ವಿರೋಧದ ನಡುವೆ ಎತ್ತಿನಹೊಳೆಗೆ ಶಂಕು
ಚಿಕ್ಕಬಳ್ಳಾಪುರ: ನಗರದ ಹೊರ ವಲಯದಲ್ಲಿರುವ ಬಿಜಿಎಸ್ ವರ್ಲ್ಡ್ ಸ್ಕೂಲ್ ಆವರಣದಲ್ಲಿ ಮಾ.3 ರಂದು ಬೆಳಿಗ್ಗೆ 10 ಗಂಟೆಗೆ ಎತ್ತಿನಹೊಳೆ ಯೋಜನೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಶಾಲೆಯ ಆವರಣದಲ್ಲಿ ಅದ್ಧೂರಿ ಕಾರ್ಯಕ್ರಮಕ್ಕಾಗಿ ಸರ್ ಎಂ.ವಿ ಬೃಹತ್ ವೇದಿಕೆ ನಿರ್ಮಿಸಿದ್ದು ಕಾರ್ಯಕ್ರಮದ ಸಾನ್ನಿಧ್ಯವನ್ನು ಆದಿಚುಂಚನಗಿರಿ ಮಠದ ಪೀಠಾಧಿಪತಿ ನಿರ್ಮಲಾನಂದನಾಥ ಸ್ವಾಮೀಜಿ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಅತಿಥಿಗಳಾಗಿ ಕೇಂದ್ರ ಸಚಿವರಾದ ಎಂ. ವೀರಪ್ಪ ಮೊಯ್ಲಿ, ಕೆ.ಎಚ್. ಮುನಿಯಪ್ಪ, ಮಾಜಿ ಮುಖ್ಯಮಂತ್ರಿಗಳಾದ ಡಿ.ವಿ. ಸದಾನಂದಗೌಡ, ಎಚ್.ಡಿ. ಕುಮಾರಸ್ವಾಮಿ, ಜಗದೀಶ್ ಶೆಟ್ಟರ್, ವಿಧಾನಸಭಾ ಉಪಾಧ್ಯಕ್ಷ ಎನ್.ಎಚ್. ಶಿವಶಂಕರರೆಡ್ಡಿ, ಸಚಿವರಾದ ಎಂ.ಬಿ. ಪಾಟೀಲ, ಆರ್. ರೋಷನ್ ಬೇಗ್, ಯು.ಟಿ. ಖಾದರ್, ದಿನೇಶ್ ಗುಂಡೂರಾವ್, ಎಚ್.ಪಿ. ಮಹದೇವಪ್ಪ, ಅಭಯಚಂದ್ರ ಜೈನ್, ರಾಮಲಿಂಗಾರೆಡ್ಡಿ, ಟಿ.ಬಿ. ಜಯಚಂದ್ರ, ಡಿ.ಕೆ. ಶಿವಕುಮಾರ್, ಕೃಷ್ಣಭೈರೇಗೌಡ, ಜಿಪಂ ಅಧ್ಯಕ್ಷ ಎಸ್.ಎನ್. ಚಿನ್ನಪ್ಪ, ಶಾಸಕರಾದ ಕೆ. ಸುಧಾಕರ್, ಎಸ್.ಎನ್. ಸುಬ್ಬಾರೆಡ್ಡಿ, ಜೆ.ಕೆ. ಕೃಷ್ಣಾರೆಡ್ಡಿ, ಎಂ.ರಾಜಣ್ಣ ಭಾಗವಹಿಸಲಿದ್ದಾರೆ.
ಮುಖ್ಯಮಂತ್ರಿಗಳೇ ಗೊಂದಲ ನಿವಾರಿಸಿ
ಚಿಕ್ಕಬಳ್ಳಾಪುರ: ಎತ್ತಿನಹೊಳೆ ಯೋಜನೆ ಜಾರಿ ವಿರೋಧಿಸಿ ಅತ್ತ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಇತ್ತ ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಹೋರಾಟಗಳು ತೀವ್ರವಾಗಿ ನಡೆಯುತ್ತಿರುವುದರಿಂದ ಮೊದಲು ಮುಖ್ಯಮಂತ್ರಿಗಳು ಗೊಂದಲ ಬಗೆಹರಿಸಬೇಕೆನ್ನುವುದು ಜನರ ಒತ್ತಾಯವಾಗಿದೆ.
