ ಮೊದಲಿನಿಂದಲೂ ಅಸಮಾಧಾನವಿತ್ತು. ಕಳೆದ ಭಾನುವಾರ ಗ್ರಾಮದಲ್ಲಿ ಮಂಜುನಾಥ್ ಕುಟುಂಬದಲ್ಲಿ ಪುಣ್ಯ ತಿಥಿ ಕಾರ್ಯಕ್ರಮ ನಡೆಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿರಾಜು ಊಟ ಮಾಡಿದ ಎಂದು ಆರೋಪಿಸಿ, ಹಳೇ ದ್ವೇಷದ ಹಿನ್ನಲೆ ಮಂಜುನಾಥ್, ರಾಜೇಂದ್ರ ಮತ್ತಿತರರು ದೊಣ್ಣೆಯಿಂದ ವಿರಾಜುವಿನ ಮೇಲೆ ಹಲ್ಲೆ ನಡೆಸಿದ್ದರು. ಈ ವಿಷಯ ತಿಳಿದು ವಿರಾಜುನಿವ ಕಡೆಯವರು ದೊಣ್ಣೆ ಮತ್ತಿತರರ ಆಯುಧಗಳಿಂದ ಮಂಜುನಾಥ್, ರವಿ, ವನಜ, ಶಕುಂತಲಮ್ಮ ಮತ್ತು ವಿರಾಜು, ಹರೀಶ್, ಮುನಿರತ್ನಮ್, ಗುಂಡಪ್ಪ, ಮಂಜುನಾಥ್, ನಾಗೇಶ್, ಸಂದೀಪ್, ಮುನಿವೆಂಕಟೇಶ್ ಹಾಗೂ ಕೃಷ್ಣಪ್ಪ ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಇವರೆಲ್ಲರೂ ಗಾಯಗೊಂಡಿದ್ದು ಅವರನ್ನು ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಮಾರಿಕುಪ್ಪಂ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.