ಬಿಜೆಪಿ ಮುಖಂಡರೊಂದಿಗೆ ಸಭೆ
ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಎನ್. ಬಚ್ಚೇಗೌಡ ತಮ್ಮ ಪಕ್ಷದ ಮುಖಂಡರ ಸಭೆ ನಡೆಸಿ ಚರ್ಚೆ ನಡೆಸಿದರು.
ಮೋದಿ ಅಲೆಯನ್ನು ಬಳಸಿಕೊಂಡು ಕ್ಷೇತ್ರದಲ್ಲಿ ಬಿಜೆಪಿ ಪಕ್ಷ ಗೆಲ್ಲುವಂತೆ ಮಾಡಲು ಸಂಘಟಿತರಾಗಬೇಕಾಗಿರುವುದರ ಬಗ್ಗೆ ಮಾತುಕತೆ ನಡೆಸಿದರು. ನಗರದಲ್ಲಿರುವ ಬಿಜೆಪಿ ಮುಖಂಡ ರಘುರವರ ಮನೆಯಲ್ಲಿ ಪಕ್ಷದ ಮುಖಂಡರ ಸಭೆ ನಡೆಸಿದ ಅವರು, ಪಕ್ಷದ ಪ್ರಚಾರ, ಸಂಘಟನೆಯ ಕುರಿತು ಮಾತನಾಡಿದರು. ಕ್ಷೇತ್ರದಲ್ಲಿ ವೀರಪ್ಪ ಮೊಯ್ಲಿರವರ ವಿರುದ್ಧ ಅಲೆಯಿರುವುದನ್ನು ಸದುಪಯೋಗಪಡಿಸಿಕೊಳ್ಳಬೇಕಾಗಿದೆ.
ಕೇಂದ್ರ ಸರ್ಕಾರದ ಭ್ರಷ್ಟಾಚಾರ, ಹಗರಣಗಳು ಕುರಿತು ಜನರಿಗೆ ತಿಳಿಸಬೇಕೆಂದರು. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹೆಚ್ಚು ಸ್ಥಾನಗಳನ್ನು ಪಡೆದುಕೊಂಡು ನರೇಂದ್ರ ಮೋದಿ ದೇಶದ ಪ್ರಧಾನಿಯಾಗಬೇಕಾಗಿದೆ. ಇದಕ್ಕಾಗಿ ಪಕ್ಷದ ಮುಖಂಡರು ತಮ್ಮ ತಮ್ಮಲ್ಲಿನ ಭಿನ್ನಾಭಿಪ್ರಾಯಗಳನ್ನು ಮರೆಯಬೇಕು. ನರೇಂದ್ರ ಮೋದಿಯವರ ಅಲೆಯನ್ನು ಮುಂದಿಟ್ಟುಕೊಂಡು ಪಕ್ಷದ ಪ್ರಚಾರ ಮಾಡಬೇಕೆಂದರು. ಸಭೆಯಲ್ಲಿ ಬಿಜೆಪಿ ಮುಖಂಡರಾದ ಅಗಲಗುರ್ಕಿ ಚಂದ್ರಶೇಖರ್, ಅವುಲಗುರ್ಕಿ ಶ್ರೀನಿವಾಸ್, ನಂದಿನಿ ಭೈರೇಗೌಡ ಉಪಸ್ಥಿತರಿದ್ದರು.
ಟ್ರ್ಯಾಕ್ಟರ್ ಬೈಕ್ ಡಿಕ್ಕಿ: ಇಬ್ಬರ ಸಾವು
ಗುಡಿಬಂಡೆ: ತಾಲೂಕಿನ ಬೀಚಗಾನಹಳ್ಳಿ ಗ್ರಾಮದ ಸಮೀಪದ ರಾಮಗಾನಹಳ್ಳಿ ಬಳಿ ಟ್ರ್ಯಾಕ್ಟರ್ ಹಾಗೂ ಬೈಕ್ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರರಿಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಶುಕ್ರವಾರ ರಾತ್ರಿ 10.30 ರ ಸಮಯದಲ್ಲಿ ನಡೆದಿದೆ. ಶಿಡ್ಲಘಟ್ಟ ನಿವಾಸಿ ಇರ್ಷಾದ್ ಮತ್ತು ಬೀಚಗಾನಹಳ್ಳಿ ಕ್ರಾಸ್ ನಿವಾಸಿ ನಾಗೇಶ್ (22) ಮೃತ ದುರ್ದೈವಿಗಳು. ಇವರಿಬ್ಬರು ಬೀಚಗಾನಹಳ್ಳಿಯಲ್ಲಿರುವ ಸ್ನೇಹಿತನ ಮನೆಗೆ ಹೋಗುತ್ತಿದ್ದಾಗ ಬೀಚಗಾನಹಳ್ಳಿ ಕಡೆಯಿಂದ ಗುಮ್ಮರೆಡ್ಡಿ ಗ್ರಾಮಕ್ಕೆ ಹೊರಟಿದ್ದ ಟ್ರ್ಯಾಕ್ಟರ್ಗೆ ಲೈಟ್ ಇಲ್ಲದ ಕಾರಣ ದ್ವಿಚಕ್ರ ವಾಹನ ಏಕಾಏಕಿ ಡಿಕ್ಕಿಹೊಡೆದ ಪರಿಣಾಮ ಸ್ಥಳದಲ್ಲೇ ಬೈಕ್ ಸವಾರರಿಬ್ಬರು ಮೃತಪಟ್ಟಿದ್ದಾರೆ. ಸ್ಥಳಕ್ಕೆ ಗುಡಿಬಂಡೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
ರೌಡಿ ಶೀಟರ್ಗಳಿಗೆ ಎಚ್ಚರಿಕೆ
ಶ್ರೀನಿವಾಸಪುರ: ಪಟ್ಟಣದ ಪೊಲೀಸ್ ಠಾಣೆ ವ್ಯಾಪ್ತಿಯ ಎಲ್ಲಾ ರೌಡಿ ಶೀಟರ್ಗಳನ್ನು ಠಾಣೆಗೆ ಕರೆಸಿ ಎಚ್ಚರಿಕೆ ನೀಡಿ, ಅವರಿಂದ ಮುಚ್ಚಳಿಕೆ ಪತ್ರಗಳನ್ನು ಬರೆಯಿಸಿಕೊಂಡಿದ್ದಾರೆ. ಚುನಾವಣೆ ಸಮಯದಲ್ಲಿ ಶಾಂತಿ ಭಂಗ ಉಂಟುಮಾಡುವ ಮಂದಿಯನ್ನು ಮುಂಜಾಗ್ರತಾ ಕ್ರಮವಾಗಿ ಬಂಧಿಸಿ ಬಿಡುಗಡೆಗೊಳಿಸಿದ್ದಾರೆ.
ಗಣಪತಿ ವಿಗ್ರಹ
ಪ್ರತಿಷ್ಠಾಪನೆ
ವೇಮಗಲ್: ಕೋಲಾರ ತಾಲೂಕಿನ ವೇಮಗಲ್ನಲ್ಲಿ ಶ್ರೀ ಮಹಾಗಣಪತಿ ದೇವಾಲಯ ಸಂಪ್ರೋಕ್ಷಣೆ ಪುನರ್ ಪ್ರತಿಷ್ಠಾಪನೆ ಹಾಗೂ ಮಹಾಕುಂಭಾಭಿಕ್ಷೇಕ ಮಹೋತ್ಸವ ಶುಕ್ರವಾರ ವಿನಾಯಕ ವಿವೇಕಾನಂದ ಕ್ಷೇಮಾಭಿವೃದ್ಧಿಸಂಘದಿಂದ ವಿಜೃಂಣೆಯಿಂದ ನಡೆಯಿತು. ಬಿಜೆಪಿ ಪಕ್ಷದ ಗ್ರಾಮೀಣ ವಿಭಾಗದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ಎಸ್. ಓಹಿಲೇಶ್ವರ, ರೈತ ಸಂಘ ಮತ್ತು ಹಸಿರು ಸೇನೆ ವೇಮಗಲ್ ಹೋಬಳಿ ಮುಖಂಡ ಅಮರನಾರಾಯಣ ಶ್ರೀ ವಿನಾಯಕ ವಿವೇಕಾನಂದ ಕ್ಷೇಮಾಭಿವೃದ್ಧಿಸಂಘದ ಸುರೇಶ್ ಬಾಬು, ಕೃಷ್ಣ, ಮಲ್ಲಿಕಾರ್ಜುನ, ನಂದೀಶ್, ಲೋಕೇಶ್, ಶಶಿಕುಮಾರ್, ವಿಜಯಕುಮಾರ್, ಮಹೇಶ್, ಅರವಿಂದ್, ಪ್ರಕಾಶ್, ಚೇತನ್, ಮುಕುಂದ, ಕೇಶವ ಮತ್ತು ರಾಜಾ ಇದ್ದರು.
ಬಿಎಸ್ಎನ್ಎಲ್
ಗ್ರಾಹಕರ ಸಭೆ
ಕೋಲಾರ: ಶ್ರೀನಿವಾಸಪುರ ತಾಲೂಕಿನ ಬಿ.ಎಸ್.ಎನ್.ಎಲ್. ಗ್ರಾಹಕರಿಗಾಗಿ ಮಾ.13ರಂದು ಬೆಳಿಗ್ಗೆ 11 ಗಂಟೆಗೆ ದೂರವಾಣಿ ಕೇಂದ್ರದ ಆವರಣದಲ್ಲಿ ಗ್ರಾಹಕರ ಸಮಾವೇಶವನ್ನು ಆಯೋಜಿಸಲಾಗಿದೆ. ಶ್ರೀನಿವಾಸಪುರ ತಾಲೂಕಿನ ಸಮಸ್ತ ಬಿ.ಎಸ್.ಎನ್.ಎಲ್. ಗ್ರಾಹಕರು ತಮ್ಮ ಕುಂದು ಕೊರತೆಗಳನ್ನು ಈ ಸಭೆಯಲ್ಲಿ ಇತ್ಯರ್ಥ ಪಡಿಸಿಕೊಳ್ಳಲು ಕೋಲಾರ ಬಿ.ಎಸ್.ಎನ್.ಎಲ್ನ ಸಾರ್ವಜನಿಕ ಸಂಪರ್ಕ ಅಧಿಕಾರಿ ಕೋರಿದ್ದಾರೆ.
ಕೇಂದ್ರ ಸಚಿವರೊಂದಿಗೆ ರೇಷ್ಮೆ ಸಮಸ್ಯೆಗಳ ಬಗ್ಗೆ ಚರ್ಚೆ
ಚಿಕ್ಕಬಳ್ಳಾಪುರ: ಕೇಂದ್ರ ರೇಷ್ಮೇ ಮಂಡಳಿ ಸದಸ್ಯರಾದ ಬಿಸ್ಸೇಗೌಡ ಹಾಗೂ ಎನ್. ರಮೇಶ್ ನೇತೃತ್ವದಲ್ಲಿ 12 ಮಂದಿ ನಿರ್ದೇಶಕರ ತಂಡ ಕೇಂದ್ರ ಸಚಿವ ಕುಲವೇರು ಸಾಂಭಶಿವರವರನ್ನು ಭೇಟಿ ಮಾಡಿ ರೇಷ್ಮೆ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದೆ. ಈ ಸಂದರ್ಭದಲ್ಲಿ ರೇಷ್ಮೆ ಬೆಳೆಗಾರರು ಮತ್ತು ರೀಲರ್ ಗಳ ಸಮಸ್ಯೆಗಳನ್ನು ಅವರ ಗಮನಕ್ಕೆ ತರಲಾಗಿದೆ ಎಂದು ಸದಸ್ಯ ಎನ್. ರಮೇಶ್ ತಿಳಿಸಿದ್ದಾರೆ. ದೇಶೀಯ ರೇಷ್ಮೆ ಧಾರಣೆ ಕುಸಿಯಲು ಕಾರಣವಾಗಿರುವ ವಿದೇಶಿ ರೇಷ್ಮೆ ಆಮದು ಸುಂಕವನ್ನು ಇಳಿಕೆ ಮಾಡಲಾಗುತ್ತಿದೆ ಎಂಬ ಭೀತಿ ರೇಷ್ಮೆ ಬೆಳೆಗಾರರಲ್ಲಿದೆ. ಆದರೆ, ವಿದೇಶಿ ರೇಷ್ಮೆ ಸುಂಕ ಇಳಿಕೆಯಾಗುವುದಿಲ್ಲ. ಇದರ ಬಗ್ಗೆ ಅನುಮಾನಪಡುವುದು ಬೇಡ ಎಂದು ತಿಳಿಸಿದ್ದಾರೆ. ರೇಷ್ಮೆ ಸಾಕಾಣಿಕೆ ಮನೆಗಳಿಗೆ ಸಾಲ ನೀಡುವುದು, ಹನಿ ನೀರಾವರಿ ಪದ್ಧತಿ ಅಳವಡಿಸಿಕೊಳ್ಳಲು ಸಬ್ಸಿಡಿ ಸೇರಿದಂತೆ ವಿವಿಧ ಸಮಸ್ಯೆಗಳ ಬಗ್ಗೆ ಕೇಂದ್ರ ಸಚಿವರೊಂದಿಗೆ ಚರ್ಚೆ ನಡೆಸಲಾಗಿದೆ ಎಂದಿದ್ದಾರೆ.
ಬ್ಯೂಟಿಪಾರ್ಲರ್ ತರಬೇತಿಗಾಗಿ ಅರ್ಜಿ
ಚಿಕ್ಕಬಳ್ಳಾಪುರ: ತಾಲೂಕಿನ ಚದಲಪುರ ಸಮೀಪವಿರುವ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯ ವತಿಯಿಂದ 10 ದಿನಗಳ ಉಚಿತ ಅಡ್ವಾನ್ಸ್ಡ್ ಬ್ಯೂಟಿಪಾರ್ಲರ್ ತರಬೇತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ತರಬೇತಿಗೆ ಈಗಾಗಲೇ ಬೇಸಿಕ್ ಕೋರ್ಸು ಪೂರೈಸಿರುವ ಹಾಗೂ ಸ್ವ ಉದ್ಯೋಗ ಅಥವಾ ಬ್ಯೂಟಿಪಾರ್ಲರ್ಗಳಲ್ಲಿ ನೌಕರಿಮಾಡುತ್ತಿರುವವರು ಮಾ.13 ರಂದು ಬೆಳಿಗ್ಗೆ 11.30 ಕ್ಕೆ ಸಂದರ್ಶನದಲ್ಲಿ ಭಾಗವಹಿಸಬೇಕು. ಆಯ್ಕೆಯಾಗಿ ತರಬೇತಿ ಪಡೆದವರಿಗೆ ಭಾರತ ಸರ್ಕಾರದ ಮಾನ್ಯತೆ ಇರುವ ಪ್ರಮಾಣಪತ್ರ ನೀಡಲಾಗುವುದು ಎಂದು ಸಂಸ್ಥೆಯ ನಿರ್ದೇಶಕರು ತಿಳಿಸಿದ್ದಾರೆ.
ಡಾಕ್ ಅದಾಲತ್
ಕೋಲಾರ: ಅಂಚೆ ಇಲಾಖೆಯ ಹಿರಿಯ ಅಧೀಕ್ಷಕರಿಂದ ಮಾ.19 ರಂದು ಬೆಳಿಗ್ಗೆ 11 ಗಂಟೆಗೆ ಕೋಲಾರ ವಿಭಾಗದ ಅಂಚೆ ಕಚೇರಿಯಲ್ಲಿ ಗ್ರಾಹಕರ ದೂರುಗಳನ್ನು ಮತ್ತು ಅಹವಾಲುಗಳನ್ನು ವಿಚಾರಿಸಲಿದ್ದಾರೆ. ವಿಶೇಷವಾಗಿ ಉಳಿತಾಯ ಖಾತೆಯ ಗ್ರಾಹಕರು ಕುಂದು ಕೊರತೆಗಳನ್ನು ಲಿಖಿತದ ಮೂಲಕ ಮಾ.17 ಒಳಗೆ ಕಳುಹಿಸಲು ಕೋರಿದೆ.ಗ್ರಾಹಕರು ಡಾಕ್ ಅದಾಲತ್ಣ ನಲ್ಲಿ ಭಾಗವಹಿಸಿ ಹೆಚ್ಚಿನ ಮಾಹಿತಿ ಪಡೆಯಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಮತದಾರರ ಪಟ್ಟಿ ಸೇರ್ಪಡೆಗೆ ಶಿಬಿರ
ತುಮಕೂರು: ಲೋಕಸಭಾ ಚುನಾವಣೆಯ ಸಂಬಂಧ ಮತದಾರರ ಪಟ್ಟಿಯಲ್ಲಿ ಹೆಸರು ನೊಂದಾಯಿಸಿಕೊಳ್ಳಲು ಮಾ.9 ರಂದು ತುಮಕೂರು ನಗರ ಮತ್ತು ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರಗಳ 426 ಮತಗಟ್ಟೆಗಳಲ್ಲಿ ವಿಶೇಷ ಶಿಬಿರಗಳನ್ನು ಏರ್ಪಡಿಸಲಾಗಿದೆ ಎಂದು ಉಪವಿಭಾಗಾಧಿಕಾರಿ ಸಿ.ಎಲ್. ಆನಂದ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಚುನಾವಣೆಯ ಸಂದರ್ಭದಲ್ಲಿ ಮತದಾರರು ಮತ ಚಲಾಯಿಸಲು ಬಂದಾಗ ತಮ್ಮ ಹೆಸರು ಕೈಬಿಟ್ಟಿದೆ. ಹೆಸರು ತಪ್ಪಾಗಿದೆ. ಫೋಟೋ ಬಂದಿಲ್ಲ ಎಂದು ನೋಡಿಕೊಳ್ಳುವ ಬದಲು ಎಲ್ಲಾ ಮತಕೇಂದ್ರಗಳಲ್ಲಿ ಮಾ.9 ರಂದು ಮತದಾರರ ಪಟ್ಟಿಯನ್ನು ಪ್ರಕಟಿಸಲಿದೆ.