ಜನವಾದಿ ಸಂಘಟನೆ ಪ್ರತಿಭಟನೆ 24 ಬೇಡಿಕೆಗಳ ಈಡೇರಿಕೆಗೆ ಒತ್ತಾಯ
ಮುಳಬಾಗಲು: ಸಾಲದ ಬೆಲೆ ಏಕರೂಪದ ಶೇಕಡಾ 3ರ ಬಡ್ಡಿ ದರದಲ್ಲಿ ಎಲ್ಲಾ ಸ್ತ್ರೀ ಶಕ್ತಿ ಸಂಘಗಳಿಗೂ ಸಾಲವನ್ನು ನೀಡಬೇಕು ಹಾಗೂ ಆರ್‌ಬಿಐ ನಿರ್ದೇಶನದಂತೆ ಸಾಲ ನೀಡಬೇಕು ಎಂಬುದು ಸೇರಿದಂತೆ 14 ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಜನವಾದಿ ಮಹಿಳಾ ಸಂಘಟನೆ ಪಟ್ಟಣದಲ್ಲಿ ಸೋಮವಾರ ಪ್ರತಿಭಟನಾ ರ್ಯಾಲಿ ನಡೆಸಿತು.
ಎಲ್ಲಾ ಸ್ತ್ರೀ ಶಕ್ತಿ ಮತ್ತು ಸ್ವಸಹಾಯ ಸಂಘಗಳಿಗೆ ಸುತ್ತು ನಿಧಿಯನ್ನು ನೀಡಬೇಕು, ಸಾಲ ತೆಗೆದುಕೊಳ್ಳುವ ವೇಳೆ ಸ್ಟಾಂಪ್ ಡ್ಯೂಟಿ ತೆಗೆಯಬೇಕು, ದಲಿತ, ಅಲ್ಪಸಂಖ್ಯಾತ ಹಾಗೂ ಆದಿವಾಸಿ ಮಹಿಳೆಯರಿಗೆ ವಿಶೇಷ ಸಾಲ ಸೌಲಭ್ಯ ಯೋಜನೆ ರೂಪಿಸಬೇಕು, ಪ್ರತಿ ಗ್ರಾಮಕ್ಕೂ ಶುದ್ದ ಕುಡಿಯುವ ನೀರು ಒದಗಿಸಬೇಕು, ಶೌಚಾಲಯವಿಲ್ಲದ ಮನೆಗಳಿಗೆ ಶೌಚಾಲಯ ಸೌಲಭ್ಯ ಒದಗಿಸಬೇಕು ಎಂದು ಅದು ಒತ್ತಾಯಿಸಿದೆ.
ಪ್ರತಿಭಟನೆ ಬಳಿಕ ಸಂಘಟನೆಯ ಮುಖಂಡರು ತಾ.ಪಂ ಅಧಿಕಾರಿ ಅರುಣಕುಮಾರ್‌ಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಜನವಾದಿ ಮಹಿಳಾ ಸಂಘಟನೆಯ ಅಧ್ಯಕ್ಷೆ ವಿ.ಗೀತಾ, ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ವಾಸುದೇವ ರೆಡ್ಡಿ, ಸಿಪಿಐ ಮುಖಂಡ ಸಂಗಸಂದ್ರ ರಾಮಚಂದ್ರ, ಮುಖಂಡರಾದ ಸವಿತಮ್ಮ, ಮಣೆ, ಸುಕನ್ಯ, ವೀಣಾ, ಹರ್ಷಿತಾ, ಪ್ರಭಾ ಮುಂತಾದವರು ಭಾಗವಹಿಸಿದ್ದರು.