ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಎತ್ತಿನಹೊಳೆ ಜಾರಿ ಬಗ್ಗೆ ಸರ್ಕಾರದ ನಿರ್ಧಾರದ ಬಗ್ಗೆ ಅಸಮಾಧಾನಗೊಂಡಿದ್ದ ಪರಮಶಿವಯ್ಯ

Vishwanath S
Updated On : 12 Mar 2014, 1:18 am

ಚಿಕ್ಕಬಳ್ಳಾಪುರ: ಬಯಲುಸೀಮೆ ಜಿಲ್ಲೆಗಳಲ್ಲಿನ ಅಂತರ್ಜಲ ಮಟ್ಟ ಕುಸಿತದ ಸಮಸ್ಯೆಯನ್ನು ದೂರ ಮಾಡಿ ನೀರಾವರಿ ಸೌಲಭ್ಯವನ್ನು ಒದಗಿಸಲು ತಮ್ಮ ಪರಿಶ್ರಮದಿಂದ ಮಹತ್ತರವಾದ ವರದಿಯನ್ನು ತಯಾರಿಸಿದ ನೀರಾವರಿ ತಜ್ಞ ಡಾ. ಪರಮಶಿವಯ್ಯನವರು ನಿಧನರಾದ ಹಿನ್ನೆಲೆಯಲ್ಲಿ ಶಾಶ್ವತ ನೀರಾವರಿ ಹೋರಾಟ ಸಮಿತಿ ಸೇರಿದಂತೆ ಹಲವರು ಅಘಾತದಲ್ಲಿಯೇ ಕಂಬನಿ ಮಿಡಿದು ಸಂತಾಪವನ್ನು ವ್ಯಕ್ತಪಡಿಸಿದ್ದಾರೆ.  
97 ವಯಸ್ಸಿನ ಪರಮಶಿವಯ್ಯನವರು ನೂರನೇ ಜನ್ಮ ದಿನವನ್ನು ಆಚರಿಸಿಕೊಳ್ಳುತ್ತಾರೆ. ಆ ವೇಳೆಗಾಗಲೇ ಅವರ ನೀರಾವರಿ ವರದಿಯಾಧಾರಿತ ಯೋಜನೆಯನ್ನು ರಾಜ್ಯ ಸರ್ಕಾರ ಅನುಷ್ಠಾನಗೊಳಿಸಲು ಮುಂದಾಗುತ್ತದೆ ಎಂಬ ಆಶಯ ಬಯಲುಸೀಮೆ ಜಿಲ್ಲೆಗಳ ಜನರದ್ದಾಗಿತ್ತು. ಆದರೆ, ಪರಮಶಿವಯ್ಯನವರು ನಿಧನರಾಗಿದ್ದು ಪ್ರಮುಖವಾಗಿ ಅವರು ಜೀವಂತವಾಗಿರುವಾಗಲೇ ಪರಮಶಿವಯ್ಯನವರ ವರದಿ ಅನುಷ್ಠಾನಕ್ಕೆ ಚಾಲನೆ ಸಿಗುತ್ತದೆ ಎಂಬ ಬಯಕೆಯೂ ಈಡೇರಲಿಲ್ಲ. ಎತ್ತಿನಹೊಳೆ ಯೋಜನೆ ಅನುಷ್ಠಾನದ ರಾಜ್ಯ ಸರ್ಕಾರದ ನಿರ್ಧಾರದ ಬಗ್ಗೆ ಸ್ವತಃ ಪರಮಶಿವಯ್ಯನವರೇ ಬಹಿರಂಗವಾಗಿ ಅಸಮಾಧಾನವನ್ನು ವ್ಯಕ್ತಪಡಿಸಿದ್ದು ಈ ಯೋಜನೆಗೆ ಶಂಕುಸ್ಥಾಪನೆ ನೆರವೇರಿದ 8 ದಿನಗಳಲ್ಲಿ ಅವರು ನಿಧನರಾಗಿರುವುದು ದುರದೃಷ್ಟಕರ ಸಂಗತಿಯಾಗಿದೆ.
ಡಾ. ಪರಮಶಿವಯ್ಯನವರು ತುಮಕೂರಿನಲ್ಲಿ ಮಂಗಳವಾರ ನಿಧನರಾಗಿದ್ದಾರೆ ಎಂಬ ಸುದ್ದಿ ಕೇಳಿ ಬಂದರೂ ಸಹ ಹಲವರು ನಂಬಲಿಲ್ಲ. ನಂತರ ನಿಧನದ ದುಃಖದ ವಿಚಾರವು ನಿಜವಾಗಿದೆ ಎನ್ನುವುದನ್ನು ಕೇಳಿ ಅರಗಿಸಿಕೊಳ್ಳಲಿಲ್ಲ. ಜಿಲ್ಲಾದ್ಯಂತ ಮೌನದ ವಾತಾವರಣ ನಿರ್ಮಾಣವಾಯಿತು. ಎಲ್ಲೆಡೆ ಡಾ. ಪರಮಶಿವಯ್ಯನವರ ಭಾವಚಿತ್ರವನ್ನಿಟ್ಟು ಹಲವರು ಶ್ರದ್ಧಾಂಜಲಿಯನ್ನು ಸಲ್ಲಿಸಿದರು.
ನಗರದ ಶಿಡ್ಲಘಟ್ಟ ವೃತ್ತದಲ್ಲಿ ಶಾಶ್ವತ ನೀರಾವರಿ ಹೋರಾಟ ಸಮಿತಿಯ ಮುಖಂಡರು ಜಮಾಯಿಸಿ ಪರಮಶಿವಯ್ಯನವರ ನಿಧನಕ್ಕೆ ಶೋಕ ವ್ಯಕ್ತಪಡಿಸಿದರು. ಬಯಲು ಸೀಮೆ ಜಿಲ್ಲೆಗಳಲ್ಲಿ ಕಾಡುತ್ತಿರುವ ನೀರಾವರಿ ಸಮಸ್ಯೆಯನ್ನು ಬಗೆಹರಿಸಲು ಅವರು ಹೊಂದಿದ್ದ ಕಾಳಜಿ ನಿಜಕ್ಕೂ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸ್ವಯಂ ಅಸಮಾಧಾನ: ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಪಾತಾಳಕ್ಕೆ ಕುಸಿದು ಫ್ಲೋರೈಡ್ ನೀರಿನ ಸಮಸ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ 90 ರ ದಶಕದಲ್ಲಿಯೇ ಇಲ್ಲಿ ಶಾಶ್ವತ ನೀರಾವರಿ ಸೌಲಭ್ಯದ ಕೂಗು ಕೇಳಿ ಬಂತು.ಆಗ ಡಾ. ಪರಮಶಿವಯ್ಯನವರನ್ನು ಈ ಭಾಗಕ್ಕೆ ಕರೆಸಿ ನೀರಾವರಿ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲಾಗಿತ್ತು. ಪಶ್ಚಿಮಘಟ್ಟಗಳಲ್ಲಿ ಹರಿದು ವ್ಯರ್ಥವಾಗಿ ಸಮುದ್ರ ಸೇರುವ 2 ಸಾವಿರ ಟಿಎಂಸಿ ನೀರಿನಲ್ಲಿ 200 ಟಿಎಂಸಿ ನೀರನ್ನು ಈ ಭಾಗಕ್ಕೆ ಹರಿಸಬಹುದು. ಇದರ ಬಗ್ಗೆ ಅನೇಕ ವರ್ಷಗಳ ಅಧ್ಯಯನ ನಡೆಸಿ ವರದಿಯನ್ನು ತಯಾರಿಸಿದ್ದೇನೆ. ಈ ಯೋಜನೆ ಅನುಷ್ಠಾನದಿಂದ ಈ ಭಾಗದ ಸಮಸ್ಯೆ ಬಗೆಹರಿಯುತ್ತದೆ. ಅಲ್ಲದೇ ಪಶ್ಚಿಮಘಟ್ಟಗಳ ಪರಿಸರಕ್ಕೂ ಯಾವುದೇ ಹಾನಿಯಾಗುವುದಿಲ್ಲ ಎಂದು ತಿಳಿಸಿದ್ದರು. ಇದರಿಂದ ವರದಿಯ ಬಗ್ಗೆ ಚರ್ಚೆ ನಡೆದು ಹೋರಾಟಗಳು ಬೃಹತ್ ಮಟ್ಟದಲ್ಲಿ ನಡೆದಿದ್ದು ನಂತರದ ದಿನಗಳ ಬೆಳವಣಿಗೆಯಲ್ಲಿ ಡಾ.ಪರಮಶಿವಯ್ಯನವರ ವರದಿಯ ಬದಲಿಗೆ ಎತ್ತಿನಹೊಳೆ ಯೋಜನೆ ಚಾಲ್ತಿಗೆ ಬಂದಿತು. ಈ ಯೋಜನೆಗೆ ಶಂಕುಸ್ಥಾಪನೆಯನ್ನು ನೆರವೇರಿಸಲಾಯಿತು. ಆಗ ಪರಮಶಿವಯ್ಯನವರು ಅಸಮಾಧಾನ ವ್ಯಕ್ತಪಡಿಸಿದ್ದರು.
ಬೇಕಾದರೆ ನೇಣಿಗೆ ಹಾಕಿ: ನನ್ನ ವರದಿಯ ಬಗ್ಗೆ ಯಾವುದೇ ಚರ್ಚೆಗೂ ಸಿದ್ಧ. ನನ್ನ ವರದಿಯೇನಾದರೂ ಅವೈಜ್ಞಾನಿಕ ಎಂದು ತಿಳಿದು ಬಂದರೆ ನನ್ನನ್ನು ನೇಣಿಗೆ ಹಾಕಿ, ನನಗೆ ಯಾವುದೇ ಶಿಕ್ಷೆ ಕೊಡಿ ಎಂದು ಪರಮಶಿವಯ್ಯನವರು ಹೇಳಿದ ಮಾತನನ್ನು ಇಂದಿಗೂ ಯಾರೂ ಮರೆಯುವುದಿಲ್ಲ.
ಯಾವುದೇ ಪರಿಸರಕ್ಕೆ ಹಾನಿಯಾಗದಿದ್ದರೂ ಸಹ ನನ್ನ ವರದಿಯ ಅನುಷ್ಠಾನಕ್ಕೆ ಸರ್ಕಾರ ಮುಂದಾಗುತ್ತಿಲ್ಲ. ರಾಜಕೀಯ ಇಚ್ಛಾಶಕ್ತಿ ತೋರುತ್ತಿಲ್ಲ. ಕನಿಷ್ಠ ಮುಖ್ಯಮಂತ್ರಿಗಳು ತಮ್ಮನ್ನು ಕರೆದು ಸಮರ್ಪಕವಾಗಿ ಚರ್ಚೆ ನಡೆಸಿಲ್ಲ. ಇನ್ನೂ ಅನೇಕರು ನನ್ನನ್ನು ಹುಚ್ಚ, ಅರೆಮರೆವಿನ ಮುದುಕ ಎಂತಲೂ ಟೀಕಿಸಿದ್ದು ಇದರಿಂದ ನನಗೆ ಬೇಸರವಿಲ್ಲ. ಆದರೆ, ನಾನು ಸಾಯುವುದರೊಳಗೆ ನನ್ನ ವರದಿ ತಪ್ಪೋ ಅಥವಾ ಸರಿಯೋ ಎನ್ನುವುದನ್ನು ತಿಳಿಸಲಿ, ಸರಿಯಿದ್ದರೆ ಬೇಗ ಅನುಷ್ಠಾನಗೊಳಿಸಲು ಮುಂದಾಗಲಿ. ಆಗಲೇ ನನಗೆ ಸಂತೃಪ್ತಿ ಎಂದಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement