ಬಾಲಕರ ಕಾಲೇಜಿನಿಂದ ಎನ್‌ಎಸ್‌ಎಸ್ ಶಿಬಿರ
ಕೋಲಾರ: ರಾಷ್ಟ್ರೀಯ ಸೇವಾ ಯೋಜನೆ, ಕೋಲಾರ ಸರ್ಕಾರಿ ಬಾಲಕರ ಕಾಲೇಜು ಇವರ ಸಂಯುಕ್ತಾಶ್ರಯದಲ್ಲಿ ಆರೋಗ್ಯವಂತ ಭಾರತಕ್ಕಾಗಿ ಯುವಜನತೆ ಘೋಷಣೆಯಡಿ ವಿಶೇಷ ಶಿಬಿರವನ್ನು ಮಾ.3 ರಿಂದ 9 ರವರೆಗೆ ತಾಲೂಕಿನ ಕೆಂಬೋಡಿ ಗ್ರಾಮದ ಜನತಾ ಪ್ರೌಢಶಾಲೆ, ಎಸ್.ಸಿ.ಎಸ್.ಟಿ. ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಶಿಬಿರಾಧಿಕಾರಿ ರಾಮಕೃಷ್ಣಯ್ಯ ತಿಳಿಸಿದ್ದಾರೆ.
ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಶಿಬಿರದ ಉದ್ಘಾಟನೆಯನ್ನು ನೆರವೇರಿಸುವರು. ಸರ್ಕಾರಿ ಬಾಲಕರ ಕಾಲೇಜಿನ ಪ್ರಾಂಶುಪಾಲೆ ಮಧುಲತಾ ಮೊಸೆಸ್ ಅಧ್ಯಕ್ಷತೆ ವಹಿಸುವರು.
ಶಿಕ್ಷಣದ ಬಗ್ಗೆ ಇಚ್ಚಾಶಕ್ತಿ ಕೊರತೆ; ಶಾಸಕರ ಆರೋಪ
ಮಾಲೂರು: ಗ್ರಾಮೀಣ ಭಾಗದಲ್ಲಿ ಶಿಕ್ಷಣ ಕ್ಷೇತ್ರ ಅಭಿವೃದ್ಧಿಯಾಗದಿರವುದಕ್ಕೆ ರಾಜ್ಯ ಸರ್ಕಾರ ಶಿಕ್ಷಣ ಬಗ್ಗೆ ತೋರುತ್ತಿರುವ ಇಚ್ಚಾಶಕ್ತಿ ಕೊರತೆಯೇ ಕಾರಣ ಎಂದು ಶಾಸಕ ಕೆ.ಎಸ್. ಮಂಜುನಾಥ್‌ಗೌಡ ಹೇಳಿದರು.
ತಾಲೂಕಿನ ಮಿಂಡಹಳ್ಳಿ ಗ್ರಾಮದಲ್ಲಿ ರೋಡ್ ಸೈನ್ ಸಂಸ್ಥೆ 30 ಲಕ್ಷ ರು.ಗಳ ವೆಚ್ಚದಲ್ಲಿ ಇಲ್ಲಿನ ಸರ್ಕಾರಿ ಪ್ರೌಡಶಾಲೆಯಲ್ಲಿ 5 ಕೊಠಡಿಗಳನ್ನು ಶನಿವಾರ ಉದ್ಘಾಟಿಸಿ ಮಾತನಾಡಿ, ಹೊರದೇಶದ ಖಾಸಗಿ ಸಂಸ್ಥೆಗಳು ನಮ್ಮ ದೇಶದ ಶಿಕ್ಷಣದ ಅಭಿವೃದ್ಧಿಗೆ ತೋರುತ್ತಿರುವ ಕಾಳಜಿ ನಮ್ಮ ಆಡಳಿತಗಾರರಿಗೆ ಇಲ್ಲದಿರುವುದು ಖಂಡನೀಯ ಎಂದರು. ರೋಡ್ ಸೈನ್ ಸಂಸ್ಥೆಯ ಮುಖ್ಯಸ್ಥ ಉಲ್ಫ ಕಾಲ್‌ಪಾಲ್ ಮಾತನಾಡಿ, ತಾಲೂಕು ಆಡಳಿತ ಹಾಗೂ ಗ್ರಾಮಸ್ಥರು ಸಹಕಾರ ನೀಡಿದರೆ ತಾಲೂಕಿನ ಹಲವು ಗ್ರಾಮಗಳಲ್ಲಿ ವೃತ್ತಿಪರ ಕೌಶಲ್ಯ ತರಬೇತಿ ಶಾಲೆಗಳನ್ನು ಪ್ರಾರಂಭಿಸಲಾಗುವುದು ಎಂದರು.