ಕೋಮುಲ್ ದ್ವಿತೀಯ ಸ್ಥಾನ
ಚಿಂತಾಮಣಿ: ಹೈನುಗಾರಿಕೆಯಲ್ಲಿ ರಾಜ್ಯದಲ್ಲಿ ಎರಡನೆ ಸ್ಥಾನ ಪಡೆದಿರುವುದಾಗಿ ಕೋಲಾರ ಕೋಮುಲ್ ಅಧ್ಯಕ್ಷ ಕೆ. ಗುಡಿಯಪ್ಪ ಹೇಳಿದರು.
ತಾಲೂಕಿನ ಚಿಲಕಲನೇರ್ಪು ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ಮತ್ತು ಬಿಎಂಸಿ ಕೇಂದ್ರ ಉದ್ಘಾಟನೆಯಲ್ಲಿ ಮಾತನಾಡಿ, ಎಲ್ಲಾ ಗ್ರಾಮಗಳಲ್ಲಿ ಹಾಲು ಉತ್ಪಾದಕರ ಕೇಂದ್ರಗಳನ್ನು ತೆರೆಯಲು ಉದ್ದೇಶಿಸಲಾಗಿದ್ದು, ರಾಜ್ಯದಲ್ಲಿಯೇ ಹಾಲು ಉತ್ಪಾದಕರ ಕ್ಷೇಮಾಭಿವೃದ್ಧಿ ಹೊಸ ಕ್ರಾಂತಿ ಮಾಡಿರುವ ಪರಿಣಾಮ ರಾಜ್ಯದಲ್ಲಿ ಅತ್ಯಧಿಕ ಹಾಲು ಉತ್ಪಾದಕರನ್ನು ಹೊಂದಿರುವ ರಾಜ್ಯ ಎರಡನೆ ಸ್ಥಾನ ಪಡೆದು ದೇಶದ ಮೂಲೆ ಮೂಲೆಗೂ ನಂದಿನಿ ಹಾಲಿನ ಉತ್ಪಾದನೆ ರವಾನಿಸುತ್ತಿರುವುದಾಗಿ ಹೇಳಿದರು.
ಕೋಮುಲ್ ನಿರ್ದೇಶಕ ಟಿ.ಎನ್. ರಾಜಗೋಪಾಲ್ ಮಾತನಾಡಿ, ಮಕ್ಕಳ ಪೌಷ್ಠಿಕ ಅಂಶದ ಕೊರತೆ ನೀಗಿಸಲು ಕೆಎಂಎಫ್ನಿಂದ ಲಕ್ಷಾಂತರ ಲೀಟರ್ ಹಾಲು ಸರಬರಾಜು ಮಾಡಲಾಗುತ್ತಿದೆ.
ಇದರಲ್ಲಿ ನಂದಿನಿ ಗುಡ್ ಲೈಫ್ ಹಾಲಿನ ಪ್ಯಾಕೆಟ್ ಉತ್ಪನ್ನಗಳನ್ನು ವಿದೇಶಿಗಳಿಗೆ ಮತ್ತು ಗಡಿ ಕಾಯುವ ಸೈನಿಕರಿಗೆ ಕಳಿಹಿಸುತ್ತಿರುವುದು ಹೆಮ್ಮೆಯ ವಿಷಯ ಎಂದರು.
ಕಾರ್ಯಕ್ರಮಕ್ಕೂ ಮುನ್ನ ಸಂಘದ ನೂತನ ಕಟ್ಟಡ ಮತ್ತು ಬಿಎಂಸಿ ಕಟ್ಟಡವನ್ನು ಕೋಮುಲ್ ಅಧ್ಯಕ್ಷ ಕೆ. ಗುಡಿಯಪ್ಪ, ನಿರ್ದೇಶಕಿ ಶೋಭ ಉದ್ಘಾಟಿಸಿದರು. ಡಾ. ಮಾಧವ್, ಉಪ ವ್ಯವಸ್ಥಾಪಕ ಬಿ.ಎಸ್. ಹನುಮಂತರಾವ್, ವಿಸ್ತರಣಾಧಿಕಾರಿ ಪಿ.ವಿ. ವೆಂಕಟರವಣಪ್ಪ, ಅಧ್ಯಕ್ಷ ಪಿ. ಬೈಯ್ಯಣ್ಣ, ಕಾರ್ಯದರ್ಶಿ ಪಿ.ಎಸ್. ವೆಂಕಟರೆಡ್ಡಿ ಇದ್ದರು.