ಅಂಡರ್ಪಾಸ್ ನಿರ್ಮಾಣಕ್ಕೆ ಒತ್ತಾಯಿಸಿ ಪ್ರತಿಭಟನೆ
ಕೋಲಾರ: ರಾಷ್ಟ್ರೀಯ ಹೆದ್ದಾರಿ 4ರ ಪವನ್ ಕಾಲೇಜಿನ ಬಳಿ ಕಳೆದ ಒಂದು ವರ್ಷದಲ್ಲಿ ಏಳು ರಸ್ತೆ ಅಪಘಾತಗಳು ಸಂಭವಿಸಿ ಐದಾರು ಜನರು ಸತ್ತಿರುವುದರಿಂದ ಜನರ ರಕ್ಷಣೆಗಾಗಿ ಚೊಕ್ಕ ಕನ್ವೆಂಷನ್ ಹಾಲಿನ ಬಳಿ ಅಂಡರ್ ಪಾಸ್ ಇಲ್ಲವೇ ಪ್ಲೈಒವರ್ ನಿರ್ಮಿಸಬೇಕೆಂದು ಒತ್ತಾಯಿಸಿ ಎಬಿವಿಪಿ ನೇತೃತ್ವದಲ್ಲಿ ಪವನ್ ಕಾಲೇಜು ಮತ್ತು ಗೋಕುಲ ಕಾಲೇಜಿನ ವಿದ್ಯಾರ್ಥಿಗಳು ರಸ್ತೆ ತಡೆ ಮಾಡಿ ಪ್ರತಿಭಟಿಸಿದರು.
ಪವನ್ ಕಾಲೇಜಿನ ವಾಹನ ಚಾಲಕ ಚಂದ್ರಣ್ಣ ಎಂಬುವರು ಬುಧವಾರ ರಾತ್ರಿ ಕಾಲೇಜಿನಿಂದ ಹೊರ ಬಂದು ರಸ್ತೆ ದಾಟುವಾಗ ಅತಿವೇಗದಿಂದ ಬರುತ್ತಿದ್ದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಮೃತಪಟ್ಟಿರುವ ಹಿನ್ನಲೆಯಲ್ಲಿ ವಿದ್ಯಾರ್ಥಿಗಳು ಗುರುವಾರ ತರಗತಿಗಳನ್ನು ಬಹಿಷ್ಕರಿಸಿ ಅಪಘಾತಗಳ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು.
ಸ್ಥಳಕ್ಕೆ ಬಂದ ಕೋಲಾರ ನಗರ ಸಿಪಿಐ ಶಿವಕುಮಾರ್ ಅವರು ರಸ್ತೆ ತಡೆ ಮಾಡುವುದು ಕಾನೂನಿಗೆ ವಿರುದ್ಧವಾಗಿದೆ. ಕೂಡಲೇ ರಸ್ತೆ ತಡೆ ತೆರವು ಮಾಡದಿದ್ದರೆ ಬಂಧಿಸುವುದಾಗಿ ಎಚ್ಚರಿಕೆ ನೀಡಿದರು. ಕಳೆದ ಒಂದು ವರ್ಷದಲ್ಲಿ 7 ರಸ್ತೆ ಅಪಘಾತಗಳು ಒಂದೇ ಕಡೆ ಸಂಭವಿಸಿದೆ, ಅನೇಕ ಬಾರಿ ಸಂಬಂಧಪಟ್ಟವರಿಗೆ ದೂರು ನೀಡಿದ್ದರೂ ಅಪಘಾತಗಳ ನಿಯಂತ್ರಣಕ್ಕೆ ಯಾವುದೇ ಕ್ರಮ ಜರುಗಿಸಿಲ್ಲ. ನ್ಯಾಯಕ್ಕಾಗಿ ಪ್ರತಿಭಟನೆ ನಡೆಸಿದರೆ ಬಂಧಿಸುವುದಾಗಿ ಬೆದರಿಕೆ ಹಾಕುವುದು ಯಾವ ನ್ಯಾಯ ಎಂದು ವಿದ್ಯಾರ್ಥಿಗಳು ಸಿಪಿಐ ಜೊತೆ ವಾಗ್ವಾದಕ್ಕೆ ಇಳಿದರು.
ನಿಮಗೆ ನ್ಯಾಯ ಬೇಕಾದರೆ ರಸ್ತೆಯನ್ನು ಬಿಟ್ಟು ಬೇರೆ ಕಡೆ ಪ್ರತಿಭಟನೆ ಮಾಡಿ, ಹೆದ್ದಾರಿಯಲ್ಲಿ ಸಂಚಾರಕ್ಕೆ ಅಡ್ಡಿ ಮಾಡುವಂತಿಲ್ಲವೆಂದು ಸಿಪಿಐ ಮತ್ತೊಮ್ಮೆ ಎಚ್ಚರಿಕೆ ನೀಡಿದ್ದರಿಂದ ವಿದ್ಯಾರ್ಥಿಗಳು ಅಲ್ಲಿಂದ ಜಲ್ಲಾಧಿಕಾರಿಗಳ ಕಚೇರಿಗೆ ತೆರಳಿ ತಮ್ಮ ಸಮಸ್ಯೆಯನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.
ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಡಿ.ಕೆ. ರವಿ, ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಅರಘಾತಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ನಂತರ ವಿದ್ಯಾರ್ಥಿಗಳು ಪ್ರತಿಭಟನೆ ಹಿಂದಕ್ಕೆ ಪಡೆದರು. ಎಬಿವಿಪಿಯ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮುರಳಿ, ನಗರ ಕಾರ್ಯದರ್ಶಿ ಹರೀಶ್, ಪ್ರಮೋದ್, ಶಿವು, ನರೇಶ್ ಹಾಗೂ ಅಶೋಕ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.