ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

'ಶಾಶ್ವತ ಸೇವಾಯೋಜನೆ ಹಮ್ಮಿಕೊಳ್ಳಿ: ಆರ್. ಕುಮಾರ್

Vishwanath S
Updated On : 8 Mar 2014, 1:32 am

ಗೌರಿಬಿದನೂರು: ಲಯನ್ಸ್ ಸಂಸ್ಥೆ ವತಿಯಿಂದ ಮಾಡುತ್ತಿರುವ ಸೇವಾ ಕಾರ್ಯಕ್ರಮಗಳೊಂದಿಗೆ ಶಾಶ್ವತ ಸೇವಾಯೋಜನೆಗಳನ್ನು ಹಮ್ಮಿಕೊಳ್ಳಬೇಕೆಂದು ರಾಜ್ಯಪಾಲ ಆರ್. ಕುಮಾರ್ ಜಿಲ್ಲೆಯ ಲಯನ್ ಸಂಸ್ಥೆಗಳ ಪದಾಧಿಕಾರಿಗಳಿಗೆ ಸಲಹೆ ನೀಡಿದರು.
ಆಚಾರ್ಯ ಮಹಿಳಾ ಕಾಲೇಜು ಸಭಾಭವನದಲ್ಲಿ ನಡೆತ ನಿರ್ದೇಶಕರ ಸಮಾವೇಶದಲ್ಲಿ ಮಾತನಾಡಿ, ಂಸ್ಥೆಯಿಂದ ಹಮ್ಮಿಕೊಳ್ಳುತ್ತಿರುವ ಉಚಿತ ಆರೋಗ್ಯ ಶಿಬಿರಗಳು, ನೇತ್ರ ಚಿಕಿತ್ಸಾ ಶಿಬಿರಗಳಿಂದ ಸಮಾಜಕ್ಕೆ ಸೇವಾ ಸೌಲಭ್ಯ ಸಿಗುತ್ತಿದೆ. ಆದರೂ ರೋಗಿಗಳಿಗೆ ಉಪಯೋಗವಾಗುವ ಆಸ್ಪತ್ರೆಗಳ ನಿರ್ಮಾಣ, ವಿದ್ಯಾರ್ಥಿಗಳಿಗೆ ಅನುವಾಗುವಂತೆ ಶಾಲಾಕೊಠಡಿಗಳ ನಿರ್ಮಾಣ, ಕುಡಿಯುವ ನೀರಿನ ಯೋಜನೆಗಳು, ಮುಂತಾದ ಶಾಶ್ವತ ಸೇವಾಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕೆಂದು ಕರೆ ನೀಡಿದರು.
ಆಸ್ಪತ್ರೆ ನಿರ್ಮಾಣಕ್ಕೆ ಒಂದು ಲಕ್ಷ ರು. ನೀಡಿದರು. ವಂತಿಗೆ ಸಂಗ್ರಹಿಸಿ ಆಸ್ಪತ್ರೆ ನಿರ್ಮಾಣ ಪೂರೈಸಬೇಕೆಂದು ಸೂಚಿಸಿದರು. ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ನೀಡಲಾಯಿತು. ಕಾರ್ಯಕ್ರಮದಲ್ಲಿ ಸ್ಥಳೀಯ ಲಯನ್ ಕ್ಲಬ್ ಅಧ್ಯಕ್ಷ ಡಾ.ಎಂ.ಎನ್. ಶ್ರೀಧರ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲೆಯ ಕಾರ್ಯದರ್ಶಿ ಸಂತಾನಂ, ಖಜಾಂಚಿ ಉನ್ನಿ ಕೃಷ್ಣ ನಾಯಕ್, ರೀಜನಲ್ ಛೇರ್ಮೆನ್ ವಿ. ರವೀಂದ್ರ ಇದ್ದರು.
ಗ್ರಾಹಕರ ಸೋಗಿನಲ್ಲಿ ಚಿನ್ನ ಕಳವು
ಕೆಜಿಎಫ್: ಚಿನ್ನದ ಒಡವೆ ಖರೀದಿಸುವ ನೆಪದಲ್ಲಿ ಬಂದ ದುಷ್ಕರ್ಮಿಗಳು ಅಂಗಡಿ ಸಿಬ್ಬಂದಿಯ ಗಮನ ಬೇರೆಡೆಗೆ ಸೆಳೆದು ಚಿನ್ನದ ಒಡವೆಗಳನ್ನು ಕಳವು ಮಾಡಿ ಪರಾರಿಯಾಗಿರುವ ಘಟನೆ ಬೇತಮಂಗಲ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬೇತಮಂಗಲ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಶುಭ್ ಜ್ಯುವಲೆರಿ ಮಾಲೀಕ ಜಿ. ಹರೀಶ್ ಎಂಬುವರು ಮಧ್ಯಾಹ್ನ ಊಟಕ್ಕೆ ಹೋಗಿದ್ದ ಸಮಯದಲ್ಲಿ  ಅಂಗಡಿಗೆ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಗಳು ಅಂಗಡಿಯಲ್ಲಿದ್ದ ಸಿಬ್ಬಂದಿ ಮುನಿಯಪ್ಪ ಅವರ ಬಳಿ ಚಿನ್ನದ ಓಲೆಗಳು ಹಾಗೂ ಉಂಗುರ ಬೇಕು ಎಂದು ಕೇಳಿದ್ದು ಅವರು ಎಲ್ಲಾ ಮಾದರಿಯ ಒಡವೆಗಳನ್ನು ತೋರಿಸಿದ್ದಾರೆ. ಎಲ್ಲವನ್ನು ನೋಡಿದ ಮೇಲೆ ಮತ್ತೆ ಬಂದು ಖರೀದಿಸುವುದಾಗಿ ಹೇಳಿ ಹೋಗಿದ್ದಾರೆ. ಮುನಿಯಪ್ಪರಿಗೆ ಅನುಮಾನ ಬಂದು ಕೂಡಲೇ ಅಂಗಡಿಯಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾದ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಸುಮಾರು 30 ಗ್ರಾಂ ತೂಕದ 90 ಸಾವಿರ ಬೆಲೆ ಬಾಳುವ ಚಿನ್ನದ 4 ಜೊತೆ ಓಲೆಗಳನ್ನು ಕಳವು ಮಾಡಿ ಹೋಗಿದ್ದಾರೆ ಎಂದು ಅವರು ಬೇತಮಂಗಲ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ರೌಡಿಶೀಟರ್‌ಗಳ ಬಂಧನ
ಚಿಂತಾಮಣಿ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಬಟ್ಲಹಳ್ಳಿ ಠಾಣೆ ವ್ಯಾಪ್ತಿಯ ರೌಡಿಶೀಟರ್‌ಗಳನ್ನು ಪೊಲೀಸರು ಬಂಧಿಸಿ ತಾಲೂಕು ದಂಡಾಧಿಕಾರಿ ಸಮಕ್ಷದಲ್ಲಿ ಹಾಜರಿಪಡಿಸಿದ್ದಾರೆ.
ತಾಲೂಕಿನ ಬಟ್ಲಹಳ್ಳಿ ಠಾಣೆ ವ್ಯಾಪ್ತಿಯ ವಿವಿಧ ಗ್ರಾಮಗಳಿಗೆ ಸೇರಿದ 26 ರೌಡಿಶೀಟರ್‌ಗಳ ಪೈಕಿ ಸಬ್‌ಇನ್ಸ್‌ಪೆಕ್ಟರ್ ಪ್ರವೀಣ್‌ಕುಮಾರ್ ಹಾಗೂ ಸಿಬ್ಬಂದಿ ನೇತೃತ್ವದಲ್ಲಿ 6 ಜನ ರೌಡಿಶಿಟರ್‌ಗಳನ್ನು ಬಂಧಿಸಿ ತಾಲೂಕು ದಂಡಾಧಿಕಾರಿ ಕೆ.ಟಿ. ಕೃಷ್ಣಸ್ವಾಮಿ ಸಮಕ್ಷದಲ್ಲಿ ಹಾಜರಿಪಡಿಸಿದ್ದಾರೆ. ಗ್ರಾಮಾಂತರ ಪ್ರದೇಶಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡುವ ಅಂಗಡಿಗಳ ಮೇಲೆ ಈಗಾಗಲೇ ಪೊಲೀಸರು ತೀವ್ರ ನಿಗಾವಹಿಸಿ  ಕಡಿವಾಣ ಹಾಕಲು ಮುಂದಾಗಿದ್ದಾರೆ.
 ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿಯೇ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಪ್ರದೇಶಗಳಾದ ಬಟ್ಲಹಳ್ಳಿ ಹಾಗೂ ಕೆಂಚಾರ್ಲಹಳ್ಳಿ ಗಡಿಭಾಗ ಠಾಣೆಗಳಿಗೆ ಲೋಕಸಭಾ ಚುನಾವಣೆ ನಡೆಯುವವರೆಗೂ ಹೆಚ್ಚುವರಿ ಪೊಲೀಸ್ ಸಿಬ್ಬಂದಿ ನೇಮಿಸಲು ಅಧಿಕಾರಿಗಳು ಚುನಾವಣಾಧಿಕಾರಿಗಳಿಗೆ ಪತ್ರ ಬರೆದಿರುವುದಾಗಿ ವರದಿಯಾಗಿದೆ. ಗಡಿಭಾಗಗಳಲ್ಲಿ ಚೆಕ್ ಪೋಸ್ಟ್ ನಿರ್ಮಿಸಲು ಪೊಲೀಸರು ಈಗಾಗಲೇ ಸ್ಥಳ ಪರಿಶೀಲಿಸಿ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸಿದ್ದಾರೆ.
ವಿದ್ಯುತ್ ಸ್ಪರ್ಶದಿಂದ ವ್ಯಕ್ತಿ ಸಾವು
ಚಿಂತಾಮಣಿ: ನೀರಿನ ಸಂಪನ್ನು ಸ್ವಚ್ಛಗೊಳಿಸುವ ಸಂದರ್ಭದಲ್ಲಿ ವಿದ್ಯುತ್ ಸ್ಪರ್ಶದಿಂದ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ನಗರದ ಗುಂಡಪ್ಪ ಬಡಾವಣೆಯಲ್ಲಿ ಶುಕ್ರವಾರ ಮಧ್ಯಾಹ್ನ ನಡೆದಿದೆ.
ನಗರದ ಗುಂಡಪ್ಪ ಬಡಾವಣೆಯಲ್ಲಿನ ಮನೆಯೊಂದರಲ್ಲಿ ಗುರುವಾರ ರಾತ್ರಿ ಮಳೆಬಿದ್ದ ನೀರು ಸೊಂಪಿಗೆ ಹರಿದ ಪರಿಣಾಮ ಇಲ್ಲಿನ ಮನೆ ಮಾಲೀಕ ಸೋಮಶೇಖರ(28)ಎಂಬಾತನು ವಿದ್ಯುತ್ಸ್ಪ್‌ರ್ಶ ತಗುಲಿ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ. ಈ ಬಗ್ಗೆ ಪೋಲೀಸರಿಗೆ ಯಾವುದೇ ಮಾಹಿತಿ ಇಲ್ಲವೆಂದು ಸ್ಥಳೀಯ ಪೋಲೀಸರು ತಿಳಿಸಿದ್ದಾರೆ.
ಆಟೋದಿಂದ ಬಿದ್ದು ಬಾಲಕ ಸಾವು
ಕೆಜಿಎಫ್: ಬೆಮೆಲ್‌ನ ಸರ್ಕಾರಿ ಮಾದರಿಯ ಶಾಲೆಯ ಆರನೇ ತರಗತಿ ವಿದ್ಯಾರ್ಥಿ ಆಟೋದಿಂದ ಕೆಳಗೆ ಬಿದ್ದು ಮೃತಪಟ್ಟಿರುವ ಘಟನೆ ಬೆಮೆಲ್‌ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ರಾಬರ್ಟ್‌ಸನ್‌ಪೇಟೆಯ ಸ್ವಾಮಿನಾಥಪುರಂ ನಿವಾಸಿ ಅನ್ಬಳಗನ್ ಎಂಬುವರ ಮಗ ಗೌತಂ(12)ಶಾಲೆಯಿಂದ ಸಂಜೆ ಮನೆಗೆ ಬರಲು ಶೇರ್ ಆಟೋದಲ್ಲಿ ಬರುತ್ತಿದ್ದಾಗ ಆಟೋ ಚಾಲಕನ ನಿರ್ಲಕ್ಷ್ಯ ಹಾಗೂ ಹೆಚ್ಚು ಶಾಲಾ ಮಕ್ಕಳನ್ನು ಕರೆತರುತ್ತಿದ್ದ ಕಾರಣ ಕೆಳಗೆ ಬಿದ್ದು ಆಟೋ ಚಕ್ರದಡಿ ಸಿಲುಕಿ ತೀವ್ರಗಾಯಗೊಂಡಿದ್ದು, ಆಟೋ ಚಾಲಕ ವಿದ್ಯಾರ್ಥಿಯನ್ನು ಬೆಮೆಲ್ ಮೆಡಿಕಲ್ ಸೆಂಟರ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದ ನಂತರ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ಯುವಾಗ ದಾರಿ ಮಧ್ಯೆ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಬೆಮೆಲ್‌ನಗರ ಠಾಣಾ ಪಿಎಸ್‌ಐ ಮತ್ತು ವೃತ್ತ ನಿರೀಕ್ಷಕ ಪವನ್‌ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬೆಮೆಲ್ ಆಡಳಿತ ಮಂಡಳಿ ಕಳೆದ 8 ತಿಂಗಳಿಂದ ಬೆಮೆಲ್ ಕಾರ್ಖಾನೆಯ ಕಾರ್ಮಿಕರ ಮಕ್ಕಳಿಗೆ ಮಾತ್ರ ಬಸ್ ಸೌಲಭ್ಯ ಕಲ್ಪಿಸಿ ಉಳಿದ ಮಕ್ಕಳಿಗೆ ಬಸ್ ಸೌಲಭ್ಯ ಸ್ಥಗಿತಗೊಳಿಸಿತ್ತು.
 ಈ ವಿಷಯಕ್ಕೆ ಸಂಬಂಧಿಸಿ ಪೋಷಕರು ಹಲವು ಭಾರಿ ಬಸ್ ವ್ಯವಸ್ಥೆಯನ್ನು ಕಲ್ಪಿಸಲು ಒತ್ತಾಯಿಸಿ ಮನವಿ ಸಲ್ಲಿಸಿದ್ದರು.
 ಆದರೆ ಬೆಮೆಲ್ ಆಡಳಿತ ಮಂಡಳಿ ನಗರ ಭಾಗದ ಮಕ್ಕಳಿಗೆ ಯಾವುದೇ ಬಸ್ ವ್ಯವಸ್ಥೆ ಕಲ್ಪಿದೆ ನಿರ್ಲಕ್ಷ್ಯ ಧೋರಣೆ ತೋರಿದ ಪರಿಣಾಮ ಈ ಘಟಣೆ ಸಂಬಂವಿಸಿದೆ ಎಂಬುದು ಪೋಷಕರ ಆರೋಪವಾಗಿದೆ.
