ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಭಾಷಾಬಾಂಧವ್ಯದಿಂದ ರಾಷ್ಟ್ರೀಯ ಭಾವೈಕ್ಯತೆಗೆ ಸಹಕಾರಿ

Vishwanath S
Updated On : 8 Mar 2014, 1:32 am

ಗೌರಿಬಿದನೂರು: ತಾಲೂಕಿನಲ್ಲಿ ತೆಲುಗು ಮತ್ತು ಕನ್ನಡ ಎರಡೂ  ಭಾಷೆಗಳ ನಡುವೆ ಮಧುರ ಬಾಂಧ್ಯವಿದೆ ಎಂದು ಐದನೇ ತಾಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸಾ.ನ. ಲಕ್ಷ್ಮಣಗೌಡ ತಿಳಿಸಿದರು. ತಾಲೂಕಿನ ಮಂಚೇನಹಳ್ಳಿಯಲ್ಲಿ ನಡೆದ ಐದನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರಾದೇಶಿಕ ಭಾಷೆಗಳನ್ನು ಆಡುವ ಜನರ ನಡುವೆ ಸಾಮರಸ್ಯ, ಸಹಬಾಳ್ವೆ ನೆಲೆ ನಿಲ್ಲಬೇಕು. ಇದು ದೇಶದ ಸಮಗ್ರತೆಯನ್ನು ರಕ್ಷಿಸುತ್ತದೆ. ಕನ್ನಡಿಗರಲ್ಲಿ ಇಂತಹ ಮನೋಭಾವ ನೆಲೆಸಿದೆ. ಆದ್ದರಿಂದಲೇ ರಾಜ್ಯದಲ್ಲಿ ಭಾಷೆಯ ಹೆಸರಿನಲ್ಲಿ ಈವರೆಗೂ ಯಾವುದೇ ತರಹ ಕಲಹಗಳು ನಡೆದಿಲ್ಲ ಎಂದರು.
ಸಾಹಿತಿಗಳನ್ನು ಕರೆಸಿ ಸಾಹಿತ್ಯ ವಿಚಾರ ಗೋಷ್ಠಿಗಳನ್ನು ನಡೆಸುವಂತಾಗಬೇಕು. ಕೇವಲ ಪಠ್ಯ ಕ್ರಮಕ್ಕೆ ಬದ್ಧರಾಗಿ ಸಾಹಿತ್ಯವನ್ನು ಕಲಿಸುವ ಪರಿಪಾಟ ಇನ್ನಾದರೂ ನಿಲ್ಲಬೇಕು. ಪಠ್ಯ ಪುಸ್ತಕವಾಗಿ ಅಭ್ಯಸಿಸಿದ ಸಾಹಿತ್ಯ ಕೇವಲ ಪರೀಕ್ಷೆಗಾಗಿ. ಆದರೆ ಆಸಕ್ತಿಯಿಂದ ಅಭ್ಯಸಿಸಿದ ಸಾಹಿತ್ಯ ಬದುಕನ್ನು ರೂಪಿಸುತ್ತದೆ. ಮಾನವೀಯ ಮೌಲ್ಯಗಳನ್ನು ಬದುಕಿನಲ್ಲಿ ಮಿಲಿತವಾಗುವಂತೆ ಮಾಡುತ್ತದೆ ಎಂದು ಪ್ರತಿಪಾದಿಸಿದರು.
ರಾಷ್ಟ್ರಕವಿ ಕುವೆಂಪುರವರು ನಮ್ಮಲ್ಲಿನ ನಿರಾಸಕ್ತಿ ಗುರುತಿಸಿ ಬಾರಿಸು ಕನ್ನಡ ಡಿಂಡಿಮವ ಎಂದು ಕರೆ ನೀಡಿದರು. ಅದರಂತೆ ನಾಡಿನೆಲ್ಲೆಡೆ ಕನ್ನಡದ ಜಾಗೃತಿಯ ಡಿಂಡಿಮ ಮೊಳಗುತ್ತಿದೆ. ಇನ್ನಾದರೂ ಎಚ್ಚೆತ್ತಕೊಂಡು ರಾಜರತ್ನಂರವರ ಹೆಂಡ್ಕುಡುಕ ರತ್ನನಂತಹ ವೀರ ಅಭಿಮಾನವಲ್ಲದಿದ್ದರೂ ನಿರಾಭಿಮಾನದ ಮುಸುಕಿನಿಂದ ಹೊರಬರಬೇಕು ಎಂದು ಕರೆ ನೀಡಿದರು.
ಚಿಕ್ಕಬಳ್ಳಾಪುರ ಶಾಸಕ ಡಾ.ಸುಧಾಕರ್ ಮಾತನಾಡಿದರು. ಅಧ್ಯಕ್ಷತೆಯನ್ನು ತಾಲೂಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಿ.ಜೆ. ಚಂದ್ರಮೋಹನ್ ವಹಿಸಿದ್ದರು. ನಿಕಟ ಪೂರ್ವ ಅಧ್ಯಕ್ಷ ಡಿ.ಎಸ್. ಹನುಂತರಾವ್, ಜಿಲ್ಲಾ ಅಧ್ಯಕ್ಷ ವೈ.ಎಲ್. ಹನುಮಂತರಾವ್, ಜಿಪಂ ಉಪಾಧ್ಯಕ್ಷ ರಾಘವೇಂದ್ರ ಹನುಮಾನ್, ಸದಸ್ಯೆ ರಾಧಮ್ಮ, ತಾಪಂ ಸದಸ್ಯೆ ಪ್ರಭಾ ನಾರಾಯಣಗೌಡ, ಶಿವಶಂಕರ್, ನಾರಾಯಣಸ್ವಾಮಿ, ಜಿ.ವಿ. ಕೃಷ್ಣಮೂರ್ತಿ, ಗುರುಶಂಕರಪ್ಪ, ಜಿಪಂ ಜಗನ್ನಾಥ, ಗೋಪಾಲಗೌಡ ಕಲ್ವಮಂಜರಿ ಉಪಸ್ಥಿತರಿದ್ದರು. ಪ್ರಾಧ್ಯಾಪಕ ಕೆ.ವಿ. ವರಹಾಮೂರ್ತಿ ನಿರೂಪಿಸಿ, ಚಂದ್ರಮೋಹನ್ ಸ್ವಾಗತಿಸಿ ಹರೀಶ್ ಹತ್ವಾಲ್ ವಂದಿಸಿದರು. ಹಳೆಯ ವಿದ್ಯಾರ್ಥಿಗಳು, ಪರಿಷತ್ತು, ವಿನಾಯಕ ಸೇವಾ ಸಮಿತಿ, ಸಾದರ ಕ್ಷೇಮಾಭಿವೃದ್ಧಿ ಸಂಘದ ಲಕ್ಷ್ಮಣಗೌಡರನ್ನು ಸನ್ಮಾನಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement