ರಾಜಕೀಯ ಬಣ್ಣ ಪಡೆದ ಎತ್ತಿನಹೊಳೆ
ಚಿಕ್ಕಬಳ್ಳಾಪುರ: ಬರ ಜಿಲ್ಲೆಗಳಿಗೆ ಕುಡಿಯುವ ನೀರನ್ನು ಪೂರೈಕೆ ಮಾಡಲು ತೀವ್ರ ವಿರೋಧದ ನಡುವೆಯೂ ಎತ್ತಿನಹೊಳೆ ಯೋಜನೆಗೆ ಮಾ.3 ರಂದು ಶಂಕುಸ್ಥಾಪನೆ ನೆರವೇರಿಸುತ್ತಿದ್ದು ಇದು ರಾಜಕೀಯ ಸ್ಪರ್ಶ ಪಡೆದುಕೊಳ್ಳುತ್ತಿರುವುದರಿಂದ ಸಾಮಾನ್ಯ ಜನರಲ್ಲಿ ಹತಾಶೆ ಮೂಡಿದೆ.
ಶಾಶ್ವತ ನೀರಾವರಿ ಸೌಲಭ್ಯ ಒದಗಿಸದ ಹೊರತು ಈ ಭಾಗಕ್ಕೆ ಉಳಿಗಾಲವಿಲ್ಲ ಎನ್ನುವುದು ಎಲ್ಲರಿಗೂ ತಿಳಿದ ವಿಚಾರ. ಆದರೆ, ಪ್ರತಿಸಲ ನೀರಾವರಿ ಯೋಜನೆ ಜಾರಿ ಚುನಾವಣೆಗೆ ಆಹಾರವಾಗುತ್ತಿದೆಯಾದರೂ ಜನರ ಸಮಸ್ಯೆ ಪರಿಹಾರವಾಗುತ್ತದೆ ಎಂಬ ನಂಬಿಕೆ ಇಲ್ಲವಾಗಿದೆ. ಜನಪ್ರತಿನಿಧಿಗಳು, ಹೋರಾಟಗಾರರು ನೀರಾವರಿ ವಿಷಯವನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ.
ರಾಜಕೀಯ ನೀರಾವರಿ: ಕಳೆದ ಒಂದೂವರೆ ದಶಕದಿಂದಲೂ ಶಾಶ್ವತ ನೀರಾವರಿ ಹೋರಾಟ ಮಾಡಲಾಗುತ್ತಿದೆ. ಕಳೆದ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಶಾಶ್ವತ ನೀರಾವರಿ ವಿಷಯ ಜೋರು ಪಡೆದು ಚುನಾವಣೆ ಮುಗಿದ ನಂತರ ಕೇವಲ ಭರವಸೆಗಳ ಪರ್ವ.
ಕಳೆದ ನಾಲ್ಕು ವರ್ಷಗಳಿಂದಲೂ ಸುಮ್ಮನಿದ್ದ ಕೇಂದ್ರ ಸಚಿವ ಎಂ. ವೀರಪ್ಪ ಮೊಯ್ಲಿ ಲೋಕಸಭಾ ಚುನಾವಣೆ ಲಾಭಕ್ಕಾಗಿ ಡಿಪಿಆರ್ ತಯಾರಾಗದಿದ್ದರೂ, ಅರಣ್ಯ ಮತ್ತು ಪರಿಸರ ಇಲಾಖೆ ಅನುಮತಿ ಪಡೆಯದಿದ್ದರೂ ರಾಜ್ಯ ಸರ್ಕಾರದ ಮೇಲೆ ಒತ್ತಡವೇರಿ ಎತ್ತಿನಹೊಳೆ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲು ಮುಂದಾಗಿದ್ದಾರೆ. ಇದು ಅವೈಜ್ಞಾನಿಕ ಯೋಜನೆ. ಇದರಿಂದ ಜನರ ನಿರೀಕ್ಷೆಗೆ ಅನುಗುಣವಾಗಿ ನೀರು ಸಿಗುವುದಿಲ್ಲ ಎನ್ನುವುದು ಹಿಂದೆ ಬಜೆಟ್‌ನಲ್ಲಿ ಎತ್ತಿನಹೊಳೆ ಯೋಜನೆಗೆ ಹಣ ಮೀಸಲಿಟ್ಟಾಗ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದ್ದ ನಾಯಕರ ಆರೋಪ.
ಎತ್ತಿನಹೊಳೆ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲು ಬಿಟ್ಟರೆ ತಮ್ಮ ಮತಬುಟ್ಟಿಗೆ ಮತಗಳು ಬೀಳುವುದು ಕಡಿಮೆಯಾಗುತ್ತದೆ ಎಂಬ ಭಯದಲ್ಲಿ ಜನರನ್ನು ಎತ್ತಿ ಕಟ್ಟಲಾಗುತ್ತಿದೆ ಎನ್ನುವುದು ಕಾಂಗ್ರೆಸ್ ಪ್ರತ್ಯಾರೋಪ. ಹೀಗೆ ರಾಜಕೀಯ ಪಕ್ಷಗಳು ಮತ್ತು ನಾಯಕರು ತಮ್ಮ ಲಾಭಕ್ಕಾಗಿ ನೀರಾವರಿಯನ್ನು ಬಳಸಿಕೊಳ್ಳುತ್ತಿರುವುದರಿಂದ ಜನರು ಬಡವಾಗುತ್ತಿದ್ದಾರೆ.