ತಪ್ಪದೇ ನೀತಿ ಸಂಹಿತೆ ಪಾಲಿಸಿ: ಜಿಲ್ಲಾಧಿಕಾರಿ
ಚಿಕ್ಕಬಳ್ಳಾಪುರ: ನೀತಿ ಸಂಹಿತೆ ಉಲ್ಲಂಘಿಸುವುದಕ್ಕೆ ಬಿಡುವುದಿಲ್ಲ. ಒಂದು ವೇಳೆ ಯಾರೇ ಆಗಲಿ ಕಾನೂನಿಗೆ ವಿರುದ್ಧವಾಗಿ ನಡೆದುಕೊಂಡರೇ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿ, ಜಿಲ್ಲಾಧಿಕಾರಿ ಡಾ. ವಿಶಾಲ್ ಎಚ್ಚರಿಕೆ ನೀಡಿದರು.
ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಲೋಕಸಭಾ ಚುನಾವಣೆ ಶಾಂತಿಯುತವಾಗಿ, ಪಾರದರ್ಶಕವಾಗಿ ನಡೆಸಲು ಜಿಲ್ಲಾಡಳಿತಕ್ಕೆ ಸಹಕಾರ ನೀಡಬೇಕು. ನಿಯಮ ತಿಳಿದಿಲ್ಲ ಎಂಬ ಸಬೂಬು ಹೇಳಿ ನೀತಿ ಸಂಹಿತೆ ಉಲ್ಲಂಘನೆಗೆ ಕಾರಣವಾದರೆ ಬಿಡುವುದಿಲ್ಲ. ಇದರ ಜೊತೆಗೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿ ತಪ್ಪುಗಳು ನಡೆಯಲು ಅವಕಾಶ ನೀಡಿದರೂ ಸಹಿಸುವುದಿಲ್ಲ ಎಂದು ತಿಳಿಸಿದರು.
ಪ್ರಚಾರಕ್ಕಾಗಿ ಸಭೆ ಸಮಾರಂಭಗಳನ್ನು ನಡೆಸಲು, ಚುನಾವಣೆ ಖರ್ಚು ವೆಚ್ಚ ಸೇರಿದಂತೆ ಇತರೆ ವಿಷಯಗಳಿಗೆ ಸಂಬಂಧಿಸಿದಂತೆ ಸಂಬಂಧಪಟ್ಟವರಿಂದ ಅನುಮತಿ ಕಡ್ಡಾಯವಾಗಿ ಪಡೆದುಕೊಂಡಿರಬೇಕು. ಅದರಲ್ಲೂ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಯ ಖರ್ಚು 70 ಲಕ್ಷ ಮೀರಬಾರದು. ಇದಕ್ಕಾಗಿ ಚುನಾವಣಾ ಖರ್ಚಿಗಾಗಿ ಪ್ರತ್ಯೇಕ ಬ್ಯಾಂಕ್ ಖಾತೆ ತೆರೆಯಬೇಕೆಂದರು.
ಚುನಾವಣಾ ವಿಷಯಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಲು ಸಹಾಯವಾಣಿ ಸ್ಥಾಪಿಸಿದ್ದು ಟೋಲ್ ಫ್ರಿ ನಂಬರ್ 1950, ಕಂಟ್ರೋಲ್ ರೂ.ನಂ. 08156-277221,277222 ಅನ್ನು ಸಂಪರ್ಕಿಕಿಸಬಹುದೆಂದರು.
ಮತದಾನದ ಬಗ್ಗೆ ಜಾಗೃತಿ ಮೂಡಿಸಲು ಸ್ವೀಪ್ ಕಮಿಟಿ ಸ್ಥಾಪಿಸಲಾಗಿದ್ದು, ಇದು ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನೇತೃತ್ವದಲ್ಲಿ ನಡೆಯಲಿದೆ. ಈ ಬಾರಿ ಮಾಧ್ಯಮ ಪ್ರಮಾಣೀಕರಣ ಹಾಗೂ ಮೇಲುಸ್ತುವಾರಿ ಸಮಿತಿ (ಎಂ.ಸಿ.ಎಂ.ಸಿ.) ಸ್ಥಾಪಿಸಲಾಗಿದ್ದು, ಚುನಾವಣೆ ಸಂಬಂಧ ಯಾವುದೇ ಜಾಹಿರಾತು ಪ್ರಸಾರಗೊಳ್ಳಲು ಈ ಕಮಿಟಿಯಿಂದ ಒಪ್ಪಿಗೆ ಪಡೆಯಬೇಕಾಗಿದೆ. ಈ ಕಮಿಟಿ ಕಾಸಿಗಾಗಿ ಸುದ್ದಿಗಳ ಮೇಲೂ ಈ ಕಮಿಟಿ ನಿಗಾ ವಹಿಸುತ್ತದೆ ಎಂದರು. ಈ ಬಾರಿಯ ಚುನಾವಣೆಯಲ್ಲಿ ಮತದಾರ ತಮಗೆ ಚುನಾವಣಾ ಕಣದಲ್ಲಿರುವ ಯಾವೊಬ್ಬ ಅಭ್ಯರ್ಥಿ ಬಗ್ಗೆ ಒಲವು ಇಲ್ಲವೆಂದು ನಿರ್ಧಾರಕ್ಕೆ ಬಂದಾಗ ವ್ಯತಿರಿಕ್ತ ಮತವನ್ನು ಚಲಾಯಿಸಲು ಅವಕಾಶವಿದೆ. ಕೇವಲ ಮತದಾರ ಗುರುತಿನ ಚೀಟಿ ಹೊಂದಿದ್ದರೆ ಮಾತ್ರ ಮತದಾನ ಹಕ್ಕು ಸಿಗುವುದಿಲ್ಲ. ಮತದಾರ ಪಟ್ಟಿಯಲ್ಲಿ ಹೆಸರು ಕಡ್ಡಾಯವಾಗಿರಬೇಕು. ಈ ಹಿನ್ನೆಲೆಯಲ್ಲಿ ಮತದಾರರು ತಮ್ಮ ಹೆಸರು ಪಟ್ಟಿಯಲ್ಲಿ ಸೇರಿಸಲು ಮತ್ತು ಇರುವುದರ ಖಾತ್ರಿಪಡಿಸಲು ಮುಂದಾಗಬೇಕೆಂದು ಕೋರಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸತ್ಯಭಾಮ ಇದ್ದರು.