10ರಂದು ಕುರುಡುಮಲೆಯಲ್ಲಿ ಜೆಡಿಎಸ್ ಅಭ್ಯರ್ಥಿ ಘೋಷಣೆ
ಕೋಲಾರ: ಕೋಲಾರ ಮೀಸಲು ಲೋಕಸಭಾ ಕ್ಷೇತ್ರಕ್ಕೆ ಸೇರಿದ 8 ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಬಗ್ಗೆ ಮತದಾರರು ಹೆಚ್ಚು ಒಲವು ತೋರುತ್ತಿರುವುದರಿಂದ ಸಮರ್ಥ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲು ನಿರ್ಧರಿಸಲಾಗಿದ್ದು ಮಾ.10 ಸೋಮವಾರ ಪ್ರಸಿದ್ಧ ಕುರುಡುಮಲೈ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ನಂತರ ಬಹಿರಂಗ ಸಭೆಯಲ್ಲಿ ಅಭ್ಯರ್ಥಿಯ ಹೆಸರು ಘೋಷಣೆ ಮಾಡಲಾಗುವುದು ಎಂದು ಮಾಜಿ ಸಚಿವ ಕೆ. ಶ್ರೀನಿವಾಸಗೌಡ ತಿಳಿಸಿದರು.
ನಗರದ ಮಹಾಲಕ್ಷ್ಮೀ ಬಡಾವಣೆಯಲ್ಲಿರುವ ತಮ್ಮ ಗಹ ಕಚೇರಿಯಲ್ಲಿ ಶುಕ್ರವಾರ ಕೋಲಾರ ವಿಧಾನ ಸಭಾ ಕ್ಷೇತ್ರದ ಕಾರ್ಯಕರ್ತರ ಸಭೆ ನಡೆಸಿ ಅವರು ಮಾತನಾಡಿದ ಅವರು, ಜೆಡಿಎಸ್ನಿಂದ ಯಾರೇ ಅಭ್ಯರ್ಥಿಯಾದರೂ ಗೆಲ್ಲಿಸಲು ಎಲ್ಲಾ ಮುಖಂಡರು ಮತ್ತು ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಬೇಕೆಂದು ಕರೆ ನೀಡಿದರು.
6 ಬಾರಿ ಸಂಸದರಾಗಿ ಆಯ್ಕೆಯಾದ ಕೆ.ಹೆಚ್. ಮುನಿಯಪ್ಪ ಜಿಲ್ಲೆಯಲ್ಲಿ ಯಾವುದೇ ಅಭಿವೃ
ದ್ಧಿ ಕಾರ್ಯವನ್ನು ಮಾಡದೆ ಈಗ ಚುನಾವಣೆ ಸಮೀಪಿಸುತ್ತಿದ್ದಂತೆ ತರಾತುರಿಯಿಂದ ಶ್ರೀನಿವಾಸಪುರದಲ್ಲಿ ರೇಲ್ವೆ ಕೋಚ್ ಕಾರ್ಖಾನೆಗೆ ಶಂಕುಸ್ಥಾಪನೆ, ಚಿಂತಾಮಣಿಯಲ್ಲಿ ಆಹಾರ ಸಂಸ್ಕರಣಾ ಘಟಕ, ಶಿಡ್ಲಘಟ್ಟದಲ್ಲಿ ಜವಳಿ ಪಾರ್ಕ್ ಮತ್ತು ಮುಳಬಾಗಲಿನ ರಾಷ್ಟ್ರೀಯ ಬಂಡವಾಳ ಉತ್ಪಾದನಾ ವಲಯ ಸ್ಥಾಪನೆ ಬಗ್ಗೆ ಪ್ರಸ್ತಾಪಿಸಿ ಚುನಾವಣೆಯಲ್ಲಿ ಮತಗಳಿಕೆಗೆ ಯತ್ನಿಸುತ್ತಿದ್ದಾರೆಂದು ಟೀಕಿಸಿದರು.
2011 ರಲ್ಲಿ ಅಂದಿನ ನೀರಾವರಿ ಸಚಿವ ಬಸವರಾಜ ಬೊಮ್ಮಾಯಿ ಅವರು ಎತ್ತಿನಹೊಳೆ ಯೋಜನೆಯಿಂದ 9 ಟಿ.ಎಂ.ಸಿ ನೀರು ಮಾತ್ರ ಲಭ್ಯವಿದೆಯೆಂದು ತಿಳಿಸಿದ್ದರು ಆದರೆ, ಈಗ ಇದ್ದಕ್ಕಿಂದ್ದಂತೆ 21.1 ಟಿಎಂಸಿ ನೀರು ದೊರೆಯುತ್ತದೆಂದು ಹೇಳುವ ಮೂಲಕ ವೀರಪ್ಪ ಮೊಯ್ಲಿ ಹಾಗೂ ಕೆ.ಹೆಚ್. ಮುನಿಯಪ್ಪ ಓಟ್ ್ಬ್ಯಾಂಕ್ ರಾಜಕಾರಣ ಮಾಡಲು ಹೊರಟಿಸಿದ್ದಾರೆಂದು ಆರೋಪಿಸಿದರು.
ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಕೆಲ ಮುಖಂಡರು ಇಲ್ಲಿಯವರೆವಿಗೂ ನಡೆದ ಚುನಾವಣೆಗಳಲ್ಲಿ ಮುಖಂಡರ ದ್ವಂದ್ವ ನೀತಿ ಹಾಗೂ ತೆರೆಮರೆಯ ಹೊಂದಾಣಿಕೆ ಕಾರಣವಾಗಿ ಪಕ್ಷ ಸೋಲು ಕಾಣುವಂತಾಯಿತು, ಮುಖಂಡರು ಪ್ರಾಮಾಣಿಕವಾಗಿ ಕೆಲಸ ಮಾಡದೆ ಬೇರೆಯವರೊಂದಿಗೆ ಅನೈತಿಕವಾಗಿ ಒಳ ಹೊಂದಾಣಿಕೆ ಮಾಡಿಕೊಂಡಿದ್ದರಿಂದ ಪಕ್ಷಕ್ಕೆ ಹಿನ್ನಡೆಯಾಗಿದೆ ಎಂದು ದೂರಿದರು.
ಇದಕ್ಕೆ ಪ್ರತಿಕ್ರಿಯಿಸಿದ ಶ್ರೀನಿವಾಸಗೌಡರು ಜಿಲ್ಲೆಯಲ್ಲಿ ಯಾವುದೇ ಕ್ಷೇತ್ರದಲ್ಲಿ ಜೆ.ಡಿ.ಎಸ್. ಶಾಸಕರಿಲ್ಲದ ಸಂದರ್ಭದಲ್ಲೂ ಡಾ. ವೆಂಕಟೇಶ್ ಎಂಬುವವರನ್ನು ಜನತಾದಳದಿಂದ ಲೋಕಸಭೆಗೆ ಆಯ್ಕೆ ಮಾಡಲಾಗಿತ್ತು, ಈ ಬಾರಿ ಮಾಲೂರಿನ ಬಿ.ಸಿ. ಮೈಲಾರಪ್ಪ, ಕೇಶವ, ಕೋಲಾರದ ಜಿ.ಪಂ. ಸದಸ್ಯ ಎಸ್.ಬಿ. ಮುನಿವೆಂಕಟಪ್ಪ ಅವರು ಆಕಾಂಕ್ಷಿಗಳಾಗಿದ್ದು, ಯಾರಿಗೇ ಟಿಕೆಟ್ ನೀಡಿದರೂ ಹಿಂದಿನ ಕಹಿಯನ್ನೆಲ್ಲಾ ಮರೆತು ಕೆಲಸ ಮಾಡಿದಲ್ಲಿ ಜಯ ನಮ್ಮದೇ ಎಂದರು.
ಮುಖಂಡರಾದ ಮೂರಂಡಹಳ್ಳಿ ಗೋಪಾಲ್, ನಾಗನಾಳ ಸೋಮಣ್ಣ, ಎ.ಪಿ.ಎಂ.ಸಿ ಗೋಪಾಲ್, ಮಂಗಮ್ಮ ಮುನಿಸ್ವಾಮಿ, ಮದ್ದೇರಿ ರಾಮೇಗೌಡ, ರಾಜೇಶ್ವರಿ, ಇಬ್ರತುಲ್ಲಾಖಾನ್, ಸುರೇಶ್ ಗೌಡ, ಬೆಳಮಾರನಹಳ್ಳಿ ಆನಂದ್ ಇನ್ನಿತರರು ಇದ್ದರು.