ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಓದಿದ್ದು ಬಿಎ, ಬದುಕಿಗೆ ಆಸರೆ ಹೊಟೇಲ್

Vishwanath S
Updated On : 8 Mar 2014, 1:29 am

ಕೋಲಾರ: ಡಿಗ್ರಿ, ಬಿಇ, ಮೆಡಿಕಲ್ ಮುಂತಾದ ಉನ್ನತ ಶಿಕ್ಷಣ ಪಡೆದು ದೊಡ್ಡ ಕಂಪನಿಗಳಲ್ಲಿ ಕೆಲಸಕ್ಕೆ ಸೇರಬೇಕು, ವಿದೇಶಕ್ಕೆ ವಲಸೆ ಹೋಗಿ ಹೆಚ್ಚು ಹಣ ಸಂಪಾದನೆ ಮಾಡಬೇಕೆಂದು ಹಂಬಲಿಸುವ ಹೆಣ್ಣು ಮಕ್ಕಳಿಗೆ ಹೊಟೇಲ್ ಉದ್ಯಮದಲ್ಲಿ ತಮ್ಮದೇ ಅಸ್ವಿತ್ವ ಉಳಿಸಿಕೊಂಡಿರುವ ಪದ್ಮಾವತಿ ಮಾದರಿಯಾಗಿದ್ದಾರೆ.
ಉಡುಪಿ ಜಿಲ್ಲೆಯ ಕುಂದಾಪುರದ ಬಳಿಯ ಪುಟ್ಟ ಗ್ರಾಮ ಬೀಜಾಡಿ ಪದ್ಮಾವತಿಯ ತಂದೆಯವರ ಸ್ವಂತ ಊರು. ಆದರೆ, ವ್ಯಾಪಾರಕ್ಕಾಗಿ ತಂದೆ ಬೆಂಗಳೂರಿನಲ್ಲಿ ನೆಲಸಬೇಕಾಯಿತು. ಪದ್ಮಾವತಿ ಸೇರಿದಂತೆ ನಾಲ್ಕರು ಹೆಣ್ಣು ಮಕ್ಕಳು, ನಾಲ್ವರು ಗಂಡು ಮಕ್ಕಳನ್ನು ಬೆಂಗಳೂರಿನಲ್ಲಿ ಓದಿಸಲಾಗಿದೆ
ಈ ಪೈಕಿ ಪದ್ಮಾವತಿ ಚಿಕ್ಕಂದಿನಲ್ಲಿ ಹಾಡು, ಚಿತ್ರಕಲೆ ಮುಂತಾದ ಪಠ್ಯೇತರ ಚಟುವಟಿಕೆಯಲ್ಲಿ ಆಸಕ್ತಿ ಹೊಂದಿದ್ದರಿಂದ ತಂದೆಯವರು ಮಗಳ ಭವಿಷ್ಯ ಹಾಳು ಮಾಡುವುದು ಬೇಡವೆಂದು ಎಸ್.ಎಸ್.ಎಲ್.ಸಿ, ಪಿಯುಸಿ ನಂತರ ಬಿಎ ಪದವಿಯ ಜೊತೆಗೆ ಆಕಾಶವಾಣಿ ಈರಣ್ಣ ಎಂದೇ ಖ್ಯಾತಿ ಪಡೆದಿರುವ ದಿವಂಗತ ಎಸ್.ಎಸ್. ಮೂರ್ತಿಯ ಬಳಿ ರಂಗಕಲೆ ಕಲಿಯಲಾರಂಭಿಸಿದರಾದರೂ ಹೆಚ್ಚು ದಿನ ಮುಂದವರೆಯಲು ಅವಕಾಶ ಸಿಗಲಿಲ್ಲ. 1995ರಲ್ಲಿ ಪದ್ಮಾವತಿ ಕೋಲಾರ ರಘುರಾಂ ಅಡಿಗ ಅವರನ್ನು ಮದುವೆಯಾದರು, ಅತ್ತೆ-ಮಾವ ಕೋಲಾರದ ಟೇಕಲ್ ರಸ್ತೆಯಲ್ಲಿ ಮಿನಿ ಹೊಟೇಲ್ ನಡೆಸುತ್ತಿದ್ದರು. ಗಂಡನಿಗೆ ಹೋಟೆಲ್ ಉದ್ಯಮಕ್ಕಿಂತ ಬೇರೇನಾದರೂ ಉದ್ಯೋಗ ಮಾಡಬೇಕೆಂಬ ಆಸೆಯಿತ್ತು. ಹಾಗಾಗಿ ಹೊಟೇಲ್ ಕಡೆ ಅಷ್ಟಾಗಿ ಆಸಕ್ತಿ ತೋರುತ್ತಿರಲಿಲ್ಲ.
ವಯಸ್ಸಾದ ಅತ್ತೆ-ಮಾವನಿಗೆ ಸಹಾಯ ಮಾಡಬೇಕೆಂಬ ಉದ್ದೇಶದಿಂದ ಪದ್ಮಾವತಿ ಮದುವೆಯಾಗಿ ಎರಡು ವರ್ಷದ ನಂತರ ಹೊಟೇಲ್‌ಗೆ  ಪ್ರದೇಶ ಮಾಡಿ ಕೈಲಾದಷ್ಟು ಸಹಾಯ ಮಾಡುತ್ತಿದ್ದರು.
1997ರಲ್ಲಿ ಡೂಮ್‌ಲೈಟ್ ವೃತ್ತದಲ್ಲಿ ರಾಘವೇಂದ್ರ ಹೋಟೆಲ್ ಆರಂಭಿಸಿದಾಗ ಅತ್ತೆ-ಮಾವ ಸೊಸೆಯ ಮೇಲೆ ವಿಶ್ವಾಸ, ನಂಬಿಕೆ ಇಟ್ಟು ಹೊಸ ಹೊಟೇಲ್ ಜವಾಬ್ದಾರಿ ನೀಡಿದರು. ವಿಧವಿಧವಾದ ತಿಂಡಿ ತಿನಿಸುಗಳು ಮಾಡುವುದನ್ನು ಕಲಿಯುವುದು ಅನಿವಾರ್ಯವಾಯಿತು. ತಿಂಡಿಗಳು ರುಚಿಕರವಾಗಿಲ್ಲ ಎಂದು ಗ್ರಾಹಕರು ಟೀಕಿಸಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾಗ ಅದನ್ನೆಲ್ಲಾ ಕೇಳಿಸಿಕೊಂಡು ಕಣ್ಣೀರು ಹಾಕಿದ್ದು ಉಂಟು.
ಆದರೆ, ಅತ್ತೆ-ಮಾವ ತನ್ನ ಮೇಲೆ ಇಟ್ಟಿರುವ ನಂಬಿಕೆ ಕಳೆಯಬಾರದೆಂದು ಛಲ ಮತ್ತು ಗುರಿಯಿಂದ ತಿಂಡಿಗಳನ್ನು ಮಾಡುವುದನ್ನು ಕಲಿತ ಪದ್ಮಾವತಿ ಕಳೆದ 17 ವರ್ಷಗಳಿಂದ ಗ್ರಾಹಕರಿಗೆ ರುಚಿಕರವಾದ ತಿಂಡಿ ತಿನಿಸುಗಳನ್ನು ಮಾಡಿಕೊಡುವ ಮೂಲಕ ಹೊಟೇಲ್ ಉದ್ಯಮದಲ್ಲಿ ಗಟ್ಟಿಯಾಗಿ ನೆಲೆಯೂರಿದ್ದಾರೆ.
ಯಾವುದೇ ಕೆಲಸವನ್ನು ನಿಷ್ಟೆಯಿಂದ-ಪ್ರಾಮಾಣಿಕತೆಯಿಂದ ಮಾಡಿದರೆ ಫಲ ಸಿಗುತ್ತದೆ, ಹೆಣ್ಣು ಮಕ್ಕಳು ಸ್ವಂತ ಉದ್ಯೋಗ ಮಾಡಲು ಕಷ್ಟ, ವ್ಯಾಪಾರ ಮಾಡುವುದು ಹೆಣ್ಣು ಮಕ್ಕಳಿಗೆ ಅಷ್ಟು ಸುಲಭವಲ್ಲ, ಹೇಳಿ ಕೇಳಿ ಬ್ರಾಹ್ಮಣ ಹೆಣ್ಣು ಮಕ್ಕಳು ಹೊಟೇಲ್ ಬಿಜಿನೆಸ್ನ್‌ಲ್ಲಿ ಸಾಧನೆ ಮಾಡುವುದು ಅಸಾಧ್ಯವೆಂದು ಅನೇಕರು ಭಾವಿಸಿದ್ದರು. ಆದರೆ, ತಾನು ಎಲ್ಲಾ ಕಷ್ಟ-ನಷ್ಟಗಳನ್ನು ಎದುರಿಸಿ ಈಗ ಮನೆಯ ಪರಿಸ್ಥಿತಿ ಸುಧಾರಣೆ ಆಗುವಂತೆ ಮಾಡಿದ್ದೇನೆಂದು ಪದ್ಮಾವತಿ ತಮ್ಮ ಯಶೋಗಾಥೆಯನ್ನು ಕನ್ನಡಪ್ರಭಕ್ಕೆ ವಿವರಿಸಿದರು.
ಇರುವ ಕಡೆಯೇ ಸ್ವಾಭಿಮಾನದಿಂದ ಸ್ವಾಲಂಬಿಗಳಾಗಿ ಬದುಕಲು,ಪರಿಶ್ರಮದಿಂದ ಐಟಿ-ಬಿಟಿ ಕಂಪನಿಗಳಲ್ಲಿ ಕೊಡುವ ಸಂಬಳದಷ್ಟೇ ಗಳಿಕೆ ಮಾಡಲು ಸಾಧ್ಯವಿದೆ ಎಂಬುದಕ್ಕೆ ತಮ್ಮ 17 ವರ್ಷಗಳ ಹೊಟೇಲ್ ಪಯಣವೇ ಉತ್ತಮ ದೃಷ್ಟಾಂತವೆಂದು ಹೆಮ್ಮೆಯಿಂದ ಹೇಳಿಕೊಂಡರು.
ಸಾಮಾನ್ಯವಾಗಿ ಹೊಟೇಲ್ ಉದ್ಯಮದಲ್ಲಿ ನಷ್ಟವೆಂಬುದು ಕಡಿಮೆ. ಈ ಎಲ್ಲಾ ಸಾಧನೆಗೆ ಪತಿ ರಾಘುರಾಂ ಅಡಿಗ ಹಾಗೂ ಗ್ರಾಹಕರಿಗೆ ಉತ್ತಮ ಸೇವೆ ನೀಡಲು ಸಹಕಾರ ನೀಡುತ್ತಿರುವ ರಮೇಶ್ ಪ್ರಮುಖ ಕಾರಣರಾಗಿದ್ದಾರೆ.
ಹೊಟೇಲ್‌ಗೆ ಬರುವ ಕೆಲವರು ಬಳಸುವ ಪದಗಳು, ಲೇವಡಿ ಮಾತುಗಳು ಕೆಲಸಲ ಮನಸ್ಸಿಗೆ ನೋವುಂಟು ಮಾಡುತ್ತದೆಯಾದರೂ ಕಾಯಕದ ಮೇಲಿನ ಪ್ರೀತಿ ಹಾಗೂ ಬದುಕಿನ ಅನಿವಾರ್ಯತೆಯಿಂದಾಗಿ ಯಾವುದನ್ನು ಅತಿಯಾಗಿ ತಲೆಗೆ ಹಾಕಿಕೊಳ್ಳದೆ ಜೀವನ ಸಾಗಿಸುತ್ತಿದ್ದು, ಇರುವ ಒಬ್ಬ ಮಗ ಅಶ್ವಿನ್ ದ್ವಿತೀಯ ಪಿಯು ಮಾಡುತ್ತಿದ್ದಾರೆ, ಚನ್ನಾಗಿ ಓದಿದಲ್ಲಿ ಮುಂದೆ ಅವನ ಭವಿಷ್ಯಕ್ಕೆ ಉಪಯುಕ್ತವಾಗುವ ಉನ್ನತ ಶಿಕ್ಷಣ ಮಾಡಿಸಿ ಯಾವುದಾದರೊಂದು ಕೆಲಸಕ್ಕೆ ಸೇರಿಸಬೇಕೆಂಬ ಆಸೆಯಿದೆ. ಹೆಣ್ಣು ಮಕ್ಕಳು ಸ್ವಾತಂತ್ರ್ಯವಾಗಿ ದುಡಿಮೆ ಮಾಡುವುದಕ್ಕೆ ಸಹಾಯಕ್ಕಿಂತ ಉತ್ತೇಜನ, ಸಹಕಾರ ಮುಖ್ಯವೆಂದು ಪ್ರತಿಪಾದಿಸಿದರು.


-ಪಾ.ಶ್ರೀ. ಅನಂತರಾಮ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement