ಪರೀಕ್ಷಾ ಸಿದ್ಧತೆ ಕುರಿತು ಆಕಾಶವಾಣಿ ಕಾರ್ಯಕ್ರಮ ಇಂದು
ಕೋಲಾರ: ಎಸ್ಸೆಸ್ಸೆಲ್ಸಿ ಪರೀಕ್ಷಾ ಪೂರ್ವ ಸಿದ್ಧತೆಗಳ ಕುರಿತು ಬೆಂಗಳೂರು ಆಕಾಶವಾಣಿ ಕೇಂದ್ರ ಮಾ.3 ರಿಂದ ಮಾ.21 ರವರೆಗೂ ಪ್ರತಿನಿತ್ಯ ಮಧ್ಯಾಹ್ನ 2.35 ರಿಂದ 3.05 ರವರೆಗೂ ವಿಷಯವಾರು ಮಾಹಿತಿ ನೀಡುವ ವಿಶಿಷ್ಟ ಕಾರ್ಯಕ್ರಮ ಆಯೋಜಿಸಿದ್ದು, ಇದರ ಪ್ರಯೋಜನ ಪಡೆಯುವಂತೆ ಜಿಲ್ಲಾ ಪರೀಕ್ಷಾ ನೋಡೆಲ್ ಅಧಿಕಾರಿ ನಾಗೇಂದ್ರ ಪ್ರಸಾದ್ ಶಿಕ್ಷಕರು, ವಿದ್ಯಾರ್ಥಿಗಳಲ್ಲಿ ಕೋರಿದ್ದಾರೆ.
ಶನಿವಾರ ಮತ್ತು ಭಾನುವಾರ ಹೊರತು ಪಡಿಸಿ ಬರುವ ಈ ಕಾರ್ಯಕ್ರಮದಲ್ಲಿ ಮಾ.3 ರಂದು ಪ್ರಥಮ ಭಾಷೆ ಕನ್ನಡ, ಮಾ.4ರಂದು ದ್ವಿತೀಯ ಭಾಷೆ ಇಂಗ್ಲಿಷ್, ಮಾ.5 ರಂದು ಗಣಿತ ಪ್ರಥಮ ಪತ್ರಿಕೆ, ಮಾ.6 ರಂದು ಗಣಿತ ದ್ವಿತೀಯ ಪತ್ರಿಕೆಯ ಕುರಿತು ಮಕ್ಕಳಿಗೆ ಮಾಹಿತಿ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಮಾ.7ರಂದು ವಿಜ್ಞಾನ ಪ್ರಥಮ ಪತ್ರಿಕೆ, ಮಾ.10ರಂದು ವಿಜ್ಞಾನ ದ್ವಿತೀಯ ಪತ್ರಿಕೆ, 11 ರಂದು ಸಮಾಜ ವಿಜ್ಞಾನ ಪ್ರಥಮ ಪತ್ರಿಕೆ, 12 ರಂದು ಸಮಾಜ ವಿಜ್ಞಾನ ದ್ವಿತೀಯ ಪತ್ರಿಕೆ, 13 ರಂದು ತೃತೀಯ ಭಾಷೆ ಹಿಂದಿ ಮತ್ತು 14 ರಂದು ಪ್ರಥಮ ಭಾಷೆ ಸಂಸ್ಕೃತ ವಿಷಯದ ಕುರಿತಾದ ಕಾರ್ಯಕ್ರಮ ಇರುತ್ತದೆ.
ಮಾ.17 ರಂದು ಪ್ರಥಮ ಭಾಷೆ ಇಂಗ್ಲಿಷ್, 18 ರಂದು ದ್ವಿತೀಯ ಮತ್ತು ತೃತೀಯ ಭಾಷೆ ಕನ್ನಡ ವಿಷಯದ ಮಾಹಿತಿ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಮಾ.19 ರಂದು ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಿರ್ದೇಶಕ ದೇವಪ್ರಕಾಶ್ ಮಕ್ಕಳೊಂದಿಗೆ ಸಂದರ್ಶನ ನಡೆಸಲಿದ್ದಾರೆ. ಮಾ.20 ರಂದು ಬರವಣಿಗೆ ಕೌಶಲ್ಯ ವೃದ್ಧಿ ಕುರಿತು ಮತ್ತು ಮಾ.21 ರಂದು ಆರೋಗ್ಯ ಮತ್ತು ಮಾನಸಿಕ ಸ್ಥಿತಿಯ ಕುರಿತು ಕಾರ್ಯಕ್ರಮಗಳು ಮೂಡಿಬರಲಿವೆ.
ಜಿಲ್ಲೆಯ ಎಲ್ಲಾ ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಾಲೆಗಳ ಎಲ್ಲಾ ಮುಖ್ಯ ಶಿಕ್ಷಕರು ವಿಷಯವಾರು ರೇಡಿಯೋ ಕಾರ್ಯಕ್ರಮ ನಡೆಯುವ ದಿನಗಳಂದು ಪ್ರತಿ ಶಾಲೆಗಳಲ್ಲೂ ರೇಡಿಯೋ ವ್ಯವಸ್ಥೆ ಮಾಡಿ ಮಕ್ಕಳು ಕೇಳಲು ಅನುವು ಮಾಡಿಕೊಡಬೇಕೆಂದು ತಿಳಿಸಿದ್ದಾರೆ.