ಎತ್ತಿನಹೊಳೆ ಯೋಜನೆಯಿಂದ 23 ಟಿಎಂಸಿ ನೀರು ಸಿಗುವುದಿಲ್ಲ. ಬಯಲುಸೀಮೆಯ ಜಿಲ್ಲೆಗಳಿಗೆ ಅನುಕೂಲವಾಗದಿದ್ದರೂ ಕೇವಲ ಲೋಕಸಭಾ ಚುನಾವಣೆಗಾಗಿ ಯೋಜನೆ ಜಾರಿಗೆ ತರಲಾಗುತ್ತಿದೆ. ಈ ಮೂಲಕ ಈ ಭಾಗದ ಜನರ ಕಣ್ಣೊರೆಸುವ ನಾಟಕವಾಡಲಾಗುತ್ತಿದೆ. ಯೋಜನೆಗೆ ಪರಿಸರ ಮತ್ತು ಅರಣ್ಯ ಇಲಾಖೆಯಿಂದ ಅನುಮತಿ ಪಡೆದುಕೊಂಡಿಲ್ಲ. ಸಿದ್ಧಪಡಿಸಿರುವ ಯೋಜನೆ ವರದಿಯಲ್ಲಿ ಸ್ಪಷ್ಟತೆ ಇಲ್ಲ ಎನ್ನುವುದು ಆರೋಪವಾಗಿದೆ.
ಈ ನಡುವೆ ಡಾ. ಪರಮಶಿವಯ್ಯನವರ ವರದಿ ಮತ್ತು ಎತ್ತಿನಹೊಳೆ ಯೋಜನೆ ಅನುಷ್ಠಾನಗೊಳಿಸಲು ಬದ್ಧವಾಗಿದ್ದೇವೆ ಎನ್ನುವ ಜನಪ್ರತಿನಿಧಿಗಳು, ಕರಾವಳಿ ಭಾಗಕ್ಕೆ ತೆರಳಿದಾಗ ಯಾವುದೇ ಕಾರಣಕ್ಕೂ ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಬೆಂಬಲ ನೀಡುವುದಿಲ್ಲ ಎನ್ನುತ್ತಿರುವುದು ಗೊಂದಲಕ್ಕೆ ಕಾರಣವಾಗಿದೆ.
ಖಾಲಿ ಪೈಪುಗಳ ಪ್ರದರ್ಶನ
ಚಿಕ್ಕಬಳ್ಳಾಪುರ: ಅವೈಜ್ಞಾನಿಕವಾಗಿ ಎತ್ತಿನಹೊಳೆ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲು ಮುಂದಾಗಿರುವುದನ್ನು ಖಂಡಿಸಿರುವ ಶಾಶ್ವತ ನೀರಾವರಿ ಹೋರಾಟಗಾರರು, ಖಾಲಿ ಪೈಪುಗಳ ಪ್ರದರ್ಶನದ ಮೂಲಕ ಕಾರ್ಯಕ್ರಮದ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ನಗರದ ಸಿಟಿಜನ್ ಕ್ಲಬ್ ನಿಂದ ಬೆಳಿಗ್ಗೆ 9 ಗಂಟೆಗೆ ಖಾಲಿ ಪೈಪುಗಳನ್ನು ಹಿಡಿದು ಪ್ರತಿಭಟನೆ ನಡೆಸಲಾಗುವುದು. ಎತ್ತಿನಹೊಳೆ ಯೋಜನೆ ಶಂಕುಸ್ಥಾಪನಾ ಕಾರ್ಯಕ್ರಮವನ್ನು ನಿಲ್ಲಿಸಬೇಕೆಂದು ಒತ್ತಾಯಿಸಲಾಗುವುದು ಎಂದು ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನೀರಾವರಿ ಹೋರಾಟಗಾರ ಮಧುಸೀತಪ್ಪ, ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಶಂಕುಸ್ಥಾಪನೆ ನೆರವೇರಿಸಲು ಮುಂದಾಗಿರುವ ಎತ್ತಿನಹೊಳೆ ಯೋಜನೆಯಿಂದ ಕೇವಲ 6 ಟಿಎಂಸಿ ನೀರು ಮಾತ್ರ ಸಿಗುತ್ತದೆ. ಆದರೂ 24 ಟಿಎಂಸಿ ನೀರು ಸಿಗುತ್ತದೆ ಎಂದು ಸುಳ್ಳು ಭರವಸೆ ನೀಡುತ್ತಿದ್ದು ಒಂದು ವೇಳೆ ಯೋಜನೆ ಜಾರಿಗೆ ತಂದ ಮೇಲೆ ಅಷ್ಟು ಟಿಎಂಸಿ ನೀರನ್ನು ತರಲು ಸಾಧ್ಯವಾಗದಿದ್ದರೆ ಕೇಂದ್ರ ಸಚಿವ ಎಂ. ವೀರಪ್ಪ ಮೊಯ್ಲಿ ಮತ್ತು ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ ಅವರು ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬೇಕೆಂದು ಒತ್ತಾಯಿಸಿದರು. ಇಂದು ಸರ್.ಎಂ. ವಿಶ್ವೇಶ್ವರಯ್ಯನವರು ಜೀವಂತವಾಗಿದ್ದರೆ ಎತ್ತಿನಹೊಳೆ ಯೋಜನೆ ಜಾರಿಗೆ ತರಲು ಮುಂದಾಗಿರುವವರ ಕಪಾಳ ಮೋಕ್ಷ ಮಾಡುತ್ತಿದ್ದರು ಎಂತಲೂ ಕಿಡಿಕಾರಿದರು.
ಕಾರ್ಯಕ್ರಮಕ್ಕೆ ಸಹಕರಿಸಿ: ಎತ್ತಿನಹೊಳೆ ಯೋಜನೆ ಶಂಕುಸ್ಥಾಪನೆ ನೆರವೇರಿಸುವ ಕಾರ್ಯಕ್ರಮದಲ್ಲಿ ಪಕ್ಷಾತೀತವಾಗಿ ಪ್ರತಿಯೊಬ್ಬರು ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಶಾಸಕ ಡಾ.ಕೆ. ಸುಧಾಕರ್ ಮನವಿ ಮಾಡಿದರು.
ಬಿಜಿಎಸ್ ವರ್ಲ್ಡ್ ಸ್ಕೂಲ್ ಆವರಣದಲ್ಲಿ ಕೈಗೊಂಡ ಕಾರ್ಯಕ್ರಮದ ಸಕಲ ಸಿದ್ಧತೆ ಪರಿಶೀಲಿಸಿದ ಅವರು, ಎತ್ತಿನಹೊಳೆ ಯೋಜನೆಗೆ ಅಡ್ಡಿಪಡಿಸುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾ.3 ರಂದು ಬಂದ್ಗೆ ಕರೆ ನೀಡಿರುವುದು ವಿಷಾದನೀಯ ಎಂದರು.
ಇಂದು ಶಂಕುಸ್ಥಾಪನೆ ವಿರೋಧಿಸಿ ಪ್ರತಿಭಟನೆ
ಕೆಜಿಎಫ್: ಚುನಾವಣೆ ಸಮಯದಲ್ಲಿ ಎತ್ತಿನಹೊಳೆ ಕಾಮಗಾರಿಗೆ ಶಂಕುಸ್ಥಾಪನೆ ಮಾಡುತ್ತಿರುವುದನ್ನು ಖಂಡಿಸಿ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆ ವತಿಯಿಂದ ಕೋಲಾರದಲ್ಲಿ ಸೋಮವಾರ ಹೋರಾಟ ಹಮ್ಮಿಕೊಳ್ಳಲಾಗಿದೆ.
ಕೇಂದ್ರದಲ್ಲಿ ಪ್ರಭಾವಿ ಸಚಿವರಾಗಿರುವ ಎಂ. ವೀರಪ್ಪಮೊಯ್ಲಿ ಎತ್ತಿನಹೊಳೆ ಯೋಜನೆ ಜಾರಿಗೆ 5 ವರ್ಷಗಳ ಹಿಂದೆ ಚಾಲನೆ ನೀಡುವ ಸಾಮರ್ಥ್ಯ ಇವರಿಗೇಕೆ ಇಲ್ಲ ಎಂಬುದು ರೈತರ ಹಾಗೂ ಸಾರ್ವಜನಿಕರ ಪ್ರಶ್ನೆಯಾಗಿದೆ. ಇತ್ತ ಕೋಲಾರ ಜಿಲ್ಲೆಯಲ್ಲಿ 6 ಭಾರಿ ಸಂಸದರು ಹಾಗೂ ಕೇಂದ್ರ ಸಚಿವರಾಗಿ ಆಯ್ಕೆಯಾದ ಕೆ.ಎಚ್. ಮುನಿಯಪ್ಪ ಶಾಶ್ವತ ನೀರಾವರಿ ಯೋಜನೆ ಜಾರಿಗೊಳಿಸದೆ 2014ರಲ್ಲಿ ಮತ್ತೊಮ್ಮೆ ಜಿಲ್ಲೆಯ ಜನರಲ್ಲಿ ಲೋಕಸಭಾ ಚುನಾವಣೆಗೆ ಯಾವ ನೈತಿಕತೆಯಿಂದ ಮತ ಕೇಳುತ್ತಾರೆ ಎಂಬ ಮಾತು ಎಲ್ಲೆಡೆ ಕೇಳಿ ಬರುತ್ತಿದೆ.
ಎತ್ತಿನಹೊಳೆ ಶಂಕುಸ್ಥಾಪನೆ ಹೆಸರಲ್ಲಿ ರಾಜಕೀಯ ಲಾಭ ಪಡೆಯಲು ಮುಂದಾಗಿರುವ ನಾಯಕರಿಗೆ ಅವಳಿ ಜಿಲ್ಲೆಯ ಜನತೆ ಈ ಭಾರಿ ತಕ್ಕ ಪಾಠ ಕಲಿಸಲಿದ್ದಾರೆ. ಇಂತಹ ನಾಯಕರನ್ನು ಜಿಲ್ಲೆಯಿಂದ ಶಾಶ್ವತವಾಗಿ ಆಯ್ಕೆಯಾಗದಂತೆ ರೈತರು, ಯುವಕರು ಹೋರಾಟಕ್ಕೆ ಸಿದ್ಧವಿರುವುದಾಗಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಹುಲ್ಕೂರು ಹರಿಕುಮಾರ್ ತಿಳಿಸಿದ್ದಾರೆ.