ವೈಜ್ಞಾನಿಕ ವ್ಯವಸಾಯಕ್ಕೆ ಡಾ. ಶಿವಣ್ಣ ಸಲಹೆ
ಕೋಲಾರ: ಯುವಕರು ವೈಜ್ಞಾನಿಕ ವ್ಯವಸಾಯದತ್ತ ಒಲವು ತೋರಬೇಕು, ಖಾಸಗಿ ಕಂಪನಿಗಳು ನೀಡುವ ಬಿತ್ತನೆ ಬೀಜದಿಂದ ಮೋಸಹೋಗಬಾರದು, ಸ್ವತಃ ಬಿತ್ತನೆ ಬೀಜ ಸಿದ್ಧಗೊಳಿಸುವ ತಾಂತ್ರಿಕತೆ ಪಡೆದುಕೊಳ್ಳಬೇಕು ಎಂದು ವಿಜ್ಞಾನ ಪರಿಷತ್ ಉಪಾಧ್ಯಕ್ಷ ಡಾ. ಶಿವಣ್ಣ ತಿಳಿಸಿದರು.
ವಿಜ್ಞಾನ ಪರಿಷತ್ ಆಶ್ರಯದಲ್ಲಿ ತಾಲೂಕಿನ ಮೇಡಿಹಾಳದಲ್ಲಿ ರೈತರಿಗಾಗಿ ಹಮ್ಮಿಕೊಂಡಿದ್ದ ನಿಮ್ಮಬಳಿಗೆ ವಿಜ್ಞಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಹಳ್ಳಿಗಳಲ್ಲಿ ವ್ಯವಸಾಯ ಉಳಿದಲ್ಲಿ ಮಾತ್ರ ಭಾರತ ಉಳಿಯುತ್ತದೆ, ಇದು ಗಾಂಧಿಯ ಕನಸಾಗಿತ್ತು, ಇಂದು ನಾವು ಪರಿಸರದ ಜೊತೆಗೆ ಕೃಷಿಯನ್ನು ಅವನತಿಯತ್ತ ಕೊಂಡೊಯ್ಯುತ್ತಿರುವುದರಿಂದ ಹಳ್ಳಿಯ ಸಂಸ್ಕೃತಿಗೆ ಭಂಗ ಉಂಟಾಗಿದೆ ಎಂದರು.
ಗ್ರಾಮಗಳಲ್ಲಿ ರಾಜಕೀಯ ಬೇಡ, ದುಡ್ಡಿನ ಹಿಂದೆ ಹೋಗದಿರಿ, ಪ್ರಕೃತಿಯನ್ನು ರಕ್ಷಿಸುವ ಮೂಲಕ ಸಾಮಾಜಿಕ ಕಾಳಜಿ ಮೆರೆಯಿರಿ ಎಂದು ಸಲಹೆ ನೀಡಿದರು. ವಿಜ್ಞಾನ ಲೇಖಕ, ಜಿಲ್ಲಾ ಕಸಾಪ ಖಜಾಂಚಿಯೂ ಆಗಿರುವ ಪುರುಷೋತ್ತಮ್ ನೀರಿನ ಸಂರಕ್ಷಣೆ ಬಗ್ಗೆ ಮಾತನಾಡಿ, ಸಾಲು-ಸಾಲು ಕೆರೆಗಳನ್ನು ನಿರ್ಮಿಸಿ ನಂದಿಬೆಟ್ಟದಿಂದ ಹರಿದು ಬರುವ ನೀರನ್ನು ಹಿಡಿದಿಟ್ಟುಕೊಳ್ಳುವ ಪೂರ್ವಜರ ಕಾಳಜಿಯನ್ನು ನಾವು ಮರೆತಿರುವುದರಿಂದಲೇ ಇಂದು ನೀರಿನ ಸಮಸ್ಯೆ ಎದುರಿಸುತ್ತಿದ್ದೇವೆ ಎಂದು ವಿಷಾದಿಸಿದರು.
ನಮ್ಮ ಪೂರ್ವಜರಿಗೆ ದೂರದೃಷ್ಟಿಯಿತ್ತು, ಅಂತರ್ಜಲ, ನೀರಿನ ಕೊರತೆ ಎದುರಾಗುತ್ತದೆಯೆಂಬ ಜ್ಞಾನವೂ ಇತ್ತು, ಆದ್ದರಿಂದಲೇ ಅವರು ಕೆರೆಗಳನ್ನು ನಿರ್ಮಿಸಿದರು ಎಂದರು. ಇಡೀ ರಾಜ್ಯದಲ್ಲೇ ಕೆರೆಗಳ ತವರು ಕೋಲಾರವಾಗಿದೆ, ಆದರೆ ಇದೀಗ ಕೆರೆಗಳ ಒತ್ತುವರಿ, ರಾಜಕಾಲುವೆಗಳ ಸ್ವಾಧೀನದಿಂದಾಗಿ ಹರಿದು ಬರುವ ನೀರಿಗೆ ದಾರಿಯಿಲ್ಲದೇ ಕೆರೆಗಳು ಒಣಗುತ್ತಿವೆ ಎಂದರು. ಬೆಟ್ಟಗಳು ನೀರಿನ ಗೋಪುರಗಳು ಎಂದ ಅವರು, ಅದರಲ್ಲಿ ಬಿದ್ದು ಹರಿದು ಬರುವ ನೀರನ್ನು ಉಳಿಸಿಕೊಳ್ಳುವ ಮೂಲಕ ಅಂತರ್ಜಲ ವೃದ್ಧಿಗೆ ಸಾಕಾರ ಹಾಡಬೇಕು ಎಂದರು. ವಿಜ್ಞಾನ ಪರಿಷತ್ ಜಿಲ್ಲಾ ಸಂಚಾಲಕಿ ಮಂಜುಳಾ ಭೀಮರಾವ್, ಕೋಲಾರ ಜಿಲ್ಲೆ ಫಲವತ್ತಾದ ಭೂ ಪ್ರದೇಶ ಹೊಂದಿದ್ದು, ಕೆರೆಗಳ ರಕ್ಷಣೆಯಿಂದ ಮಾತ್ರ ಅಂತರ್ಜಲ ಸಂರಕ್ಷಣೆ ಮತ್ತು ಜನರ ಉಳಿವು ಸಾಧ್ಯ ಎಂದರು.
ಮಳೆ ಕೊಯ್ಲು ಇಂದಿನ ಅಗತ್ಯವಾಗಿದ್ದು, ಪ್ರತಿ ಕುಟುಂಬವೂ ಮಳೆ ನೀರನ್ನು ಸಂಗ್ರಹಿಸುವ ಮೂಲಕ ಅಂತರ್ಜಲ ರಕ್ಷಣೆಗೆ ಆಧ್ಯತೆ ನೀಡಬೇಕು, ಕೃಷಿಯಲ್ಲಿ ಹನಿ ನೀರಾವರಿಗೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಮೇಡಿಹಾಳ ಗ್ರಾಪಂ ಅಧ್ಯಕ್ಷ ಸುರೇಶ್, ಉಪಾಧ್ಯಕ್ಷ ಗೋಪಾಲರೆಡ್ಡಿ ಇದ್ದರು.