ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಸ್ಥಳೀಯರಿಗೆ ಉದ್ಯೋಗ ಸಿಗಲಿ

Vishwanath S
Updated On : 6 Mar 2014, 12:50 pm

ಕೋಲಾರ: ಶ್ರೀನಿವಾಸಪುರ ತಾಲೂಕಿನಲ್ಲಿ ಸ್ಥಾಪನೆಯಾಗಲಿರುವ ರೇಲ್ವೆ ಕೋಚ್ ಕಾರ್ಖಾನೆಯಲ್ಲಿ ಭೂಮಿ ಕಳೆದುಕೊಳ್ಳಲಿರುವ ರೈತರಿಗೆ ಮತ್ತು ಸ್ಥಳೀಯ ನಿರುದ್ಯೋಗಿ ಯುವಕರಿಗೆ ಕೆಲಸ ನೀಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ರೇಲ್ವೆ ಇಲಾಖೆಗೆ ತಾಕೀತು ಮಾಡಿದರು.
ಪ್ರಸ್ಥಾಪಿತ ರೇಲ್ವೆ ಕೋಚ್ ಕಾರ್ಖಾನೆಗೆ ಬುಧವಾರ ಶಂಕು ಸ್ಥಾಪನೆ ನೆರವೇರಿಸಿ ಮಾತನಾಡಿ, ರೇಲ್ವೆ ಕೋಚ್ ಸ್ಥಾಪನೆಯಿಂದ ಹಿಂದುಳಿದ ಪ್ರದೇಶವಾದ ಕೋಲಾರ ಜಿಲ್ಲೆಯ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದರು.
ಕೋಲಾರ ಜಿಲ್ಲೆಯಲ್ಲಿ ರೇಲ್ವೆ ಕೋಚ್ ಕಾರ್ಖಾನೆ ಸ್ಥಾಪಿಸಲು ರೇಲ್ವೆ ಇಲಾಖೆ ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ್ದ ಪ್ರಸ್ತಾವನೆಗೆ 2014ರ ಫೆ.28 ರಂದು ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಯೋಜನೆ ಅನುಷ್ಠಾನ ಸಂಬಂಧ ರೇಲ್ವೆ ಮಂಡಳಿ ಮತ್ತು ರಾಜ್ಯ ಸರ್ಕಾರದ ನಡುವೆ ಒಡಂಬಡಿಕೆಯೂ ಮಾಡಿಕೊಳ್ಳಲಾಗಿದೆ. ಯೋಜನೆಯಿಂದ ಜಿಲ್ಲೆಯಲ್ಲಿನ ನಿರುದ್ಯೋಗ ಸಮಸ್ಯೆ ನಿವಾರಣೆ ಆಗುವುದಲ್ಲದೆ, ಸಾಮಾಜಿಕವಾಗಿ, ಆರ್ಥಿಕವಾಗಿ ಜಿಲ್ಲೆಯನ್ನು ಸದೃಢಪಡಿಸಬಹುದಾಗಿರುವುದರಿಂದ ನಮ್ಮ ಸರ್ಕಾರ ಎಲ್ಲಾ ರೀತಿಯ ಸಹಕಾರ ನೀಡಲು ಮುಂದಾಗಿದೆ ಎಂದು ಹೇಳಿದರು. ರೇಲ್ವೆ ಕೋಚ್ ಕಾರ್ಖಾನೆಯ ನಿರ್ಮಾಣಕ್ಕೆ 1,460 ಕೋಟಿ ರು.ಗಳು ಬೇಕಾಗುತ್ತದೆ ಎಂದು ರೇಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಯೋಜನೆ ಪೂರ್ಣಗೊಳ್ಳುವ ವೇಳೆಗೆ 2,500 ಕೋಟಿ ರು.ದಾಟಬಹುದು. ರಾಜ್ಯ ಸರ್ಕಾರ ಯೋಜನಾ ವೆಚ್ಚದಲ್ಲಿ ಅರ್ಧದಷ್ಟು ಹಣ ನೀಡಲಿದ್ದು, ಕೇಂದ್ರ ಸರ್ಕಾರ ಉಳಿದ ಪಾಲು ನೀಡಲಿದೆ ಎಂದರು.
ಕಾರ್ಖಾನೆಗೆ 1,118 ಎಕರೆ ಭೂಮಿ ಬೇಕಾಗಿದೆ. ಈ ಪೈಕಿ ರಾಜ್ಯ ಸರ್ಕಾರದ ಕಂದಾಯ ಇಲಾಖೆ ವ್ಯಾಪ್ತಿಯ 568 ಎಕರೆ ಭೂಮಿಯನ್ನು ರೇಲ್ವೆ ಇಲಾಖೆಗೆ ಕೊಟ್ಟಿದ್ದೇವೆ, ಇನ್ನುಳಿದ 550 ಎಕರೆ ಭೂಮಿಯನ್ನು ರೈತರಿಂದ ಮತ್ತು ಖಾಸಗಿಯವರಿಂದ ಖರೀದಿ ಮಾಡಿ ರೇಲ್ವೆ ಇಲಾಖೆಗೆ ಹಸ್ತಾಂತರಿಸಲಾಗುವುದೆಂದು ವಿವರಿಸಿದರು.
ಸೂಕ್ತ ಪರಿಹಾರಕ್ಕೆ ಬದ್ಧ: ರೇಲ್ವೆ ಕೋಚ್ ಕಾರ್ಖಾನೆ ಸ್ಥಾಪನೆಗೆ ಭೂಮಿ ನೀಡುವ ರೈತರಿಗೆ ಸೂಕ್ತ ಪರಿಹಾರ ನೀಡಲು ಸರ್ಕಾರ ಬದ್ಧವಾಗಿದೆ, ಅದಷ್ಟು ಬೇಗನೆ ರೈತರಿಂದ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದಕ್ಕೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಜಂಟಿಯಾಗಿ ಕಾರ್ಯಕ್ರಮ ಹಾಕಿಕೊಳ್ಳಬೇಕೆಂದು ಸೂಚಿಸಿದರು.
ಈ ಯೋಜನೆ ಅನುಷ್ಠಾನಕ್ಕೆ ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ, ಶ್ರೀನಿವಾಸಪುರ ಶಾಸಕ ರಮೇಶ್ ಕುಮಾರ್ ಹೆಚ್ಚಿನ ಶ್ರಮ ಹಾಕಿದ್ದಾರೆ, ರೇಲ್ವೆ ಸಚಿವ ಮಲ್ಲಿಕಾರ್ಜುನಖರ್ಗೆಯವರು ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲು ಸಹಾಯ ಮಾಡಿದ್ದಾರೆ, ಜಿಲ್ಲೆಯ ಶಾಸಕರ ಒತ್ತಾಸೆ ಹಾಗೂ ಕಾಂಗ್ರೆಸ್ ಅಧ್ಯಕ್ಷ ಸೋನಿಯಾಗಾಂಧಿಯವರ ಬೆಂಬಲವೂ ಸಿಕ್ಕಿದೆ ಎಂದು ವಿವರಿಸಿದರು.
ರೇಲ್ವೆ ಕೋಚ್ ಕಾರ್ಖಾನೆಯಲ್ಲಿ ಒಂದು ವರ್ಷಕ್ಕೆ 500 ರೈಲು ಬೋಗಿಗಳನ್ನು ತಯಾರಿಸಬಹುದಾಗಿದೆ, ಒಂದು ಬೋಗಿ ತಯಾರಿಕೆಗೆ 3 ಕೋಟಿ ರು.ಖರ್ಚಾಗಲಿದೆ, ಒಂದು ಎಂಜನ್ ತಯಾರಿಕೆಗೆ 10 ಕೋಟಿ ರು. ಸೇರಿದಂತೆ 22ರಿಂದ 30 ಬೋಗಿಗಳುಳ್ಳ ರೈಲು ತಯಾರಿಗೆ 100 ಕೋಟಿ ಖರ್ಚು ಆಗಲಿದ್ದು, ಇದರಿಂದ ಹೆಚ್ಚುತ್ತಿರುವ ಪ್ರಯಾಣಿಕರ ಸಾಗಣೆಗೆ ಅನುಗುಣವಾಗಿ ಬೇಡಿಕೆ ಮತ್ತು ಪೂರೈಕೆಗಳ ನಡುವಿನ ಅಂತರವನ್ನು ನಿವಾರಿಸಲು ಸಹಾಯವಾಗಲಿದೆ ಎಂದು ರೇಲ್ವೆ ಕೋಚ್ ಕಾರ್ಖಾನೆಯ ನಿರ್ಮಾಣದ ಉದ್ದೇಶವನ್ನು ತಿಳಿಸಿದರು.
5 ಸಾವಿರ ಜನರಿಗೆ ಉದ್ಯೋಗ: ರೇಲ್ವೆ ಕೋಚ್ ಕಾರ್ಖಾನೆಯಲ್ಲಿ 5 ಸಾವಿರ ಜನರಿಗೆ ಉದ್ಯೋಗಾವಕಾಶ ಸಿಗಲಿದೆ. ಅಧಿಕಾರಿಗಳು ಸ್ಥಳೀಯರಿಗೆ ಉದ್ಯೋಗ ಕಲ್ಪಿಸದಿದ್ದರೆ ಯೋಜನೆಯ ಉದ್ದೇಶ ಸಾರ್ಥವಾಗುವುದಿಲ್ಲ, ಈ ವಿಚಾರದಲ್ಲಿ ಜನಪ್ರತಿನಿಧಿಗಳು ಹೆಚ್ಚಿನ ಆಸಕ್ತಿ ವಹಿಸಿ ಕೆಲಸ ಮಾಡಬೇಕಾಗಿದೆ ಎಂದು ಸೂಚ್ಯವಾಗಿ ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಕೆ.ಎರ್. ರಮೇಶ್ ಕುಮಾರ್ ವಹಿಸಿದ್ದರು. ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್, ಕೃಷಿ ಸಚಿವ ಕೃಷ್ಣಬೈರೇಗೌಡ, ವಾರ್ತಾ ಮತ್ತು ಮೂಲ ಸೌಕರ್ಯಗಳ ಅಭಿವೃದ್ಧಿ ಸಚಿವ ರೋಷನ್ ಬೇಗ್, ಶಾಸಕ ಕೊತ್ತೂರು ಮಂಜುನಾಥ್, ಎಸ್.ಎನ್. ನಾರಾಯಣಸ್ವಾಮಿ, ವೈ. ರಾಮಕ್ಕ, ವಿಧಾನ ಪರಿಷತ್ ಸದಸ್ಯರಾದ ವೈ.ಎ. ನಾರಾಯಣಸ್ವಾಮಿ, ಡಿ.ಎಸ್. ವೀರಯ್ಯ, ನಜೀರ್ ಅಹಮ್ಮದ್, ಜಿಪಂ ಅಧ್ಯಕ್ಷ ತೂಪಲ್ಲಿನಾರಾಯಣಸ್ವಾಮಿ, ಕೋಚಿಮುಲ್ ಅಧ್ಯಕ್ಷ ಕೆ. ಗುಡಿಯಪ್ಪ, ನೈರುತ್ಯ ರೇಲ್ವೆ ಜನರಲ್‌ಮ್ಯಾನೇಜರ್ ಪಿ.ಕೆ. ಸಕ್ಸೇನಾ, ಜಿಪಂ ಸಿಇಒ ವಿನೋತ್ ಪ್ರಿಯಾ, ಐಜಿಪಿ ಉಲ್ಫತ್ ಹುಸೇನ್, ಕೇಂದ್ರ ರೇಲ್ವೆ ಮಂಡಳಿ ಅಧ್ಯಕ್ಷ ಬಿಸ್ಸೇಗೌಡ ಇದ್ದರು. ಜಿಲ್ಲಾಧಿಕಾರಿ ಡಿ.ಕೆ. ರವಿ ಸ್ವಾಗತಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement