ಸಚಿವರ ಕೆ.ಡಿ.ಪಿ ಸಭೆ ರದ್ದು
ಕೋಲಾರ: ಮಾರ್ಚ್ 3 ರಂದು ಸೋಮವಾರ ನಿಗದಿಪಡಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವರ ಕೆ.ಡಿ.ಪಿ ಸಭೆಯನ್ನು ಅನಿವಾರ್ಯ ಕಾರಣಗಳಿಂದ ರದ್ದುಪಡಿಸಲಾಗಿದೆ ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ತಿಳಿಸಿದ್ದಾರೆ.
ಕುಡಿದ ಮತ್ತಿನಲ್ಲಿ ಬಾವಿಗೆ ಬಿದ್ದು ಸಾವು
ಶ್ರೀನಿವಾಸಪುರ: ಅರಣ್ಯ ಇಲಾಖೆ ಕಾವಲುಗಾರನೊಬ್ಬ ಕುಡಿದ ಮತ್ತಿನಲ್ಲಿ ಹಾಳು ಬಾವಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ. ಶಿಡ್ಲಘಟ್ಟ ತಾಲೂಕಿನ ಜಂಗಮಕೋಟೆ ಹೋಬಳಿಯ ಗಂಭೀರಹಳ್ಳಿ ಗ್ರಾಮದ ಚೆನ್ನಾರೆಡ್ಡಿ ಎಂಬಾತ ರಾಜ್ಯ ಅರಣ್ಯ ಪ್ರದೇಶ ರಾಯಲ್ಪಾಡು ಬೀಟ್‌ನಲ್ಲಿ ಅರಣ್ಯ ಕಾವಲುಗಾರನಾಗಿ ಕೆಲಸ ನಿರ್ವಹಿಸುತ್ತಿದ್ದು ಈತ ಕರ್ತವ್ಯದಲ್ಲಿ ನಿರ್ಲಕ್ಷ್ಯತೆ ತೋರಿದ ಕಾರಣ ಮೇಲಾಧಿಕಾರಿಗಳು ಅರಣ್ಯ ಕೆಲಸ ಬಿಡಿಸಿ ಕಚೇರಿಯಲ್ಲಿ ಕೆಲಸ ನಿರ್ವಹಿಸುವಂತೆ ಸೂಚಿಸಿದ್ದರು ಎನ್ನಲಾಗಿದೆ. ಫೆ.14 ರಂದು ಕಚೇರಿಯಲ್ಲಿ ಕೆಲಸ ನಿರ್ವಹಿಸಿಕೊಂಡು ರಾತ್ರಿ ವೇಳೆ ಪಾನಮತ್ತನಾಗಿ ಕಚೇರಿ ಕಾಂಪೌಂಡಿನಲ್ಲಿದ್ದ ಹಾಳು ಬಾವಿಯ ಕಲ್ಲು ಬಂಡೆಯ ಮೇಲೆ ಮಲಗಿದ್ದು, ಆಯಾ ತಪ್ಪಿ ಬಾವಿಯೊಳಕ್ಕೆ ಬಿದ್ದು ಮೃತಪಟ್ಟಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಈತನ ಶವ ಬಾವಿಯಲ್ಲಿ ಕೊಳೆತು ನಾರುತ್ತಿದ್ದಾಗ ಕಚೇರಿಯವರು ಪತ್ತೆ ಹಚ್ಚಿದ್ದಾರೆ.
ರು. 10 ಲಕ್ಷ ಮೌಲ್ಯದ ರಕ್ತಚಂದನ ವಶ
ಚಿಕ್ಕಬಳ್ಳಾಪುರ: ಸುಮಾರು 10 ಲಕ್ಷ ರು. ಮೌಲ್ಯದ ರಕ್ತಚಂದನವನ್ನು ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿರುವುದನ್ನು ಪತ್ತೆ ಹಚ್ಚಿರುವ ಇಲ್ಲಿನ ಪೊಲೀಸರು ಮಾಲು ಸಮೇತ ಮೂವರನ್ನು ಬಂಧಿಸಿದ್ದಾರೆ. ಬಂಧಿತರನ್ನು ಚಾಲಕ ಸೈಯದ್ ಆಫೀಜುಲ್ಲಾ ಹುಸೇನ್ (33), ದೊಡ್ಡಬಳ್ಳಾಪುರದ ಹರೀಶ್ (31) ಮತ್ತು ತಮಿಳುನಾಡು ಮೂಲದ ಶಿವಕುಮಾರ್ (28) ಎಂದು ಗುರುತಿಸಲಾಗಿದೆ. ಖಚಿತ ಮಾಹಿತಿ ಮೇರೆಗೆ ನಗರದ ಹೊರ ವಲಯದಲ್ಲಿರುವ ಆರ್‌ಟಿಒ ಕಚೇರಿ ಬಳಿ ಆಂಧ್ರ ಕಡೆಯಿಂದ ಬೆಂಗಳೂರು ಕಡೆಗೆ ಹೋಗುತ್ತಿದ್ದ ಕ್ಯಾಂಟರ್ ವಾಹನವನ್ನು ತಡೆದು ಪೊಲೀಸರು ಪರಿಶೀಲನೆ ನಡೆಸಿದಾಗ ಸುಮಾರು 10 ಲಕ್ಷ ರು. ಮೌಲ್ಯದ 30 ರಕ್ತಚಂದನದ ತುಂಡುಗಳು ಪತ್ತೆಯಾಗಿದೆ. ಪೊಲೀಸರನ್ನು ಕಂಡು ಆರೋಪಿಗಳು ಪರಾರಿಯಾಗಲು ಯತ್ನಿಸಿದರೂ ಸಾಧ್ಯವಾಗಿಲ್ಲ. ಸರ್ಕಲ್ ಇನ್ಸ್‌ಪೆಕ್ಟರ್ ಬಾಲಾಜಿ ಸಿಂಗ್, ಪಿಎಸ್ ಐಗಳಾದ ಹೊನ್ನೇಗೌಡ, ನಾರಾಯಣಸ್ವಾಮಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.