ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಬಲಗೈ ಜನಾಂಗ ಕಡೆಗಣಿಸಿದರೆ ಬಿಜೆಪಿಗೆ ನಷ್ಟ: ಮಧುಸೂದನ್

Vishwanath S
Updated On : 8 Mar 2014, 1:32 am

ಕೋಲಾರ: ಲೋಕಸಭಾ ಚುನಾವಣೆಯ ಕೋಲಾರ ಮೀಸಲು ಕ್ಷೇತ್ರಕ್ಕೆ ಬಿಜೆಪಿಯಿಂದ ಬಲಗೈ ಜನಾಂಗಕ್ಕೆ ಸೇರಿದ ಡಿ.ಎಸ್. ವೀರಯ್ಯ  ಅವರಿಗೆ ಟಿಕೆಟ್ ನೀಡದಿದ್ದರೆ ಪಕ್ಷಕ್ಕೆ ತಕ್ಕ ಶಾಸ್ತಿ ಮಾಡುವುದಾಗಿ ಜಿಲ್ಲಾ ಬಿಜೆಪಿ ಎಸ್.ಸಿ. ಮೋರ್ಚಾ ಮುಖಂಡ ಕೆ.ಹೆಚ್. ಮಧುಸೂದನ್ ಎಚ್ಚರಿಕೆ ನೀಡಿದರು.
ನಗರದ ಪತ್ರಕರ್ತರ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಡಿ.ಎಸ್. ವೀರಯ್ಯ ಅವರು ಈ ಕ್ಷೇತ್ರದಲ್ಲಿ ಕಳೆದ 15ವರ್ಷಗಳಿಂದ ಪ್ರಮಾಣಿಕವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ, ಎರಡು ಬಾರಿ ಅವರು ಅಲ್ಪಮತಗಳ ಅಂತರದಿಂದ ಸೋಲುವುದಕ್ಕೆ ಮಾಲೂರಿನ ಕೃಷ್ಣಯ್ಯಶೆಟ್ಟಿ ಸರಿಯಾಗಿ ಕೆಲಸ ಮಾಡದಿರುವುದು ಕಾರಣವೆಂದು ಆರೋಪಿಸಿದರು. ದಲಿತರನ್ನು ರಾಜಕೀಯ ಭಿಕ್ಷುಕರೆಂದು ಪರಿಗಣಿಸಿರುವ ಸಾಮ್ರಾಜ್ಯ ಶಾಹಿ ಕಾರ್ಯ ನೀತಿಯನ್ನು ಬಿಜೆಪಿ ಮುಖಂಡರು ಅನುಸರಿಸುತ್ತಿದ್ದಾರೆಂದ ಅವರು, ಬಲಗೈ ಜನಾಂಗವನ್ನು ಕಡೆಗಣಿಸಿದರೆ ಬಿಜೆಪಿಗೆ ನಷ್ಟವಾಗುತ್ತದೆ ಎಂದರು.
ರಾಜ್ಯದ ಲೋಕಸಭಾ ಚುನಾವಣೆಗೆ ಕೋರ್ ಕಮಿಟಿ ರಚಿಸಿದೆ ಆದರೆ ಈ ಕಮಿಟಿಯಲ್ಲಿ ಇರುವವರೆಲ್ಲಾ ಸವರ್ಣೀಯರೇ ಆಗಿದ್ದಾರೆ, ಯಾವೊಬ್ಬ ದಲಿತರು, ಅಲ್ಪಸಂಖ್ಯಾತರನ್ನಾಗಲಿ ಈ ಕಮಿಟಿಯಲ್ಲಿ ಸೇರಿಸಿಕೊಳ್ಳದೆ ರಾಜಕೀಯವಾಗಿ ದಿವಾಳಿತನ ಮಾಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವೀರಯ್ಯ ಅವರನ್ನು ಹತ್ತಿಕ್ಕುವ ಸಲುವಾಗಿ ಆಪರೇಷನ್ ಕಮಲದ ಮೂಲಕ, ಬಿ.ಜೆ.ಪಿ.ಗೆ ಬಂದ ಬಂಗಾರಪೇಟೆಯ ಎಂ. ನಾರಾಯಣಸ್ವಾಮಿ ಅವರನ್ನು ವಿಧಾನ ಸಭಾ ಚುನಾವಣೆಯಲ್ಲಿ ಗೆಲ್ಲಿಸಿದ್ದೆವು. ಈ ಸಂದರ್ಭದಲ್ಲಿ, ಮುಂದಿನ ಬಾರಿ ಬಿ.ಪಿ. ವೆಂಕಟಮುನಿಯಪ್ಪ ಅವರಿಗೆ ಅವಕಾಶ ಮಾಡಿಕೊಡುವುದಾಗಿ ಹೇಳಿದ್ದ ನಾರಾಯಣಸ್ವಾಮಿ ಮಾತು ತಪ್ಪಿ ಮತ್ತೆ ಸ್ಪರ್ಧಿಸಿದರು, ನಾರಾಯಣಸ್ವಾಮಿಯವರಿಗೆ ಈ ಹಿಂದೆ ಯಾವುದೇ ಸಂದರ್ಭದಲ್ಲೂ ಲೋಕಸಭೆ ಚುನಾವಣೆಗೆ ಟಿಕೆಟ್ ನೀಡುವುದಾಗಿ ಭರವಸೆ ನೀಡಿಲ್ಲವಾದರೂ, ಬಲಗೈ ಸಮುದಾಯ ವಿರುದ್ಧ ನಾರಾಯಣಸ್ವಾಮಿಯವರನ್ನು ಎತ್ತಿ ಕಟ್ಟುವಂತ ಕೆಲಸವನ್ನು ಸವರ್ಣೀಯ ಬಿ.ಜೆ.ಪಿ ನಾಯಕರು ಷಡ್ಯಂತ್ರ ಮಾಡಿರುವುದಾಗಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ದಲಿತ ಕ್ರಿಯಾ ವೇದಿಕೆ ಜಿಲ್ಲಾಧ್ಯಕ್ಷ ವಿ.ಕೆ.ಚಂದ್ರಶೇಖರ್, ರಾಜ್ಯಾಧ್ಯಕ್ಷ ಕೆ.ಚಂದ್ರಶೇಖರ್, ಬಿ.ಜೆ.ಪಿ ರೈತ ಮೋರ್ಚಾ ಮಾರ್ಕೆಟ್ ಕೆಂಪಣ್ಣ, ನಾರಾಯಣಸ್ವಾಮಿ, ವೆಂಕಟರಾಮಪ್ಪ ಮುಂತಾದವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement