ಮತದಾರರ ಪಟ್ಟಿ ಪರಿಷ್ಕರಣೆ ತರಬೇತಿ
ಶಿಡ್ಲಘಟ್ಟ: ಮಾ.9ರ ಭಾನುವಾರ ಮತದಾರರ ಪಟ್ಟಿ ಪರಿಷ್ಕರಣೆಗೆ ವಿಶೇಷ ಆಂದೋಲನ ಹಿನ್ನೆಲೆಯಲ್ಲಿ ಮತಗಟ್ಟೆ ಅಧಿಕಾರಿಗಳಿಗೆ ತಾಲೂಕು ಕಚೇರಿಯಲ್ಲಿ ತರಬೇತಿ ಹಮ್ಮಿಕೊಳ್ಳಲಾಗಿತ್ತು. 9 ರಂದು ತಾಲೂಕಿನ ಎಲ್ಲ ಮತಗಟ್ಟೆಳಲ್ಲಿ ಸಂಬಂಧ ಪಟ್ಟ ಮತಗಟ್ಟೆ ಅಧಿಕಾರಿಗಳು ಮತದಾರರ ಪಟ್ಟಿಯ ತಿದ್ದುಪಡಿಗೆ ಅವಕಾಶವಿದ್ದು, ನಮೂನೆ 6ರಲ್ಲಿ ಮತದಾರರ ಸೇರ್ಪಡೆಗೆ, ನಮೂನೆ 8 ತಿದ್ದುಪಡಿಗೆ, ನಮೂನೆ 7 ಮತದಾರರ ಹೆಸರು ತೆಗೆಯುವುದಕ್ಕೆ ಅರ್ಜಿಗಳನ್ನು ಸ್ವೀಕರಿಸಲು ಅವಕಾಶವಿದೆ. ಬೆಳಗ್ಗೆ 10 ರಿಂದ ಸಂಜೆ 5.30 ತ ತನಕ ಆಯಾ ಮತಗಟ್ಟೆಗಳ ಮತ ಗಟ್ಟೆ ಅಧಿಕಾರಿಗಳು ಹಾಜರಿದ್ದು ಅರ್ಜಿಗಳನ್ನು ಸ್ವೀಕರಿಸುವರು. ತಾಲೂಕಿನಲ್ಲಿ ಒಟ್ಟು 232 ಮತಗಟ್ಟೆಗಳಿದ್ದು ಮಾಹಿತಿ ಇಲ್ಲದ ಕಾರಣ ತರಬೇತಿಗೆ 160 ಮತಗಟ್ಟೆ ಅಧಿಕಾರಿಗಳು ಹಾಜರಾಗಿದ್ದರು. ತಹಸೀಲ್ದಾರ್ ನಾರಾಯಣಸ್ವಾಮಿ, ಪುರಸಭೆ ಮುಖ್ಯಾಧಿಕಾರಿ ರಾಮ ಪ್ರಸಾದ್ ಇದ್ದರು.
ಸರಿಯಾದ ಊಟ ನೀಡದ ಹಾಸ್ಟೆಲ್; ಪೋಷಕರ ಆರೋಪ
ಶ್ರೀನಿವಾಸಪುರ: ಪಟ್ಟಣದಲ್ಲಿ ಹಿಂದುಳಿದ ವರ್ಗಗಳ ಇಲಾಖೆ ವತಿಯಿಂದ ನಡೆಯುತ್ತಿರುವ ವಿದ್ಯಾರ್ಥಿನಿಲವೊಂದರಲ್ಲಿ ಬಡ ಮಕ್ಕಳಿಗೆ ಸರಿಯಾದ ಊಟ ನೀಡದೆ ಅನ್ಯಾಯ ಎಸಗುತ್ತಿರುವ ಪ್ರಕರಣ ಬೆಳಿಕಿಗೆ ಬಂದಿದೆ.
ಪಟ್ಟಣದ ಮಾರುತಿನಗರದ ಹಿಂದುಳಿದ ಮತ್ತು ಅಲ್ಪಸಂಖ್ಯಾತರ ವಿದ್ಯಾರ್ಥಿ ನಿಲಯದಲ್ಲಿ ವ್ಯಾಸಾಂಗ ಮಾಡುತ್ತಿರುವ ಬಡ ವಿದ್ಯಾರ್ಥಿಗಳಿಗೆ ಸರಿಯಾದ ಊಟ ನೀಡುತ್ತಿಲ್ಲ ಮತ್ತು ಗುಣಮಟ್ಟದ ಆಹಾರ ಪದಾರ್ಥಗಳನ್ನು ಸರಿಯಾದ ಸಮಯಕ್ಕೆ ಸರಬರಾಜು ಮಾಡದೆ, ಕಳಪೆ ಮಟ್ಟದ ಆಹಾರ ಪದಾರ್ಥಗಳನ್ನು ಸರಬರಾಜು ಮಾಡಿ ವಂಚಿಸುತ್ತಿದ್ದಾರೆಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ಮುಂದಿನ ಜೂನ್ ತಿಂಗಳಿನಲ್ಲಿ ವಿದ್ಯಾರ್ಥಿನಿಲಯ ಪ್ರಾರಂಭವಾಗುವ ಮೊದಲೆ ಇಲಾಖಾಧಿಕಾರಿಗಳು ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮ ಕೈಗೊಂಡು ವಿದ್ಯಾರ್ಥಿಗಳಿಗೆ ಸರಿಯಾದ ಊಟ ನೀಡಬೇಕೆಂದು ಪೋಷಕರು ಮನವಿ ಮಾಡಿದ್ದಾರೆ.
