ಬಾಗೇಪಲ್ಲಿಯಲ್ಲಿ ಬೀದಿಗಿಳಿದ ವಕೀಲರು
ಬಾಗೇಪಲ್ಲಿ: ಚಿಕ್ಕಬಳ್ಳಾಪುರದಲ್ಲಿ ವಕೀಲ ಶ್ರೀನಿವಾಸ್ ಮೇಲೆ ಹಲ್ಲೆ ನಡೆಸಿ ದೌರ್ಜನ್ಯ ಹಾಗೂ ಅಕ್ರಮವಾಗಿ ಠಾಣೆಯಲ್ಲಿ ಕೂಡಿಹಾಕಿ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿರುವ ಪೊಲೀಸರ ಕ್ರಮ ಖಂಡಿಸಿ ಬಾಗೇಪಲ್ಲಿ ವಕೀಲರು ನ್ಯಾಯಾಲಯದ ಕಲಾಪ ಬಹಿಷ್ಕರಿಸಿ ಪ್ರತಿಭಟಿಸಿದರು. ವಕೀಲರ ಸಂಘದಿಂದ ಬಾಗೇಪಲ್ಲಿ ಸಿವಿಲ್ ನ್ಯಾಯಾಲಯದ ಮುಂಭಾಗದಿಂದ ಮೆರವಣಿಗೆಯಲ್ಲಿ ಹೊರಟ ವಕೀಲರು ತಹಸೀಲ್ದಾರ್ ಕಚೇರಿಗೆ ಆಗಮಿಸಿದರು. ವಕೀಲ ಶ್ರೀನಿವಾಸ್‌ಗೆ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿರುವ ಚಿಕ್ಕಬಳ್ಳಾಪುರ ಪೊಲೀಸ್ ಠಾಣಾಧಿಕಾರಿ ಸೇರಿದಂತೆ ತಪ್ಪಿತಸ್ಥ ಪೇದೆಗಳ ವಿರುದ್ಧ ಕ್ರಮ ಜರುಗಿಸುವಂತೆ ಆಗ್ರಹಿಸಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ಎ.ನಂಜುಂಡ, ವಕೀಲರಾದ ಪಿ.ವಿ. ಅಪ್ಪಸ್ವಾಮಿ, ಜೆ.ಎನ್ .ನಂಜಪ್ಪ, ಅಲ್ಲಾ ಬಕಾಷ್, ಫಯಾಜ್, ಚಂದ್ರಶೇಖರ್, ವಿ. ನಾರಾಯಣ, ಪ್ರಸನ್ನ ಕುಮಾರ್, ಎನ್. ಮಂಜುಳ, ಅರುಣ, ಕರುಣಾಸಾಗರರೆಡ್ಡಿ, ವೆಂಕಟೇಶ್, ಗುರುನಾಥ್, ಮುಸ್ತಾಕ್ ಇದ್ದರು.