ಸುದ್ದಿ ಸಂಕ್ಷೇಪ
ಕೋಲಾರದಲ್ಲಿ ಭಾನುವಾರ ಮಳೆ
ಕೋಲಾರ: ಬೇಸಿಗೆ ಮಳೆಯ ಅವಧಿಗೆ ಮುನ್ನವೇ ಕೋಲಾರದಲ್ಲಿ ಭಾನುವಾರ ರಾತ್ರಿ ಸುರಿದ ವರ್ಷಧಾರೆಯಿಂದ ಏರುತ್ತಿರುವ ಬಿಸಿಲ ಕಾವು ಕುಸಿಯುವ ಸಾಧ್ಯತೆಗಳಿವೆ.ಸಾಮಾನ್ಯವಾಗಿ ಮಾರ್ಚ್ 15 ನಂತರ ಬೇಸಿಗೆಯ ಮಳೆಯ ಅವಧಿ ಆರಂಭವಾಗುತ್ತದೆ. ಆದರೆ, ಕೋಲಾರ ಜಿಲ್ಲೆಯಲ್ಲಿ ಪ್ರತಿವರ್ಷ ಆವಣಿ ಜಾತ್ರೆಯ ಸಂದರ್ಭದಲ್ಲಿ ಮಳೆ ತಪ್ಪದೆ ಸುರಿಯುವುದು ಪಾವಡ ಸದೃಶ್ಯವೆಂದರೆ ತಪ್ಪಾಗಲಾರದು. ನಿನ್ನೆ ಬಂಗಾರಪೇಟೆ, ಮುಳಬಾಗಿಲು ತಾಲೂಕಿನಲ್ಲಿ ಧಾರಾಕಾರ ಮಳೆಯಾಗಿದೆ, ಕೆಲವು ಕಡೆ ಗುಡುಗು ಸಿಡಿಲು ಸಹಿತ ಬಿದ್ದ ಮಳೆಗೆ ಕುರಿಗಳು ಸತ್ತಿವೆ.
ಇಂದು ಅಭಿನಂದನಾ ಸಮಾರಂಭ
ತುಮಕೂರು: ವಿದ್ಯಾವಾಚಸ್ಪತಿ ಕವಿತಾಕೃಷ್ಣ, ಪತ್ರಕರ್ತರಾದ ಎಚ್.ಎಸ್. ರಾಮಣ್ಣನವರಿಗೆ ಜಿಲ್ಲಾ ಜೆಡಿಯು ವತಿಯಿಂದ ಮಾ. 4 ರಂದು ಸಂಜೆ 5 ಗಂಟೆಗೆ ಕವಿತಾಕೃಷ್ಣ ಸಾಹಿತ್ಯ ಮಂದಿರದಲ್ಲಿ ಅಭಿನಂದನಾ ಸಮಾರಂಭ ಏರ್ಪಡಿಸಲಾಗಿದೆ ಎಂದು ಜಿಲ್ಲಾ ಜೆಡಿಯು ತಿಳಿಸಿದೆ. ಕಾರ್ಯಕ್ರಮವನ್ನು ಜೆಡಿಯು ರಾಜ್ಯಾಧ್ಯಕ್ಷ ಡಾ.ಎಂ.ಪಿ. ನಾಡಗೌಡ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಜಿಲ್ಲಾ ಜೆಡಿಯು ಅಧ್ಯಕ್ಷ ಕೆಜಿಎಲ್ ರವಿ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜೆಡಿಯು ರಾಜ್ಯ ಪ್ರಧಾನ ಕಾಯದರ್ಶಿ ನರಫತ್ ಎಂ. ರಣಾವತ್, ವಿದ್ಯಾವಾಹಿನಿ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಕೆ.ಬಿ. ಜಯಣ್ಣ, ಅಹಿಂದ ಮುಖಂಡ ಡಾ.ಬಿ.ಎಲ್ಲಪ್ಪ, ತುರುವೇಕೆರೆ ಜಿಪಂ ಮಾಜಿ ಸದಸ್ಯ ಎನ್.ಆರ್. ಜಯರಾಂ ಪಾಲ್ಗೊಳ್ಳಲ್ಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಪತ್ರಕರ್ತ ತೊ.ಗ. ಅಡವೀಶಪ್ಪ, ಜೆಡಿಯು ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಡಾ.ಇಂತಿಯಾಜ್ ಅಹಮದ್, ಇನ್ನರ್ವ್ಹೀಲ್ (ಸೆಂಟ್ರಲ್) ಅಧ್ಯಕ್ಷೆ ಮಂಜುಳಾದೇವಿ, ರೋಟರಿ ಸೆಂಟ್ರಲ್ ಅಧ್ಯಕ್ಷ ಟಿ.ಆರ್. ಪ್ರಕಾಶ್ ಪಾಲ್ಗೊಳ್ಳಲ್ಲಿದ್ದಾರೆ.
5ರಂದು ಏಕೇಶ್ವರ್ಗೆ ನುಡಿನಮನ
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ದಿ. ಚಿ.ನಾ. ಏಕೇಶ್ವರ್ ಅವರಿಗೆ ನುಡಿನಮನ ಕಾರ್ಯಕ್ರಮವನ್ನು ಮಾ.5 ರಂದು ಬೆಳಗ್ಗೆ 11 ಗಂಟೆಗೆ ವಾರ್ತಾ ಇಲಾಖೆ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ರಾಷ್ಟ್ರೀಯ ಉಪಾಧ್ಯಕ್ಷ ಬಿ.ವಿ. ಮಲ್ಲಿಕಾರ್ಜುನಯ್ಯ, ರಾಜ್ಯಾಧ್ಯಕ್ಷ ಗಂಗಾಧರ್ ಮೊದಲಿಯಾರ್, ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಸೋಮು ಭಾಸ್ಕರಾಚಾರ್ ಪಾಲ್ಗೊಳ್ಳಲ್ಲಿದ್ದಾರೆ.
ನೀರಾವರಿ ಯೋಜನೆ ಉಡಾಫೆ ಬೇಡ
ಚನ್ನಪಟ್ಟಣ: ಬಯಲು ಸೀಮೆಯ ನೀರಾವರಿ ಯೋಜನೆಗಳ ಬಗ್ಗೆ ರಾಜಕೀಯ ಮುಖಂಡರು ಉಡಾಫೆ ಮಾತು ಬಿಟ್ಟು ಸಮಗ್ರ ನೀರಾವರಿ ಯೋಜನೆಯನ್ನು ಅನುಷ್ಠಾನಗೊಳಿಸುವ ಬದ್ಧತೆ ತೋರಲಿ ಎಂದು ಶಾಸಕ ಸಿ.ಪಿ.ಯೋಗೇಶ್ವರ್ ಸಲಹೆ ನೀಡಿದರು.ತಾಲೂಕಿನ ಕೋಡಂಬಹಳ್ಳಿ ಗ್ರಾಮದಲ್ಲಿ ಹಮ್ಮಿ ಕೊಳ್ಳಲಾಗಿದ್ದ ಕಣ್ವ ಕೋಡಂಬಹಳ್ಳಿ ಏತನೀರಾವರಿ ಯೋಜನೆಗೆ ಚಾಲನೆ ನೀಡಿ ಮಾತನಾಡಿ, ಕುಮಾರಸ್ವಾಮಿ ಹೇಮಾವತಿ ಸಾಧ್ಯವಿಲ್ಲ, ಮೇಕೆದಾಟು, ಸಂಗಮ ಎಂದು ಕೇವಲ ಭಾಷಣ ಮಾಡುವುದರಿಂದ ಬಯಲು ಸೀಮೆಯ ನೀರಾವರಿ ಸಮಸ್ಯೆಗೆ ಪರಿಹಾರ ದೊರಕುವುದಿಲ್ಲ ಎಂದರು. ಮೇಕೆದಾಟುವಿನಿಂದ ತನ್ನಿ ಇಲ್ಲ ಹೇಮಾವತಿಯಿಂದ ಹೇಗೆ ತರಲು ಸಾಧ್ಯ, ಅಲ್ಲಿಂದ ತರಬಹುದು ಇಲ್ಲಿಂದ ತರಬಹುದು ಎಂದು ಕುಮಾರಸ್ವಾಮಿ ಮತ್ತು ಡಿ.ಕೆ.ಶಿವಕುಮಾರ್ ಭಾಷಣ ಮಾಡುವ ಬದಲು ಈ ಭಾಗದ ಜನತೆಗೆ ನೀರಾವರಿ ಸೌಕರ್ಯ ಕಲ್ಪಿಸ ಬೇಕಿರುವುದು ನಮ್ಮ ಕರ್ತವ್ಯ ಎಂಬುದನ್ನು ಅರಿತು ಮಾತನಾಡಲಿ ಎಂದರು. ಆದರೆ ಕಳೆದ ಸಾಲಿನಲ್ಲಿ ನಾವು 300 ಟಿಎಂಸಿಗೂ ಅಧಿಕ ನೀರು ಬಿಟ್ಟಿದ್ದೇವೆ. ಕೆಆರ್ಎಸ್ ಬಿಟ್ಟರೆ ಕಾವೇರಿ ನೀರನ್ನು ಹಿಡಿದಿಟ್ಟು ಕೊಳ್ಳಲು ನಮ್ಮಲ್ಲಿ ಯಾವುದೇ ಅಣೆಕಟ್ಟೆ ಇಲ್ಲವಾಗಿದ್ದು, ತಮಿಳುನಾಡಿನವರು ಹೆಚ್ಚುವರಿ ನೀರನ್ನು ವಿನಾಕಾರಣ ಸಮುದ್ರಕ್ಕೆ ಬಿಡುತ್ತಿದ್ದಾರೆ.
ಚಿರತೆ ದಾಳಿ; 6 ಮೇಕೆ ಸಾವು
ಗೌರಿಬಿದನೂರು: ತಾಲೂಕಿನ ಮಂಚೇನಹಳ್ಳಿ ಹೋಬಳಿಯ ಹಳೇಹಳ್ಳಿ ಗ್ರಾಪಂ ವ್ಯಾಪ್ತಿಯ ದೇವರಕೊಂಡಹಳ್ಳಿ ಗ್ರಾಮದ ಗಂಗರಾಜು ಎಂಬವರ 6 ಮೇಕೆಗಳು ಶನಿವಾರ ರಾತ್ರಿ ಚಿರತೆ ದಾಳಿಗೆ ಬಲಿಯಾಗಿವೆ. ಮಧ್ಯರಾತ್ರಿ ಮೇಕೆ ಕಟ್ಟುವ ಮನೆಗೆ ಬೆಳಕು ಬರಲು ನಿರ್ಮಿಸಿದ್ದ ಕಿಂಡಿಯ ಕಲ್ಲು ದಬ್ಬಿ ಮೇಕೆಗಳ ಕೊರಳು ಕಚ್ಚಿ ಸಾಯಿಸಿ, ಮಾಂಸ ತಿಂದು, ಪುಟ್ಟ ಮರಿಗಳನ್ನು ಹೊತ್ತೊಯ್ದಿರುವುದಾಗಿ ಮಾಲಿಕರು ತಿಳಿಸಿದ್ದಾರೆ. ಪ್ರತಿ ವರ್ಷ ಗ್ರಾಮದ ಹಲವಾರು ದನ, ಕುರಿ, ಮೇಕೆಗಳು ಚಿರತೆ ದಾಳಿಗೆ ಬಲಿಯಾಗುತ್ತಿದ್ದು, ಅರಣ್ಯ ಇಲಾಖೆ ನಿರ್ಲಕ್ಷ್ಯ ವಹಿಸಿದೆ ಎಂದು ನಾಗರಿಕರು ಆಕ್ರೋಶ ವ್ಯಕ್ತಡಿಸಿದ್ದಾರೆ. ಈ ಬಗ್ಗೆ ಹಲವು ಬಾರಿ ದೂರು ನೀಡಿದ್ದರು ಅರಣ್ಯ ಇಲಾಖೆ ಚಿರತೆ ಹಿಡಿಯುವ ಕಾರ್ಯಕ್ಕೆ ಮುಂದಾಗದೆ ಕಣ್ಮುಚ್ಚಿ ಕುಳಿತಿದ್ದು ಈಗಲಾದರೂ ಚಿರತೆ ಹಿಡಿಯಲು ಸಂಬಂಧಪಟ್ಟ ಅಧಿಕಾರಿಗಳು ಕ್ರಮಕೈಗೊಳ್ಳಬೇಕೆಂದು, ಮೇಕೆ ಕಳೆದುಕೊಂಡಿರುವ ಬಡ ರೈತನಿಗೆ ಪರಿಹಾರ ಕೊಡಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಸ್ಥಳಕ್ಕೆ ಪಿಎಸ್ಐ ಸುಂದರ್, ಪಶು ವೈಧ್ಯಧಿಕಾರಿ ಡಾ. ಬಾಬು, ಅರಣ್ಯಾಧಿಕಾರಿ, ಶ್ರೀನಿವಾಸ್ ಭೇಟಿ ನೀಡಿದ್ದರು.
ಸಂಯುಕ್ತ ಜನತಾದಳದಿಂದ ಪ್ರತಿಭಟನೆಗೆ ಬೆಂಬಲ
ಗೌರಿಬಿದನೂರು: ಸೋಮವಾರ ಚಿಕ್ಕಬಳ್ಳಾಪುರ ಜಿಲ್ಲಾ ಶಾಶ್ವತ ನೀರಾವರಿ ವೇದಿಕೆ ಹಮ್ಮಿಕೊಂಡಿರುವ ಕಾರ್ಯಕ್ರಮಕ್ಕೆ ಸ್ವಾಗತ ಬಯಸುತ್ತಾ ಪಕ್ಷದ ಜಿಲ್ಲಾ ಘಟಕ ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತದೆ ಎಂದು ಸಂಯುಕ್ತ ಜನತಾದಳದ ಜಿಲ್ಲಾ ಸಂಚಾಲಕ ಕೆ.ವಿ. ಸದಾಶಿವಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಚಿಕ್ಕಬಳ್ಳಾಪರದಲ್ಲಿ 3 ರಂದು ಮುಖ್ಯಮಂತ್ರಿಗಳು ಶಿಲಾನ್ಯಾಸ ಕಾರ್ಯಕ್ರಮಕ್ಕೆ ಬರುತ್ತಿರುವ ವೇಳೆ ಚಿಕ್ಕಬಳ್ಳಾಪುರ ಶಾಶ್ವತ ನೀರಾವರಿ ವೇದಿಕೆ ಹಮ್ಮಿಕೊಂಡಿರುವ ಪ್ರತಿಭಟನಾ ರ್ಯಾಲಿಗೆ ಚಿಕ್ಕಬಳ್ಳಾಪುರ ಜಿಲ್ಲಾ ಜನತಾದಳ (ಸಂಯುಕ್ತ) ಪಕ್ಷ ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತದೆ ಎಂದಿದ್ದಾರೆ.
ಎಪಿಎಂಸಿಯಲ್ಲಿ ಬೈರೇಗೌಡ ಕೃಷಿ ಸಂಕೀರ್ಣ ಉದ್ಘಾಟನೆ
ಕೋಲಾರ: ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣದಲ್ಲಿ ಮಾ.4ರ ಮಂಗಳವಾರ ಬೆಳಿಗ್ಗೆ 11.30ಕ್ಕೆ ಜಿಲ್ಲಾ ಕೃಷಿಕ ಸಮಾಜ ನಿರ್ಮಿಸಿರುವ ಸಿ. ಬೈರೇಗೌಡ ಕೃಷಿ ಸಂಕೀರ್ಣದ ಉದ್ಘಾಟನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.
ಇದೇ ಸಂದರ್ಭದಲ್ಲಿ ಕಣಷಿ, ತೋಟಗಾರಿಕೆ, ರೇಷ್ಮೆ ಮತ್ತು ಪಶುಪಾಲನಾ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಮಾಹಿತಿ ಆಂದೋಲನ ಮತ್ತು ವಸ್ತು ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ಅಧ್ಯಕ್ಷ ಹಾಗೂ ರಾಜ್ಯ ಕೃಷಿ ಸಚಿವ ಕೃಷ್ಣಬೈರೇಗೌಡರು ಕೃಷಿ ಸಂಕೀರ್ಣದ ಉದ್ಘಾಟನೆ ನೆರವೇರಿಸುವರು. ಸಮಾರಂಭವನ್ನು ಕೇಂದ್ರ ಸಚಿವ ಕೆ.ಹೆಚ್. ಮುನಿಯಪ್ಪ ಉದ್ಘಾಟಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಭಾಗವಹಿಸಲಿದ್ದು, ಶಾಸಕ ವರ್ತೂರು ಪ್ರಕಾಶ್ ಅಧ್ಯಕ್ಷತೆ ವಹಿಸುವರು ಎಂದು ಕೋಲಾರ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ವಡಗೂರು ಡಿ.ಎಸ್. ನಾಗರಾಜು ತಿಳಿಸಿದ್ದಾರೆ.