ಬೇಸಿಗೆ ಮುನ್ನವೇ ದುಬಾರಿಯಾದ ಕಲ್ಲಂಗಡಿ
ಬಂಗಾರಪೇಟೆ: ಸತತ ಬರಗಾಲದಿಂದ ಬೆಂಡಾಗಿರುವ ತಾಲೂಕಿನ ಜನರಿಗೆ ಬೇಸಿಗೆಯ ತಾಪ ತಪ್ಪಿಸಲು ಈಗಗಾಲೇ ಮಾರುಟ್ಟೆ ಪ್ರವೇಶ ಮಾಡಿರುವ ಕಲ್ಲಂಗಡಿ ದುಬಾರಿಯಾಗಿರುವುದು ಗ್ರಾಹಕರನ್ನು ಬೆಚ್ಚಿ ಬೀಳಿಸಿದೆ.
ಅವಧಿಗೆ ಮೊದಲೇ ಮಾರುಕಟ್ಟೆ ಪ್ರವೇಶ ಮಾಡಿರುವ ಕಲ್ಲಂಗಡಿ ಎಲ್ಲ ವರ್ಗದವರನ್ನು ಆಕರ್ಷಿಸುತ್ತಿದೆ. ಆದರೆ ಬೆಲೆ ಬೆಚ್ಚಿ ಬೀಳಿಸುವಂತಾಗಿದೆ. ಎಷ್ಟೇ ಬೆಲೆ ಹೆಚ್ಚಾದರು ಬೇಸಿಗೆಯಲ್ಲಿ ಒಣಗುವ ಜನರ ಬಾಯಾರಿಸುವ ಕಲ್ಲಂಗಡಿಗೆ ಮುಂದಿನ ದಿನಗಳಲ್ಲಿ ಮತ್ತಷ್ಟು ಬೇಡಿಕೆ ಬರಲಿದೆ. ಸದ್ಯಕ್ಕೆ ಸ್ಥಳೀಯ ವ್ಯಾಪಾರಿಗಳು ಆಂಧ್ರ ಮತ್ತು ತಮಿಳುನಾಡಿನಿಂದ ಕಲ್ಲಂಗಡಿ ಆಮದು ಮಾಡಿಕೊಂಡು ವ್ಯಾಪಾರ ಮಾರುಡುತ್ತಿದ್ದಾರೆ.ಪ್ರಸ್ತುತ ಕೆಜಿ ಕಲ್ಲಂಗಡಿಗೆ 15 ರಿಂದ 20ಕ್ಕೆ ಮಾರಾಟ ಮಾಡಲಾಗುತ್ತಿದೆ. ಸತತ ಬರಗಾಲದಿಂದ ತತ್ತರಿಸಿರುವ ರೈತರು ಕಲ್ಲಂಗಡಿ ಬೆಳೆಯನ್ನು ಅತ್ಯಂತ ಕಡಿಮೆ ಬೆಳೆಯಲಾಗಿದೆ.
ಪಲ್ಲವಿ ಮಣಿಗೆ ಗ್ಲೋಬಲ್ಮ್ಯಾನ್ ಆವಾರ್ಡ್
ಬಂಗಾರಪೇಟೆ: ಪಟ್ಟಣದ ಕನ್ನಡ ಸಂಘದ ಅಧ್ಯಕ್ಷ ಪಲ್ಲವಿ ಮಣಿಗೆ ವಿದೇಶದಲ್ಲಿ ಅಂತಾರಾಷ್ಟ್ರೀಯ ಮಟ್ಟದ ವಿಶ್ವಮಾನ್ಯರು ಪ್ರಶಸ್ತಿ ಬಂದಿರುವುದು ಅವರ ಸಮಾಜ ಸೇವೆಗೆ ಸಂದ ಗೌರವವಾಗಿದೆ.
ಕನ್ನಡ ಸಂಘದ ಅಧ್ಯಕ್ಷರಾಗಿ ಹಾಗೂ ತಮ್ಮ ಹಲವು ಸಂಘ ಸಂಸ್ಥೆಗಳ ಮೂಲಕ ಸಮಾಜ ಸೇವೆಯಲ್ಲಿ ತೊಡಗಿರುವುದನ್ನು ಗುರುತಿಸಿ ಅವರಿಗೆ ವಿಶ್ವಮಾನ್ಯರು ಪ್ರಶಸ್ತಿಗೆ ( ಗ್ಲೋಬಲ್ಮ್ಯಾನ್ ಆವಾರ್ಡ್) ನೀಡಿರುವುದಕ್ಕೆ ಪಟ್ಟಣದ ಕನ್ನಡ ಸಂಘದ ಕಾರ್ಯದರ್ಶಿ ಹಾಗೂ ಪಧಾಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ. ಇತ್ತೀಚಿಗೆ ಕೀನ್ಯಾದ ನೈರೋಬಿಯ ಒಸ್ವಾಲ್ ಸೆಂಟರ್ ಆಡಿಟೋರಿಯಂನಲ್ಲಿ ಕರ್ನಾಟಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಹೃದಯ ವಾಹಿನಿ ಬಳಗ ಮಂಗಳೂರು, ಕನ್ನಡ ಸಾಂಸ್ಕೃತಿಕ ಸಂಘ ಕೀನ್ಯಾ, ದಶಮಾನೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ 10ನೇ ವಿಶ್ವಕನ್ನಡ ಸಂಸ್ಕೃತಿಕ ಸಮ್ಮೇಳನ 2014ದ ಸಮ್ಮೇಳಾನಾಧ್ಯಕ್ಷರಾಗಿ ನಾಗತಿಹಳ್ಳಿ ಚಂದ್ರಶೇಖರ್ ಅವರು ವಿವಿಧ ಸೇವೆಗಳನ್ನು ಗುರುತಿಸಿ ದೇಶದ ಏಳು ಮಂದಿಗೆ ವಿಶ್ವ ಮಾನ್ಯರು ಪ್ರಶಸ್ತಿ ನೀಡಿ ಗೌರವಿಸಿದರು.
'ಮಹಿಳೆ ಸಬಲೀಕರಣ ಅರಿವಿನ ಕೊರತೆ'
ಬಂಗಾರಪೇಟೆ: ಮಹಿಳೆ ಸಬಲೀಕರಣಕ್ಕೆ ಸರ್ಕಾರ ಎಲ್ಲವನ್ನೂ ಪೂರೈಸಿದೆ ಆದರೆ ಅದನ್ನು ಅನುಭವಿಸಲು ಆಗದೆ ಮಹಿಳೆ ಇಂದು ಅಬಲೆಯಾಗಿದ್ದಾಳೆ ಎಂದು ಕನ್ನಡ ಸಂಘದ ಅಧ್ಯಕ್ಷ ಪಲ್ಲವಿಮಣಿ ಹೇಳಿದರು.
ಜೀತ ಮುಕ್ತ ಕರ್ನಾಟಕ, ಕರ್ನಾಟಕ ಜೀತದಾಳು, ಕೃಷಿ ಕಾರ್ಮಿಕರ ಒಕ್ಕೂಟ ಮತ್ತು ನವಚೇತನ ಸಂಸ್ಥೆ ವತಿಯಿಂದ ಇಲ್ಲಿನ ಬಯಲುರಂಗಮಂದಿರದಲ್ಲಿ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಗೆ ಹೂವಿನ ಗಿಡಕ್ಕೆ ನೀರುಣಿಸುವ ಮೂಲಕ ಚಾಲನೆ ನೀಡಿ ಮಾತನಾಡಿ, ಮಹಿಳೆಯರು ಎಲ್ಲಾ ರಂಗದಲ್ಲಿಯೂ ಇದ್ದಾರೆ ಆದರೆ ಶಿಕ್ಷಣವಿಲ್ಲದ ಕಾರಣ ಅಧಿಕಾರ ಅನ್ಯರ ಪಾಲಾಗುವಂತಾಗಿದೆ ಎಂದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಸಿ.ವಿ. ರಾಮನ್ ಮಾತನಾಡಿದರು. ಶಿಕ್ಷಕ ವೆಂಕಟೇಶ, ಜೀವಿಕ ತಾಲೂಕು ಸಂಚಾಲಕ ರಾಮಚಂದ್ರ, ಮಹಿಳಾ ಸಂಚಾಲಕಿ ಸುಮತಿ ಇದ್ದರು.
ಬಸ್ಗಳಲ್ಲಿ ಮಹಿಳೆಯರಿಗೆ ಪ್ರತ್ಯೇಕ ಸೀಟು ಕಾದಿರಿಸಿ
ಕೋಲಾರ: ಸರ್ಕಾರಿ ಬಸ್ಸುಗಳಲ್ಲಿ ಮಹಿಳೆಯರಿಗೆ ಪ್ರತ್ಯೇಕ ಅಸನಗಳ ವ್ಯವಸ್ಥೆ ಮಾಡಬೇಕು, ಚಾಲಕರು ಮತ್ತು ನಿರ್ವಾಹಕರು ಮಹಿಳೆಯಿರಿಗೆ ಕಾದಿಸಲಾಗಿರುವ ಸೀಟುಗಳಲ್ಲಿ ಪುರುಷಕರು ಕೂರದಂತೆ ನೋಡಿಕೊಳ್ಳಬೇಕೆಂದು ಜನವಾದಿ ಮಹಿಳಾ ಸಂಘಟನೆಯ ರಾಜ್ಯಾಧ್ಯಕ್ಷೆ ವಿ. ಗೀತಾ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳನ್ನು ಒತ್ತಾಯಿಸಿದರು. ನಗರದ ಸರ್ಕಾರಿ ಬಸ್ ನಿಲ್ದಾಣದಲ್ಲಿ ವಿಶ್ವ ಮಹಿಳಾ ದಿನಚಾರಣೆ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಸ್ಸುಗಳಲ್ಲಿ ಮಹಿಳೆಯರಿಗೆ ಪ್ರತ್ಯೇಕ ಅಸನಗಳ ವ್ಯವಸ್ಥೆ ಇದ್ದರೂ ನಿಯಮ ಪಾವನೆ ಆಗುತ್ತಿಲ್ಲ, ಸ್ಟಿಕ್ಕರ್ಗಳನ್ನು ಅಂಟಿಸಿದ್ದರೂ ಅದನ್ನು ಅಳಸಿಹಾಕಲಾಗಿದೆ. ಇನ್ನು ಮುಂದೆ ಈ ರೀತಿ ಆಗದಂತೆ ಚಾಲಕರು ಮತ್ತು ನಿರ್ವಾಹಕರು ಗಮನ ನೀಡಬೇಕೆಂದು ತಿಳಿಸಿದರು. ಬಸ್ಸುಗಳಲ್ಲಿ ಹೆಣ್ಣು ಮಕ್ಕಳ ಮೇಲೆ ನಡೆಯುವ ಶೋಷಣೆ ತಡೆಯಬೇಕು ಎಂದು ಆಗ್ರಹಿಸಿದ್ದಾರೆ.
ಆರ್ಪಿಐ ಮುಖಂಡರ ಆರೋಪಕ್ಕೆ ಖಂಡನೆ
ಕೋಲಾರ: ಆರ್ಪಿಐ ಪಕ್ಷದ ರಾಷ್ಟ್ರಾಧ್ಯಕ್ಷ ಹಾಗೂ ರಾಜ್ಯಸಭಾ ಸದಸ್ಯ ರಾಮದಾಸ್ ಅಠಾವಾಳೆ ಮತ್ತು ಆರ್ಪಿಐ ರಾಜ್ಯಾಧ್ಯಕ್ಷ ಎ. ವೆಂಕಟಸ್ವಾಮಿ ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ವಿರುದ್ಧ ತಮ್ಮ ಸ್ಥಾನಕ್ಕೆ ಮೀರಿದ ಮಾತುಗಳನ್ನಾಡಿದ್ದಾರೆಂದು ಕಾಂಗ್ರೆಸ್ ಮುಖಂಡ ರಾಜೇಶ್ ಸಿಂಗ್ ಹಾಗೂ ವೆಂಕಟಪತಪ್ಪ ಖಂಡಿಸಿದ್ದಾರೆ. ಕಾಂಗ್ರೆಸ್ನಲ್ಲಿ ಅಧಿಕಾರ ಅನುಭವಿಸಿ ಈಗ ಬಿಜೆಪಿಯ ಬಾಗಿಲನ್ನು ತಟ್ಟುತ್ತಿರುವ ಈ ಮುಖಂಡರಿಗೆ ನಮ್ಮ ನಾಯಕರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲವೆಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಅಠಾವಳೆರವರು ಹೇಳಿರುವಂತೆ ರಾಷ್ಟ್ರದ ಜಮೀನನ್ನು ಈಗಾಗಲೇ ಭೂಮಾಲೀಕರಿಂದ ಪಡೆದು, ವಿನೋಬಾ ಅವರಿಂದ ಆರಂಭಿಸಿ ಇಂದಿರಾಗಾಂಧಿಯವರ ತನಕ ದಲಿತರಿಗೆ, ಅಲ್ಪಸಂಖ್ಯಾತರಿಗೆ, ಹಿಂದುಳಿದವರಿಗೆ ಭೂಮಿಯನ್ನು ಹಂಚಲಾಗಿದೆ. ಮುನಿಯಪ್ಪನವರು ಅನೇಕ ಜನಪರವಾದ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತಂದು ಕೋಲಾರ ಕ್ಷೇತ್ರವನ್ನು ಮಾದರಿ ಲೋಕಸಭಾ ಕ್ಷೇತ್ರವನ್ನಾಗಿಸಲು ಪ್ರಯತ್ನಿಸುತ್ತಿದ್ದಾರೆಂದು ಹೇಳಿದ್ದಾರೆ.
ಗ್ರಾಪಂ ಕಚೇರಿಗೆ ಬೀಗ ಜಡಿದು ಪ್ರತಿಭಟನೆ
ಕೋಲಾರ: ಕರ್ನಾಟಕ ಪ್ರಾಂತ ರೈತಸಂಘ ವತಿಯಿಂದ ಕೋಲಾರ ತಾಲೂಕಿನ ಶಾಪೂರು ಗ್ರಾಮ ಪಂಚಾಯಿತಿ ಕಚೇರಿಗೆ ಬೀಗ ಜಡಿದು ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟನೆ ನಡೆಸಲಾಯಿತು. ಗ್ರಾಪಂಗೆ ಪಿಡಿಒ ಸುಮಾರು 2 ತಿಂಗಳಿಂದ ಕಚೇರಿಗೆ ಬರುತಿಲ್ಲವೆಂದು ಆರೋಪಿಸಿದ ಪ್ರತಿಭಟನಾಕಾರರು ಕೂಡಲೇ ಕ್ರಮಕ್ಕೆ ಒತ್ತಾಯಿಸಿದರು. ಮನೆ ನಿರ್ಮಾಣಕ್ಕೆ ನೀಡಿರುವ 18 ಸಾವಿರ ರು.ಗಳ ಎರಡು ಚೆಕ್ ಬೌನ್ಸ್ ಆಗಿದೆ. ಪಂಚಾಯಿತ್ ಕಾಮಗಾರಿಗಳು ಕುಂಠಿತವಾಗಿದೆ, ಗುತ್ತಿಗೆದಾರರಿಂದ ಪಂಚಾಯಿತಿ ಕೆಲಸಗಳ ನಿರ್ವಹಣೆ ಮಾಡುತ್ತಿದ್ದು ಕೂಡಲೇ ನಿಲ್ಲಿಸಬೇಕೆಂದು ಒತ್ತಾಯಿಸಿದರು. ಕೆಪಿಆರ್ಎಸ್ ಮುಖಂಡರಾದ ವೆಂಕಟೇಶಪ್ಪ, ಪಾಪಣ್ಣ, ಗ್ರಾಪಂ ಸದಸ್ಯರಾದ ವೆಂಕಟಮುನಿಯಪ್ಪ ಮಂಜುನಾಥ, ಅಪ್ಪಯ್ಯಣ್ಣ ಮುನಿಶಾಮಿಗೌಡ, ಮುನಿಯಪ್ಪ, ನಾರಾಯಣಪ್ಪ, ಮಂಜುನಾಥ, ಕೃಷ್ಣಪ್ಪ, ಗಣೇಶ್, ವೆಂಕಟಮುನಿಯಪ್ಪ ಹಾಗೂ ಗ್ರಾಮಸ್ಥರಿದ್ದರು.
ಸಮಾಜದ ಋಣ ತೀರಿಸೋಣ:ಪತ್ರಕರ್ತ ಕೆ.ಎಸ್. ಗಣೇಶ್
ಕೋಲಾರ: ಸಮಾಜದ ಸಹಕಾರದಿಂದ ನಾವು ಸಾಕಷ್ಟು ಪ್ರಗತಿ ಸಾಧಿಸಿದ್ದೇವೆ. ಇದಕ್ಕೆ ಪ್ರತಿಫಲವಾಗಿ ನಾವು ಸಮಾಜಕ್ಕೆ ಋಣ ತೀರಿಸಲು ಒಗ್ಗೂಡಿ ಕೆಲಸ ಮಾಡೋಣ ಎಂದು ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಕೆ.ಎಸ್. ಗಣೇಶ್ ತಿಳಿಸಿದರು. ನಗರದಲ್ಲಿ ಶ್ರೀ ಗೋಕುಲ ಮಿತ್ರ ಬಳದಿಂದ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಗೆಳೆಯರು ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಕನಿಷ್ಟ ಎರಡು ತಿಂಗಳಿಗೊಮ್ಮೆ ಗೆಳೆಯರು ಒಂದು ಕಡೆ ಸೇರಿ ಸಾಮಾಜಿಕ ಚಿಂತನೆಗಳ ಮೂಲಕ ನಮ್ಮ ಸಮಾಜ ಸೇವೆ ಮಾಡೋಣ, ಇದಕ್ಕೆ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರೂ ಆಗಿರುವ ಗೆಳೆಯ ಅನಿಲಲ್ಕುಮಾರ್ ಮುಂದಾಳತ್ವ ವಹಿಸಬೇಕೆಂದು ಸಲಹೆ ನೀಡಿದರು.
ಕಾರ್ಮಿಕರು ಮಕ್ಕಳ ವಿದ್ಯಾಭ್ಯಾಸದ ಕಡೆ ಗಮನ ಹರಿಸಲಿ
ಶಿಡ್ಲಘಟ್ಟ: ಕಾರ್ಮಿಕರ ಮಕ್ಕಳು ಕಾರ್ಮಿಕರಾಗುವುದು ಬೇಡ ಎಂದು ನ್ಯಾಯಾಧೀಶ ಎಸ್. ಮಹೇಶ್ ಅಭಿಪ್ರಾಯಪಟ್ಟರು. ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಏರ್ಪಡಿಸಿದ್ದ ಕಟ್ಟಡ ಕಾರ್ಮಿಕರಿಗೆ ಉಚಿತ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬೆಳಗಿನಿಂದ ದುಡಿಮೆಯಲ್ಲಿ ತೊಡಗಿರುವ ಬಹಳಷ್ಟು ಮಂದಿ ಕಾರ್ಮಿಕರು ತಮ್ಮ ಮಕ್ಕಳ ವಿದ್ಯಾಭ್ಯಾಸದ ಕಡೆ ಗಮನ ನೀಡಬೇಕು. ನಿಮ್ಮ ಮಕ್ಕಳು ನಿಮ್ಮಂತೆ ಕಾರ್ಮಿಕರಾಗುವುದು ಬೇಡ, ಮಕ್ಕಳಿಗೆ ಯಾವ ಆಸ್ತಿ ಮಾಡದಿದ್ದರೂ ಗುಣಮಟ್ಟದ ಶಿಕ್ಷಣ ಕೊಡಿಸಿ ದೇಶದಲ್ಲಿ ಸತ್ಪ್ರಜೆಗಳನ್ನಾಗಿ ಮಾಡಿ ಎಂದರು. ತಾಲೂಕಿನ ವಕೀಲರ ಸಂಘದ ಅಧ್ಯಕ್ಷ ಪಾಪಿರೆಡ್ಡಿ ಮಾತನಾಡಿದರು. ಇದೇ ಸಂಧರ್ಭದಲ್ಲಿ ಕಟ್ಟಡ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯಿಂದ ಗುರುತಿನ ಚೀಟಿಗಳನ್ನು ವಿತರಣೆ ಮಾಡಲಾಯಿತು. ರಾಮಯ್ಯ, ಈ.ಡಿ. ಶ್ರೀನಿವಾಸ್, ಲಕ್ಷ್ಮೀದೇವಮ್ಮ, ವಕೀಲ ಅಶೋಕ್ ಇದ್ದರು.
ಶ್ರೀ ಮಹಾಗಣಪತಿ ದೇಗುಲದಲ್ಲಿ ಪುನರ್ ಪ್ರತಿಷ್ಠಾಪನೆ
ವೇಮಗಲ್: ಕೋಲಾರ ತಾಲೂಕಿನ ವೇಮಗಲ್ನಲ್ಲಿ ಶ್ರೀ ಮಹಾಗಣಪತಿ ದೇವಾಲಯ ಸಂಪ್ರೋಕ್ಷಣೆ ಪುನರ್ ಪ್ರತಿಷ್ಠಾಪನೆ ಹಾಗೂ ಮಹಾಕುಂಭಾಭಿಕ್ಷೇಕ ಮಹೋತ್ಸವ ಶುಕ್ರವಾರ ವಿನಾಯಕ ವಿವೇಕಾನಂದ ಕ್ಷೇಮಾಭಿವೃದ್ಧಿಸಂಘದಿಂದ ವಿಜೃಂಣೆಯಿಂದ ನಡೆಯಿತು. ಬಿಜೆಪಿ ಪಕ್ಷದ ಗ್ರಾಮೀಣ ವಿಭಾಗದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ಎಸ್. ಓಹಿಲೇಶ್ವರ, ರೈತ ಸಂಘ ಮತ್ತು ಹಸಿರು ಸೇನೆ ವೇಮಗಲ್ ಹೋಬಳಿ ಮುಖಂಡ ಅಮರನಾರಾಯಣ ಶ್ರೀ ವಿನಾಯಕ ವಿವೇಕಾನಂದ ಕ್ಷೇಮಾಭಿವೃದ್ಧಿಸಂಘದ ಸುರೇಶ್ ಬಾಬು, ಕೃಷ್ಣ, ಮಲ್ಲಿಕಾರ್ಜುನ, ನಂದೀಶ್, ಲೋಕೇಶ್, ಶಶಿಕುಮಾರ್, ವಿಜಯಕುಮಾರ್, ಮಹೇಶ್, ಅರವಿಂದ್, ಪ್ರಕಾಶ್, ಚೇತನ್, ಮುಕುಂದ, ಕೇಶವ ಮತ್ತು ರಾಜಾ ಇದ್ದರು.
ಪೋಲಾಗುತ್ತಿರುವ ನೀರು; ಗಮನ ಹರಿಸದ ಅಧಿಕಾರಿಗಳು
ಶಿಡ್ಲಘಟ್ಟ: ಕುಡಿಯುವ ನೀರಿಗಾಗಿ ಬಹಳಷ್ಟು ಮಂದಿ ಗ್ರಾಪಂಗಳ ಮುಂದೆ ಪ್ರತಿಭಟನೆ ಮಾಡುತ್ತಿದ್ದಾರೆ, ಆದರೂ ಇರುವ ನೀರನ್ನು ಸದುಪಯೋಗ ಪಡಿಸಿಕೊಳ್ಳುವ ಯಾವುದೇ ಆಲೋಚನೆಯನ್ನು ಅಧಿಕಾರಿಗಳು ಮಾಡುತ್ತಿಲ್ಲ ಎಂದು ನಾಗರಿಕರು ಆರೋಪಿಸಿದ್ದಾರೆ. ಕುಡಿಯುವ ನೀರಿಗೆ ಪರದಾಡುತ್ತಿದ್ದಾರೆ. 1,300 ಅಡಿಗಳವರೆಗೂ ಕೊರೆದರೂ ನೀರು ಸಿಗುತ್ತಿಲ್ಲ, ಕೆಲವು ಕಡೆ ಇರುವ ಅಲ್ಪಸ್ವಲ್ಪ ನೀರು ಪೋಲಾಗುತ್ತಿದ್ದರೂ ಅಧಿಕಾರಿಗಳು ಗಮನ ಹರಿಸುತ್ತಿಲ್ಲ. ತಾಲೂಕಿನ ತುಮ್ಮನಹಳ್ಳಿ ಗ್ರಾಪಂ ಚಿಂತಡಪಿ ಹಾಗೂ ಕೆ. ಮುತ್ತುಕದಹಳ್ಳಿ ಗ್ರಾಮಗಳಲ್ಲಿ ನೀರು ಸಿಸ್ಟನ್ಗಳಲ್ಲಿ ತುಂಬಿ ಹೊರ ಹೋಗುತ್ತಿದ್ದರು ಅಲ್ಲಿನ ಜಲಗಾರರಾಗಲಿ, ಸ್ಥಳೀಯರಾಗಲಿ ಸಂಬಂಧವಿಲ್ಲದಂತೆ ವರ್ತಿಸುದ್ದಾರೆ, ಕೊಳಾಯಿಗಳು, ಪೈಪ್ಲೈನ್ಗಳಲ್ಲಿ ನಿರಂತರವಾಗಿ ಪೋಲಾಗುತ್ತಿರುವ ನೀರನ್ನು ರಕ್ಷಿಸಬೇಕಿದೆ. ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಲಿ ಎಂಬುದು ನಾಗರಿಕರ ಆಶಯ.
ಮಹಿಳಾ ದಿನಾಚರಣೆ ಪ್ರಯುಕ್ತ ಜಾಗೃತಿ ಜಾಥಾ
ಗುಡಿಬಂಡೆ: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಪಟ್ಟಣದ ಅಂಬೇಡ್ಕರ್ ವೃತ್ತದಿಂದ ಮಾರುತಿ ಸರ್ಕಲ್ವೆರೆಗೆ ಮಹಿಳೆಯರು ಜಾಗೃತಿ ಜಾಥಾ ನಡೆಸಿದರು.
ಪಟ್ಟಣದ ಬಿಸಿಎಂ ವಿದ್ಯಾರ್ಥಿ ನಿಲಯದ ಆವರಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಇಲಾಖೆ, ಜೀತ ವಿಮುಕ್ತಿ ಕರ್ನಾಟಕ ಸಂಘಟನೆ, ಉನ್ನತಿ ಮಾನವ ಹಕ್ಕುಗಳ ರಕ್ಷಣಾ ಸಂಘದ ಸಹಯೋಗದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತಹಸೀಲ್ದಾರ್ ಶೈಲಜಾ, ಆಧುನಿಕ ಸಮಾಜದಲ್ಲಿ ಸಾಕಷ್ಟು ಅವಿಷ್ಕಾರಗಳು ಆದರೂ ಮಹಿಳೆಯರ ಮೇಲಿನ ದೌರ್ಜನ್ಯ ಜೀವಂತವಾಗಿರುವುದು ನೋವಿನ ಸಂಗತಿಯಾಗಿದೆ ಎಂದರು. ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಎ.ಜಿ. ಸುಧಾಕರ್ ಮಾತನಾಡಿದರು. ಈ ವೇಳೆ ಮಹಿಳಾ ಸಬಲೀಕರಣಕ್ಕಾಗಿ ಶ್ರಮಿಸಿದ ಗ್ರಾಮೀಣ ಭಾಗಗಳ 15 ಮಂದಿ ಮಹಿಳೆಯರಿಗೆ ಉನ್ನತಿ ಮಹಿಳಾ ಸೇವಾ ಶ್ರೀ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಸಿಡಿಪಿಒ ಸಿದ್ದಲಿಂಗಪ್ಪ, ಪಪಂ ಮುಖ್ಯಾಧಿಕಾರಿ ಶ್ರೀರಾಮರೆಡ್ಡಿ, ವೆಂಕಟಾಚಲಪತಿ, ಮಂಜುನಾಥ, ನಾರಾಯಣಸ್ವಾಮಿ, ಜಿ.ವಿ.ವಿಶ್ವನಾಥ್ ಇದ್ದರು.
ಪೊಲೀಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ಕೋಲಾರ: ಕೋಲಾರ ಜಿಲ್ಲೆಯಲ್ಲಿ ಖಾಲಿ ಇರುವ 25 ನಾಗರೀಕ ಪೊಲೀಸ್ ಕಾನ್ಸ್ಟೇಬಲ್ ಮತ್ತು ಮಹಿಳಾ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆನ್ ಲೈನ್ ಮುಖಾಂತರ ಅರ್ಜಿ ಹಾಕ ಬಯಸುವ ಅಭ್ಯರ್ಥಿಗಳು ಮಾ.27ರವರೆಗೆ ಸಲ್ಲಿಸ ಬಹುದಾಗಿರುತ್ತದೆ. ಆನ್ ಲೈನ್ ಮುಖಾಂತರ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ನಗದು ರೂಪದಲ್ಲಿ ಪರೀಕ್ಷಾ ಶುಲ್ಕವನ್ನು ಎಸ್.ಸಿ.ಎಸ್.ಟಿ, ಪ್ರವರ್ಗ-1 ರವರು 100 ರು.ಗಳು ಮತ್ತು ಇತರೆ ಅಭ್ಯರ್ಥಿಗಳು 250 ರು. ಅಧಿಕೃತ ಎಸ್.ಬಿ.ಎಂ. ಶಾಖೆಗಳಲ್ಲಿ ಅಥವಾ ಎಸ್.ಬಿ.ಎಂ. ಶಾಖೆ ಇಲ್ಲದ ಪ್ರದೇಶದಲ್ಲಿ ಸ್ಟೇಟಟ್ಬ್ಯಾಂಕ್ ಆಫ್ ಹೈದರಾಬಾದ್ನಲ್ಲಿ ಪಾವತಿಸಬಹುದಾಗಿರುತ್ತದೆ.
ಎಲೆ ಇಲ್ಲದ ಅರಳಿಮರ...
ಕೋಲಾರದ ಕಠಾರಿ ಗಂಗಮ್ಮ ದೇವಾಲಯ ಹಿಂಭಾಗದ ಅರಳಿಕಟ್ಟೆಯ ಬಳಿ ಸುಮಾರು ನೂರು ವರ್ಷಗಳಷ್ಟು ಹಳೆಯದಾದ ಅರಳಿಮರದಲ್ಲಿ ಒಂದೂ ಹಸಿರು ಎಲೆ ಇಲ್ಲದೆ ಬೋಳಾಗಿ ಕಾಣುತ್ತಿದೆ, ಯುಗಾದಿ ಹಬ್ಬದ ವೇಳೆಗೆ ಸಾಮಾನ್ಯವಾಗಿ ಎಲ್ಲಾ ಮರಗಳಲ್ಲಿ ಚಿಗುರೆಲೆಗಳು ಕಾಣಬೇಕು. ಹಬ್ಬಕ್ಕೆ ಇನ್ನು 23 ದಿನ ಬಾಕಿ ಇದ್ದು ಬೋಳಾಗಿರುವ ಮರದಲ್ಲಿ ಹಸಿರು ಸಂಭ್ರಮಿಸುವುದೇ ಕಾದು ನೋಡಬೇಕಾಗಿದೆ.
ಅಕ್ರಮ ಮದ್ಯ ಮಾರಾಟ ವಿರೋಧಿಸಿ ಪ್ರತಿಭಟನೆ
ಶಿಡ್ಲಘಟ್ಟ: ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕುವಂತೆ ಒತ್ತಾಯಿಸಿ ಮಹಿಳಾ ಸಂಘಟನೆಗಳು ಅಬಕಾರಿ ಇಲಾಖೆ ಮುಂದೆ ಪ್ರತಿಭಟನೆ ನಡೆಸಿದರು. ತಾಲೂಕಿನ ಹೇಮಾರ್ಲಹಳ್ಳಿ ಗ್ರಾಮದ ನೂರಾರು ಮಹಿಳೆಯರು ಪ್ರತಿಭಟನೆ ನಡೆಸಿ, ಗ್ರಾಮದ ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆ ಎಂದು ದೂರಿದರು. ಅನೇಕ ಬಾರಿ ಅಬಕಾರಿ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ, ಅಧಿಕಾರಿಗಳು ಅಕ್ರಮ ಮದ್ಯಮಾರಾಟ ಮಾಡುತ್ತಿರುವ ಮನೆಗಳು ಹಾಗೂ ಅಂಗಡಿಗಳ ಮೇಲೆ ದಾಳಿ ನಡೆಸುವ ಮುನ್ನಾ ಅವರಿಗೆ ಮಾಹಿತಿ ನೀಡುತ್ತಿರುವುದರಿಂದ ಮದ್ಯ ಕಂಡು ಬರುತಿಲ್ಲ ಎಂದು ಆರೋಪಿಸಿ ಅಬಕಾರಿ ಇಲಾಖೆ ಅಧೀಕ್ಷಕ ರಮೇಶ್ ಕುಮಾರ್ ಅವರಿಗೆ ದೂರು ಸಲ್ಲಿಸಿದ್ದಾರೆ.