ರಾಜಕೀಯ ಲಾಭಕ್ಕಾಗಿ ಎತ್ತಿನಹೊಳೆ ಬೇಡ
ಕೋಲಾರ: ರಾಜಕೀಯ ಲಾಭಕ್ಕಾಗಿ ಎತ್ತಿನ ಹೊಳೆ ಯೋಜನೆಗೆ ಶಂಕುಸ್ಥಾಪನೆ ನಡೆಸುವುದನ್ನು ಕೈಬಿಟ್ಟು ಬಯಲು ಸೀಮೆ ಜನತೆಗೆ ಅನುಕೂಲವಾಗುವ ಹಾಗೂ ಎಲ್ಲರೂ ಒಪ್ಪುವ ಯೋಜನೆ ಅನುಷ್ಠಾನಗೊಳಿಸಬೇಕೆಂದು ಕರ್ನಾಟಕ ನೀರಾವರಿ ವೇದಿಕೆ ಸಂಚಾಲಕ ಕೆ.ಎನ್. ತ್ಯಾಗರಾಜ್ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಎತ್ತಿನಹೊಳೆಗೆ ದಕ್ಷಿಣ ಕನ್ನಡದಲ್ಲಿ ವಿರೋಧ ವ್ಯಕ್ತವಾಗುತ್ತಿದೆ, ಬಯಲು ಸೀಮೆ ಜಿಲ್ಲೆಗಳಲ್ಲೂ ಪರ ವಿರೋಧ ಉಂಟಾಗಿರುವುದರಿಂದ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸುವುದು ಸರಿಯಲ್ಲವೆಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಎತ್ತಿನಹೊಳೆ, ಅಘನಾಶಿನಿ, ಪರಮಶಿವಯ್ಯ ವರದಿ ಸೇರಿದಂತೆ ಯೋಜನೆ ಯಾವುದೇ ಇರಲಿ ವೈಜ್ಞಾನಿಕವಾಗಿ ಪರಿಶೀಲನೆ ನಡೆಸಿ ವರದಿ ಪಡೆದು ಎಲ್ಲರ ಮನವೊಲಿಸಿ ಅಂತಹ ಯೋಜನೆ ಅನುಷ್ಠಾನಗೊಳಿಸಲಿ ಎಂದು ಒತ್ತಾಯಿಸಿರುವ ಅವರು ತರಾತುರಿಯಲ್ಲಿ ಎತ್ತಿನಹೊಳೆಗೆ ಶಂಕುಸ್ಥಾಪನೆಗೆ ಮುಂದಾಗಿರುವ ಸರ್ಕಾರದ ಕ್ರಮವನ್ನು ಖಂಡಿಸಿದ್ದಾರೆ.