ನೀತಿ ಸಂಹಿತೆ ಮೊದಲೇ ಕೆಲಸ ಪೂರ್ಣಗೊಳಿಸಿ'
ಶಿಡ್ಲಘಟ್ಟ: ಚುನಾವಣೆ ನೀತಿ ಸಂಹಿತೆ ಪ್ರಾರಂಭವಾಗುವ ಮೊದಲೇ ಬಾಕಿ ಉಳಿದಿರುವ ಸಾರ್ವಜನಿಕರ ಕೆಲಸಗಳನ್ನು ಪೂರ್ಣಗೊಳಿಸುವಂತೆ ಲೋಕಾಯುಕ್ತ ಎಸ್.ಪಿ. ಚಂದ್ರಶೇಖರ್ ಅಧಿಕಾರಿಗಳಿಗೆ ತಿಳಿಸಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಾರ್ವಜನಿಕ ಕುಂದುಕೊರತೆಗಳ ಸಭೆಯಲ್ಲಿ ಮಾತನಾಡಿದ ಅವರು, ಅನೇಕ ತಿಂಗಳುಗಳ ಹಿಂದೆ ನಾಗರಿಕರು ನೀಡಿರುವ ಕೆಲವು ಅರ್ಜಿಗಳು ವಿಲೆವಾರಿಯಾಗದೆ ಬಾಕಿ ಉಳಿದಿದ್ದು, ಚುನಾವಣಾ ನೀತಿ ಸಂಹಿತೆ ಬರುವ ಮುಂಚೆ ಎಲ್ಲಾ ಅರ್ಜಿಗಳನ್ನು ಇತ್ಯರ್ಥಗೊಳಿಸಿ ಎಂದರು.
ಹಂಡಿಗನಾಳ ಗ್ರಾಪಂ ವ್ಯಾಪ್ತಿಯಲ್ಲಿ ಮಗುವೊಂದು ಪಂಚಾಯ್ತಿ ಆವರಣದಲ್ಲಿದ್ದ ಹೊಂಡದಲ್ಲಿ ಬಿದ್ದು ಸಾವನ್ನಪ್ಪಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಗುವಿನ ಪೋಷಕರೊಂದಿಗೆ ಚರ್ಚೆ ನಡೆಸಲಾಗಿದ್ದು, ನಿವೇಶನಕ್ಕೆ ಬದಲಾಗಿ ಪೋಷಕರಿಗೆ 1.20 ಲಕ್ಷ ರುಪಾಯಿಗಳನ್ನು ಕೊಡಲು ತೀರ್ಮಾನಿಸಲಾಗಿದೆ, ಕಾರ್ಯದರ್ಶಿಗಳು ಮಾಡಿದ ಅನಾಹುತಕ್ಕೆ 50 ಸಾವಿರ ರುಪಾಯಿಗಳು, ಇನ್ನುಳಿದ ಅನುದಾನ ಇಲಾಖೆಯಿಂದ ನೀಡಲು ತೀರ್ಮಾನಿಸಿದ್ದು, ಒಂದೆರೆಡು ದಿನದಲ್ಲಿ ಪೋಷಕರಿಗೆ ತಲುಪಿಸಲಾಗುತ್ತದೆ ಎಂದರು.
ಅನಿತಾ ಸ್ಪರ್ಧೆ ಇಲ್ಲ: ಕುಮಾರಸ್ವಾಮಿ
ರಾಮನಗರ: ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಸಹಿತ ಯಾವುದೇ ಕ್ಷೇತ್ರದಿಂದಲೂ ಕಣಕ್ಕೆ ಇಳಿಯುವುದಿಲ್ಲ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಪ್ರಭಾಕರರೆಡ್ಡಿ ಸ್ಪರ್ಧೆ ಬಹುತೇಕ ಅಂತಿಮ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಬಹಿರಂಗಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ಮತ್ತು ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಅನಿತಾ ಕುಮಾರಸ್ವಾಮಿ ಅವರಿಗೆ ಇಷ್ಟವಿರಲಿಲ್ಲ. ಪಕ್ಷದ ಒತ್ತಡಕ್ಕೆ ಮಣಿದು ಸ್ಪರ್ಧಿಸಿದ್ದರು. ಸತತ ಎರಡು ಸೋಲು ಅನುಭವಿಸಿರುವ ಅವರಿಗೆ ಈ ಬಾರಿ ಮತ್ತೆ ಸ್ಪರ್ಧಿಸಲು ಆಸಕ್ತಿ ಇಲ್ಲ ಎಂದರು. ಗಣಿ ಲೂಟಿ ಮತ್ತು ರಫ್ತು, ಗಣಿಗಾರಿಕೆಗೆ ಅರಣ್ಯ ಪ್ರದೇಶ ಅತಿಕ್ರಮಣ, ಬೆಂಗಳೂರಿನಲ್ಲಿ ಭಾರಿ ಬೆಲೆ ಬಾಳುವ ಭೂ ಕಬಳಿಕೆಯಂಥ ಕೆಲಸವನ್ನು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಸದ್ದಿಲ್ಲದೆ ಮಾಡುತ್ತಿದ್ದಾರೆ. ಅವರಿಂದ ಯಾವುದೇ ಅಭಿವೃದ್ಧಿ ಕೆಲಸಗಳಾಗುತ್ತಿಲ್ಲ ಎಂದು ಇದೇ ಸಂದರ್ಭದಲ್ಲಿ ಆರೋಪಿಸಿದರು.