ಸುದ್ದಿ ಸಂಕ್ಷೇಪ
'ಬಡವರ ಸಹಕಾರಕ್ಕೆ ಮುಂದಾಗಿ'
ಕೆಜಿಎಫ್: ಬಡಕುಟುಂಬಗಳು ಉತ್ತಮ ಜೀವನ ರೂಪಿಸಿಕೊಳ್ಳಲು ಪ್ರತಿಯೊಬ್ಬರೂ ಸಹಕಾರ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಾಹೀದ್ ಶಾಜ್ಜಾದ ಹೇಳಿದರು. ನಗರದ ಆಂಡ್ರಸನ್ಪೇಟೆಯಲ್ಲಿ ಜಾನ್ಸಿದಾಸ್ ಮದರ್ ತೆರೇಸಾ ಚಾರಿಟಬಲ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ 250 ಮಂದಿ ಬಡ ಕುಟುಂಬಗಳಿಗೆ ಅಕ್ಕಿ ಹಾಗೂ ಇತರೆ ಸಾಮಾಗ್ರಿಗಳನ್ನು ವಿತರಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು. ಕೆಜಿಎಫ್ ನಗರದ ವಿವಿಧ ಬಡಾವಣೆಗಳ ಸುಮಾರು 250 ಬಡ ಕುಟುಂಬಗಳಿಗೆ ಅಕ್ಕಿ, ಗೋಧಿ, ತರಕಾರಿಗಳು, ಕೊಬ್ಬರಿ ಎಣ್ಣೆ, ಸೋಪು ಮುಂತಾದ ಸಾಮಾಗ್ರಿಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಮದರ್ ತೆರೇಸಾ ಚಾರಿಟಬಲ್ ಟ್ರಸ್ಟ್ನ ಅಧ್ಯಕ್ಷ ಜಾನ್ಸಿದಾಸ್, ಕಬೀರ್, ವಿಜಯ್, ದೇವರಾಜ್ ಇದ್ದರು.
ಕೋನಪ್ಪಲ್ಲಿ ಸಂಘದ ಅಧ್ಯಕ್ಷರ ಆಯ್ಕೆ
ಚಿಂತಾಮಣಿ: ಕೋನಪ್ಪಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಶಿವಾರೆಡ್ಡಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಶಿವಾರೆಡ್ಡಿಗೆ ಚುನಾವಣಾಧಿಕಾರಿ ಹೂಮಾಲೆ ಹಾಕಿ ಸ್ವಾಗತಿಸಿದರು. ಗ್ರಾಮದಲ್ಲಿ ಹಾಲು ಉತ್ಪಾದಕರ ಅಧ್ಯಕ್ಷರನ್ನು ಹಾಗೂ ಸದಸ್ಯರನ್ನು ಮೆರವಣಿಗೆ ಮಾಡಿ ವಿಜಯೋತ್ಸವ ಆಚರಿಸಿ ಸಿಹಿ ಹಂಚಿದರು. ಸದಸ್ಯರಾದ ಬಾಬುರೆಡ್ಡಿ, ಗುರುರಾಜ್, ವೆಂಕಟರವಣ, ನಾಗರಾಜರೆಡ್ಡಿ, ನಾರಾಯಣಸ್ವಾಮಿ.ಪಿ, ರಾಜಣ್ಣ, ರಾಮಯ್ಯ ಇದ್ದರು.
ಆಯುಷ್ ಆಸ್ಪತ್ರೆ ಉದ್ಘಾಟನೆ
ಚಿಂತಾಮಣಿ: ಜನರ ಆರೋಗ್ಯ ದೃಷ್ಟಿಯಿಂದ ಸರ್ಕಾರ ಗಿಡಮೂಳಿಕೆಗಳಿಂದ ಚಿಕಿತ್ಸೆ ನೀಡಲು ಮುಂದಾಗಿರುವುದು ಶ್ಲಾಘನೀಯ ಎಂದು ಶಾಸಕ ಜೆ.ಕೆ. ಕೃಷ್ಣಾರೆಡ್ಡಿ ಅಭಿಪ್ರಾಯಪಟ್ಟರು. ನಗರದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಜಿಲ್ಲಾ ಆಡಳಿತ, ಜಿಪಂ ಹಾಗೂ ಆಯುಷ್ ಇಲಾಖೆ ವತಿಯಿಂದ ನೂತನವಾಗಿ 40 ಲಕ್ಷ ರುಪಾಯಿ ವೆಚ್ಚದ 10 ಹಾಸಿಗೆಗಳ ನೂತನ ಆಯುಷ್ ಆಸ್ಪತ್ರೆ ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಪ್ರದೇಶದ ಬಡ ಜನರಿಗೆ ತಾಯಿ ಮತ್ತು ಮಗುವಿಗೆ ಉತ್ತಮ ಆರೋಗ್ಯ ಕಲ್ಪಿಸಲು ಆಯುಷ್ ಆಸ್ಪತ್ರೆ ಲೋಕಾರ್ಪಣೆಗೆ ಮಾಡಿರುವುದು ಸಂತೋಷ ವಿಷಯವೆಂದರು. ಆದರೆ ಆಸ್ಪತ್ರೆಯಲ್ಲಿ ವೈದ್ಯರಿಲ್ಲದೆ ಸಂಬಂಧಪಟ್ಟ ಆರೋಗ್ಯ ಸಚಿವರು ಹಾಗೂ ಅಧಿಕಾರಿಗಳು ಇತ್ತ ಗಮನ ಹರಿಸಿ ವೈದ್ಯರನ್ನು ನೇಮಿಸಿ ಬಡವರಿಗೆ ಉತ್ತಮ ಆರೋಗ್ಯ ಕಲ್ಪಿಸಲು ಮುಂದಾಗಬೇಕೆಂದು ಹೇಳಿದರು. ಜಿಲ್ಲಾ ಆರೋಗ್ಯಾಧಿಕಾರಿ ಸನಾವುಲ್ಲಾ, ಡಾ. ರಂಗಸ್ವಾಮಿ, ಡಾ. ದಿವ್ಯ ಲಕ್ಷ್ಮೀ, ನಗರಸಭೆ ಸದಸ್ಯರಾದ ಅಬ್ಬುಗುಂಡು ಶ್ರೀನಿವಾಸರೆಡ್ಡಿ, ವೆಂಕಟರವಣಪ್ಪ, ನಟರಾಜ, ಶಫಿಕ್, ಪ್ರಕಾಶ್ ಇದ್ದರು.