ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಸಂಸದರ ನಿಧಿ ಕಾಮಗಾರಿ ಅನುಷ್ಠಾನಕ್ಕೆ ಅಸಮಾಧಾನ

Mainashree
Updated On : 30 Jun 2014, 11:33 am

ಕೋಲಾರ: ಕೋಲಾರ ಮೀಸಲು ಲೋಕಸಭಾ ಕ್ಷೇತ್ರದ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳಲ್ಲಿ ಸಂಸದರ ನಿಧಿಯಿಂದ ನಡೆದಿರುವ ಕಾಮಗಾರಿಗಳು ತೃಪ್ತಿದಾಯಕವಾಗಿಲ್ಲವೆಂದು ಮಾಜಿ ಕೇಂದ್ರ ಸಚಿವ, ಹಾಲಿ ಸಂಸದ ಕೆ.ಎಚ್. ಮುನಿಯಪ್ಪ ಅಸಮಾಧಾನ ವ್ಯಕ್ತಪಡಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸೋಮವಾರ ಸಂಜೆ ಅವರು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸಂಸದರ ನಿಧಿ ಅಡಿಯಲ್ಲಿ ಆಗಿರುವ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲಿಸಿ, ಕಾಮಗಾರಿಗಳು ಸಮರ್ಪಕವಾಗಿ ನಡೆದಿಲ್ಲ. ಬೇಕಾಬಿಟ್ಟಿಯಾಗಿ ಕೆಲಸ ಮಾಡಿದರೆ ದೇಶದ ಹಣ ನಷ್ಟವಾಗುವುದಿಲ್ಲವೇ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.  
2009ರಿಂದ 10ನೇ ಸಾಲಿನಲ್ಲಿ ರು. 29.72 ಲಕ್ಷ, 2010-11ರಲ್ಲಿ ರು. 23.75ಲಕ್ಷ, 2011-12ರಲ್ಲಿ 49.79 ಲಕ್ಷ ಹಾಗೂ 2013-14ನೇ ಸಾಲಿನಲ್ಲಿ 139.14 ಲಕ್ಷ ಬಿಡುಗಡೆಯಾಗಿದೆ. ಆದರೆ ಕಾಮಗಾರಿಗಳ ಗುಣಮಟ್ಟ ಹಾಗೂ ನಿರ್ವಹಣೆ ಬಗ್ಗೆ ಅಧಿಕಾರಿಗಳು ಸರಿಯಾಗಿ ಮಾಹಿತಿ ನೀಡುತ್ತಿಲ್ಲವೆಂದು ನುಡಿದರು. ಬಂಗಾರಪೇಟೆ ಪುರಸಭೆ ಮಾಜಿ ಅಧ್ಯಕ್ಷ ಚಂದ್ರರೆಡ್ಡಿ ಮಾತನಾಡಿ, ಹಣ ಬಿಡುಗಡೆ ಮಾಡುವಲ್ಲಿ ಅಧಿಕಾರಿಗಳು ವಿಳಂಬ ನೀತಿ ಅನುಸರಿಸುತ್ತಿರುವುದರಿಂದ ಸಂಸದರ ನಿಧಿಯಡಿ ಕಾಮಗಾರಿ ನಡೆಸಲು ಯಾರೂ ಮುಂದೆ ಬರುತ್ತಿಲ್ಲ. ಕಾಮಗಾರಿಗೆ ಕ್ರಿಯಾಯೋಜನೆ ಸಿದ್ಧಪಡಿಸಿ ನೀಡಿದ ಮೇಲೆ ಶೇ. 50ರಷ್ಟು ಹಣ ಬಿಡುಗಡೆಯಾಗುತ್ತದೆ. ನಂತರ ಶೇ. 50ರಷ್ಟು ಕಾಮಗಾರಿ ಮುಗಿದ ಮೇಲೆ ನೀಡಲಾಗುತ್ತಿದೆ. ಈ ರೀತಿ ಆದರೆ ಕೆಲಸ ಮಾಡಿದವರ ಪಾಡೇನು ಎಂದು ಪ್ರಶ್ನಿಸಿದರು.
ಸಂಸದ ಕೆ.ಎಚ್.ಮುನಿಯಪ್ಪ ಮಧ್ಯಪ್ರವೇಶಿಸಿ ಮಾತನಾಡಿ, ಕಾಮಗಾರಿಯ ಕ್ರಿಯಾಯೋಜನೆ ಸಿದ್ಧಪಡಿಸಿ ನೀಡಿದ ಮೇಲೆ ಶೇ. 75ರಷ್ಟು ಹಣವನ್ನು ನೀಡಿ ನಂತರ ಶೇ. 25ರಷ್ಟು ಹಣವನ್ನು ಕಾಮಗಾರಿ ಮುಗಿದ ಮೇಲೆ ನೀಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು. ಕಾಮಗಾರಿ ಮುಗಿದ 2 ತಿಂಗಳ ಒಳಗೆ ಬಾಕಿಯಿರುವ ಶೇ. 25ರಷ್ಟು ಹಣವನ್ನು ಬಿಡುಗಡೆ ಮಾಡಬೇಕು. ಕಾಮಗಾರಿಯ  ಗುಣಮಟ್ಟ ಚೆನ್ನಾಗಿರಬೇಕು. ಒಂದು ವೇಳೆ ಗುಣಮಟ್ಟ ಇಲ್ಲದಿದ್ದರೆ ಹಣ ಬಿಡುಗಡೆ ಮಾಡಬೇಡಿ ಎಂದು ಸೂಚಿಸಿದರು.
ಪ್ಲೋರೈಡ್ ಅಂಶ: ಡಿಸಿಸಿ ಅಧ್ಯಕ್ಷ ಎಂ.ಎಲ್. ಅನಿಲ್ ಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದೆ. ನೀರಿನಲ್ಲಿ ಪ್ಲೋರೈಡ್ ಅಂಶ ಹೆಚ್ಚಿದೆ. ಇನ್ನು ಮುಂದೆ ಬರುವ ಅನುದಾನದಲ್ಲಿ ಶುದ್ಧೀಕರಣ ಘಟಕಗಳಿಗೆ ಹಣ ವಿನಿಯೋಗಿಸಿದರೆ ಒಳ್ಳೆಯದೆಂದರು. ಇದಕ್ಕೆ ಸಹಮತ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ ಡಿ.ಕೆ. ರವಿ, ಬರುವ ಅನುದಾನದಲ್ಲಿ ತಾಲೂಕುವಾರು ವಿಂಗಡಣೆ ಮಾಡಿ, ಕೊಳವೆ ಬಾವಿ ಮತ್ತು ಶುದ್ಧೀಕರಣ ಘಟಕ ಮಾಡಿದರೆ ಜನರಿಗೆ ತುಂಬಾ ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಸಂಸದ ಕೆ.ಎಚ್. ಮುನಿಯಪ್ಪ ಸಹ ಇದಕ್ಕೆ ದನಿಗೂಡಿಸಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ನವೀನ್ ಕುಮಾರ್ ರಾಜು, ಜಿಲ್ಲಾ ರಕ್ಷಣಾಧಿಕಾರಿ ಅಜಯ್ ಹೊಲೋರಿ, ಕೆಪಿಸಿಸಿ ಸದಸ್ಯ ಜನ್ನಘಟ್ಟ ವೆಂಕಟಮುನಿಯಪ್ಪ, ಬೆಳಗಾನಹಳ್ಳಿ ಮುನಿವೆಂಕಟಪ್ಪ, ಪ್ರಸಾದ್ ಬಾಬು, ಚನ್ನರಾಯಪ್ಪ, ರಾಜಣ್ಣ, ಪ್ರತಾಪ್, ರೂಪ ಶ್ರೀಧರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement