ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಶಾಸಕ ವರ್ತೂರ್ ಪ್ರಕಾಶ್ ಗೈರು

Vishwanath S
Updated On : 6 Mar 2014, 12:51 pm

ಕ.ಪ್ರ.ವಾರ್ತೆ ,  ಕೋಲಾರ ,  ಮಾ.5
ರೇಲ್ವೆ ಕೋಚ್ ಕಾರ್ಖಾನೆಗೆ ಶಂಕುಸ್ಥಾಪನೆ ನೆರವೇರಿಸಲು ಶ್ರೀನಿವಾಸಪುರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ದೊಡ್ಡ ಪ್ರಮಾಣದ ಕಾರ್ಯಕ್ರಮಕ್ಕೆ ಮಾಜಿ ಸಚಿವ, ಕೋಲಾರ ಕ್ಷೇತ್ರದ ಶಾಸಕ ವರ್ತೂರ್ ಪ್ರಕಾಶ್ ಗೈರು ಹಾಜರಾಗಿದ್ದರು.
ಕಳೆದ ವರ್ಷ ಮಾಧ್ಯಮ ಅಕಾಡೆಮಿಯಿಂದ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ಹಾಗೂ ಮಾಧ್ಯಮಗಳ ಬಗ್ಗೆ ಅಪಸ್ವರ ಎತ್ತಿ ಟೀಕೆಗೆ ಗುರಿಯಾಗಿದ್ದ ವರ್ತೂರ್ ಪ್ರಕಾಶ್ ಅಂದಿನಿಂದ ಬಹುತೇಕ ಸರ್ಕಾರಿ ಕಾರ್ಯಕ್ರಮಗಳಿಂದ ದೂರ ಉಳಿದಿದ್ದಾರಷ್ಟೇ ಅಲ್ಲದೆ, ಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಸಚಿವ ಸಂಪುಟದ ಕೆಲ ಪ್ರಮುಖ ಸಚಿವರು ಕೋಲಾರಕ್ಕೆ ಭೇಟಿ ನೀಡಿದ್ದರೂ ಸಭೆಗಳಿಗೆ ಹಾಜರಾಗದೆ ಮುನಿಸಿಕೊಂಡಿದ್ದಾರೆ.
ಮಂಗಳವಾರ ಎಪಿಎಂಸಿಯಲ್ಲಿ ನಡೆದ ಸಿ. ಬೈರೇಗೌಡ ಕೃಷಿ ಸಂಕೀರ್ಣದ ಉದ್ಘಾಟನೆಗೆ ಹಾಜರಾಗುವ ಮೂಲಕ ಅಚ್ಚರಿ ಮೂಡಿಸಿದ್ದ ವರ್ತೂರ್ ಪ್ರಕಾಶ್, ಅಪ್ಪಿ ತಪ್ಪಿ ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ವಿರುದ್ಧ ಮಾತನಾಡಲಿಲ್ಲ. ಆದರೆ, ಲೋಕಸಭೆಗೆ ಸ್ಪರ್ಧಿಸಬೇಡಿ, ಕೃಷಿ ಸಚಿವರಾಗಿಯೇ ಕಾರ್ಯನಿರ್ವಹಿಸಿ ಎಂದು ಸಚಿವ ಕೃಷ್ಣಬೈರೇಗೌಡರಿಗೆ ಮನವಿ ಮಾಡಿದ್ದು ಏಕೆ ಎಂಬುದು ಯಕ್ಷ ಪ್ರಶ್ನೆಯಾಗಿದೆ.
ರೇಲ್ವೆ ಕೋಚ್ ಕೇವಲ ಶ್ರೀನಿವಾಸಪುರ ಕ್ಷೇತ್ರಕ್ಕೆ ಸಂಬಂಧಿಸಿಲ್ಲ, ಇಡೀ ಜಿಲ್ಲೆಗೆ ಬೇಕಾದ ಯೋಜನೆಯಾಗಿದ್ದರೂ ವರ್ತೂರ್ ಪ್ರಕಾಶ್ ಶಂಕುಸ್ಥಾಪನಾ ಸಮಾರಂಭದತ್ತ ಮುಖ ಮಾಡಲಿಲ್ಲ. ಒಂದು ಕಾಲದಲ್ಲಿ ಸಿದ್ದರಾಮಯ್ಯ ನನ್ನ ರಾಜಕೀಯ ಗುರು, ಈ ರಾಜ್ಯದ ಮುಖ್ಯಮಂತ್ರಿ ಆಗುವುದಕ್ಕೆ ಎಲ್ಲಾ ರೀತಿಯ ಅರ್ಹತೆ ಇದೆ. ಕುರುಬನೊಬ್ಬ ರಾಜ್ಯವನ್ನು ಅಳಬೇಕೆಂದು ಹೇಳುತ್ತಿದ್ದ ವರ್ತೂರ್ ಪ್ರಕಾಶ್ ಬಿಜೆಪಿಯ ಸಹವಾಸ ಮಾಡಿದ ಬಳಿಕ ಗಾಡ್ ಪಾದರ್‌ನಿಂದ ದೂರವಾಗಿದ್ದಾರೆ.
ಕೋಲಾರ ಜಿಲ್ಲೆಗೆ ಸಿದ್ದರಾಮಯ್ಯ ಈ ವರ್ಷದಲ್ಲಿ ಎರಡು ಬಾರಿ ಬಂದು ಹೋದರು ಸ್ವಾಗತಕ್ಕೂ ಹಾಜರಾಗದೆ ದೂರ ಉಳಿದಿರುವುದು ಚರ್ಚೆಗೆ ಗ್ರಾಸವಾಗಿದೆ. ಬುಧವಾರ ರೇಲ್ವೆ ಕೋಚ್ ಶಂಕುಸ್ಥಾಪನಾ ಸಮಾರಂಭಕ್ಕೆ ಶಾಸಕ ವರ್ತೂರ್ ಪ್ರಕಾಶ್ ಹೊರತುಪಡಿಸಿ ಉಳಿದ ಎಲ್ಲಾ ಶಾಸಕರು ಹಾಜರಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬೆಳಗಾವಿಗೆ ಹೋಗಬೇಕಾಗಿದ್ದ ಹಿನ್ನಲೆಯಲ್ಲಿ ತರಾತುರಿಯಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಕೇವಲ 7-8 ನಿಮಿಷ ಮಾತ್ರ ಮಾತನಾಡಿ ನಿರ್ಗಮಿಸಿದರು.
ಶ್ರೀನಿವಾಸಪುರಕ್ಕೆ 8.45ಕ್ಕೆ ಆಗಮಿಸಿ 9 ಗಂಟೆಗೆ ವೇದಿಕೆ ಕಾರ್ಯಕ್ರಮ ಮುಗಿಸಿ ಬೆಳಗಾವಿಗೆ ತೆರಳಬೇಕಾಗಿದ್ದ ಮುಖ್ಯಮಂತ್ರಿಗಳು ಹವಾಮಾನ ವೈಪರಿತ್ಯದಿಂದಾಗಿ 9.56 ಗಂಟೆಗೆ ಆಗಮಿಸಿದರು, 10.02ಕ್ಕೆ ಹೆಲಿಪ್ಯಾಡ್‌ನಿಂದ ವೇದಿಕೆಗೆ ಆಗಮಿಸಿದ ಇವರು ನಾಡಗೀತೆ, ಸ್ವಾಗತದ ನಂತರ ಕಾರ್ಯಕ್ರಮ ಉದ್ಘಾಟಿಸಿದರಲ್ಲದೆ, ರಿಮೋಟ್‌ನಿಂದ ಕೋಚ್ ಫ್ಯಾಕ್ಟರಿಗೆ ಶಿಲಾನ್ಯಾಸ ನೆರವೇರಿಸಿ ತಕ್ಷಣ ಭಾಷಣ ಆರಂಭಿಸಿ, ಪಟಪಟನೆ ಏಳೆಂಟು ನಿಮಿಷ ಮಾತನಾಡಿ 10.25ಕ್ಕೆ ವೇದಿಕೆಯಿಂದ ನಿರ್ಗಮಿಸಿ ತಾತ್ಕಾಲಿಕ ಹೆಲಿಪ್ಯಾಡ್‌ನಲ್ಲೇ ಪೊಲೀಸ್ ವಂದನೆ ಸ್ವೀಕರಿಸಿ 10.30ಕ್ಕೆ ಅದೇ ಹೆಲಿಕ್ಯಾಪ್ಟರ್‌ನಲ್ಲಿ ಬೆಳಗಾವಿ ಕಡೆಗೆ ಹೊರಟರು.
ಏನಾದರೂ ಬ್ರೇಕ್ಕಿಂಗ್ ನ್ಯೂಸ್ ಸಿಗಬಹುದೆಂದು ಕಾಯುತ್ತಿದ್ದ ಪತ್ರಕರ್ತರು ಸಿಎಂ ಅವರನ್ನು ಮಾತನಾಡಿಸಲಾಗದೆ ನಿರಾಸೆ ಪಡುವಂತಾಯಿತು, ಸಿಎಂ ಅವರನ್ನು ಸನ್ಮಾನಿಸಲು ಆಳೆತ್ತರದ ಹಾರ ತುರಾಯಿಗಳನ್ನು ತಂದಿದ್ದ ಅನೇಕರು ಬಂದ ದಾರಿಗೆ ಸುಂಕವಿಲ್ಲವೆಂಬಂತೆ ವಾಪಸ್ ಹೋದರು.
ಸಿಎಂ ನಿರ್ಗಮಿಸಿದ ಬಳಿಕ ಕೃಷಿ ಸಚಿವ ಕೃಷ್ಣಬೈರೇಗೌಡರು ನಿರ್ಗಮಿಸಿದರು. ಆದರೆ, ಈ ಬಾರಿಯ ವಿಶೇಷವೆಂದರೆ ಅನೇಕ ವರ್ಷಗಳಿಂದ ಕೃಷ್ಣಬೈರೇಗೌಡ ಮತ್ತು ಕೇಂದ್ರ ಸಚಿವ ಮುನಿಯಪ್ಪ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿರಲಿಲ್ಲ. ಇದಕ್ಕೆ ರಾಜಕಾರಣವೇ ಕಾರಣ. ರೇಲ್ವೆ ಕೋಚ್‌ಗೆ ಶಂಕುಸ್ಥಾಪನೆಗಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಸಚಿವ ಕೃಷ್ಣಬೈರೇಗೌಡ ಬರುವ ನಿರೀಕ್ಷೆ ಇರಲಿಲ್ಲ. ಆದರೆ ಜಿಲ್ಲೆಯ ಎಲ್ಲಾ ಶಾಸಕರನ್ನು ಜೊತೆಗೆ ಜಿಲ್ಲೆಯವರೇ ಆಗಿರುವ ಸಚಿವ ಕೃಷ್ಣಬೈರೇಗೌಡವನ್ನು ವೇದಿಕೆಗೆ ಕರೆತರಬೇಕೆಂದು ಶಾಸಕ ರಮೇಶ್ ಕುಮಾರ್ ನಡೆಸಿದ ಪ್ರಯತ್ನ ಫಲಿಸಿತು. ಸಿಎಂ ಹೋಗುವ ತನಕ ಇದ್ದ ಕೃಷ್ಣಬೈರೇಗೌಡರು ನಂತರ ಕಾಣಿಸಲಿಲ್ಲ. ಆದರೆ, ಉದ್ಘಾಟನೆಯ ಸಮಯದಲ್ಲಿ ಜ್ಯೋತಿ ಬೆಳಗಿಸಲು ಕೃಷ್ಣಬೈರೇಗೌಡರನ್ನು ಕೈಹಿಡಿದು ಕರೆಯುವ ಮೂಲಕ ಕೇಂದ್ರ ಸಚಿವ ಮುನಿಯಪ್ಪ ತಮ್ಮ ಹಾಗೂ ಕೃಷ್ಣಬೈರೇಗೌಡ ನಡುವೆ ಯಾವುದೇ ಭಿನ್ನಮತ ಇಲ್ಲವೆಂಬುದು ನೆರದಿದ್ದ ಜನತೆಗೆ ಅರ್ಥ ಮಾಡಿಸಲು ಪ್ರಯತ್ನಿಸಿದರಾದರೂ ಕಾಲಾವಕಾಶದ ಕೊರತೆಯಿಂದ ಸಾಧ್ಯವಾಗಿಲಿಲ್ಲ.
ಮಾಲೂರು ಜೆಡಿಎಸ್ ಶಾಸಕ ಕೋಡಿಹಳ್ಳಿ ಮಂಜುನಾಥಗೌಡ ಸಿಎಂ ನಿರ್ಗಮದ ನಂತರ ಪ್ರವೇಶ ಮಾಡಿದರು. ಕೇಂದ್ರ ಸಚಿವ ಮುನಿಯಪ್ಪ ಅವರೊಂದಿಗೆ ಲೋಕಾಭಿರಾಮವಾಗಿ ಮಾತನಾಡಿದರು. ಇದೇ ವೇದಿಕೆಯಲ್ಲಿ ಬಿಜೆಪಿ ಇಬ್ಬರು ಎಂಎಲ್ಸಿಗಳಾದ ವೈ.ಎ. ನಾರಾಯಣಸ್ವಾಮಿ, ಡಿ.ಎಸ್. ವೀರಯ್ಯ ರಾರಾಜಿಸಿದರು. ಕೆಜಿಎಫ್ ಶಾಸಕಿ ಬಿಜೆಪಿಯ ವೈ. ರಾಮಕ್ಕ ಬಂದಿದ್ದರು.
 ರಾಮಕ್ಕನವರನ್ನು ಬೀಳ್ಕೊಡುವುದಕ್ಕೆ ಮುನ್ನ ಶಾಸಕ ರಮೇಶ್ ಕುಮಾರ್ ಕೈಹಿಡಿದು ನಮಸ್ಕರಿಸಿ ಗೌರವ ತೋರಿದರು. ಕಾರ್ಯಕ್ರಮಕ್ಕೆ ಕೋಲಾರ ಶಾಸಕ ವರ್ತೂರ್ ಪ್ರಕಾಶ್ ಹೊರತುಪಡಿಸಿ ಬಹುತೇಕ ಎಲ್ಲಾ ಜನಪ್ರತಿನಿಧಿಗಳು ಬಂದಿದ್ದರಿಂದ ಕೇಂದ್ರ ಸಚಿವ ಮುನಿಯಪ್ಪ ಮುಖದಲ್ಲಿ ಮಂದಹಾಸ ಗೋಚರಿಸಿತು.
ಅಭಿವೃದ್ಧಿಗಾಗಿ ಭೂಮಿ ತ್ಯಾಗ ಮಾಡಿ; ಸಿಎಂ
ಶ್ರೀನಿವಾಸಪುರ: ರೇಲ್ವೆ ಕೋಚ್ ಫ್ಯಾಕ್ಟರಿ ಪ್ರಾರಂಭಿಸಲು ಈ ಭಾಗದ ರೈತರು ತಮ್ಮ ಜಮೀನನ್ನು ತ್ಯಾಗ ಮಾಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮನವಿ ಮಾಡಿದರು. ತಾಲೂಕಿನ ಯಲ್ದೂರು ಹೋಬಳಿಯ ಯದರೂರು ಗ್ರಾಮದ ಬಳಿ ರೇಲ್ವೆ ಕೋಚ್ ಫ್ಯಾಕ್ಟರಿ ಉದ್ಘಾಟನೆ ನೆರವೇರಿಸಿ ಮಾತನಾಡಿ, ಇಲ್ಲಿ ರೇಲ್ವೆ ಕೋಚ್ ಫ್ಯಾಕ್ಟರಿ ಪ್ರಾರಂಭಿಸಬೇಕಾದರೆ 1,218 ಎಕರೆ ಜಮೀನುಬೇಕಾಗಿದೆ. ಸರ್ಕಾರಿ ಗೋಮಾಳ 568 ಎಕರೆ ಜಮೀನಿದ್ದು, ಇನ್ನುಳಿದ ಜಮೀನನ್ನು ಅಕ್ಕ-ಪಕ್ಕದ ರೈತರಿಂದ ಸ್ವಾದೀನ ಪಡಿಸಿಕೊಳ್ಳಬೇಕಾಗಿರುವುದರಿಂದ ರೈತರು ಸಹಕರಿಸಬೇಕಾಗಿದೆ ಎಂದರು.
ಮೊಕದ್ದಮೆ ದಾಖಲಿಸಿದವರಿಗಾಗಿ ಆಸ್ಪತ್ರೆ
ಶ್ರೀನಿವಾಸಪುರ: ನನ್ನ ಮೇಲೆ ಆರೋಪ ಮಾಡುವ ಮತ್ತು ಸುಳ್ಳು ಮೊಕದ್ದಮೆಗಳನ್ನು ದಾಖಲಿಸಿರುವವರೆಲ್ಲಾ ಇಲ್ಲಿ ಬಂದು ಸಾಯಲಿ ಎಂದು 300 ಬೆಡ್‌ಗಳ ಅಸ್ಪತ್ರೆ ಮತ್ತು ಮೆಡಿಕಲ್ ಕಾಲೇಜು ನಿರ್ಮಿಸಿಕೊಡಲಾಗುವುದೆಂದು ಶಾಸಕ ಕೆ.ಆರ್. ರಮೇಶ್ ಕುಮಾರ್ ಹೇಳಿದರು. ತಾಲೂಕಿನ ಯಲ್ದೂರು ಹೋಬಳಿಯ ಯದರೂರು ಗ್ರಾಮದ ಬಳಿ ರೇಲ್ವೆ ಕೋಚ್ ಫ್ಯಾಕ್ಟರಿ ಶಂಕು ಸ್ಥಾಪನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೋಲಾರ ಜಿಲ್ಲೆಯಲ್ಲಿ ರೇಲ್ವೆ ಕೋಚ್ ಫ್ಯಾಕ್ಟರಿ ಆಗುವುದಕ್ಕೆ ಸಹಕಾರ ನೀಡಿದ ಕೆ.ಎಚ್. ಮುನಿಯಪ್ಪ ಅವರನ್ನು ಮುಂದಿನ ಚುನಾವಣೆಯಲ್ಲಿ ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು  ಭವಿಷ್ಯ ನುಡಿದರು. ನನ್ನ ಮತದಾರರು ಸಾರಾಯಿಗೆ ಮತ್ತು ಹಣಕ್ಕೆ ಕಾಯುವುದಿಲ್ಲ. ನಾನು ಕರೆ ಕೊಟ್ಟರೆ ಸಾಗರೋಪಾದಿಯಲ್ಲಿ ಹರಿದು ಬರುತ್ತಾರೆ. ರೇಲ್ವೆ ಕೋಚ್ ಫ್ಯಾಕ್ಟರಿಗೆ ಭೂಮಿ ನೀಡುವ ರೈತರಿಗೆ ಸೂಕ್ತ ಪರಿಹಾರ ನೀಡಲಾಗುತ್ತಿದೆ ಎಂದು ಹೇಳಿದರು. ಪರಮಶಿವಯ್ಯ ವರದಿಯಲ್ಲಿ ಕೆಲವೊಂದು ಲೋಪದೋಷಗಳ ಗೊಂದಲಗಳುಂಟಾಗಿದ್ದಕ್ಕೆ ಆದನ್ನು ಪುನರ್ ರಚಿಸುವಂತೆ ಆದೇಶಿಸಿ ಎತ್ತಿನ ಹೊಳೆ ಯೋಜನೆಗೆ ಶಂಕು ಸ್ಥಾಪನೆ ನೆರವೇರಿಸಿದ್ದೇವೆ. ಜಿಲ್ಲೆಯಲ್ಲಿ 500 ಕೆರೆಗಳಿಗೂ ನೀರನ್ನು ತುಂಬುವ ಕಾರ್ಯ ಮಾಡುತ್ತೇವೆಂದು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement