ಉತ್ತಮ ವಿರೋಧ ಪಕ್ಷವಾಗಿ ರೈತ ಸಂಘ ಯಶಸ್ವಿ
ಮಾಲೂರು: ರಾಜ್ಯದಲ್ಲಿ 80 ರ ದಶಕದಲ್ಲಿ ಪ್ರಾರಂಭವಾದ ದಲಿತ, ಭಾಷಾ ಹಾಗೂ ರೈತ ಚಳುವಳಿಯಲ್ಲಿ ರಾಜ್ಯ ಆಡಳಿತಕ್ಕೆ ಪರ್ಯಾಯ ಚಿಂತನೆ ನೀಡಲು ಸಾಧ್ಯವಾಗಿದ್ದು ರೈತ ಚಳುವಳಿಗೆ ಮಾತ್ರ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲೂಕು ಘಟಕ ಇಲ್ಲಿನ ಬಾಪೂಜಿ ಬಿಇಡಿ ಕಾಲೇಜು ಅವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಒಂದು ದಿನದ ಕಾರ್ಯಗಾರದಲ್ಲಿ ಮಾತನಾಡಿ, ಡಾ. ರಾಜ್ ನೇತೃತ್ವದ ಭಾಷಾ ಚಳುವಳಿ, ಶೋಷಿತ ವರ್ಗಗಳ ದಲಿತ ಚಳುವಳಿಗಳು ರಾಜ್ಯ ಸರ್ಕಾರದ ವಿರುದ್ಧ ಹೋರಾಟ ನಡೆಸಿದವೆ ಆದರೂ ಪರ್ಯಾಯ ಶಕ್ತಿಯನ್ನು ನೀಡಲು ವಿಫಲವಾಗಿದ್ದವು. ಆದರೆ ರೈತ ಹೋರಾಟ ಮಾತ್ರ ಯಶಸ್ವಿಯಾಗಿ ಅಂದಿನ ಕಾಂಗ್ರೆಸ್ ಆಡಳಿತದಲ್ಲಿ ವಿರೋಧ ಪಕ್ಷ ನಾಯಕರಾಗಿದ್ದ ದೇವೇಗೌಡರಿಗಿಂತ ವಿರೋಧ ಪಕ್ಷವಾಗಿ ಪ್ರೊ. ನಂಜುಂಡಸ್ವಾಮಿ ನೇತೃತ್ವದ ರೈತ ಸಂಘ ಕಾರ್ಯ ನಿರ್ವಹಿಸಿ ಜನರಿಗೆ ರಾಜಕೀಯ ಪಕ್ಷಗಳಿಗೆ ಪರ್ಯಾಯ ಶಕ್ತಿ ತೋರಿಸಿಕೊಟ್ಟಿತ್ತು ಎಂದರು.
ಈಗ ರಾಜಕೀಯ ನೆರಳಿನಲ್ಲಿ ರೈತ ಸಂಘಟನೆ ಬಲಹೀನವಾಗುತ್ತಿದೆ. ಪ್ರತಿ ಗ್ರಾಮದಲ್ಲಿ ಸಂಘಟನೆ ಬಲಪಡಿಸುವ ಅವಶ್ಯಕತೆ ಇದೆ. ರೈತ ಚಳುವಳಿ ಸಾಮಾಜಿಕ ಚಳುವಳಿಯಾಗಿ ಮಾರ್ಪಾಡಿಸಬೇಕಾಗಿದೆ ಎಂದರು. ರೈತರನ್ನು ರಾಜ್ಯದಲ್ಲಿ ಸರ್ಕಾರ ಬೆಂಬಲ ಬೆಲೆ ನೀಡುವಲ್ಲಿ ಶೋಷಣೆಗೆ ಒಳಪಡಿಸಲಾಗುತ್ತಿರುವುದು ದುರಾದೃಷ್ಟಕರ. ಕಾರ್ಖಾನೆ ಮಾಲೀಕರ ಬೆಂಬಲಿಕ್ಕೆ ನಿಲ್ಲುವ ರಾಜ್ಯ ಸರ್ಕಾರ ರೈತರಿಗೆ ನ್ಯಾಯ ಒದಗಿಸುವಲ್ಲಿ ಪ್ರಾಮಾಣೀಕ ಪ್ರಯತ್ನವೇ ನಡೆಸುತ್ತಿಲ್ಲ ಎಂದು ಅಪಾದಿಸಿದರು. ಕಬ್ಬಿಗೆ ಗುಜರಾತ್ ಸರ್ಕಾರ ಟನ್ ಒಂದಕ್ಕೆ 3,700 ರು. ಬೆಂಬಲ ಬೆಲೆಯಾಗಿ ನೀಡುತ್ತಿರುವಾಗ ರಾಜ್ಯ ಸರ್ಕಾರ ಘೋಷಿಸಿರುವ ಕೇವಲ 2,500 ರು. ನೀಡಲು ಸಾಧ್ಯವಿಲ್ಲ ಎಂದು ಕೋರ್ಟ್ ಮೆಟ್ಟಿಲು ಹತ್ತಿರುವ ಕಾರ್ಖಾನೆಗಳ ವಿರುದ್ಧ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರಕ್ಕೆ ಎಕೆ ಸಾಧ್ಯವಿಲ್ಲ ಎಂದು ಪ್ರಶ್ನಿಸಿದರು.
ಬಾಪೂಜಿ ವಿದ್ಯಾ ಸಂಸ್ಥೆಯ ಅಧ್ಯಕ್ಷ ಎಂ.ವಿ. ಹನುಮಂತಯ್ಯ ಮಾತನಾಡಿ, ಒಂದು ಅಂಕಿಅಂಶಗಳ ಪ್ರಕಾರ ರಾಜ್ಯದಲ್ಲಿರುವ 85 ಲಕ್ಷ ಕೃಷಿ ಕುಟುಂಬಗಳಲ್ಲಿ ಕೋಲಾರ-ಚಿಕ್ಕಬಳ್ಳಾಪುರ-ತುಮಕೂರು ಜಿಲ್ಲೆಯ ರೈತರು ಅತಿ ಹೆಚ್ಚು ಕಷ್ಟ ಪಡುತ್ತಿದ್ದಾರೆ. ನದಿ-ಜಲಾಶಯಗಳ ಮೂಲವಿಲ್ಲದ ಈ ಜಿಲ್ಲೆಯ ರೈತರು ನೀರನ್ನು ಮೇಲೇತ್ತೆಲು ಹೆಚ್ಚು ಹಣ ವ್ಯಯಮಾಡಲಾಗುತ್ತಿದೆ.
ಈ ನಿಟ್ಟಿನಲ್ಲಿ ಈ ಬಯಲು ಸೀಮೆ ಪ್ರದೇಶಕ್ಕೆ ಶಾಶ್ವತ ನೀರು ತರಲು ರೈತ ಸಂಘ ಪ್ರಾಮಾಣಿಕವಾಗಿ ಹೋರಾಟ ಮಾಡಬೇಕಾಗಿದೆ ಎಂದರು. ಜಿಲ್ಲೆಗೆ ಹಲವು ನೀರಿನ ಯೋಜನೆಗಳನ್ನು ರಾಜಕೀಯದ ಉದ್ದೇಶಕ್ಕಾಗಿ ತೆಲಿ ಬಿಡಲಾಗುತ್ತಿದೆ. ಕೃಷ್ಣ ನದಿಯಿಂದ 5 ಟಿಎಂಸಿ ನೀರನ್ನು ಆಂದ್ರಕ್ಕೆ ಹರಿಸಿ ಆಂಧ್ರದ ಮದನಪಲ್ಲಿ ವರೆಗೂ ಈಗಾಗಲೇ ಬಂದಿರುವ ಕೃಷ್ಣ ನದಿ ಕಾಲುವೆಯಿಂದ ನಮ್ಮ ಬಯಲು ಸೀಮೆಗೆ ನೀರು ಹರಿಸುವ ಯೋಜನೆ ಉತ್ತಮವಾಗಿದೆ ಎಂದರು. ಹೊಸಕೋಟೆಯ ರೈತ ಸಂಘದ ಕೆಂಚೇಗೌಡ, ಶಿಡ್ಲಘಟ್ಟ ತಾಲೂಕಿನ ರೈತ ಸಂಘದ ಅಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ಮಾತನಾಡಿದರು. ಜಿಲ್ಲಾಧ್ಯಕ್ಷ ಕೂತ್ತಮೀರಿ ಮಂಜುನಾಥ್, ಕಾರ್ಯಧ್ಯಕ್ಷ ಬೈಚೇಗೌಡ, ಜಿಲ್ಲಾ ಕಾರ್ಯದರ್ಶಿ ಅಶ್ವಥ್ ರೆಡ್ಡಿ, ತಾಲೂಕು ಅಧ್ಯಕ್ಷ ಬೆ. ರಮೇಶ್, ರಾಜ್ಯ ಕಾರ್ಯದರ್ಶಿ ಅಬ್ಬಣಿ ಶಿವಣ್ಣ, ಪ್ರಕಾಶ್ಸ್ವಾಮಿ, ತೂರ್ನಹಳ್ಳಿ ವೆಂಕಟೇಶ್ಗೌಡ, ಮಾಗುಂದಿ ಚಂದ್ರಶೇಖರ್ ಇದ್ದರು.
ನಂತರ ನಡೆದ ಕಾರ್ಯಗಾರದಲ್ಲಿ ಪಾರಂಪರಿಕ ಕೃಷಿಯ ನವೀಕರಣ ವಿಷಯವಾಗಿ ಡಾ. ಚಂದ್ರಶೇಖರ್ ನಂಗಲಿ, ನೆಲ ದೇವತೆಗಳ ಹೆಜ್ಜೆಗಳಲ್ಲಿ ವಿಷಯವಾಗಿ ಕೋಟಗಾನಹಳ್ಳಿ ರಾಮಯ್ಯ ಭಾಗವಹಿಸಿದ್ದರು. ಹಸಿರು ಸೇನೆಯ ಜಿಲ್ಲಾಧ್ಯಕ್ಷ ತಿರುಮಲ ಹಟ್ಟಿ ದೇವರಾಜ್ ಕಾರ್ಯಕ್ರಮ ನಿರೂಪಿಸಿದರು.