ಇಂದು ಡಿಸಿಸಿ ಬ್ಯಾಂಕ್ ಚುನಾವಣೆಯ ಮತ ಎಣಿಕೆ
ಕೋಲಾರ: ರಾಜ್ಯ ಉಚ್ಚ ನ್ಯಾಯಾಲಯದ ನಿರ್ದೇಶನದಂತೆ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ನ ಚುನಾವಣೆಯ ಮತ ಎಣಿಕೆ ಕಾರ್ಯ ಮಾ.3ರಂದು ಬೆಳಿಗ್ಗೆ 10 ಗಂಟೆಗೆ ಕೋಲಾರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಸಭಾಂಗಣದಲ್ಲಿ ನಿಗದಿಪಡಿಸಲಾಗಿದೆ ಎಂದು ಚುನಾವಣಾಧಿಕಾರಿಗಳಾದ ಕೋಲಾರ ಉಪವಿಭಾಗಾಧಿಕಾರಿ ಸಿ.ಎನ್. ಮಂಜುನಾಥ್ ತಿಳಿಸಿದ್ದಾರೆ.
ಎತ್ತಿನ ಹೊಳೆ ಯೋಜನೆ ವಿರೋಧಿಸಿ ಇಂದು ಪ್ರತಿಭಟನೆ
ಕೋಲಾರ: ಪರಮಶಿವಯ್ಯ ವರದಿಯಾಧಾರಿತ ಶಾಶ್ವತ ನೀರಾವರಿ ಯೋಜನೆ ಅನುಷ್ಠಾನಗೊಳಿಸದೆ ಚುನಾವಣೆಯನ್ನು ಮುಂದಿಟ್ಟುಕೊಂಡು ಎತ್ತಿನಹೊಳೆ ಯೋಜನೆಯ ಶಂಕುಸ್ಥಾಪನೆ ಮಾಡಲು ಸರ್ಕಾರ ಮುಂದಾಗಿದೆ ಎಂದು ಆರೋಪಿಸಿ ರೈತ ಸಂಘದಿಂದ ಮಾ.3ರಂದು ಪ್ರತಿಭಟನೆ ಹಮ್ಮಿಕೊಂಡಿದೆ.
ನೇತ್ರ ರಕ್ಷಣೆ ಬಗ್ಗೆ ಉಪನ್ಯಾಸ
ಕೋಲಾರ: ಜಿಲ್ಲಾ ನಿವೃತ್ತ ನೌಕರರ ಸಂಘದ ವತಿಯಿಂದ ಮಾ. 5 ರಂದು ಬುಧವಾರ ಬೆಳಿಗ್ಗೆ 11 ಗಂಟೆಗೆ ಸರ್ಕಾರಿ ನೌಕರರ ಆವರಣದಲ್ಲಿರುವ ನಿವೃತ್ತ ನೌಕರರ ಸಂಘದಲ್ಲಿ ನೇತ್ರ ರಕ್ಷಣೆ ಬಗ್ಗೆ ಉಪನ್ಯಾಸವನ್ನು ಆಯೋಜಿಸಲಾಗಿದೆ.
ವಿವೇಕ್ ನೇತ್ರಾಲಯದ ವತಿಯಿಂದ ಡಾ.ಹೆಚ್.ಆರ್. ಮಂಜುನಾಥ್ ಉಪನ್ಯಾಸ ನೀಡುವರು. ಈ ಕಾರ್ಯಕ್ರಮಕ್ಕೆ ಎಲ್ಲಾ ನಿವೃತ್ತ ನೌಕರರು ಹಾಜರಾಗಿ ನೇತ್ರ ರಕ್ಷಣೆ ಬಗ್ಗೆ ತಿಳಿದುಕೊಳ್ಳಬೇಕೆಂದು ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಎ. ಜಯರಾಮರೆಡ್ಡಿ ತಿಳಿಸಿದ್ದಾರೆ.