ಸಾಹಿತ್ಯಕ್ಕೆ ಉಭಯ ಜಿಲ್ಲೆಗಳ ಕೊಡುಗೆ ಅಪಾರ
ಶಿಡ್ಲಘಟ್ಟ: ಕನ್ನಡ ಸಾಹಿತ್ಯ ಲೋಕಕ್ಕೆ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಕೊಡುಗೆ ಗಣನೀಯವಾದ ಸೇವೆ ನೀಡಿದೆ ಎಂದು ಪ್ರವಚನಕಾರ ತಳಗವಾರ ಟಿ.ಎಲ್. ಆನಂದ್ ಅಭಿಪ್ರಾಯಪಟ್ಟರು.
ನಾಲ್ಕನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಜಿಲ್ಲೆಯ ಕೊಡುಗೆ ಬಗ್ಗೆ ವಿಷಯ ಮಂಡಿಸಿ, ಐತಿಹಾಸಿಕ ಹಾಗೂ ಸಾಂಸ್ಕೃತಿಕವಾಗಿ ಮಹತ್ವ ಪಡೆದಿರುವ ಶಾಸನಗಳು ಜಿಲ್ಲೆಯ ಸಾಹಿತ್ಯ ಪರಂಪರೆ ಆರಂಭಗೊಳಿಸುತ್ತವೆ. ಎರಡು ಜಿಲ್ಲೆಗಳಲ್ಲಿ ಒಟ್ಟು 1,347 ಶಾಸನಗಳು ದೊರೆತಿದ್ದರೂ ಮಾಹಿತಿ ಸಿಕ್ಕಿರುವುದು ಬೆರಳಣಿಕೆಯಷ್ಟು. ಚಿಂತಾಮಣಿ ಕುರುಬೂರು ಸೋಮೇಶ್ವರ ದೇವಾಲಯದಲ್ಲಿರುವ ಶಾಸನ ಬರೆದಿರುವ ಕಬ್ಬದ ನಾಗಮಯ್ಯನೇ ಜಿಲ್ಲೆಯ ಅತ್ಯಂತ ಪ್ರಾಚೀನ ಶಾಸನ ಕವಿ ಎಂದರು.
ವಿಜಯನಗರ ಆಳ್ವಿಕೆ ಕಾಲದಲ್ಲಿ ಶಾಸನ ಕವಿಗಳಿಗೆ ಹೆಚ್ಚಿನ ಪ್ರೋತ್ಸಾನವಿದ್ದು, ಆಗ ಹಲವಾರು ಶಾಸನ ಕವಿಗಳು ಸಾಹಿತ್ಯ ರಚನೆಯಲ್ಲಿ ತೊಡಗಿದ್ದರೆಂಬುದು ಶಾಸನಗಳ ಅಧ್ಯಯನದಿಂದ ತಿಳಿಯುತ್ತದೆ. ಭಾಷೆಯ ಮುಖ್ಯ ಕರ್ತವ್ಯವೆಂದರೆ ಜನತೆಯಲ್ಲಿ ಶಾಂತಿ ಕಾಪಾಡಿ ಸಾಮರಸ್ಯ ಬೆಳೆಸಬೇಕು. ಕನ್ನಡ ಮತ್ತು ತೆಲುಗು ಭಾಷೆಗಳೆರಡನ್ನೂ ಸುಲಲಿತವಾಗಿ ಮಾತನಾಡುವ ಜಿಲ್ಲೆಯ ಬಹುತೇಕ ಜನರು ತಮ್ಮ ಭಾಷಾ ಬಾಂಧವ್ಯದ ಹಿರಿಮೆ ಮೆರೆಸಿರುತ್ತಾರೆ ಎಂದರು.
ಮಳ್ಳೂರು ಸಿ.ಪಿ. ಹರೀಶ್ ನೀರಾವರಿ ಸ್ಥಿತಿಗತಿಯ ಬಗ್ಗೆ ವಿಷಯ ಮಂಡನೆ ಮಾಡಿದರು. ಪ್ರಾಂಶುಪಾಲ ಕೆ. ಮಹದೇವ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಮಳ್ಳೂರಿನ ಬೈರೇಗೌಡ, ಎಲುವಳ್ಳಿ ಸೊಣ್ಣೇಗೌಡ ಇದ್ದರು. ಮಳ್ಳೂರು ಸಿ.ಪಿ. ಹರೀಶ್ ಮತ್ತು ಪ್ರವಚನಕಾರ ಆನಂದ್ರನ್ನು ಸಮ್ಮೇಳನಾಧ್ಯಕ್ಷ ಡಾ.ಡಿ.ಟಿ. ಸತ್ಯನಾರಾಯಣರಾವ್ ಅವರು ಸನ್ಮಾನಿಸಿದರು.
ಶಾಶ್ವತ ನೀರಾವರಿ ಚರ್ಚೆ
ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಬದಲ್ಲಿ ಶಾಶ್ವತ ನೀರಾವರಿ ಬಗ್ಗೆ ಸುದೀರ್ಘ ಚರ್ಚೆ ಮಾಡಲಾಯಿತು. 4 ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಡೆದ ವಿಚಾರ ಗೋಷ್ಠಿಯಲ್ಲಿ ಮಳ್ಳೂರು ಹರೀಶ್ ಶಾಶ್ವತ ನೀರಾವರಿ ಹೋರಾಟದ ಅಗತ್ಯಗಳ ಬಗ್ಗೆ ಜಿಲ್ಲೆಯ ಅಂತರ್ಜಲ ಕಲುಷಿತಗೊಂಡ ಬಗ್ಗೆ ಮಾತನಾಡಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ ಕೆ. ಮಹದೇವ್, ಕನ್ನಡ ನಾಡು ನುಡಿಯ ಇತಿಹಾಸದ ಬಗ್ಗೆ ವಿವರಿಸಿದರು. ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಮಹಮ್ಮದ್ ಖಾಸಿಂ ಅಧ್ಯಕ್ಷತೆಯಲ್ಲಿ 15 ಮಂದಿ ಯುವಕವಿಗಳ ಪ್ರಚಲಿತ ವಿದ್ಯಮಾನಗಳ ಬಗ್ಗೆ ಕವನ ವಾಚನ ಮಾಡಿದರು. ಕ್ಷೇತ್ರ ಶಿಕ್ಷಣಾದಿಕಾರಿ ರಘುನಾಥರೆಡ್ಡಿರವರ ಅಧ್ಯಕ್ಷತೆಯಲ್ಲಿ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷರಾದ ಸುಬಾನ್ಪ್ರಿಯ ಮತ್ತು ವೈ.ಎನ್. ದಾಶರತಿರನ್ನು ಸನ್ಮಾನಿಸಲಾಯಿತು. ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಬೈರೆಗೌಡ, ಕೆ. ನಾಗರಾಜ್, ಸಿದ್ದಪ್ಪ, ಶ್ರೀನಿವಾಸ್, ಉಷಾ ಎಸ್. ನಾಗರಾಜ್, ಬಿ.ಪಿ. ರಾಘವೇಂದ್ರರನ್ನು ಸನ್ಮಾನಿಸಲಾಯಿತು. ಸಾಹಿತ್ಯ ಸಮ್ಮೇಳನದಲ್ಲಿ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಅಕ್ರಮ ಮರಳು ಫಿಲ್ಟರಿಂಗ್ ಕೇಂದ್ರಗಳ ನಾಶ: ಲಾರಿ ವಶ
ಮುಳಬಾಗಲು: ಕೋಲಾರ ಜಿಲ್ಲಾ ಅಕ್ರಮ ಮರಳು ಸಾಗಣಿಕೆ ತಂಡ ವಿವಿಧ ಕಡೆ ದಾಳಿ ನಡೆಸಿ ಫಿಲ್ಟರಿಂಗ್ ಕೇಂದ್ರಗಳು ನಾಶ ಪಡಿಸಿ, ಎರಡು ಲಾರಿ, ಒಂದು ಟ್ರ್ಯಾಕ್ಟರ್ ವಶಪಡಿಸಿಕೊಂಡರು. ದೊಡ್ಡವಲ್ಲಭಿ ಗ್ರಾಮದ ಬಳಿ 30 ಅಕ್ರಮ ಮರಳು ಫಿಲ್ಟರಿಂಗ್ ಕೇಂದ್ರಗಳು, 10 ಮೋಟರ್ಗಳನ್ನು ನಾಶಪಡಿಸಿದರು. ದಾಳಿಯಲ್ಲಿ ವಾಸಿಮ್, ನವಾಜ್, ಹಸೀಮ್, ಲಕ್ಷ್ಮಿಶ್ ಮುಂತಾದವರು ಭಾಗವಹಿಸಿದ್ದರು.
ಮಾಲೂರು ತಾಲೂಕು ಪಂಚಾಯ್ತಿ ಅಧ್ಯಕ್ಷರ ಆಯ್ಕೆ
ಮಾಲೂರು: ಇಲ್ಲಿನ ತಾಪಂ ಅಧ್ಯಕ್ಷರಾಗಿ ಎಂ.ಆಶಾ ರಾಜಪ್ಪ ಅವಿರೋಧವಾಗಿ ಆಯ್ಕಯಾಗಿದ್ದಾರೆ. ಹಾಲಿ ಅಧ್ಯಕ್ಷರಾಗಿದ್ದ ಪುಟ್ಟಸ್ವಾಮಿ ಪಕ್ಷದ ಅಂತರಿಕ ಒಪ್ಪಂದದಂತೆ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರಿಂದ ನಡೆದ ಚುನಾವಣೆಯಲ್ಲಿ ಡಿ.ಎನ್. ದೊಡ್ಡಿ ಕ್ಷೇತ್ರದ ಆಶಾ ರಾಜಪ್ಪ ಒಬ್ಬರೇ ನಾಮಪತ್ರ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಅವರ ಅವಿರೋಧ ಆಯ್ಕೆಯನ್ನು ಚುನಾವಣೆ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ ಜಿಲ್ಲಾ ಉಪವಿಭಾಗಧಿಕಾರಿ ಮಂಜುನಾಥ್ ಘೋಷಿಸಿದರು.
18 ಸಂಖ್ಯಾಬಲದ ತಾಪಂನಲ್ಲಿ ನಾಲ್ಪರು ಸದಸ್ಯರು ಚುನಾವಣೆಯಿಂದ ಗೈರು ಹಾಜರಾಗಿದ್ದರು. ತಹಸೀಲ್ದಾರ್ ಡಾ. ಸುಧಾ ಪಾಯ್ಸ್, ಕಾರ್ಯನಿರ್ವಹಣಾಧಿಕಾರಿ ಸಂಜೀವಪ್ಪ, ಉಪಾಧ್ಯಕ್ಷೆ ರಾಜಮ್ಮ, ಮಾಜಿ ಸದಸ್ಯ ಗೋಪಾಲ್ ಗೌಡ, ಚಂದ್ರಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕೃಷ್ಣಪ್ಪ, ಲೋಕೇಶ್ ಇದ್ದರು.
ಕುಡಿಯುವ ನೀರಿಗೆ ಅದ್ಯತೆ: ನೂತನ ಅಧ್ಯಕ್ಷರಾಗಿ ಆಯ್ಕೆ ನಂತರ ಮಾತನಾಡಿದ ಆಶಾ ರಾಜಪ್ಪ, ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ರವರ ಮಾರ್ಗದರ್ಶನದಲ್ಲಿ ಮುಂಬರಲಿರುವ ಬೇಸಿಗೆ ಎದುರಿಸಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದಾಗಿ ತಿಳಿಸಿದರು.
ರಾಷ್ಟ್ರೀಯ ವಿಜ್ಞಾನ ದಿನಾಚರಣೆ
ಚಿಂತಾಮಣಿ: ವಿಜ್ಞಾನಕ್ಕೆ ಎಲ್ಲೆ ಇಲ್ಲ ಎಂದು ಚಿಂತಾಮಣಿ ರೇಷ್ಮೆ ಕೃಷಿ ಮಹಾವಿದ್ಯಾಲಯ ಪ್ರಾಧ್ಯಾಪಕ ಪ್ರೊ.ಎಂ. ವಿಜಯೇಂದ್ರ ತಿಳಿಸಿದರು.
ನಗರದ ಹೊರವಲಯದ ಬೂರಗಮಾಕಲಹಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯಲ್ಲಿ ಮಾತನಾಡಿ, ವಿಜ್ಞಾನ ಅಮೂಲ್ಯ ಸಂಪತ್ತಾಗಿದ್ದು ಇದನ್ನು ಸದ್ಬಳಕೆ ಮಾಡಿಕೊಂಡು ಪ್ರಗತಿ ಕಾಣಬೇಕೆಂದರು.
ಆರ್. ನಾರಾಯಣರೆಡ್ಡಿ ಮಾತನಾಡಿ, ವಿಜ್ಞಾನ ಮುಂದುವರೆದರೆ ಮಾತ್ರ ದೇಶ ಅಭಿವೃದ್ಧಿ ಹೊಂದಲು ಮತ್ತು ಬಲಿಷ್ಠವಾಗಲು ಸಾಧ್ಯ ಎಂದರು. ಸರ್.ಸಿ.ವಿ. ರಾಮನ್ರವರು ವಿಜ್ಞಾನಕ್ಕೆ ನೀಡಿದ ಕೊಡುಗೆ ಅಪಾರವಾದುದೆಂದು ತಿಳಿಸಿದರು. ನಂತರ ಅಧ್ಯಕ್ಷತೆ ವಹಿಸಿದ್ದ ಜಿ. ವೆಂಕಟರವಣಪಪ್ ಮಾತನಾಡಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಹಲವು ವಿಜ್ಞಾನದ ಮಾದರಿಗಳ್ನು ತಯಾರಿಸಿ ಪ್ರದರ್ಶಿಸಿದರು. ವಿಜ್ಞಾನ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು. ಶಿಕ್ಷಕರಾದ ಎಂ.ಎನ್. ಭಾಗ್ಯಲಕ್ಷ್ಮಿ, ಕಾಂಚನ, ಯಶೋಧಮಣಿ, ಅಮರನಾಥ, ರಾಮಕೃಷ್ಣೇಗೌಡ, ಎಸ್.ಎಂ. ನಾಗರಾಜ್, ಕಲ್ಪನ, ಲೇಖಕ ಕೆ.ಎಸ್. ನೂರುಲ್ಲಾ ಇದ್ದರು.
ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಗೆಲುವು
ಮಾಲೂರು: ತಾಲೂಕಿನ ಚಿಕ್ಕತಿರುಪತಿ ಪಂಚಾಯ್ತಿ ಸದಸ್ಯ ಸ್ಥಾನಕ್ಕಾಗಿ ನಡೆದಿದ್ದ ಚುನಾವಣೆಯಲ್ಲಿ ಮಂಜುನಾಥ್ ಜಯಗಳಿಸಿದ್ದಾರೆ. ಸೋಮವಾರ ನಡೆದಿದ್ದ ಚುನಾವಣೆಯ ಮತ ಎಣಿಕೆ ಬುಧವಾರ ನಡೆಯಿತು. ಮತದಾನವಾಗಿದ್ದ 1,088 ಮತಗಳಲ್ಲಿ ಮಂಜುನಾಥ್ 565 ಮತ, 504 ಮತಗಳಿಸಿದ್ದ ಶ್ರೀರಾಮ್ರನ್ನು ಸೋಲಿಸಿದ್ದಾರೆ. ಫಲಿತಾಂಶ ಹೂರ ಬರುತ್ತಿದ್ದಂತೆ ಪಂಚಾಯ್ತಿ ಉಪಾಧ್ಯಕ್ಷ ವಿ.ನಾಗೇಶ್ ಬೆಂಬಲಿಗರು ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಪದಾಧಿಕಾರಿಗಳ ಆಯ್ಕೆ
ಕೆಜಿಎಫ್: ಭಾರತ್ ಗೋಲ್ಡ್ ಮೈನ್ಸ್ ಯುನೈಟೆಡ್ ಎಂಪ್ಲಾಯಿಸ್ ಕೈಗಾರಿಕಾ ಸಹಕಾರ ಸಂಘ ನಿಯಮಿತ ಅಡಳಿತ ಮಂಡಲಿ ಚುನಾವಣೆಯಲ್ಲಿ ಎಂ. ಸಂಪತ್, ಪಾರ್ಥಸಾರತಿ, ಗೋಪಿ, ಜೂನಿಯರ್ ಅಂತೋನಿ, ನೀಲಮೇಗನ್, ಮಹಮದ್ ಅಯುಬ್, ರಮಾಬಾಯಿ ಹಾಗೂ ಎ. ವಿಜಯ ನಿರ್ದೇಶಕರಾಗಿ ಚುನಾಯಿತರಾಗಿದ್ದಾರೆ ಎಂದು ಚುನಾವಣಾಧಿಕಾರಿ ಎನ್.ಎಸ್. ಮುರಳಿಕೃಷ್ಣ ಘೋಷಿಸಿದ್ದಾರೆ.
ನೂತನ ರೈಲ್ವೆ ನಿಲ್ದಾಣಕ್ಕೆ ಶಂಕು
ಬಂಗಾರಪೇಟೆ: ಚಿನ್ನಕೋಟೆ ಮತ್ತು ಹುದುಕುಳ ಗ್ರಾಮದಲ್ಲಿ ನೂತನ ರೈಲ್ವೆ ನಿಲ್ದಾಣ ನಿರ್ಮಿಸಬೇಕೆಂಬ ಈ ಪ್ರದೇಶದ ಜನರ ಬಹುದಿನಗಳ ಕನಸು ನನಸಾಗಿದೆ. ಶಾಸಕ ಎಸ್.ಎನ್. ನಾರಾಯಣಸ್ವಾಮಿ ಬುಧವಾರ ಬೆಳಗ್ಗೆ ಸ್ಟೇಷನ್ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿದರು. ತಾಲೂಕಿನ ಚಿನ್ನಕೋಟೆ ಮತ್ತು ಹುದುಕುಳ ಗ್ರಾಮಗಳ ಸುತ್ತ ಮುತ್ತಲ ಪ್ರದೇಶಗಳ ಜನರಿಗೆ ಈ ಎರಡು ಕಡೆ ನಿಲ್ದಾಣಗಳನ್ನು ನಿರ್ಮಾಣ ಮಾಡಿದರೆ ಬೆಂಗಳೂರಿಗೆ ಹೋಗಿ ಬರಲು ಅನುಕೂಲವಾಗುತ್ತದೆ ಎಂದು ಮನವಿ ಮಾಡಿದ್ದರೂ ನೆನೆಗುದಿಗೆ ಬಿದ್ದಿತ್ತು. ಶಾಸಕ ಎಸ್.ಎನ್.ನಾರಾಯಣಸ್ವಾಮಿ ರೈಲ್ವೆ ಸಚಿವ ಮಲ್ಲಿಕಾರ್ಜುನ್ ಖರ್ಗೆ ಜೊತೆ ಚರ್ಚಿಸಿ ಎರಡೂ ಕಡೆ ನಿಲ್ದಾಣಗಳನ್ನು ಪ್ರಾರಂಭಿಸಲೇಬೇಕೆಂದು ಸತತ ಒತ್ತಾಯದ ಮೇರೆಗೆ ಸಚಿವರು ಹಸಿರುವ ನಿಶಾನೆ ನೀಡಿದ್ದರು. ಬುಧವಾರ ಚಿನ್ನಕೋಟೆ ಮತ್ತು ಹುದುಕುಳ ಗ್ರಾಮಗಳಲ್ಲಿ ಸ್ಟೇಷನ್ ನಿರ್ಮಾಣಕ್ಕೆ ಶಂಕುಸ್ಥಾಪನೆ ನರೆವೇರಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, 1 ಕೋಟಿ ರು. ವೆಚ್ಚದಲ್ಲಿ ಎರಡೂ ಕಡೆ ನಿಲ್ದಾಣ ಕಾಮಗಾರಿ ಕೈಗೊಳ್ಳಲಾಗಿದ್ದು, ತಿಂಗಳಲ್ಲಿ ಕಾಮಗಾರಿ ಪೂರ್ಣಗೊಂಡು ಜನರ ಸೇವೆಗೆ ಲಭ್ಯವಾಗಲಿದೆ ಎಂದರು. ಪ್ರಯಾಣಿಕರ ಬೇಡಿಕೆಗೆ ಸ್ಪಂದಿಸಿರುವ ಶಾಸಕರನ್ನು ಸನ್ಮಾನಿಸಿದರು. ಈ ವೇಳೆ ಎಸ್.ಎ. ಪಾರ್ಥಸಾರಥಿ, ಡಿ. ಕಿಶೋರ್ ಕುಮಾರ್,ಪಂಚಾಯ್ತಿ ಅಧ್ಯಕ್ಷ ಲಕ್ಷ್ಮಯ್ಯ, ಅನಿತಾ ಚಂದ್ರಯ್ಯಶೆಟ್ಟಿ ಇದ್ದರು.
ಲಾರಿ ಮಾಲೀಕರ ಪ್ರತಿಭಟನೆ
ಟೇಕಲ್: ಕ್ರಷರ್ ಮಾಲೀಕರು ಒಂದು ಲಾರಿ ಲೋಡ್ಗೆ 2,000 ರು.ಗಳನ್ನು ಹೆಚ್ಚಿಸಿ ಲಾರಿ ಮಾಲೀಕರಿಗೆ ಕಿರುಕುಳ ನೀಡುತ್ತಿದ್ದು, ಮಾಲೀಕರ ಧೋರಣೆ ಖಂಡಿಸಿ ಟೇಕಲ್ ಹೋಬಳಿಯ ಲಾರಿ ಮಾಲೀಕರು ಮಾ.9 ರಿಂದ ಅನಿರ್ಧಿಷ್ಟ ಧರಣಿ ಹಮ್ಮಿಕೊಂಡಿದ್ದಾರೆ. ಈ ಬಗ್ಗೆ ಲಾರಿ ಮಾಲೀಕರಾದ ಸೋಮಶೇಖರ್, ಚಂದ್ರು, ಶ್ರೀನಿವಾಸ್, ಖಾದರ್, ಎಸ್.ಬಿ. ಮುರುಗೇಶ್, ಸಂದೀಪ್, ಅಂಬರೀಶ್ ಹೇಳಿಕೆ ನೀಡಿ, ಧರಣಿಯಲ್ಲಿ ತಾಲೂಕಿನ ಎಲ್ಲ ಲಾರಿ ಮಾಲೀಕರು ಸಹಕರಿಸಬೇಕೆಂದು, ವಿವರಗಳಿಗೆ 9448202065, 7353262000 ಸಂಪರ್ಕಿಸಿ.