ಕನ್ನಡದ ಕಲೆಗೆ ಪ್ರೋತ್ಸಾಹ: ಶ್ಲಾಘನೀಯ
ಮಾಲೂರು: ಕನ್ನಡ ಪರ ಸಂಘಟನೆಗಳು ಹೋರಾಟದ ಜತೆಗೆ ಮಹಾ ಕಲಾವಿದರ ವಿಗ್ರಹ ನಿರ್ಮಿಸುವ ಮೂಲಕ ಕನ್ನಡದ ಕಲೆಗೆ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ ಎಂದು ಪುರಸಭೆ ಸದಸ್ಯ ಲಿಂಗೇಶ್ವರಯ್ಯ ಹೇಳಿದರು. ಪಟ್ಟಣದ ಅರಳೇರಿ ರಸ್ತೆಯ ಡಾ. ಕುವೆಂಪು ಉದ್ಯಾನವನದಲ್ಲಿ ಕರವೇ ಹಾಗೂ ಡಾ. ವಿಷ್ಣು ಸೇನಾ ಸಮಿತಿ ಸಂಯುಕ್ತವಾಗಿ 3 ಲಕ್ಷ ರು.ವೆಚ್ಚದಲ್ಲಿ ನೂತನವಾಗಿ ನಿರ್ಮಿಸುತ್ತಿರುವ ಸಾಹಸ ಸಿಂಹ ಡಾ. ವಿಷ್ಣು ವರ್ಧನ್ ಪುತ್ಥಳಿಯ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ವಕೀಲ ಡಿ. ನಾರಾಯಣಸ್ವಾಮಿ, ಟೇಕಲ್ ಶ್ರೀರಾಮುಲು ಇದ್ದರು.
ಮನೆಗಳಿಗೆ ನುಗ್ಗಿದ ಮಳೆ ನೀರು; ಜನರ ಪರದಾಟ
ಚಿಂತಾಮಣಿ: ಗುರುವಾರ ರಾತ್ರಿ ಸುರಿದ ದಾರಾಕಾರ ಮಳೆಯಿಂದ ಜನ ಜೀವನ ಅಸ್ಥವ್ಯಸ್ತಗೊಂಡು ವಿವಿಧ ಬಡಾವಣೆಗಳ ಮನೆಗಳಿಗೆ ನೀರು ನುಗ್ಗಿ ರಾತ್ರಿ ಮಳೆ ನೀರಿನಿಂದ ಜಾಗರಣೆ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ.
ನಗರದ ಆಶ್ರಯ ಬಡಾವಣೆ, ವೆಂಕಟಗಿರಿಕೋಟೆ, ಸುದ್ದುಕುಂಟೆ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಗುರುವಾರ ರಾತ್ರಿ 9.30 ರಲ್ಲಿ ದಾರಾಕಾರ ಮಳೆ ಸುರಿದ ಪರಿಣಾಮ ವಿವಿಧ ಬಡಾವಣೆಯ ಮನೆಗೆಳಿಗೆ ಮಳೆ ನೀರು ನುಗ್ಗಿದ ಪರಿಣಾಮ ಜನರಿಗೆ ಹರಸಾಹಸದಿಂದ ಮಳೆ ನೀರನ್ನು ಮನೆಯಿಂದ ಹೊರ ಹಾಕುವ ಕೆಲಸಕ್ಕೆ ರಾತ್ರಿಯಿಡೀ ಜಾಗರಣೆ ಮಾಡುವ ಪರಿಸ್ಥಿತಿ ಉದ್ಭವಗೊಂಡಿತ್ತು ಎಂದು ನಾಗರಿಕರು ತಿಳಿಸಿದ್ದಾರೆ.
ತಾಲೂಕಿನ ಕೆಂಚಾರ್ಲಹಳ್ಳಿ, ಕಾಚಹಳ್ಳಿ, ನಾಯಿಂದ್ರಹಳ್ಳಿ ಕಾಲೋನಿ ಸೇರಿದಂತೆ ಇನ್ನೂ ಹಲವು ಗ್ರಾಮಗಳಲ್ಲಿ ಮಳೆ ಬಿದ್ದ ಹಿನ್ನೆಲೆಯಲ್ಲಿ ರೈತರು ಶುಕ್ರವಾರ ಕೃಷಿ ಚಟುವಟಿಕೆಗಳಲ್ಲಿ ಬಾಗಿಯಾಗಿದ್ದಾರೆ. ಗುರುವಾರ ರಾತ್ರಿ ಸುರಿದ ದಾರಾಕಾರ ಮಳೆಯಿಂದ ಕನಂಪಲ್ಲಿ ಕೆರೆಯಲ್ಲಿ ಅಲ್ಪ ಪ್ರಮಾಣದ ನೀರು ಶೇಖರಣೆಗೊಂಡಿರುವುದರಿಂದ ನಾಗರಿಕರಲ್ಲಿ ಸಂತಸವಾಗಿದೆ.
ಖೋಖೋ ತೀರ್ಪುಗಾರರ ಆಯ್ಕೆ ಪರೀಕ್ಷೆ
ಗೌರಿಬಿದನೂರು: ಖೋಖೋ ತೀರ್ಪುಗಾರರ ಆಯ್ಕೆ ಪರೀಕ್ಷೆಯನ್ನು ಪಟ್ಟಣದ ನೇತಾಜಿ ಕ್ರೀಡಾಂಗಣದಲ್ಲಿ ಮಾ.14 ರಿಂದ 16ರವರೆಗೆ ತಾಲೂಕಿನ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರಿಗೆ ಏಡಿರ್ಪಸಲಾಗಿದೆ. ಆಸಕ್ತ ಶಿಕ್ಷಕರು ಪರೀಕ್ಷೆಯಲ್ಲಿ ಭಾಗವಹಿಸಬೇಕೆಂದು ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಹೇಳಿಕೆಯಲ್ಲಿ ಕೋರಿದೆ. ಪರೀಕ್ಷೆಯಲ್ಲಿ ಭಾಗವಹಿಸುವ ಶಿಕ್ಷಕರಿಗೆ ಶಿಕ್ಷಣ ಇಲಾಖೆ ಅನ್ಯ ಕಾರ್ಯ ನಿಮಿತ್ತ ರಜೆ ಮಂಜೂರು ಮಾಡಿದ್ದು, ಈ ರಜೆಯನ್ನು ಪರೀಕ್ಷೆಯಲ್ಲಿ ಭಾಗವಹಿಸುವ ಶಿಕ್ಷಕರಿಗೆ ಸಂಬಂಧಪಟ್ಟ ಶಾಲಾ ಮುಖ್ಯ ಶಿಕ್ಷಕರು ನೀಡಬೇಕೆಂದೂ ಕೋರಿದೆ.ವಿವರಗಳಿಗೆ ಹನುಮಂತರೆಡ್ಡಿ-9740174200 ಅಥವಾ ನಾರಾಯಣಸ್ವಾಮಿ- 9449571410ರನ್ನು ಸಂಪರ್ಕಿಸಲು ಕೋರಿದ್ದಾರೆ.
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ
ಕೋಲಾರ: ನಗರದ ಸರ್ಕಾರಿ ಮಹಿಳಾ ಕಾಲೇಜನಲ್ಲಿ ಮಾ.8 ರಂದು ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಬೆಳಿಗ್ಗೆ 10 ಗಂಟೆಗೆ ಕಾನೂನು ಅರಿವು ನೆರವು ಕಾರ್ಯಕ್ರಮ ಏರ್ಪಡಿಸಲಾಗಿದೆ. ಉದ್ಘಾಟನೆಯನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಅಧ್ಯಕ್ಷರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಎಸ್. ರೇಣುಕಾ ಪ್ರಸಾದ್ ನೆರವೇರಿಸುವರು. ಅಧ್ಯಕ್ಷತೆಯನ್ನು ಪ್ರಾಂಶುಪಾಲ ಅಂಜನಪ್ಪ ವಹಿಸಲಿದ್ದಾರೆ.
ಅಭಿನಂದನಾ ಸಮಾರಂಭ
ಕೋಲಾರ: ಕೋಲಾರ ನಗರದ ಕಿಲಾರಿಪೇಟೆಯ ಶ್ರೀ ಗೋಕುಲ ಮಿತ್ರ ಬಳಗದ ವತಿಯಿಂದ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಹಾಗೂ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ  ಕೆ.ಎಸ್. ಗಣೇಶ್ ಅವರಿಗೆ ಅಭಿನಂದನಾ ಕಾರ್ಯಕ್ರಮವನ್ನು ಮಾ.8 ರಂದು ಶನಿವಾರ ಬೆಳಿಗ್ಗೆ 9 ಗಂಟೆಗೆ ನಗರದ ಪತ್ರಕರ್ತರ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement