ಟವರ್ ಆಸೆ ತೋರಿಸಿ ಕೈಗೆ ಚೊಂಬು ಕೊಟ್ಟರು!
ಕೆಜಿಎಫ್: ಕೇಂದ್ರ ಸರ್ಕಾರದ ದೂರ ಸಂಪರ್ಕ ಮತ್ತು ತಂತ್ರಜ್ಞಾನ ಇಲಾಖೆಯ ಅಧಿಕಾರಿಗಳೆಂದು ನಂಬಿಸಿ, ಎಂಟಿಎಸ್ - 4ಜಿ ಮೊಬೈಲ್ ಟವರ್ನ್ನು ಪ್ರತಿಷ್ಠಾಪನೆ ಮಾಡುವ ವಿಚಾರದಲ್ಲಿ ಮಹಿಳೆಯೊಬ್ಬಳಿಗೆ ಲಕ್ಷಾಂತರ ರುಪಾಯಿ ಟೋಪಿ ಹಾಕಿರುವ ಘಟನೆ ಇದೀಗ ತಡವಾಗಿ ಬೆಳಕಿಗೆ ಬಂದಿದೆ.
ಈ ಬಗ್ಗೆ ರಾಬರ್ಟ್ಸನ್ಪೇಟೆ ಪೊಲೀಸ್ ಟಾಣೆಯಲ್ಲಿ ದೂರು ದಾಖಲಾಗಿದೆ. ನಗರದ ಬಾಲಕೃಷ್ಣ ಲೇಔಟ್ ಬಡಾವಣೆಯ ನಿವಾಸಿ ಮಗೇಶ್ವರಿ ಚಂದ್ರನ್ ಎಂಬುವವರೇ ಮೋಸಕ್ಕೊಳಗಾದ ಮಹಿಳೆ. ಇವರು 7,08,300 ಮೋಸ ಹೋಗಿದ್ದಾರೆ. ಅರವಿಂದ್ ರಾಣಾ ಹಾಗೂ ಇತರರು ಇವರಿಗೆ ಮೋಸ ಮಾಡಿದ್ದಾರೆ. ಈ ಬಗ್ಗೆ ಮಗೇಶ್ವರಿ ಅವರು ದೂರು ದಾಖಲಿಸಿದ್ದಾರೆ.
ಏನಾಗಿತ್ತು?: ಕಳೆದ ಜನವರಿ 29ರಂದು ಇಂಗ್ಲಿಷ್ ಪತ್ರಿಕೆಯಲ್ಲಿ ಜಾಹೀರಾತು ಪ್ರಕಟವಾಗಿತ್ತು. ಏರ್ ಇನ್ಫ್ರಾಸ್ಟ್ರಕ್ಚರ್ ಕಂಪನಿ ಮೊಬೈಲ್ ಟವರ್ ಎಂ.ಟಿ.ಎಸ್-4ಜಿ ಸ್ಥಾಪಿಸಲು ಉದ್ದೇಶಿಸಿದೆ. ಜಾಗ ಬೇಕಾಗಿದೆ ಎಂದು ಜಾಹೀರಾತಿನಲ್ಲಿ ತಿಳಿಸಲಾಗಿತ್ತು. ಮೊಬೈಲ್ ಟವರ್ ಸ್ಥಾಪಿಸುವ ಸಂಬಂಧ ಅರವಿಂದ್ ರಾಣಾ ಮತ್ತು ಇತರರು, ಮಗೇಶ್ವರಿ ಅವರಿಗೆ ಟವರ್ ಸ್ಥಾಪನೆಯಿಂದಾಗಿ ಲಾಭ ಹಾಗೂ ಮೊದಲಿಗೆ ನೀಡಬೇಕಾದ ಹಣದ ಬಗ್ಗೆ ತಿಳಿಸಿದ್ದಾರೆ. ಪ್ರತಿ ತಿಂಗಳು 70,000 ಸಾವಿರ ಬಾಡಿಗೆ ನೀಡುವ ಬಗ್ಗೆ ಹೇಳಿದ್ದಾರೆ. ಆದರೆ, ಅದಕ್ಕೂ ಮೊದಲು ಒಂದಿಷ್ಟು ದುಡ್ಡು ನೀಡಬೇಕಾಗುತ್ತದೆ ಎಂದು ತಿಳಿಸಿದ್ದಾರೆ. ಇದಲ್ಲದೆ, 25 ಲಕ್ಷ ಮೊತ್ತದ ಬ್ಲಾಂಕ್ ಚೆಕ್ ಕೂಡಾ ಮಗೇಶ್ವರಿಗೆ ನೀಡಿದ್ದಾರೆ.
ಇವರ ವ್ಯೂಹ ಅರಿಯದ ಮಗೇಶ್ವರಿ ಅವರು, ಆರೋಪಿಗಳು ಕೇಳಿದಂತೆ ಆಗಾಗ ಅಂದರೆ, ಫೆಬ್ರುವರಿ 12ರಿಂದ ಮಾರ್ಚ್ 28ರವರೆಗೂ ಬ್ಯಾಂಕ್ ಆಫ್ ಬರೋಡಾ, ವಿಜಯಾ ಬ್ಯಾಂಕ್ ಮತ್ತು ಓರಿಯಂಟಲ್ ಬ್ಯಾಂಕ್ ಶಾಖೆಗಳ ಮೂಲಕ ಆರೋಪಿ ಅರವಿಂದ್ ಬ್ಯಾಂಕ್ ಖಾತೆಗೆ ಒಟ್ಟು 7,08,300 ಲಕ್ಷ ಸಂದಾಯ ಮಾಡಿದ್ದಾರೆ. ಆದರೆ, ಆರೋಪಿ ಅರವಿಂದ್ ರಾಣಾ ನೀಡಿರುವ ಕರಾರು ಪ್ರಕಾರ ಟವರ್ ಸ್ಥಾಪಿಸುವ ಬಗ್ಗೆ ಯಾವುದೇ ಪ್ರಕ್ರಿಯೆ ಆರಂಭಿಸಿಲ್ಲ. ಇದರಿಂದ ಸಂಶಯಗೊಂಡ ಮಗೇಶ್ವರಿ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದ್ದಾರೆ. ಅಲ್ಲದೆ, ಅವರು ನೀಡಿದ್ದ ಚೆಕ್ ಅನ್ನು ಮಾರ್ಚ್ 7ರಂದು ಆ್ಯಕ್ಸೆಸ್ ಬ್ಯಾಂಕಿನಲ್ಲಿ ನಗದಿಕರಣಕ್ಕೆ ಹಾಕಿದ್ದಾರೆ. ಆದರೆ ಈ ಚೆಕ್ ಬೌನ್ಸ್ ಆದಾಗಲೇ ತಾವು ಮೋಸ ಹೋಗಿರುವುದು ಅವರಿಗೆ ಗೊತ್ತಾಗಿದೆ. ಇದಾದ ಬಳಿಕ ಅವರು, ಅರವಿಂದ್ ರಾಣಾ ಅವರನ್ನು ಭೇಟಿಯಾಗಲು ದೆಹಲಿಯ ವಿಳಾಸಕ್ಕೆ ಹೋಗಿ ಪ್ರಯತ್ನಿಸಿದ್ದಾರೆ. ಆದರೆ, ಸಾಧ್ಯವಾಗಿಲ್ಲ. ಅಂತಿಮವಾಗಿ ಠಾಣೆಗೆ ತೆರಳಿ ಈಗ ದೂರು ದಾಖಲಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.