ಬಿಎಸ್ಎನ್ಎಲ್ ಗ್ರಾಹಕರ ಸಂವಾದ
ಶಿಡ್ಲಘಟ್ಟ: ಭಾರತ್ ಸಂಚಾರ ನಿಗಮ(ಬಿಎಸ್ಎನ್ಎಲ್) ಗ್ರಾಹಕರಿಗೆ ಎಲ್ಲ ರೀತಿಯ ಸೌಲಭ್ಯ ಒದಗಿಸುತ್ತಿದ್ದು ಗ್ರಾಹಕರು ಸದುಪಯೋಗ ಪಡಿಸಿಕೊಂಡು ಸಂಸ್ಥೆಯ ಶ್ರೇಯಸಿಗೆ ಶ್ರಮಿಸಬೇಕೆಂದು ಚಿಂತಾಮಣಿ ಎಜಿಎಂ ಆರ್.ಪ್ರಕಾಶ್ ಕೋರಿದರು.
ಪಟ್ಟಣದ ಬಿಎಸ್ಎನ್ಎಲ್ ಕಚೇರಿ ಆವರಣದಲ್ಲಿ ಏರ್ಪಡಿಸಿದ್ದ ಗ್ರಾಹಕರ-ಅಧಿಕಾರಿಗಳ ಸಂವಾದದಲ್ಲಿ ಮಾತನಾಡಿ, ಭಾರತ್ ಸಂಚಾರ ನಿಗಮ ದೂರವಾಣಿ, ಮೊಬೈಲ್, ಇಂಟರ್ನೆಟ್ಗಳಲ್ಲಿ ದೊರೆಯುವ ಸೌಲಭ್ಯಗಳ ಬಗ್ಗೆ ವಿವರಿಸಿದರು. ಯಾವುದೇ ಸಂಸ್ಥೆಯಲ್ಲಿ ಸೇವಾ ಸೌಲಭ್ಯಗಳು ನಮ್ಮಷ್ಟು ಮುಕ್ತವಾಗಿಲ್ಲ. ಆದ್ದರಿಂದ ಮುಕ್ತ ಸಮಾವೇಶ ಏರ್ಪಡಿಸಿದ್ದೇವೆ ಇಲ್ಲಿ ಗ್ರಾಹಕರು ಮುಕ್ತವಾಗಿ ಮಾತನಾಡಬಹುದು. ತಮ್ಮ ಸಮಸ್ಯೆಗಳನ್ನು ಮುಕ್ತವಾಗಿ ವ್ಯಕ್ತಪಡಿಸಬಹುದು ಎಂದರು.
ಶಿಡ್ಲಘಟ್ಟ ಬಿಎಸ್ಎನ್ಎಲ್ ಸಂಸ್ಥೆಯ ನ್ಯೂನತೆಗಳು ಹಾಗೂ ಅವಶ್ಯಕತೆಗಳ ಬಗ್ಗೆ ಕೆಲವು ಪ್ರಶ್ನೆಗಳ ಜೊತೆಗೆ ಬೇಡಿಕೆಗಳ ಬಗ್ಗೆ ಸಭೆಯಲ್ಲಿ ಮಂಡಿಸಿದರು.
ಪತ್ರಕರ್ತ ಕೆ.ವಿ. ಮುನೇಗೌಡ ಮಾತನಾಡಿ, ಕೋತಿಗಳು ಫೋನ್ ವೈರ್ಗಳನ್ನು ಕಿತ್ತು ಹಾಕುತ್ತಿದ್ದು ಇಂಟರ್ನೆಟ್ಗೆ ತೊಂದರೆಯಾಗುತ್ತಿದೆ. ಮೋಡಂಗಳು ತೊಂದರೆಗೊಳಗಾದಾಗ ಮೋಡಂ ಕೇಳಿದರೆ ಸರಬರಾಜಿಲ್ಲ ಬೇರೆಕಡೆ ಖರೀದಿ ಮಾಡಬೇಕೆಂದು ಹೇಳುತ್ತಾರೆ ಎಂಬ ಪ್ರಶ್ನೆಗೆ ಕೋಲಾರ ಎಜಿಎಮ್ ರಾಮಚಂದ್ರ ಉತ್ತರಿಸಿ, ವೈರುಗಳ ಬದಲಿಗೆ ಕೇಬಲ್ ಅಳವಡಿಸಿ ಮನೆ ಒಳಗೆ ಡಿಪಿ ಅಳವಡಿಸಲಾಗುವುದು ಹಾಗೂ ಈಗ ಮೋಡಂಗಳನ್ನು ಮೆಲ್ದರ್ಜೆಗೆ ಏರಿಸಿರುವುದರಿಂದ ಟೈಪ್ 1 ಬದಲು ಟೈಪ್ 2 ಮೋಡಂಗಳನ್ನು ಆಳವಡಿಸುತ್ತಿದ್ದು 2,100 ರು.ಗಳನ್ನು ಕೊಟ್ಟು ಖರೀದಿ ಮಾಡಬೇಕು ಎಂದರು.
ದೇವರಮಳ್ಳೂರು ಕೆಂಪಣ್ಣ ಪ್ರಶ್ನೆಗೆ, ತಿಪ್ಪೇನಹಳ್ಳಿಯಲ್ಲಿ ಟವರ್ ಮಾಡುತ್ತಿದ್ದೇವೆ ಅದನ್ನು ಶೀಘ್ರವಾಗಿ ಚಾಲನೆ ನೀಡಲಾಗುವುದು. ಅದು ಮುಗಿದ ನಂತರ ದೇವರಮಳ್ಳೂರು ಗ್ರಾಮದಲ್ಲಿ ಟವರ್ ಸಿಗ್ನಲ್ ಪರೀಕ್ಷಿಸಿ ನಂತರ ದೇವರ ಮಳ್ಳೂರಿನಲ್ಲಿ ಟವರ್ ಬಗ್ಗೆ ಚಿಂತಿಸಲಗುವುದೆಂದರು.
ಗ್ರಾಮೀಣ ಪ್ರದೇಶಗಳಲ್ಲಿ ಬಿಲ್ಗಳು ಸೇರುತ್ತಿಲ್ಲ ಎಂದು ದೂರಿದರಿಂದ ಬಿಲ್ಲಗಳನ್ನು ಮೊಬೈಲ್ಗಳಿಗೆ ಮೆಸೇಜ್ ಕಳುಹಿಸಲಾಗುವುದು ಎಂದರು. ಯಾವುದೇ ಲೋಪದೋಷಗಳು ಕಂಡುಬಂದಲ್ಲಿ ಗ್ರಾಹಕರು ನಮ್ಮ ಮೋಬೈಲ್ನೊಂದಿಗೆ ಮುಕ್ತವಾಗಿ ಚರ್ಚಿಸಿ ಸರಿಪಡಿಸುವುದಾಗಿ ತಿಳಿಸಿದರು. ಶಿಡ್ಲಘಟ್ಟ ಬಿಎಸ್ಎನ್ಎಲ್ ಅಧಿಕಾರಿ ರಾಮಚಂದ್ರಪ್ಪ ವಂದಿಸಿದರು. ಕಾರ್ಯಕ್ರಮದಲ್ಲಿ ಕೋಲಾರ ಯಲ್ಲಪ್ಪ, ಎಸ್.ಡಿ. ಮೊಬೈಲ್ ಮುರಳಿ, ತಾಲೂಕಿನ ಬಿಎಸ್ಎನ್ಎಲ್ ಗ್ರಾಹಕರು ಸಭೆಯಲ್ಲಿ ಹಾಜರಿದ್ದರು.