ಶಿಡ್ಲಘಟ್ಟ ಪಟ್ಟಣಕ್ಕೆ ಶುದ್ಧ ನೀರು ಪೂರೈಸುತ್ತೇವೆ: ರಾಮ್ ಪ್ರಕಾಶ್
ಶಿಡ್ಲಘಟ್ಟ: ಪುರಸಭೆ ಪೂರೈಸುವ ಕುಡಿಯುವ ನೀರನ್ನು ಕುಡಿಯಲು ಪಟ್ಟಣದ ಜನತೆ ಹಿಂಜರಿಯುವಂತಾಗಿದೆ ಎಂಬ ಸುದ್ದಿ ಸೋಮವಾರ 'ಕನ್ನಡಪ್ರಭ'ದಲ್ಲಿ ಪ್ರಕಟವಾಗಿದ್ದು, ಸುದ್ದಿ ನೋಡಿದ ಪುರಸಭೆ ಮುಖ್ಯಾಧಿಕಾರಿ ರಾಮ್ ಪ್ರಕಾಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು. ಕಾಮಾಟಿಗರ ಪೇಟೆಗೆ ಭೇಟಿ ನೀಡಿ ಪರಿಶಿಲಿಸಿದ ಪುರಸಭಾ ಮುಖ್ಯಾಧಿಕಾರಿ ಪಟ್ಟಣದ 8 ವಾರ್ಡ್ಗಳಿಗೆ ಸರಬರಾಜಾಗುತ್ತಿರುವ ಕುಡಿಯುವ ನೀರು ಕಳುಷಿತವಾಗಿಲ್ಲ, ಕಾಮಾಟಿಗರ ಪೇಟೆಯಲ್ಲಿ ದೊಡ್ಡ ಮೋರಿ ಹಾದು ಹೋಗಿದ್ದು ಮೋರಿ ಪಕ್ಕದಲ್ಲಿ ಕುಡಿಯುವ ನೀರಿನ ಪೈಪು ಅಳವಿಡಿಸಿದ್ದು, ಪೈಪು ಕೆಲವು ಕಡೆ ಕಿತ್ತು ಬಂದಿದ್ದು ಮೋರಿಯ ಕಳುಷಿತ ಕುಡಿಯುವ ನೀರಿನ ಪೈಪಿಗೆ ಸೇರಿ ನೀರಿನಲ್ಲಿ ಬರುತ್ತಿದೆ ಎಂದು ಹೇಳಿದರು. ಕುಡಿಯುವ ನೀರು ಬಿಡುವಾಗ ಪರಿಶೀಲನೆ ಮಾಡುವುದಾಗಿ, ಮತ್ತೆ ಕಳುಷಿತ ನೀರು ಬಂದಲ್ಲಿ ಟೆಂಡರ್ ಕರೆದು ಎಂಜಿನಿಯರ್ ಸಲಹೆಯಂತೆ ಕಾಂಕ್ರಿಟ್ ತೆಗೆದು ಕುಡಿಯುವ ನೀರಿನ ಪೈಪು ಬದಲಾಯಿಸುವುದಾಗಿ ತಿಳಿಸಿದರು. ಕಾಮಾಟಿಗರ ಪೇಟೆಯ ನಿವಾಸಿಗಳೊಂದಿಗೆ ಮಾತನಾಡಿದ ಅವರು, ಕುಡಿಯುವ ನೀರು ಬಂದಾಗ ಶೋಧಿಸಿ, ಕುದಿಸಿದ ನೀರು ಕುಡಿಯುವಂತೆ ವಿನಂತಿಸಿ, ಆದಷ್ಟು ಬೇಗ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದರು. ಕಾಮಾಟಿಗೆ ಪೇಟೆಯ ಪುರಸಭಾ ಸದಸ್ಯ ಲಕ್ಷೀನಾರಾಯಣ್ ಹಾಜರಿದ್ದು ವಾರ್ಡ್ ಸಮಸ್ಯೆಗಳನ್ನು ತಿಳಿಸಿದರು.