'ಏಳು ಸುತ್ತಿನ ಮಲ್ಲಿಗೆ' ಕವನ ಸಂಕಲನ ಬಿಡುಗಡೆ
ಬಾಗೇಪಲ್ಲಿ: ಕನ್ನಡ ಸಾಹಿತ್ಯದಲ್ಲಿ ಕನ್ನಡ ನಾಡು ನುಡಿಯ ಬಗ್ಗೆ ಪ್ರಶಂಸಿಸುವ ಪದಗಳ ನಿಘಂಟು ಕಾವ್ಯಗಳಲ್ಲಿ ರಚಿತವಾಗಬೇಕು ಎಂದು ಹಿರಿಯ ಸಾಹಿತಿ ಗೋಪಾಲಗೌಡ ಕಲ್ವಮಂಜಲಿ ಅಭಿಪ್ರಾಯಪಟ್ಟರು. ಪಟ್ಟಣದ ನ್ಯಾಷನಲ್ ಕಾಲೇಜಿನಲ್ಲಿ ಕವಿ ಎಂ.ಎಲ್. ನರಸಿಂಹಮೂರ್ತಿ ಅವರು ರಚಿಸಿರುವ 'ಏಳು ಸುತ್ತಿನ ಮಲ್ಲಿಗೆ' ಕವನ ಸಂಕಲನ ಬಿಡುಗಡೆಗೊಳಿಸಿದ ನಂತರ ಮಾತನಾಡಿ, ಏಕಾಂತದಲ್ಲಿ ಮನಸ್ಸಿಗೆ ಚಿಂತಿಸುವ ಕಾರ್ಯಗಳಲ್ಲಿ ತೊಡಗಿಸಿಕೊಂಡಾಗ ಹೊಸ ಬಗೆಯ ಭಾವನೆಗಳು ಮೂಡಿಬರಲು ಸಾಧ್ಯ. ಯುವಕವಿ ನರಸಿಂಹಮೂರ್ತಿ ಈಗಿನ ಸಾಮಾಜಿಕ ಕಾಲಮಾನಕ್ಕೆ ತಕ್ಕ ರೀತಿಯಲ್ಲಿ ಪ್ರೇಮಭಾವದ ತವಕ ತಲ್ಲಣಗಳಿಗೆ ವ್ಯತಿರಿಕ್ತವಾಗಿ ಸ್ಪಂದಿಸುವ ಕವಿತೆಗಳು ರಚಿಸಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.ಙ ಪತ್ರಕರ್ತ ರಾಹುಲ್ ಬೆಳಗಲಿ ಮಾತನಾಡಿ, ಗಡಿಭಾಗ ಬಾಗೇಪಲ್ಲಿಯಲ್ಲಿ ಉಭಯ ಭಾಷಿಕರಿದ್ದು, ಸ್ಥಳೀಯ ಪ್ರತಿಭೆಗಳು ಒಂದು ಭಾಷೆಯ ಅತ್ತುತ್ತಮ ವಿಚಾರವನ್ನು ಮತ್ತೊಂದು ಭಾಷೆಗೆ ಭಾಷಾಂತರಿಸುವ ಮೂಲಕ ಸಾಹಿತ್ಯ ರಚಿಸಬೇಕು. ಇದರಿಂದ ಎರಡು ಭಾಷೆಯ ಸಂಸ್ಕೃತಿಯ ಮೇಲೆ ಬೆಳಕು ಚೆಲ್ಲಿದಂತಾಗುತ್ತದೆ. ಕವಿತೆಗಳು ಹೃದಯ ಮಿಡಿಯುವಂತೆ ಮೂಡಿ ಬರಬೇಕು ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಕಿರಿಯ ವಯಸ್ಸಿನಲ್ಲಿಯೇ ಪುಸ್ತಕಗಳನ್ನು ಪ್ರಕಟಿಸುತ್ತಿರುವ ಬೀದರ್ ಜಿಲ್ಲೆಯ ಸವಿಗನ್ನಡ ಸಾಹಿತ್ಯ ಸಂಸ್ಥೆಯ ಅಧ್ಯಕ್ಷ ಎಚ್. ಮಾಣಿಕ್ ರವರಿಗೆ ಸನ್ಮಾನ ಮಾಡಲಾಯಿತು. ಉಪಪ್ರಾಂಶುಪಾಲ ಡಿ. ಶಿವಣ್ಣ, ಪ್ರೊ. ರಾಮಯ್ಯ, ಬಿ.ಪಿ ವಿಜಯ್ ಕುಮಾರ್, ಸೋಮಶೇಖರ್ ಇದ್ದರು.
ಅಭಿನಂದನೆ
ಚಿಂತಾಮಣಿ: ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಪಿಚ್ಚಳ್ಳಿ ಶ್ರೀನಿವಾಸ್ರನ್ನು ತಾಲೂಕು ಸಿರಿಗನ್ನಡ ವೇದಿಕೆ ಅಧ್ಯಕ್ಷ ಕೆ.ಎನ್. ಅಕ್ರಂಪಾಷ, ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕಾಗತಿ ವಿ. ವೆಂಕಟರತ್ನಂ, ಕನ್ನಡ ಸಾಹಿತ್ಯ ವೇದಿಕೆ ಕಾರ್ಯದರ್ಶಿ ಕೆ.ಎಸ್. ನೂರುಲ್ಲಾ, ಲೇಖಕಿ ಹಸೀನಾಬೇಗಂ, ನಿವೃತ್ತ ಮುಖ್ಯ ಶಿಕ್ಷಕ ಎಚ್.ಎನ್. ಚೌಡೇಶ್ವರಯ್ಯ ಅಭಿನಂದಿಸಿದ್ದಾರೆ.
ಸಂಚಾರ ಬಿಂದು ಪುನರಾರಂಭಕ್ಕೆ ಆಗ್ರಹ
ಚಿಂತಾಮಣಿ: ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೆರೆಯ ಆಂಧ್ರಪ್ರದೇಶದ ಮದನಪಲ್ಲಿ ಸರ್ಕಾರಿ ಬಸ್ ನಿಲ್ದಾಣದಲ್ಲಿ ಪ್ರಾರಂಭಿಸಿದ್ದ ಟಿ.ಸಿ.ಪಾಯಿಂಟ್ (ಸಂಚಾರ ಬಿಂದು) ಮುಚ್ಚಲಾಗಿದ್ದು, ಇದರಿಂದಾಗಿ 2 ರಾಜ್ಯಗಳ ಪ್ರಯಾಣಿಕರಿಗೆ ಸೂಕ್ತ ಮಾಹಿತಿ ದೊರೆಯದೆ ತೊಂದರೆಯುಂಟಾಗುತ್ತಿದೆ ಎಂದು ಪ್ರಯಾಣೀಕರು ದೂರಿದ್ದಾರೆ. ಚಿಂತಾಮಣಿ-ಬೆಂಗಳೂರಿಗೆ ಪ್ರಯಾಣಿಸುವ ಪ್ರಯಾಣಿಕರಿಗೆ ತೊಂದರೆಯುಂಟಾಗಿದ್ದು ಈ ಟಿ.ಸಿ. ಪಾಯಿಂಟನ್ನು ಪುನರಾರಂಭಿಸಬೇಕೆಂದು ಪ್ರಯಾಣಿಕರು ಆಗ್ರಹಿಸಿದ್ದಾರೆ.
ಡಿಕ್ಕಿ: ಒಬ್ಬರ ಸಾವು
ಕೋಲಾರ: ಅಪರಚಿತ ವಾಹನ ಡಿಕ್ಕಿ ಹೊಡೆದು ರಸ್ತೆದಾಟುತ್ತಿದ್ದ ಚಾಲಕನೊಬ್ಬ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಗರ ಹೊರವಲಯ ರಾಷ್ಟ್ರೀಯ ಹೆದ್ದಾರಿ ಪವನ್ ಕಾಲೇಜು ಮುಂಭಾಗ ಮಾ.5 ರ ರಾತ್ರಿ ಜರುಗಿದೆ. ಇದೇ ಕಾಲೇಜಿನ ಬಸ್ ಚಾಲಕ ಹಾಗೂ ಹಾರೋಹಳ್ಳಿಯ ನಿವಾಸಿ ಚಂದ್ರಣ್ಣ ಮೃತಪಟ್ಟ ವ್ಯಕ್ತಿಯಾಗಿದ್ದು ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಚಿಂತಾಮಣಿ ದೈಹಿಕ ಶಿಕ್ಷಕರ ಮಾಸಿಕ ಸಭೆ
ಚಿಂತಾಮಣಿ: ಸಮಯ ಪ್ರಜ್ಞೆ, ಕರ್ತವ್ಯ ನಿಷ್ಠೆ, ಸತ್ಯ ದರ್ಶನದ ಮೂಲಕ ದೈಹಿಕ ಶಿಕ್ಷಕರ ಸೇವೆ ಬಲಾಢ್ಯವಾಗಲಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಜಿ. ರಂಗಯ್ಯ ಹೇಳಿದರು.
ಬೂರಗಮಾಕಲಹಳ್ಳಿ ಕ್ಲಸ್ಟರ್ನಲ್ಲಿ ಆಯೋಜಿಸಿದ್ದ ತಾಲೂಕು ದೈಹಿಕ ಶಿಕ್ಷಕರ ಮಾಸಿಕ ಸಭೆ ಹಾಗೂ ನಿವೃತ್ತಿ ದೈಹಿಕ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳನ್ನು ಮೊಬೈಲ್ನಿಂದ ದೂರವಿರುವಂತೆ ಕಟ್ಟುನಿಟ್ಟಿನ ಕ್ರಮವಹಿವ ಜವಾಬ್ದಾರಿ ದೈಹಿಕ ಶಿಕ್ಷಕರ ಮೇಲಿದೆ ಎಂದರು.
ಮುಖ್ಯ ಶಿಕ್ಷಕ ವೆಂಕಟರವಣಪ್ಪ ಮಾತನಾಡಿ, ಉತ್ತಮ ಗುಣ ಮೈಗೂಡಿಸಿಕೊಂಡು ಮಾಡಿದ ಸಾಧನೆ ಅಮರವಾಗುತ್ತದೆ ಎಂದರು. ಕೆ.ಎನ್. ವಸಂತರೆಡ್ಡಿ ಮಾತನಾಡಿದರು. ತಾಲೂಕು ದೈಹಿಕ ಶಿಕ್ಷಣಾಧಿಕಾರಿ ನಾಗರಾಜ್, ಪಕೃದ್ದೀನ್ಸಾಬಿ, ಕವಿ ಮೂಡಲಗೊಲ್ಲಹಳ್ಳಿ ಕೆ. ನರಸಿಂಹಪ್ಪ, ಶಿಕ್ಷಕಿ ಚಂದ್ರಮ್ಮ ನಿವೃತ್ತ ಶಿಕ್ಷಕರೊಂದಿಗಿನ ತಮ್ಮ ಬಾಂಧವ್ಯದ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ಇತ್ತೀಚೆಗೆ ನಿವೃತ್ತಿ ಹೊಂದಿದ ಮೂವರು ದೈಹಿಕ ಶಿಕ್ಷಕರಾದ ನಗರದ ಸರ್ಕಾರಿ ಬಾಲಕರ ಹಿರಿಯ ಪ್ರಾಥಮಿಕ ಶಾಲೆಯ ಕೃಷ್ಣಮಾಚಾರಿ, ಸೊಣ್ಣಶೆಟ್ಟಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಸಂತಪ್ಪ ಹಾಗೂ ವೆಂಕಟಗಿರಿಕೋಟೆಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ವಿ. ನಾರಾಯಣಸ್ವಾಮಿರನ್ನು ಸನ್ಮಾನಿಸಲಾಯಿತು.
ಅಜಯ ಹಿಲೋರಿ ಕೆಜಿಎಫ್ ಎಸ್ಪಿ
ಕೆಜಿಎಫ್: ಪೊಲೀಸ್ ಜಿಲ್ಲೆಯ ನೂತನ ವರಿಷ್ಠಾಧಿಕಾರಿಯಾಗಿ ಅಜಯ ಹಿಲೋರಿ ಅವರು ಬುಧವಾರ ಸಂಜೆ ಅಧಿಕಾರ ವಹಿಸಿಕೊಂಡರು.
ಈವರೆಗೆ ಕೆಜಿಎಫ್ ಪೊಲೀಸ್ ಜಿಲ್ಲೆಯಲ್ಲಿ ಎಸ್ಪಿಯಾಗಿದ್ದ ಡಾ. ರೋಹಿಣಿಕಟೋಚ್ ಸಫಟ್ ಅವರು ಕೊಪ್ಪಳ ಜಿಲ್ಲಾ ಎಸ್ಪಿಯಾಗಿ ವರ್ಗವಾಗಿದ್ದಿಂದ ಪ್ರಸ್ತುತ ಕೋಲಾರ ಜಿಲ್ಲಾ ರತ್ರಣಾಧಿಕಾರಿಯಾಗಿ ಸ್ಥಳ ನಿಯುಕ್ತಿಗೊಂಡಿರುವ ಅಜಯ ಹಿಲೋರಿ ಅವರು ಕೆಜಿಎಫ್ ಪೊಲೀಸ್ ವರಿಷ್ಠಾಧಿಕಾರಿಯಾಗಿ ಹೆಚ್ಚುವರಿ ಪ್ರಭಾರ ವಹಿಸಿಕೊಂಡರು.
ಅಜಯ ಹಿಲೋರಿ ಈ ಹಿಂದೆ ಬಿಜಾಪುರ ಜಿಲ್ಲಾ ರತ್ರಣಾಧಿಕಾರಿಗಳಾಗಿ ಕಾರ್ಯನಿರ್ವಹಿಸಿದ್ದರು. ಪ್ರಸ್ತುತ ಕೋಲಾರ ಮತ್ತು ಕೆಜಿಎಫ್ ಪೊಲೀಸ್ ಜಿಲ್ಲೆಗಳ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಕೆಜಿಎಫ್ನಲ್ಲಿ ಡಿವೈಎಸ್ಪಿ ಎ.ಕೆ. ವಿವೇಕಾನಂದ ಅವರಿಂದ ಪ್ರಭಾರ ವಹಿಸಿಕೊಂಡ ನಂತರ ಅಧಿಕಾರಿಗಳೊಂದಿಗೆ ಮಾತನಾಡಿದ ಎಸ್ಪಿ ಅಜಯ ಹಿಲೋರಿ ಅವರು, ಮುಂಬರುವ ಲೋಕಸಭಾ ಚುನಾವಣೆಯನ್ನು ನಿಸ್ಪಕ್ಷಪಾತವಾಗಿ ನಡೆಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದರು. ಆರ್ಪಿಐ ಕೆ.ಆರ್. ರಘು ಅವರ ನೇತೃತ್ವದಲ್ಲಿ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಗೌರವ ರಕ್ಷೆ ನೀಡಲಾಯಿತು. ಈ ಸಂದರ್ಭದಲ್ಲಿ ಎಲ್ಲಾ ಸಿಪಿಐಗಳು, ಪಿಎಸ್ಐಗಳು ಹಾಜರಿದ್ದು ನೂತನ ಎಸ್ಪಿ ಅಜಯ ಹಿಲೋರಿ ಅವರನ್ನು ಸ್ವಾಗಿತಿಸಿ ಅಭಿನಂದಿಸಿದರು.
ವಿದ್ಯುತ್ ವ್ಯತ್ಯಯ
ಮಾಲೂರು: ಇಲ್ಲಿನ ಬೆಸ್ಕಾಂನ 66-11 ಕೆ.ವಿ. ಸ್ಟೇಷನ್ನಲ್ಲಿ ಕೇಬಲ್ ಆಳವಡಿಸುವ ಕಾರ್ಯ ನಡೆಯುವುದರಿಂದ ಪಟ್ಟಣದಲ್ಲಿ ನಾಳೆಯಿಂದ ಮೂರು ದಿನಗಳ ಕಾಲ ವಿದ್ಯುತ್ ಪೂರೈಕೆ ಇರುವುದಿಲ್ಲ ಎಂದು ಬೆಸ್ಕಾಂ ಎಇಇ ವಾಸುದೇವ ತಿಳಿಸಿದ್ದಾರೆ. ಶುಕ್ರವಾರ, ಶನಿವಾರ ಹಾಗೂ ಭಾನುವಾರದಂದು ಬೆಳಗ್ಗೆ 10 ಗಂಟೆ ಯಿಂದ ಸಂಜೆ 5 ರ ವರೆಗೂ ಪಟ್ಟಣ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ ಇರುವುದಿಲ್ಲ. ಗ್ರಾಹಕರು ಎದಿನಂತೆ ಸಹಕರಿಸಬೇಕೆಂದು ಮನವಿ ಮಾಡಿದ್ದಾರೆ.
'ಕೌಶಲ್ಯಾಭಿವೃದ್ಧಿ ತರಬೇತಿ ಸದ್ಬಳಕೆಯಾಗಲಿ'
ಗುಡಿಬಂಡೆ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾಭ್ಯಾಸದ ಜೊತೆಗೆ ಕೌಶಲ್ಯಾಭಿವೃದ್ಧಿ ತರಬೇತಿ ಅವಶ್ಯವಾಗಿದ್ದು, ಇಂತಹ ತರಬೇತಿ ಕಾರ್ಯಕ್ರಮಗಳನ್ನು ಯುವಜನತೆ ಸದ್ಬಳಕೆ ಮಾಡಿಳ್ಳಬೇಕೆಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗೌರಿಬಿದನೂರಿನ ನಾರಾಯಣ ತರಬೇತಿ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ 30 ದಿನಗಳ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
'ರಚನಾತ್ಮಕ ಚಟುವಟಿಕೆಗಳಲ್ಲಿ ತೊಡಗಿ'
ಚಿಂತಾಮಣಿ: ಯುವಕರು ರಚನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಪ್ರವಚನಕಾರ ತಳಗವಾರ ಟಿ.ಎಲ್. ಆನಂದ್ ಅಭಿಪ್ರಾಯಪಟ್ಟರು.
ತಾಲೂಕಿನ ಕೈವಾರದ ತಪೋವನದ ಬಳಿ ಇರುವ ಋಷಿ ವಿಜ್ಞಾನ ವಿದ್ಯಾಕೇಂದ್ರದಲ್ಲಿ ಬೆಂಗಳೂರಿನ ಆಕ್ಸ್ಫರ್ಡ್ ಕಲೆ ಮತ್ತು ವಿಜ್ಞಾನ ಕಾಲೇಜಿನವರು ಆಯೋಜಿಸಿದ್ದ ಎನ್ಎಸ್ಎಸ್ ಶಿಬಿರದಲ್ಲಿ ಯುವಜನತೆ ಮತ್ತು ಆಧ್ಯಾತ್ಮ ವಿಷಯವಾಗಿ ಉಪನ್ಯಾಸ ನೀಡಿ, ಯೌವ್ವನ ಜವಾಬ್ದಾರಿಯುತ ಜೀವನಕ್ಕೆ ಅಡಿಯಿರಿಸುವ ಕಾಲ. ಆಗ ಹೊಸ ಆಲೋಚನೆಗಳು ಮೂಡಲು ಆರಂಭವಾಗುತ್ತವೆ. ಜೀವನದಲ್ಲಿ ಯಶಸ್ಸುಗಳಿಸಬೇಕೆಂದು ಎಲ್ಲರದೂ ಹಂಬಲ. ಆ ನಿಟ್ಟಿನಲ್ಲಿ ಕ್ರಿಯಾಶೀಲರಾಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಮಹಮದ್ ಖಾಸಿಂ ಮಾತನಾಡಿದರು. ಆಕ್ಸ್ಫರ್ಡ್ ಕಾಲೇಜಿನ ಪ್ರಾಂಶುಪಾಲ ಕೆ. ಅಪರ್ಣಾ ರಾವ್, ಉಪನ್ಯಾಸಕಿ ಕವಿತ, ಶಿಬಿರಾಧಿಕಾರಿ ಮರಿಸ್ವಾಮಿ ಇದ್ದರು.
ಅವಿರೋಧ ಆಯ್ಕೆ
ಗುಡಿಬಂಡೆ: ತಾಲೂಕಿನ ವರ್ಲಕೊಂಡ ಗ್ರಾಪಂನಲ್ಲಿ ಹಿಂದೆ ಸದಸ್ಯರಾಗಿ ಆಯ್ಕೆಯಾಗಿದ್ದ ಭಾಗ್ಯಮ್ಮ ಎಂಬುವರ ರಾಜಿನಾಮೆಯಿಂದ ತೆರವಾಗಿದ್ದ ಸದಸ್ಯ ಸ್ಥಾನಕ್ಕೆ ಮಾ.2ರಂದು ಚುನಾವಣೆ ನಿಗಧಿಯಾಗಿತ್ತು. ಈ ಸ್ಥಾನ ಹಿಂದುಳಿದ ವರ್ಗ (ಅ) ಮಹಿಳೆಗೆ ಮೀಸಲಿದ್ದು, ಕೇವಲ ಒಂದು ನಾಮಪತ್ರ ಬಂದಿರುವ ಹಿನ್ನೆಲೆಯಲ್ಲಿ ಸುಶೀಲಮ್ಮ ಎಂಬುವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತೆಂದು ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ಮ.ಗ. ಹೆಗಡೆ ತಿಳಿಸಿದ್ದಾರೆ.
ಬಿಜೆಪಿ ಮನೆ-ಮನೆಗೆ ಕಾರ್ಯಕ್ರಮ
ಮಾಲೂರು: ಬಿಜೆಪಿ ಯುವ ಮೋರ್ಚಾವತಿಯಿಂದ ನರೇಂದ್ರ ಮೋದಿ ಹಾಗೂ ಬಿಜೆಪಿ ಪಕ್ಷದ ಸಾಧನೆ ತಿಳಿಸುವ ಮನೆ-ಮನೆಗೆ ಬಿಜೆಪಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಪಟ್ಟಣದ ಅರಳೇರಿ ರಸ್ತೆಯ ಶ್ರೀ ಶಿರಡಿ ಸಾಯಿಬಾಬಾ ದೇವಾಲಯದಲ್ಲಿ ವಿಶೇಷ ಪೊಜೆ ಸಲ್ಲಿಸಿದ ನಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಪುರಸಭೆ ಸದಸ್ಯ ಲಿಂಗೇಶ್ವರಯ್ಯ, ವಾಜಿಪೇಯಿ ಆಡಳಿತದ ಎನ್ಡಿಎ ಸರ್ಕಾರದ ಸಾಧನೆ ಹಾಗೂ ಹತ್ತು ವರ್ಷದ ಭ್ರಷ್ಟ ಯುಪಿಎ ಸರ್ಕಾರದ ಸಾಧನೆಗಳನ್ನು ತಿಳಿಸುವ ಜತೆಯಲ್ಲಿ ಗುಜಾರತ್ನಲ್ಲಿ ನರೇಂದ್ರ ಮೋದಿ ರವರ ಆಡಳಿತದ ಸಾಧನೆ ತಿಳಿಸುವ ಕಾರ್ಯ ಯುವ ಮೋರ್ಚಾ ಕಾರ್ಯಕರ್ತರು ಮಾಡಲಿದ್ದಾರೆ ಎಂದರು.
ಪಟ್ಟಣದ ಪ್ರತಿ ವಾರ್ಡ್ನ ಎಲ್ಲ ಮನೆಗಳಿಗೂ ಭೇಟಿ ನೀಡುವ ಕಾರ್ಯಕರ್ತರು ಮುಂದಿನ ಹಂತದಲ್ಲಿ ತಾಲೂಕಿನ ಪ್ರತಿ ಗ್ರಾಮಗಳಿಗೂ ಭೇಟಿ ನೀಡಲಿದ್ದಾರೆ ಎಂದರು. ಅಪ್ಪಿರಾಜು, ರಾಮಮೂರ್ತಿ, ಹನುಮಂತರೆಡ್ಡಿ ಇದ್ದರು.
56 ಸಾವಿರ ದಂಡ ವಸೂಲಿ
ಚಿಕ್ಕಬಳ್ಳಾಪುರ: ರಾಜ್ಯ ರಸ್ತೆ ಸಾರಿಗೆ ನಿಗಮ ಚಿಕ್ಕಬಳ್ಳಾಪುರ ವಿಭಾಗದಲ್ಲಿ ವಿಭಾಗೀಯ ಮಾರ್ಗ ತನಿಖಾದಳದವರು ಡಿಸೆಂಬರ್ 2013 ಮತ್ತು ಜನವರಿ 2004 ರ ಮಾಹೆಯಲ್ಲಿ ಕೈಗೊಂಡಿರುವ ಮಾರ್ಗ ತನಿಖೆಯಲ್ಲಿ ವಾಹನಗಳ ಸಂಖ್ಯೆ 2510 , ದಾಖಲಾದ ಪ್ರಕರಣಗಳು 333, ದಂಡ ವಿಧಿಸಿರುವ ಪ್ರಯಾಣಿಕರ ಸಂಖ್ಯೆ 496 ಹಾಗೂ ಒಟ್ಟು ವಸೂಲಿಯಾದ ದಂಡ 56,460 ರು.ಗಳಾಗಿದೆ ಎಂದು ಕ.ರಾ.ರ.ಸಾ.ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.
ಜನವರಿ 2014 ರ ಮಾಹೆಯಲ್ಲಿ ತನಿಖೆಗೆ ಒಳಪಡಿಸಿರುವ ವಾಹನಗಳ ಸಂಖ್ಯೆ 2,572, ದಾಖಲಾದ ಪ್ರಕರಣಗಳು 368, ದಂಡ ವಿಧಿಸಿರುವ ಪ್ರಯಾಣಿಕರ ಸಂಖ್ಯೆ 516 ಹಾಗೂ ಒಟ್ಟು ವಸೂಲಿಯಾದ ದಂಡ 60,425 ರು.ಗಳಾಗಿದೆ. ಸಾರ್ವಜನಿಕರು ಸಾರಿಗೆ ಸಂಸ್ಥೆಯ ವಾಹನಗಳಲ್ಲಿ ಅಧಿಕೃತ ಟಿಕೆಟ್ ಪಡೆಯದೆ ಪ್ರಯಾಣಿಸುವುದು ಶಿಕ್ಷಾರ್ಹ ಅಪರಾಧವಾಗಿರುತ್ತದೆ. ಇದಕ್ಕಾಗಿ ಸ್ಥಳದಲ್ಲಿಯೆ 500 ರು.ಗಳ ರವರೆಗೆ ದಂಡ ತೆರಬೇಕಾಗಿರುತ್ತದೆ. ಇಲ್ಲವೆ ದಂಡ ತೆರೆದಿರುವ ಟಿಕೆಟ್ ರಹಿತ ಪ್ರಯಾಣಿಕರನ್ನು ಪೊಲೀಸ್ ಠಾಣೆಗೆ ಒಪ್ಪಿಸಿ ಮುಂದಿನ ಕ್ರಮ ಜರುಗಿಸಲಾಗುವುದು ಹಾಗೂ ಸಾರಿಗೆ ಸಂಸ್ಥೆಯ ವಾಹನಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರು ನಿಗಧಿತ ಹಣ ನೀಡಿ ಟಿಕೆಟ್ ಪಡೆದು ಪ್ರಯಾಣಿಸಬೇಕೆಂದು ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅರಳೇರಿ ಗ್ರಾಪಂ ಅಧ್ಯಕ್ಷರ ಆಯ್ಕೆ
ಮಾಲೂರು: ತಾಲೂಕಿನ ಅರಳೇರಿ ಗ್ರಾಪಂ ಅಧ್ಯಕ್ಷೆಯಾಗಿ ಆನಂದಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಪಂಚಾಯ್ತಿ ಅಧ್ಯಕ್ಷೆಯಾಗಿದ್ದ ಶ್ಯಾಮಲ ರಾಜಿನಾಮೆ ನೀಡಿದ್ದ ಹಿನ್ನೆಲೆಯಲ್ಲಿ ಗುರುವಾರ ನಡೆದ ಚುನಾವಣೆಯಲ್ಲಿ ಆನಂದಮ್ಮ ಒಬ್ಬರೇ ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದ ತಾಲೂಕು ಶಿಕ್ಷಣಾಧಿಕಾರಿ ಸುಬ್ರಮಣ್ಯ ಆನಂದಮ್ಮರವರ ಆಯ್ಕೆಯನ್ನು ಘೋಷಿಸಿದರು. ಈ ಸಂಧರ್ಭದಲ್ಲಿ ಮಾತನಾಡಿದ ನೂತನ ಅಧ್ಯಕ್ಷೆ ಆನಂದಮ್ಮ, ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ಮಾರ್ಗದರ್ಶನದಲ್ಲಿ ಪಂಚಾಯ್ತಿಯನ್ನು ಅಭಿವೃದ್ಧಿಯತ್ತ ತೆಗೆದುಕೊಂಡು ಹೋಗುವುದಾಗಿ ತಿಳಿಸಿದರು.
ಜಿಪಂ ಸದಸ್ಯ ರಾಮಸ್ವಾಮಿರೆಡ್ಡಿ, ನಿರ್ಗಮಿತ ಅಧ್ಯಕ್ಷೆ ಶ್ಯಾಮಲಮ್ಮ, ಮಾಜಿ ಅಧ್ಯಕ್ಷ ಲಕ್ಷ್ಮಿನಾರಾಯಣ್, ಮುನಿರಾಜು, ಕೃಷ್ಣಪ್ಪ ಪಂಚಾಯತಿ ಸದಸ್ಯರು ಇದ್ದರು.
ಏ.1 ರಿಂದ ಸುಂಕ ವಸೂಲಿ ಇಲ್ಲ
ಶಿಡ್ಲಘಟ್ಟ: ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿರುವ ಸರ್ಕಾರಿ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಏ.1 ರಿಂದ ರೈತರಿಂದ ಸುಂಕ ವಸೂಲಿ ಮಾಡುವುದಿಲ್ಲವೆಂದು ಪುರಸಭೆ ಮುಖ್ಯಾಧಿಕಾರಿ ರಾಮಪ್ರಕಾಶ್ ಸ್ಪಷ್ಟಪಡಿಸಿದರು.
ಪುರಸಭೆ ಸಭಾಂಗಣದಲ್ಲಿ ರೈತ ಮುಖಂಡರೊಂದಿಗೆ ಸಮಾಲೋಚಿಸಿ ಮಾತನಾಡಿ, ಈ ಹಿಂದೆ ಸರ್ಕಾರಿ ರೇಷ್ಮೆ ಗೂಡಿನ ಮಾರುಕಟ್ಟೆಗೆ ಬರುವ ರೈತರಿಂದ ಪುರಸಭೆ ಸುಂಕ ವಸೂಲಿ ಮಾಡುವುದನ್ನು ನಿಷೇಧಿಸಬೇಕೆಂದು ಆಗ್ರಹಿಸಿ ರೈತರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ರೈತರ ಹಿತದೃಷ್ಟಿಯಿಂದ ಪುರಸಭೆಯ ಆಡಳಿತಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ಸುಂಕ ವಸೂಲಿ ಟೆಂಡರ್ ರದ್ದುಗೊಳಿಸಲು ಆದೇಶಿಸಿದ್ದಾರೆ ಎಂದರು.
ರಾಜ್ಯದ ನಾನಾ ಭಾಗಗಳಲ್ಲಿರುವ ಸರ್ಕಾರಿ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಸುಂಕ ವಸೂಲಿ ಮಾಡುವ ಯೋಜನೆಯನ್ನು ಜಾರಿಗೊಳಿಸಿಲ್ಲ. ಆದರೇ ಶಿಡ್ಲಘಟ್ಟ ಪುರಸಭೆಯಿಂದ ಸುಂಕ ವಸೂಲಿ ಮಾಡುತ್ತಿರುವುದನ್ನು ರದ್ದುಗೊಳಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿರುವುದನ್ನು ಪುರಸ್ಕರಿಸಿ ಉಪವಿಭಾಗಾಧಿಕಾರಿ ಶಾಂತಲಾ ಅವರು ಸುಂಕ ವಸೂಲಿ ಟೆಂಡರ್ ರದ್ದುಗೊಳಿಸಲು ಆದೇಶಿಸಿದ್ದು ಎಲ್ಲಾ ರೇಷ್ಮೆ ಬೆಳೆಗಾರರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು. ನಿಯೋಗದಲ್ಲಿ ತಾಲೂಕು ರೈತ ಸಂಘ ಹಾಗೂ ಹಸಿರು ಸೇನೆಯ ಅಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ಪ್ರಗತಿಪರ ರೈತ ಹಿತಲಹಳ್ಳಿ ಎಚ್.ಕೆ. ಸುರೇಶ್, ಕಂಬದಹಳ್ಳಿ ರಾಮರೆಡ್ಡಿ ಇದ್ದರು.
ಪರೀಕ್ಷೆ ಶುಲ್ಕ ಏರಿಕೆ ವಿರೋಧಿಸಿ ಪ್ರತಿಭಟನೆ
ಬಂಗಾರಪೇಟೆ: ಪದವಿ ಪೂರ್ವ ವಿದ್ಯಾರ್ಥಿಗಳ ಪರೀಕ್ಷೆ ಶುಲ್ಕ ಏರಿಸಿ ದಲಿತ ಹಾಗೂ ಹಿಂದುಳಿದ ವಿದ್ಯಾರ್ಥಿಗಳನ್ನು ಶಿಕ್ಷಣದಿಂದ ದೂರ ಉಳಿಯುವಂತೆ ಮಾಡಿದೆ ಎಂದು ಆರೋಪಿಸಿ ಕರ್ನಾಟಕ ವಿದ್ಯಾರ್ಥಿ ಸಂಘಟನೆ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪ್ರತಿಭಟಿಸಿದರು.
ಪಟ್ಟಣದ ಕೆ.ಸಿ. ರೆಡ್ಡಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಬುಧವಾರ ಕಾಲೇಜು ದಿಕ್ಕರಿಸಿ ಕಾಲೇಜಿನಿಂದ ತಹಸೀಲ್ದಾರ್ ಕಚೇರಿವರೆಗೆ ಮೆರವಣಿಗೆ ಮಾಡಿದರು. ಕಳೆದ ವರ್ಷ ಸರ್ಕಾರ ಪದವಿ ಪೂರ್ವ ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕ ಹೆಚ್ಚಳ ಮಾಡಿದ್ದರು, ಈಗ ದಿಢೀರನೆ ದಲಿತ ಹಾಗೂ ಹಿಂದುಳಿ ಕುಟುಂಬಗಳಿಂದ ಬಂದಿರುವ ವಿದ್ಯಾರ್ಥಿಗಳ ಶುಲ್ಕ ಏರಿಕೆ ಮಾಡುವ ಮೂಲಕ ಅವರನ್ನು ಉನ್ನತ ಶಿಕ್ಷಣದಿಂದ ದೂರ ಉಳಿಯುವಂತೆ ಮಾಡಿರುವ ಸರ್ಕಾರ ನೀತಿ ಖಂಡಿಸಿದರು. ಕೂಡಲೆ ಹೆಚ್ಚಳ ಹಣ ವಾಪಸ್ ಪಡೆಯಬೇಕು, ಶಿಕ್ಷಣ ವ್ಯಾಪಾರಿಕರಣ ತಪ್ಪಿಸಬೇಕು ಎಂದು ಒತ್ತಾಯಿಸಿ ತಹಸೀಲ್ದಾರ್ಗೆ ಮನವಿ ನೀಡಿದರು. ಸಂಜಯಕುಮಾರ್, ಸಂತೋಷ್, ಮುನಿರಾಜು, ಆನಂದ್, ಸುನೀಲ್ ಕುಮಾರ್ ಇದ್ದರು.