ಜಲತಜ್ಞ ಪರಮಶಿವಯ್ಯ ನಿಧನಕ್ಕೆ ಕಂಬನಿ
ಕೋಲಾರ: ನೀರಾವರಿ ತಜ್ಞ, ಬಯಲು ಸೀಮೆಯ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಸೌಕರ್ಯಕ್ಕೆ ಪ್ರಯತ್ನಿಸಿದ ಹಾಗೂ ರಾಜ್ಯ ಸರ್ಕಾರ ರಚನೆ ಮಾಡಿರುವ ನೀರಾವರಿ ಸಲಹಾ ಸಮಿತಿಯ ಅಧ್ಯಕ್ಷರೂ ಆಗಿದ್ದ ಡಾ.ಜಿ.ಎಸ್. ಪರಮಶಿವಯ್ಯನವರ ನಿಧನಕ್ಕೆ ವಿವಿಧ ಸಂಘಟನೆಗಳು ಸಂತಾಪ ವ್ಯಕ್ತಪಡಿಸಿವೆ.
ಕೋಲಾರ ಜಿಲ್ಲಾ ಶಾಶ್ವತ ನೀರಾವರಿ ಹೋರಾಟ ಸಮಿತಿಯಿಂದ ನಗರದ ಮಹಾತ್ಮಗಾಂಧಿ ಉದ್ಯಾನವನದಲ್ಲಿ ನಡೆದ ಪರಮಶಿವಯ್ಯ ಶ್ರದ್ಧಾಂಜಲಿ ಸಭೆಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಉಪಾಧ್ಯಕ್ಷ ಬಯ್ಯಾರೆಡ್ಡಿ ಮಾತನಾಡಿ, ಪಶ್ಚಿಮಘಟ್ಟದಲ್ಲಿ ಬೀಳುವ ಮಳೆ ನೀರನ್ನು ಸಂಗ್ರಹಣೆ ಮಾಡಿ ಆ ನೀರನ್ನು ಬಯಲು ಸೀಮೆಯ ಜನರಿಗೆ ನೀಡಲು ಪರಮಶಿವಯ್ಯನವರು ಯೋಜನೆ ರೂಪಿಸಿಕೊಟ್ಟಿದ್ದರು. ಆದರೆ, ಸರ್ಕಾರಗಳು ಯೋಜನೆ ಜಾರಿಗೆ ತರಲು ಬದ್ಧತೆ ತೋರದೆ ಹಿರಿಯ ಚೇತನರ ಕನಸು ಭಗ್ನಗೊಳಿಸಿದ್ದಾರೆಂದು ಅಸಮಾಧಾನ ವ್ಯಕ್ತಪಡಿಸಿದರು.
ಸರ್ಕಾರಕ್ಕೆ ನಿಜಕ್ಕೂ ಬಯಲು ಸೀಮೆ ಜನರ ಮೇಲೆ ಕಾಳಜಿಯಿದ್ದಲ್ಲಿ ಪರಮಶಿವಯ್ಯ ವರದಿ ಜಾರಿಗೊಳಿಸುವ ಮೂಲಕ ಆಗಲಿದ ಹಿರಿಯ ನೀರಾವರಿ ತಜ್ಞರ ಆತ್ಮಕ್ಕೆ ಶಾಂತಿ ಸಿಗುವಂತೆ ಮಾಡಬೇಕೆಂದು ಒತ್ತಾಯಿಸಿದರು.
ಜನವಾದಿ ಮಹಿಳಾ ಸಂಘಟನೆಯ ರಾಜ್ಯಾಧ್ಯಕ್ಷೆ ವಿ.ಗೀತಾ ಮಾತನಾಡಿ, ಶಾಶ್ವತ ನೀರಾವರಿ ಯೋಜನೆ ಜಾರಿಗೆ ತರಲು ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡದ ಕಾರಣ ಪರಮಶಿವಯ್ಯನವರು ನೊಂದುಕೊಂಡಿದ್ದರು. ಹೋರಾಟಗಳು ದಿಕ್ಕು ತಪ್ಪುತ್ತಿದ್ದನ್ನು ಗಮನಿಸಿ ಬೇಸರಗೊಂಡಿದ್ದರು. ಇವರು ಇನ್ನಷ್ಟು ಕಾಲ ಬದುಕಿದ್ದರೆ ಖಂಡಿತ ಶಾಶ್ವತ ನೀರಾವರಿ ಯೋಜನೆ ಜಾರಿಗೆ ಬರುತ್ತಿತ್ತು. ಬಯಲು ಸೀಮೆಯ ಎಲ್ಲಾ ಪ್ರಗತಿಪರ ಸಂಘಟನೆಗಳು, ಶಾಶ್ವತ ನೀರಾವರಿ ಹೋರಾಟ ಸಮಿತಿ ಅವರ ಬೆಂಬಲಕ್ಕೆ ನಿಂತಿತ್ತು. ಆದರೆ, ಅವರಿಂದು ನಮ್ಮನ್ನು ಅಗಲಿರುವುದು ನೋವುಂಟು ಮಾಡಿದೆ. ಪರಮಶಿವಯ್ಯನವರ ಕನಸು ನನಸಾಗಿಸುವುದಕ್ಕೆ ಹೋರಾಟಗಳು ತೀವ್ರಗೊಳ್ಳಬೇಕಾಗಿದೆ ಎಂದು ತಿಳಿಸಿದರು.
ಶಾಶ್ವತ ನೀರಾವರಿ ಹೋರಾಟ ಸಮಿತಿಯ ಮುಖಂಡರಾದ ಎಂ.ಜಿ. ಪ್ರಭಾಕರ್, ಪಂಡಿತ್ ಮುನಿವೆಂಕಟಪ್ಪ, ಡಿವೈಎಫ್ಐನ ವಿಜಯಕೃಷ್ಣ, ವೆಂಕಟ ರವಣಪ್ಪ,ನಗರಸಭೆ ಸದಸ್ಯ ಗಾಂಧಿನಗರ ನಾರಾಯಣಸ್ವಾಮಿ, ಜನವಾದಿ ಮಹಿಳಾ ಸಂಘಟನೆಯ ಗೌರಮ್ಮ, ಕರ್ನಾಟಕ ಪ್ರಾಂತ ರೈತ ಸಂಘದ ವೆಂಕಟೇಶ್ ಇತರರು ಇದ್ದರು.
ಆಸೆ ಈಡೇರಿಸೋಣ: ಕರ್ನಾಟಕ ರೈತ ಸಂಘದಿಂದ ಹಮ್ಮಿಕೊಂಡಿದ್ದ ಮತ್ತೊಂದು ಸಂತಾಪ ಸೂಚಕ ಸಭೆಯಲ್ಲಿ ಸಂಘದ ಜಿಲ್ಲಾ ಸಂಚಾಲಕ ಕೆ.ಶ್ರೀನಿವಾಸಗೌಡ ಮಾತನಾಡಿ, ಬಯಲು ಸೀಮೆ ಜನರ ನೀರಿನ ಕಷ್ಟ ಅರಿತ ನೀರಾವರಿ ತಜ್ಞ ಪರಮಶಿವಯ್ಯನವರು ಕುರುಡು ಸರ್ಕಾರಗಳ ಕಣ್ಣು ತೆರೆಸಲು ತಮ್ಮದೇ ಶಕ್ತಿ ಬಳಸಿ ಹೋರಾಡಿದ್ದಾರೆಂದರು. ಮಳೆಗಾಲದಲ್ಲಿ ವ್ಯರ್ಥವಾಗಿ ಹರಿದು ಸಮುದ್ರ ಸೇರುವ ನೀರನ್ನು ಉಳಿಸಿ ಅದನ್ನು ಬಯಲು ಸೀಮೆ ಜನರಿಗೆ ನೀಡಬೇಕೆಂಬ ಪರಮಶಿವಯ್ಯನವರ ಆಸೆ ಈಡೇರಿಸಲು ಸರ್ಕಾರಗಳು ಬದ್ಧತೆ ತೋರಲಿಲ್ಲ, ಇನ್ನಾದರೂ ಈಡೇರಿಸಲಿ ಎಂದರು.
ವಿದ್ಯಾರ್ಥಿ ರಾಜ್ಯ ಸಂಚಾಲಕ ಹೂಹಳ್ಳಿ ನಾಗರಾಜ್ ಮಾತನಾಡಿದರು. ರೈತ ಸಂಘದ ಜಿಲ್ಲಾಧ್ಯಕ್ಷ ನಾರಾಯಣಗೌಡ, ತಾಲೂಕು ಅಧ್ಯಕ್ಷ ನೀಲಕಂಠಪುರ ಮುನೇಗೌಡ, ಕಾಂಗ್ರೆಸ್ ಮುಖಂಡ ಹೊಳಲಿ ಪ್ರಕಾಶ್,ಮೂರಂಡಹಳ್ಳಿ ಶಿವಾರೆಡ್ಡಿ, ಬಂಗವಾದಿ ನಾಗರಾಜ್ ಗೌಡ, ಕೆಂಬೋಡಿ ಕೃಷ್ಣೇಗೌಡ, ವಕ್ಕಲೇರಿ ಹನುಮಪ್ಪ, ನರಸಾಪುರ ಪುರುಷೋತ್ತಮ್, ಶೆಟ್ಟಿಗಾನಹಳ್ಳಿ ರಾಜೇಶ್, ಈಕಂಬಳ್ಳಿ ಮಂಜುನಾಥ್, ರಂಜಿತ್, ಸಂತೋಷ್, ವಿಶ್ವನಾಥ್, ಸುನಿಲ್, ವಿಷ್ಣು, ಗೌರೀಶ್, ಮಂಜುನಾಥ್, ರಾಮಚಂದ್ರ, ವೇಣುಗೋಪಾಲ್ ರೆಡ್ಡಿ ಪಾಲ್ಗೊಂಡಿದ್ದರು.