ಮಫ್ತಿಯಲ್ಲಿ ಬಂದ ಪೊಲೀಸರಿಗೆ ಗೂಸಾ
ಬಾಗೇಪಲ್ಲಿ: ತಾಲೂಕಿನ ಜಿಲಾಜಿರ್ಲಾ ಗ್ರಾಮದಲ್ಲಿ ಮಟ್ಕಾ ಜೂಜುಕಾರನೊಬ್ಬನನ್ನು ಬಂಧಿಸಲು ಮಫ್ತಿಯಲ್ಲಿ ಖಾಸಗಿ ವಾಹನದಲ್ಲಿ ಬಂದಿದ್ದ ಆಂಧ್ರ ಪ್ರದೇಶದ ಪೋಲಿಸರನ್ನು ಗ್ರಾಮಸ್ಥರು ದರೋಡೆಕೋರರೆಂದು ಭಾವಿಸಿ ಮನಬಂದಂತೆ ಥಳಿಸಿದ ಘಟನೆ ಗುರುವಾರ ರಾತ್ರಿ ನಡೆದಿದೆ. ಈ ಸಂಬಂಧ 3 ಆರೋಪಿಗಳನ್ನು ಬಾಗೇಪಲ್ಲಿ ಪೊಲೀಸರು ಬಂಧಿಸಿದ್ದಾರೆ.
ಗುರುವಾರ ರಾತ್ರಿ ಸುಮಾರು 11.30 ರಲ್ಲಿ ಆಂಧ್ರ ಪ್ರದೇಶದ ಅನಂತಪುರಂ ಜಿಲ್ಲೆಯ ಪೆನುಗೊಂಡ ವಿಶೇಷ ಟಾಸ್ಕ್ ಫೋರ್ಸು ಪೊಲೀಸರು ತಾಲೂಕಿನ ಜಿಲಾಜಿರ್ಲಾ ಗ್ರಾಮಕ್ಕೆ ಬಂದಿದ್ದು ಗ್ರಾಮದಲ್ಲಿದ್ದ ಮಟ್ಕಾದೊರೆ ಬುಜ್ಜಿ ಎಂಬಾತನನ್ನು ಬಂಧಿಸಿ ಎಳೆದುಕೊಂಡು ಹೋಗುವ ಸಮಯದಲ್ಲಿ ಅವರ ಮನೆಯವರು ಮತ್ತು ಅಕ್ಕಪಕ್ಕದವರು ಕೂಗಾಡಿಕೊಂಡಿದ್ದಾರೆ. ಪೊಲೀಸರು ಮಫ್ತಿಯಲ್ಲಿದ್ದ ಕಾರಣ ಡಕಾಯಿತರು ಇರಬಹುದು ಎಂದು ತಿಳಿದ ಗ್ರಾಮಸ್ಥರು ಅನುಮಾನಗೊಂಡು ಬುಜ್ಜಿಯನ್ನು ಪೊಲೀಸರಿಂದ ಬಿಡಿಸಿ ಮನಬಂದಂತೆ ಥಳಿಸಿದ್ದಾರೆ ಎನ್ನಲಾಗಿದೆ. ಇದೇ ಸಂದರ್ಭದಲ್ಲಿ ಪೊಲೀಸರು ಬಳಸಿದ್ದ ಖಾಸಗಿ ಟಾಟಾ ಸುಮೋ ಗಾಜುಗಳನ್ನು ಗ್ರಾಮಸ್ಥರು ಹೊಡೆದುಹಾಕಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿರುವುದನ್ನು ಗಮನಿಸಿದ ಗ್ರಾಮದ ಕೆಲ ಹಿರಿಯರು ಹಲ್ಲೆಕೋರರಿಂದ ಪೊಲೀಸರನ್ನು ಬಿಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೂಡಲೇ ಬಾಗೇಪಲ್ಲಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಾಗೇಪಲ್ಲಿ ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿ ಆಂಧ್ರದ ಪೊಲೀಸರಿಗೆ ರಕ್ಷಣೆ ನೀಡಿದ್ದಾರೆ. ಟಾಸ್ಕ್ ಫೋರ್ಸ್ ಸಬ್ಇನ್ಸ್ಪೆಕ್ಟರ್ ಆಂಜನೇಯುಲು ನೀಡಿದ ದೂರಿನನ್ವಯ ಜಿಲಾಜಿರ್ಲಾ ಗ್ರಾಮದ 17 ಜನರ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಬಾಗೇಪಲ್ಲಿ ಪೊಲೀಸರು ನಾಗರಾಜು, ನರಸಿಂಹರೆಡ್ಡಿ ಮತ್ತು ನರಸಿಂಹರೆಡ್ಡಿ ಎಂಬುವವರನ್ನು ಬಂಧಿಸಿದ್ದಾರೆ. ಉಳಿದವರು ಪಾರಾರಿಯಲ್ಲಿದ್ದಾರೆ.
ಪೊಲೀಸ್ ಸಮವಸ್ತ್ರವಿಲ್ಲದೆ ಖಾಸಗಿ ಟಾಟಾ ಸುಮೋವಾಹನದಲ್ಲಿ ಬಂದಿದ್ದ ಆಂಧ್ರ ಪೊಲೀಸರು ಸ್ಥಳೀಯ ಪೊಲೀಸರ ಗಮನಕ್ಕೆ ತರದೇ ನೇರವಾಗಿ ಜಿಲಾಜಿರ್ಲಾ ಗ್ರಾಮಕ್ಕೆ ಹೋಗಿ ಮಟ್ಕಾ ದೊರೆ ಬುಜ್ಜಿಯನ್ನು ಹಿಡಿದುಕೊಳ್ಳಲು ಯತ್ನಿಸಿದ್ದೇ ಈ ಘಟನೆ ನಡೆಯಲು ಕಾರಣ ಎನ್ನಲಾಗುತ್ತಿದೆ.