ರಾಜ್ಯ ಸರ್ಕಾರಿ ನೌಕರರ ಬೇಡಿಕೆ ಈಡೇರಿಸಿ
ಕೋಲಾರ: ರಾಜ್ಯ ಸರ್ಕಾರಿ ನೌಕರರ ನ್ಯಾಯೋಚಿತವಾದ ಬೇಡಿಕೆಗಳನ್ನು ಈಡೇರಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿ ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದಿಂದ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಮನವಿ ಸಲ್ಲಿಸಿ ಮಾತನಾಡಿದ ಮುಖಂಡರು ರಾಜ್ಯ ಸರ್ಕಾರಿ ನೌಕರರಿಗೆ ಈ ಬಾರಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನೌಕರರಿಗೆ ಸಂಬಂಧಿಸಿದಂತೆ ಯಾವುದೇ ಪ್ರಸ್ತಾವನೆಗಳು ಇರುವುದಿಲ್ಲ. ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಈ ಸಾಲಿನ ಆಯವ್ಯಯದಲ್ಲಿ ಜನಪ್ರಿಯ ಯೋಜನೆಗಳಿಗೆ ಒತ್ತು ನೀಡಿರುವುದರಿಂದ ಜನಸಾಮಾನ್ಯರ, ಮಧ್ಯಮ ವರ್ಗದವರ, ಮುಖ್ಯವಾಗಿ ಸರ್ಕಾರಿ ನೌಕರರು ಬೆಲೆ ಏರಿಕೆಯ ಬಿಸಿಯಿಂದ ತತ್ತರಿಸಿದ್ದಾರೆ ಎಂದು ಆರೋಪಿಸಿದರು.
ಕೇಂದ್ರ ಸರ್ಕಾರ ತನ್ನ ನೌಕರರಿಗೆ 7ನೇ ವೇತನ ಆಯೋಗವನ್ನು ರಚಿಸಿದ್ದು ಅವರಿಗೆ ಶೇ.100 ರಷ್ಟು ತುಟ್ಟಿಭತ್ಯೆ ಇದ್ದು, ಅದರಲ್ಲಿ ಶೇ. 50 ರಷ್ಟನ್ನು ಮೂಲ ವೇತನಕ್ಕೆ ಸೇರಿಸಬೇಕೆಂದು ಕೇಂದ್ರ ಸರ್ಕಾರಿ ನೌಕರರು ಇತ್ತೀಚೆಗೆ ಎರಡು ದಿನಗಳ ಮುಷ್ಕರ ಮಾಡಿದ ಪರಿಣಾಮ ಕೇಂದ್ರ ಸರ್ಕಾರವು 50 ರಷ್ಟು ತುಟ್ಟಿಭತ್ಯೆಯನ್ನು ಮೂಲ ವೇತನಕ್ಕೆ ವಿಲೀನ ಮಾಡಲು ತೀರ್ಮಾನಿಸಿದೆ.
ಅದೇ ರೀತಿ ಬ್ಯಾಂಕ್ ನೌಕರರ ಸಂಘಟನೆಗಳು ವೇತನ ಪರಿಷ್ಕರಣೆಗಾಗಿ ರಾಷ್ಟ್ರವ್ಯಾಪ್ತಿ ಎರಡು ದಿನ ಮುಷಕ್ರವನ್ನು ನಡೆಸಿದವು. ಅಂಗನವಾಡಿ ನೌಕರರು, ಅಕ್ಷರದಾಸೋಹ, ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ನರ್ಸಗಳು, ಶಿಕ್ಷಕರು, ಮತ್ತು ಇತರೆ ವರ್ಗದವರ ಸರ್ಕಾರಗಳ ವಿರುದ್ಧ ತಮ್ಮ ಬೇಡಿಕೆಗಳನ್ನು ಈಡೇರಿಸಲು ಹೋರಾಟಗಳನ್ನು ಮಾಡುತ್ತಾ ಬರುತ್ತಿವೆ.
ಈ ಹಿನ್ನೆಲೆಯಲ್ಲಿ ಗುರುವಾರ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಮತ್ತು ಬೆಂಗಳೂರಿನಲ್ಲಿ ಏಕಕಾಲಕ್ಕೆ ಒಂದು ದಿನದ ಧರಣೆ ಸತ್ಯಾಗ್ರಹಕ್ಕೆ ಕರೆ ನೀಡಿ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಮನವಿ ಪತ್ರಗಳನ್ನು ನೀಡುವ ಮೂಲಕ ಮುಖ್ಯಮಂತ್ರಿಗಳನ್ನು ಒತ್ತಾಯಿಸಲು ತೀರ್ಮಾನಿಸಲಾಗಿದ್ದು ಇದರ ಅಂಗವಾಗಿ ಕೋಲಾರದಲ್ಲಿ ಒಕ್ಕೂಟದ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ನೂತನ ಪಿಂಚಣೆ ನೀತಿಯನ್ನು ರಾಷ್ಟ್ರೀಯ ನಿವೃತ್ತಿ ಕಾಯ್ದೆ 2013ನ್ನು ರದ್ದುಪಡಿಸಬೇಕು, ಕೇಂದ್ರ ಸರ್ಕಾರದ 7 ನೇ ಆಯೋಗದ ವ್ಯಾಪ್ತಿಗೆ ರಾಜ್ಯ ಸರ್ಕಾರಿ ನೌಕರರ ಸೇವಾ ವಿಷಯದ ಬಗ್ಗೆಯೂ ಶಿಫಾರಸ್ಸು ಮಾಡಬೇಕು, ತುಟ್ಟಿಭತ್ಯೆಯನ್ನು ಕೇಂದ್ರ ಸರ್ಕಾರ ಮಾದರಿಯಲ್ಲಿ ರಾಜ್ಯ ಸರ್ಕಾರಿ ನೌಕರರಿಗೂ ನೀಡಬೇಕು, ಕೇಂದ್ರದ ಮಾದರಿಯಲ್ಲಿ ಮನೆ ಬಾಡಿಗೆ ಭತ್ಯೆಯನ್ನು ಎಲ್ಲಾ ಜಿಲ್ಲಾ ಮತ್ತು ತಾಲೂಕು, ಹೋಬಳಿ ಮಟ್ಟದಲ್ಲಿ ಪರಿಷ್ಕರಿಸಬೇಕು, ಸರ್ಕಾರಿ ಕಚೇರಿಗಳಲ್ಲಿ ಹಾಗೂ ಶಾಲೆಗಳಲ್ಲಿ ಖಾಲಿಯಿರುವ ಶಿಕ್ಷಕರ ಹುದ್ದೆಗಳನ್ನು ಕೂಡಲೇ ತುಂಬಬೇಕು, ಕರ್ನಾಟಕ ಅತ್ಯವಶ್ಯಕ ಸೇವೆಗಳ ನಿರ್ವಹಣಾ ವಿಧೇಯಕ 2013 ನ್ನು ಅನುಷ್ಠಾನಗೊಳಿಸಬಾರದು, ಗುತ್ತಿಗೆ ಮತ್ತು ಹೊರಗುತ್ತಿಗೆ ಪದ್ಧತಿಯನ್ನು ಕೈಬಿಟ್ಟು ಗುತ್ತಿಗೆ ಆಧಾರದ ಹಾಗೂ ದಿನನಗೂಲಿ ನೌಕರರ ಸೇವೆಯನ್ನು ಕಾಯಂಗೊಳಿಸುವುದು, ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆಯನ್ನು ತಡೆಗಟ್ಟುವುದು, ಅಡುಗೆ ಅನಿಲದ ಮೇಲೆ ವಿಧಿಸಿರುವ ಮಿತಿಯನ್ನು ತೆಗೆದುಹಾಕಿ ಸಾರ್ವಜನಿಕರ ವಿತರಣಾ ವ್ಯವಸ್ಥೆಯನ್ನು ಬಲಪಡಿಸಬೇಕೆಂದು ಒತ್ತಾಯವಾಗಿದೆ.
ಮನವಿ ಸಲ್ಲಿಸುವಾಗ ಜಿಲ್ಲಾಧ್ಯಕ್ಷ ಸಿ.ಆರ್.ಅಶೋಕ್, ರಾಜ್ಯ ಕಾರ್ಯದರ್ಶಿ ಕೆ. ಮಹಮದ್ ಆಸೀಪುಲ್ಲಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಮರನಾರಾಯಣ, ಉಪಾಧ್ಯಕ್ಷ ಅಯಾಜ್ ಅಹ್ಮದ್, ಕಾರ್ಯದರ್ಶಿ ಇಂದ್ರಯ್ಯ, ಇನಿತರ ಪದಾಧಿಕಾರಿಗಳು ಹಾಗೂ ಮುಳಬಾಗಿಲು ತಾಲೂಕು ಅಧ್ಯಕ್ಷ ವೆಂಕಟರವಣಪ್ಪ ಇದ್ದರು.