ಕೆಜಿಎಫ್ ನಗರಸಭೆಗೆ ಭಕ್ತವತ್ಸಲಂ ಸಾರಥ್ಯ
ಕೆಜಿಎಫ್: ಕೆಜಿಎಫ್ನ ಸ್ಥಳೀಯ ನಗರಸಭೆ ಎಸ್.ಸಿ ಮೀಸಲಾತಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆಯ ಭಾರಿ ಗೊಂದಲಗಳ ನಡುವೆ ಜೆಡಿಎಸ್ ಅಭ್ಯರ್ಥಿ ಎಂ. ಭಕ್ತವತ್ಸಲಂ 17 ಮತಗಳನ್ನು ಪಡೆದು ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದು ಉಪಾಧ್ಯಕ್ಷರಾಗಿ ಆರೋಗ್ಯದಾಸ್ ಆಯ್ಕೆಗೊಂಡಿದ್ದಾರೆ.
ಹೈಕೋರ್ಟ್ ತೀರ್ಪಿನ ಆದೇಶದಂತೆ ರಾಜ್ಯ ಸರ್ಕಾರ 11 ರಂದು ಕೆಜಿಎಫ್ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ನಡೆಸುವಂತೆ ಸೂಚಿಸಿದ್ದ ಹಿನ್ನೆಲೆಯಲ್ಲಿ ನಡೆದ ಚುನಾವಣೆಯಲ್ಲಿ ಎಂ. ಭಕ್ತವತ್ಸಲಂ ಜಯ ಗಳಿಸಿದ್ದಾರೆ.
ಒಂದೆಡೆ ಜೆಡಿಎಸ್ನ ಎಂ. ಭಕ್ತವತ್ಸಲಂ ಅವರೊಂದಿಗೆ ಆರ್ಪಿಐ ಹಾಗೂ ಪಕ್ಷೇತರ ಅಭ್ಯರ್ಥಿಗಳು ಬೆಂಬಲಕ್ಕೆ ನಿಂತಿದ್ದು ಇತ್ತ ಕಾಂಗ್ರೆಸ್ ಹಾಗೂ ಬಿಜೆಪಿ ಮೈತ್ರಿಯಾಗಲು ಎಲ್ಲಾ ತೀರ್ಮಾನಗಳನ್ನು ಕೈಗೊಂಡು ಇತರೆ ಪಕ್ಷೇತರ ಅಭ್ಯರ್ಥಿಗಳಿಗೆ ಗಾಳವನ್ನು ಹಾಕಿ ತಮ್ಮತ್ತ ಸೆಳೆದುಕೊಂಡಿತ್ತು. ಆದರೆ ಬಿಜೆಪಿ ಸದಸ್ಯ ನಟರಾಜನ್ ಚುನಾವಣೆ ಸಂದರ್ಭದಲ್ಲಿ ನಕಲಿ ದಾಖಲೆಗಳನ್ನು ನೀಡಿ ನಗರಸಭೆ ಚುನಾವಣೆಯಲ್ಲಿ ಆಯ್ಕೆಯಾಗಿದ್ದು ಇವರ ದಾಖಲಾತಿಗಳನ್ನು ಪರಿಶೀಲಿಸಿ ಇವರಿಗೆ ಮತ ಹಾಕದಂತೆ ತಡೆಯಾಜ್ಞೆ ನೀಡುವಂತೆ ಎಂ.ಭಕ್ತವತ್ಸಲಂ ಬೆಂಬಲಿಗರು ಉಚ್ಚನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ಪರಿಗಣಿಸಿದ ಉಚ್ಚನ್ಯಾಯಾಲಯದ ನ್ಯಾಯಾಧೀಶರು ಸೋಮವಾರ ನಟರಾಜನ್ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ಮತ ಹಾಕಬಾರದು ಎಂದು ತಡೆಯಾಜ್ಞೆ ನೀಡಿದ್ದರು.
ಈ ಹಿನ್ನೆಲೆಯಲ್ಲಿ ಮಂಗಳವಾರ ಬೆಳಗ್ಗೆ 10.30ಕ್ಕೆ ಇತ್ತ ಅಧ್ಯಕ್ಷ ಸ್ಥಾನಕ್ಕೆ ಎಂ. ಭಕ್ತವತ್ಸಲಂ, ಕೆ.ಸಿ.ಮುರಳಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಆರೋಗ್ಯದಾಸ್, ಎಂ.ವಿಜಯಕುಮಾರ್ ನಾಮಪತ್ರ ಸಲ್ಲಿಸಿದ್ದರು. ಜೆಡಿಎಸ್ ಪಕ್ಷದ ಸದಸ್ಯರಾದ ಎಂ.ಭಕ್ತವತ್ಸಲಂ, ಮುರುಗೇಶ್, ಕುಲಶೇಖರ್, ಡೇವಿಡ್, ಕಲೈವಾಣಿ, ಸುಂದರ್ರಾಜ್, ಆರ್ಪಿಐ ಪಕ್ಷದ ಅಮುಲ್ದಾಸ್, ಮಹ್ಮದಬೇಗಂ, ಅನಿತಾಕುಮಾರಿ ಮತ್ತು ಪಕ್ಷೇತರ ಸದಸ್ಯರಾದ ಜಿ.ಸುರೇಶ್, ಎಂ.ನಿರ್ಮಲಾ, ಜಿ.ಕುಮಾರ್, ದೇವಿಗಣೇಶ್, ಆರೋಗ್ಯದಾಸ್, ಸಿ.ಲಾರೆನ್ಸ್, ಜಿ.ರಮೇಶ್, ಎಂ.ಸುರೇಶ್ ಸದಸ್ಯರು ಮತವನ್ನು ಹಾಕಲು ನಗರಸಭೆಗೆ ಆಗಮಿಸಿದ್ದರು.
ಕೆ.ಸಿ. ಮುರಳಿ ಮೇಲೆ ಹಲ್ಲೆ: ಕಾಂಗ್ರೆಸ್ ಬೆಂಬಲಿತ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಕೆ.ಸಿ. ಮುರಳಿ ಎಂಬುವರನ್ನು ಜೆಡಿಎಸ್ ಬೆಂಬಲಿಗರು ಚುನಾವಣೆಗೆ ಬಾರದಂತೆ ಒತ್ತಾಯಿಸಿ ಅವರ ಮೇಲೆ ಹಲ್ಲೆ ನಡೆಸಿದ್ದು ಚಿಕಿತ್ಸೆಗಾಗಿ ಕೋಲಾರದ ಜಾಲಪ್ಪ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಆದ್ದರಿಂದ ಚುನಾವಣೆಯನ್ನು ಮುಂದೂಡಬೇಕು ಎಂದು ಸದ್ಯರಾದ ನಟರಾಜನ್ ಹಾಗೂ ರವಿ ಅವರು ಎ.ಸಿ ಮಂಜುನಾಥ್ ಬಳಿ ದೂರನ್ನು ಸಲ್ಲಿಸಿದಾಗ ಈ ಬಗ್ಗೆ ಪರಿಶೀಲನೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಎ.ಸಿ ತಿಳಿಸಿದ್ದರಿಂದ ಕೆಲ ಕಾಲ ಚುನಾವಣೆಗೆ ವಿಳಂಬ ಮಾಡಲಾಗಿತ್ತು. ಇದರಿಂದ ಚುನಾವಣೆಯನ್ನು ಮುಂದೂಡಲಾಗುವುದೆ ಎಂದು ನಗರಾದ್ಯಂತ ಸುದ್ದಿ ಹರಡಿತ್ತು.
ಕಡೆಗೆ ಚುನಾವಣಾಧಿಕಾರಿ ಹಾಗೂ ಎ.ಸಿ. ಮಂಜುನಾಥ್ ಚುನಾವಣೆಯನ್ನು ನಡೆಸಲು ಮುಂದಾಗಿದ್ದು ಜೆಡಿಎಸ್ ಅಭ್ಯರ್ಥಿ ಎಂ.ಭಕ್ತವತ್ಸಲಂ ಹಾಗೂ ಉಪಾಧ್ಯಕ್ಷ ಆರೋಗ್ಯದಾಸ್ ಅವರಿಗೆ 17 ಮತಗಳನ್ನು ಪಡೆದಿದ್ದು ಕೆಜಿಎಫ್ ಸಿವಿಲ್ ನ್ಯಾಯಾಲಯದ ಆದೇಶದಂತೆ ಆರ್ಪಿಐ ಪಕ್ಷದ ಸದಸ್ಯ ಮಹ್ಮದ್ಬೇಗಂ ಅವರ ಮತವನ್ನು ಗುಪ್ತವಾಗಿ ಮತಪೆಟ್ಟಿಗೆಯಲ್ಲಿ ಹಾಕಲಾಗಿದ್ದು ನ್ಯಾಯಾಲಯದ ಆದೇಶದ ನಂತರ ಪ್ರಕಟಿಸಲಾಗುತ್ತದೆ ಎಂದು ತಿಳಿಸಿದ ಎ.ಸಿ.17 ಮತಗಳನ್ನು ಪಡೆದು ಜೆಡಎಸ್ ಪಕ್ಷದ ಎಂ. ಭಕ್ತವತ್ಸಲಂ ಜಯಗಳಿಸಿದ್ದಾರೆ ಎಂದು ಘೋಷಿಸಿದರು.
ಬಾರದ ಮುನಿಯಪ್ಪ, ರಾಮಕ್ಕ: ಇತ್ತ ಸಿಪಿಐಎಂ ಪಕ್ಷದ ಸದಸ್ಯೆ ಜಯದೇವಿ ಅವರು ಯಾರಿಗೂ ಬೆಂಬಲ ಸೂಚಿಸದೆ ಚುನಾವಣೆಯಿಂದ ದೂರ ಉಳಿದಿದ್ದರೆ ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ಮತ್ತು ಶಾಸಕಿ ವೈ.ರಾಮಕ್ಕ ಅವರು ಮತ ಹಾಕಲು ಬರುವುದನ್ನು ಎದುರು ನೋಡುತ್ತಿದ್ದ ಜನತೆಗೆ ಕಡೆಗೆ ಅವರು ಬಾರದೆಯಿದ್ದುದ್ದರಿಂದ ಕೆಲವು ಊಹಾಪೋಹಗಳು ಸಾರ್ವಜನಿಕರಿಂದ ಕೇಳಿಬಂದವು.