ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ರೈಲಿನಲ್ಲಿ ಪುಂಡರಿಂದ ಪ್ರಯಾಣಿಕರಿಗೆ ತೊಂದರೆ

Vishwanath S
Updated On : 8 Mar 2014, 1:30 am

ಬಂಗಾರಪೇಟೆ: ರೈಲಿನಲ್ಲಿ ಗುಂಪು ಕಟ್ಟಿಕೊಂಡು ಪ್ರಯಾಣಿಕರಿಗೆ ತೊಂದರೆ ಕೊಡುತ್ತಿದ್ದ ಪುಂಡರ ಗುಂಪನ್ನು ಪ್ರಶ್ನಿಸಿದ್ದಕ್ಕೆ ಜನರನ್ನು ನಿಲ್ದಾಣಕ್ಕೆ ಕರೆತಂದು ಹಲ್ಲೆ ಮಾಡಿದ್ದು, ಪ್ರಯಾಣಿಕ ತೀವ್ರವಾಗಿ ಗಾಯಗೊಂಡಿರುವ ಘಟನೆ ಟೇಕಲ್ ರೇಲ್ವೆ ನಿಲ್ದಾಣದಲ್ಲಿ ನಡೆದಿದೆ.
ಪುಂಡರ ಗುಂಪಿನ ದಾಳಿಗೆ ತೀವ್ರವಾಗಿ ಗಾಯಗೊಂಡಿರುವ ಯುಕನನ್ನು ಕೆಜಿಎಫ್ ನಿವಾಸಿ ಅರಸನ್ ಎಂದು ತಿಳಿದು ಬಂದಿದೆ. ಪ್ರತಿ ನಿತ್ಯ ಟೇಕಲ್‌ನಿಂದ ಸಾವಿರಾರು ಮಂದಿ ಬೆಂಗಳೂರಿಗೆ ಹೋಗಿ ಬರುವರು.   ಬೆಂಗಳೂರಿನಿಂದ ರಾತ್ರಿ 7.30ಕ್ಕೆ ಬಿಡುವ ಬಂಗಾರಪೇಟೆ ಎಕ್ಸಪ್ರೆಸ್ ರೈಲಿನಲ್ಲಿ ನಿತ್ಯ ಟೇಕಲ್‌ನಿಂದ ಬೆಂಗಳೂರಿಗೆ ಪ್ರಯಾಣಿಸುವ ಕೆಲವು ಪುಂಡರ ಗುಂಪು ನಿತ್ಯ ಕುಡಿದು ಹುಡುಗಿಯರನ್ನು ಚುಡಾಯಿಸುವುದು, ಇತರೆ ಪ್ರಯಾಣಿಕರು ಧ್ವನಿ ಎತ್ತಿದರೆ ಅವರ ಮೇಲೆ ಹಲ್ಲೆ ಮಾಡುವುದು ಸಾಮಾನ್ಯವಾಗಿದೆ.
ಇದರಿಂದ ಈ ರೈಲಿನಲ್ಲಿ ಇತರೆ ಪ್ರಯಾಣಿಕರು ಬರಲು ಹೆದರುವಂತಾಗಿದೆ. ಕಳೆದ ರಾತ್ರಿ ಪುಂಡರ ಗುಂಪು ಕುಡಿದು ಸಹ ಪ್ರಯಾಣಿಕರಿಗೆ ತೊಂದರೆ ಮಾಡುತ್ತಿದ್ದರು.
  ಇದನ್ನು ನಿಯಂತ್ರಿಸಲು ಪ್ರಯಾಣಿಕರು ಯತ್ನಿಸಿದರಿಂದ ಆಕ್ರೋಶಗೊಂಡ ಪುಂಡರ ಗುಂಪು ಟೇಕಲ್‌ನಲ್ಲಿರುವ ತಮ್ಮ ಸ್ನೇಹಿತರಿಗೆ ಮೊಬೈಲ್ ಮೂಲಕ ಮಾತನಾಡಿ 50 ಜನರನ್ನು ಕರೆಸಿ ರೈಲು ಬರುತ್ತಿದ್ದಂತೆ ತಮ್ಮನ್ನು ಪ್ರಶ್ನಿದವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿಸಿದ್ದಾರೆ.
 ಈ ವೇಳೆ ಕಿಟಕಿ ಬಳಿ ಕುಳಿತಿದ್ದ ಕೆಜಿಎಎಫ್ ನಿವಾಸಿ ಅರಸನ್ ಎಂಬಾತನ ತಲೆಗೆ ತೀವ್ರ ಗಾಯಗಳಾಗಿವೆ. ಈ ಬಗ್ಗೆ ಪಟ್ಟಣದ ರೈಲ್ವೆ ಪೊಲೀಸರಿಗೆ ಪ್ರಯಾಣಿಕರು ದೂರು ನೀಡಿದರೆ ಟೇಕಲ್ ತಮ್ಮ ವ್ಯಾಪ್ತಿಗೆ ಬರುವುದಿಲ್ಲ ಬೆಂಗಳೂರಿನ ಕಂಟೋನ್ಮೆಂಟ್ ಠಾಣೆಗೆ ದೂರು ನೀಡಿ ಎಂದು ಕೈ ಎತ್ತಿದರು ಎನ್ನಲಾಗಿದೆ.
ನಂತರ ಗಾಯಾಳು ಅರಸನ್ ಸ್ನೇಹಿತರು ರೈಲ್ವೆ ಕಂಟ್ರೋಲ್‌ರೂಂಗೆ ಮಾಹಿತಿ ನೀಡಿ ಅಸರನ್‌ರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರು. ಪುಂಡರ ಗುಂಪು ಕುಡಿದು ಗಲಾಟೆ ಮಾಡಿ, ರೈಲಿನ ಸೀಟನ್ನು ಹರಿದರು ಇದನ್ನು ಕೇಳಿದಕ್ಕೆ ನಮ್ಮ ಮೇಲೆ ಅವಾಚ್ಯ ಶಬ್ದಗಳಿಂದ ನಿಂದಿಸಿದರು ಎಂದು ಪ್ರತ್ಯೇಕ್ಷದರ್ಶಿ ಕುಮಾರ್ ಕನ್ನಡಪ್ರಭಕ್ಕೆ ತಿಳಿಸಿದರು.
ಟೇಕಲ್ ನಿಲ್ದಾಣದ ಬಳಿ ಇಂತಹ ಪ್ರಕರಣಗಳು ಆಗಾಗ ನಡೆಯುತ್ತಲೆ ಇರುತ್ತದೆ, ಪ್ರಯಾಣಿಕರ ಹಿತದೃಷ್ಟಿಯಿಂದ ಔಟ್‌ಪೋಸ್ಟ್ ರೈಲ್ವೆ ಠಾಣೆ ಪ್ರಾರಂಭಿಸುವಂತೆ ಹಲವು ಬಾರಿ ಪ್ರಯಾಣಿಕರು ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪರಲ್ಲಿ ಮನವಿ ಮಾಡಿದ್ದರೂ ಕಾರ್ಯಗತವಾಗಿಲ್ಲ ಎಂದು ಪ್ರಯಾಣಿಕರು ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ರಾತ್ರಿ ವೇಳೆ ಬರುವ ರೈಲುಗಳ ಸಮಯದಲ್ಲಿ ಟೇಕಲ್‌ನಲ್ಲಿ ಪೊಲೀಸರು ಗಸ್ತು ಇರದೆ ಇರುವುದರಿಂದ ಇಂತಹ ಪ್ರಕರಣಗಳು ನಡೆಯುತ್ತಿದೆ. ಆದ್ದರಿಂದ ಕೂಡಲೆ ರಾತ್ರಿ ವೇಳೆ ನಿಲ್ದಾಣದಲ್ಲಿ ಪೊಲೀಸರು ರೈಲುಗಳು ಬಂದು ಹೋಗುವ ವೇಳೆ ಇರಬೇಕು. ಇಲ್ಲವೇ ಔಟ್ ಪೊಲೀಸ್ ಠಾಣೆ ತೆರೆಯಬೇಕು ಎಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement